ಕಪ್ಪು ವರ್ಣದಿಂದಾಗಿ ಬಣ್ಣದ ಲೋಕದಲ್ಲಿ ತಾವು ಅನುಭವಿಸಿರುವ ಕರಾಳ ಕಥೆಗಳನ್ನು ಹಲವು ನಟಿಯರು ಬಿಚ್ಚಿಟ್ಟಿದ್ದಾರೆ. ಅವರು ಹೇಳಿದ್ದೇನು?
ನಟಿಯರು ಎಂದರೆ ಹೀಗೆಯೇ ಇರಬೇಕು ಎಂಬ ಸಿದ್ಧಾಂತವಿದೆ. ತೆಳ್ಳಗೆ ಬೆಳ್ಳಗೆ ಇರಬೇಕು, ಜೀರೋ ಸೈಜ್ ಆಗಿರಬೇಕು. ನೋಡಲು ಸುಂದರವಾಗಿರಬೇಕು ಹೀಗೆ ಏನೇನೋ ಕಲ್ಪನೆಗಳು ಇರುತ್ತವೆ. ಇದೇ ಕಾರಣಕ್ಕೆ ಎಷ್ಟೋ ಮಂದಿ ಯುವತಿಯರು ಸಾಕಷ್ಟು ಪ್ರತಿಭೆ ಹೊಂದಿದ್ದರೂ ಬಣ್ಣದ ಲೋಕಕ್ಕೆ ಆಯ್ಕೆಯಾಗುವುದು ಕಷ್ಟ. ಅಲ್ಲೊಂದು ಇಲ್ಲೊಂದು ಪ್ರಕರಣಗಳನ್ನು ಹೊರತುಪಡಿಸಿದರೆ, ಸಿನಿಮಾ ಆಗಿರಲಿ ಇಲ್ಲವೇ ಧಾರಾವಾಹಿ (Serial) ಪ್ರಪಂಚವೇ ಆಗಿರಲಿ, ಬೆಳ್ಳಿ ತೆರೆ, ಕಿರುತೆರೆ ಎಲ್ಲಾ ಕಡೆಗಳಲ್ಲಿ ಇದೇ ರೀತಿ ಇದೆ. ಈ ಕುರಿತು ಇತ್ತೀಚೆಗಷ್ಟೇ ಖ್ಯಾತ ನಟಿ, ಹಿಂದಿ ಬಿಗ್ಬಾಸ್ ಸ್ಪರ್ಧಿ ಸುಂಬುಲ್ ತೌಕೀರ್ (Sumbul Touqeer) ಮಾತನಾಡಿದ್ದರು. ತಮ್ಮ ಕಪ್ಪು ಚರ್ಮದ ಟೋನ್‌ಗಾಗಿ ಸಾಕಷ್ಟು ನಿರಾಕರಣೆಗಳನ್ನು ಎದುರಿಸುತ್ತಿರುವ ಬಗ್ಗೆ ಅವರು ಹೇಳಿಕೊಂಡಿದ್ದರು. ತಮ್ಮ ಕಪ್ಪು ಬಣ್ಣದಿಂದಾಗಿ ಹೇಗೆ ಎಂದಿಗೂ ನಾಯಕಿಯಾಗಲು ಸಾಧ್ಯವಿಲ್ಲ ಎಂದು ಅಂದುಕೊಂಡಿದ್ದ ಬಗ್ಗೆ ತಿಳಿಸಿದ್ದರು. ಆದರೆ ಕೊನೆಗೆ ಅವರ ಅದೃಷ್ಟ ಕೈಹಿಡಿದಿತ್ತು. ನಾಯಕಿಯಾಗಿ ಮಿಂಚುತ್ತಿದ್ದಾರೆ. ಇಮ್ಲಿಯೊಂದಿಗೆ ಖ್ಯಾತಿಯನ್ನು ಗಳಿಸಿದ ಇವರು, ಬಿಗ್ ಬಾಸ್ 16 ರಲ್ಲಿ ಕೂಡ ಕಡು ಬಣ್ಣದ ಚರ್ಮದ ಟೋನ್ ನಿಂದಾಗಿ ನಿರಾಕರಣೆಯನ್ನು ಹೇಗೆ ಎದುರಿಸಿದರು ಎಂಬುದರ ಕುರಿತು ಮಾತನಾಡಿದ್ದರು.
