ಬಾಯ್ ಕಟ್, ಟಾಮ್ ಬಾಯ್ ಲುಕ್, ನೇರ ಮನಸ್ಸಿನ ಹುಡುಗಿಯಾಗಿ ಗಮನ ಸೆಳೆದಿದ್ದ ಸತ್ಯ ಇನ್ಮೇಲೆ ಉದ್ದ ಕೂದಲಿನ ಸುಂದ್ರಿ ಆಗಿ ಕಾಣಿಸಿಕೊಳ್ತಾಳಂತೆ. ಇದು ನಿಜನಾ?

ಸತ್ಯ ಸೀರಿಯಲ್‌ ಜೀ ಕನ್ನಡ ಚಾನಲ್‌ನಲ್ಲಿ ರಾತ್ರಿ 9 ಗಂಟೆಗೆ ಪ್ರಸಾರ ಆಗ್ತಿದೆ. ಇದರಲ್ಲಿ ಶುರುವಿನಿಂದಲೂ ಗಮನ ಸೆಳೆಯುತ್ತಿದ್ದದ್ದು ಸತ್ಯ ಅನ್ನೋ ಪಾತ್ರ. ಈ ಸೀರಿಯಲ್‌ನ ಸತ್ಯ ಗಟ್ಟಿಗಿಟ್ಟಿ. ಎಂಥಾ ಸವಾಲನ್ನೂ ಎದುರಿಸೋ ಛಾತಿ, ರೌಡಿಗಳನ್ನು ಮಟ್ಟ ಹಾಕೋ ಶಕ್ತಿ ಇರುವ ಹೆಣ್ಣುಮಗಳು. ತಂದೆ ತೀರಿಕೊಂಡ ಮೇಲೆ ಮನೆಯ ಜವಾಬ್ದಾರಿಯನ್ನು ಹೊತ್ತು ಮುನ್ನಡೆಸುತ್ತ ಬಂದವಳು. ತನ್ನ ಅಕ್ಕ ದಿವ್ಯಾ ಮದುವೆಯನ್ನು ಮಾಡಿ ಅಪ್ಪನ ಕನಸು ನನಸು ಮಾಡೋ ಆಸೆಯಲ್ಲಿದ್ದವಳು. ಅದಕ್ಕಾಗಿ ರಾತ್ರಿ ಹಗಲು ಕಷ್ಟಪಟ್ಟು ಒಂದೊಂದು ಪೈಸೆಯನ್ನು ಕೂಡಿಟ್ಟವಳು. ಸಖತ್ ಟಾಮ್ ಬಾಯಿಶ್ ಲುಕ್ ನಲ್ಲಿ ರಗಡ್ ಆಗಿ ಮಿಂಚುತ್ತಿದ್ದ ಈ ಪಾತ್ರವನ್ನು ಬಹಳ ಜನ ಇಷ್ಟ ಪಟ್ಟಿದ್ದರು. ಬೈಕ್‌ ಓಡಿಸುತ್ತಾ, ಒಂದು ಕೈಯಲ್ಲಿ ಸ್ಪಾನರ್ ಹಿಡಿದು ರೌಡಿಗಳನ್ನು ಅಟ್ಟಾಡಿಸೋ ಸತ್ಯ ಒಂದು ಕಾಲದಲ್ಲಿ ಪೊಲೀಸ್ ಪಾತ್ರದ ಮೂಲಕ ಮನೆ ಮಾತಾದ ಮಾಲಾಶ್ರೀ ಥರ ಕಾಣ್ತಾಳೆ ಅಂತ ತುಂಬ ಜನ ಹೇಳ್ತಿದ್ರು.