ಆದರೆ ಇದೇ ರೀತಿ ಹಲವು ನಾಯಕಿಯರು ನೋವು ತೋಡಿಕೊಂಡಿದ್ದಾರೆ. ಬಣ್ಣದ ಕಾರಣದಿಂದ ಕೆಲವರಿಗೆ ಸಿಕ್ಕ ಅವಕಾಶಗಳು ಹೇಗೆ ತಪ್ಪಿ ಹೋದವು ಎಂಬ ಬಗ್ಗೆ ಮಾತನಾಡಿದ್ದಾರೆ. ಅವರ ಪೈಕಿ ಹೀನಾ ಖಾನ್ (Heena Khan) ಒಬ್ಬರು. ಇವರು ಕಿರುತೆರೆಯ ಪ್ರಸಿದ್ಧ ನಟಿ. ಯೆ ರಿಶ್ತಾ ಕ್ಯಾ ಕೆಹಲಾತಾ ಹೆ ನಲ್ಲಿ ಅಕ್ಷರಾ ಮಹೇಶ್ವರಿ ಸಿಂಘಾನಿಯ ಪಾತ್ರವನ್ನು ನಿಭಾಯಿಸಿ, ನಂತರ ಕಾಸೌಟಿ ಜಿಂದಾಗಿ ಕೇ ಧಾರವಾಹಿಯಲ್ಲಿ ಕೊಮೊಲಿಕಾ ಎಂಬ ಪಾತ್ರವನ್ನು ನಿರ್ವಹಿಸಿ ಮನೆಮಾತಾಗಿರುವ ಹೀನಾ ಚಿತ್ರವೊಂದರಲ್ಲಿ ಕಾಶ್ಮೀರಿ ಹುಡುಗಿಯ ಪಾತ್ರವನ್ನು ನಿರಾಕರಿಸಿದ್ದ ಬಗ್ಗೆ ಹೇಳಿಕೊಂಡಿದ್ದಾರೆ. ತಮ್ಮ ಚರ್ಮದ ಟೋನ್ ತುಂಬಾ ಫೇರ್ ಅಲ್ಲ ಎನ್ನುವ ಕಾರಣಕ್ಕೆ, ತಾವು ಕಾಶ್ಮೀರಿ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದರೂ ತಿರಸ್ಕರಿಸಲಾಗಿತ್ತು ಎಂದು ಹೇಳಿಕೊಂಡಿದ್ದಾರೆ.
ಬೆಳ್ಳಿ ತೆರೆಯಲ್ಲಿ ಸೋತು, ಕಿರುತೆರೆಯಲ್ಲಿ ಜನಪ್ರಿಯತೆ ಪಡೆದ ನಟಿಯರು
ಕಶ್ಮೀರಾ ಷಾ ಅಡೆತಡೆಗಳ ನಡುವೆಯೂ ಇಂಡಸ್ಟ್ರಿಯಲ್ಲಿ ಹೆಸರು ಮಾಡಿದ ತಾರೆ. ಈಕೆಯ ಬಣ್ಣ ಕಪ್ಪಾಗಿರುವ ಕಾರಣ ಎಷ್ಟೋ ಒಳ್ಳೊಳ್ಳೆ ಚಿತ್ರಗಳು ಆಕೆಯ ಕೈಬಿಟ್ಟವು. ಕೆಲವೊಂದು ಪಾತ್ರಗಳನ್ನು ಈಕೆಗೆ ನೀಡಿದ್ದರೂ, ಹೆಚ್ಚಾಗಿ ಮೇಕ್ಅಪ್ ಮಾಡಿಕೊಳ್ಳುವಂತೆ ಚುಚ್ಚು ಮಾತುಗಳನ್ನೂ ಕೇಳಲಾಗುತ್ತಿದೆ. ಆದರೆ ಅದು ತನ್ನ ಮೇಲೆ ಪರಿಣಾಮ ಬೀರಲು ಎಂದಿಗೂ ಬಿಡಲಿಲ್ಲ ಎಂದು ಕಶ್ಮೀರಾ ಹೇಳಿಕೊಂಡಿದ್ದಾರೆ. ಇನ್ನು ನೈನಾ ಸಿಂಗ್ (Naina Singh). ಕುಂಕುಮ್ ಭಾಗ್ಯ ಧಾರಾವಾಹಿಯಿಂದ ಮನೆ ಮಾತಾಗಿರುವ ನೈನಾ ಸಿಂಗ್ ಅವರು ತಮ್ಮ ಗಾಢ ಬಣ್ಣಕ್ಕಾಗಿ ಅಪಹಾಸ್ಯಕ್ಕೊಳಗಾಗಿದ್ದರಂತೆ. ಅದನ್ನು ಅವರೇ ಖುದ್ದು ಹೇಳಿಕೊಂಡಿದ್ದಾರೆ. ದಿನವೂ ನಾನು ಅಳುತ್ತಿದ್ದೆ. ಅದೊಂದು ದಿನ ಕುಚೇಷ್ಠೆ ಮಾಡಿದ ಕೆಲವರು ನನಗ ಟ್ಯೂಬ್ ಲೈಟ್ ತಿನ್ನು, ಮುಖ ಬೆಳ್ಳಗೆ ಆಗುತ್ತದೆ ಎಂದರು ಎಂದು ನಟಿ ಹೇಳಿಕೊಂಡಿದ್ದಾರೆ.
ಖ್ಯಾತ ನಟಿ ನಿಯಾ ಶರ್ಮಾ ಕೂಡ ಇಂಡಸ್ಟ್ರಿಯಲ್ಲಿ ತಮ್ಮ ಅದೃಷ್ಟವನ್ನು ಪ್ರಯತ್ನಿಸುತ್ತಿರುವಾಗ ಕಪ್ಪು ಬಣ್ಣದಿಂದ ಅಪಹಾಸ್ಯಕ್ಕೆ ಒಳಗಾಗಿದ್ದನ್ನು ಹೇಳಿಕೊಂಡಿದ್ದಾರೆ. ಅದೇ ರೀತಿ ನಟಿ ಉಲ್ಕಾ ಗುಪ್ತಾ (Ulka Gupta) ಕೂಡ ಮಾತನಾಡಿದ್ದಾರೆ. ನನ್ನ ಮೈಕಟ್ಟು ಕೂಡ ಸ್ವಲ್ಪ ದಪ್ಪಗಾಗಿತ್ತು. ಇದರಿಂದಲೂ ನನಗೆ ಭಾರಿ ಅವಮಾನ ಎದುರಾಗಿತ್ತು. ಎಲ್ಲವನ್ನೂ ನಾನು ಮೆಟ್ಟಿ ನಿಂತಿದ್ದೇನೆ ಎಂದು ಉಲ್ಕಾ ಹೇಳಿಕೊಂಡಿದ್ದಾರೆ. ಕಪ್ಪು ವರ್ಣದ ತ್ವಚೆಯಿಂದ ಅಪಹಾಸ್ಯಕ್ಕೆ ಒಳಗಾದ ಇನ್ನೋರ್ವ ನಟಿ ಭೂಮಿಕಾ ಶೆಟ್ಟಿ ಕಿನಾರಿ (Bhoomika Shetty Kinari). ಕಪ್ಪು ತ್ವಚೆ ಹೊಂದಿದ್ದರಿಂದ ನನಗೆ ಒಳ್ಳೆಯ ಪಾರ್ಟ್ಗಳು ಸಿಗುತ್ತಿರಲಿಲ್ಲ ಎಂದು ಹೇಳಿರುವ ಇವರು, ರಂಗಭೂಮಿಯಲ್ಲಿಯೂ ಬಣ್ಣಗಾರಿಕೆ ಹೇಗೆ ಅಸ್ತಿತ್ವದಲ್ಲಿದೆ ಎಂಬುದರ ಕುರಿತು ಮಾತನಾಡಿದರು.
ಕಲೆ ಇಲ್ಲರಿಗೂ ಇರುತ್ತೆ ನಸೀಬ್ ಕೆಲವರಿಗೆ ಮಾತ್ರ; ಗಿಚ್ಚಿ ಗಿಲಿಗಿಲಿ ಮಹಿತಾ ಬಗ್ಗೆ ತಾಯಿ ತನುಜಾ ಮಾತು!