ಅಷ್ಟೇ ಅಲ್ಲ ತನ್ನ ಕೂದಲಿಂದಲೇ ಸತ್ಯಾಗೆ ವಿಶೇಷ ಸ್ಥಾನವಿತ್ತು. ಡ್ರೆಸ್ಸಿಂಗ್ ಸ್ಟೈಲ್‌ ಮಾತ್ರ ಅಲ್ಲ ಕೂದಲಿನ ವಿನ್ಯಾಸವೂ ಕೆಲವೊಮ್ಮೆ ವ್ಯಕ್ತಿತ್ವವನ್ನು ಪ್ರತಿಬಿಂಬಿಸೋದುಂಟು. ಸತ್ಯಾಳ ವ್ಯಕ್ತಿತ್ವವನ್ನು ಅವಳ ಕೂದಲೂ ಪ್ರತಿಬಿಂಬಿಸುತ್ತಾ ಇತ್ತು. ಅವಳೊಬ್ಬ ಸ್ವತಂತ್ರ ಮನೋಭಾವ, ದಿಟ್ಟ ಹುಡುಗಿ ಅನ್ನೋದನ್ನು ತೋರಿಸ್ತಾ ಇತ್ತು.

ಇಂಥಾ ಹುಡುಗಿಗೆ ಕಾರ್ತಿಕ್ ಅನ್ನೋ ಹುಡುಗ ಯಾಕೋ ಇಷ್ಟ ಆಗ್ತಾನೆ. ಮುಂದೆ ನಡೆದದ್ದು ಎಲ್ಲ ತಲೆಕೆಳಗಾಗೋ ಸನ್ನಿವೇಶ.

ಒಂದು ಹಂತದಲ್ಲಿ ತನ್ನ ಅಕ್ಕ ದಿವ್ಯಾ ಜೊತೆಗೆ ಕಾರ್ತಿಕ್ ಮದುವೆ ಫಿಕ್ಸ್ ಆಗುತ್ತೆ. ಸತ್ಯ ಬಾಯಲ್ಲಿ ಅಮೂಲ್ ಬೇಬಿ ಅಂತ ಕರೆಸಿಕೊಳ್ತಿದ್ದ ಕಾರ್ತಿಕ್‌ ಗೆ ಸತ್ಯಾಳ ಟಾಮ್ ಬಾಯಿಶ್ ಸ್ವಭಾವ ಇಷ್ಟ ಇಲ್ಲ. ಆದರೆ ಒಂದು ಹಂತದಲ್ಲಿ ದಿವ್ಯಾ ಕೈ ಕೊಟ್ಟು ಅವನು ಸತ್ಯಾಳ ಕೈ ಹಿಡಿಯಬೇಕಾಗಿ ಬರುತ್ತೆ. ಮುಂದೆ ಗಂಡ, ಅತ್ತೆ ಸೇರಿದಂತೆ ಎಲ್ಲರ ದ್ವೇಷವನ್ನು ಕಟ್ಟಿಕೊಂಡು ಸತ್ಯ ಗಂಡನ ಮನೆಗೆ ಬರ್ತಾಳೆ. ಇಲ್ಲೀವರೆಗೆ ಪ್ಯಾಂಟು, ಶರ್ಟು ಹಾಕ್ಕೊಂಡಿದ್ದ ಸತ್ಯ ಏಕಾಏಕಿ ಸೀರೆಗೆ ಶಿಫ್ಟ್ ಆಗ್ತಾಳೆ. ಪ್ಯಾಂಟು ಶರ್ಟು ಬಾಯ್ ಕಟ್ ಗಳನ್ನು ಇಷ್ಟ ಪಟ್ಟ ಪ್ರೇಕ್ಷಕರಿಗೆ ಸೀರೆಯಲ್ಲಿ ಬಾಯ್ ಕಟ್‌ನಲ್ಲಿ ಸತ್ಯಾಳನ್ನು ನೋಡೋದು ಅಸಹನೀಯ ಅನಿಸುತ್ತಿತ್ತು. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಕಮೆಂಟ್‌ಗಳೂ ಹರಿದು ಬಂದವು.

Bhagyalaxmi serial: ಕುಸುಮಾ ಪಾತ್ರಕ್ಕೆ ಸಿಕ್ತಿರೋ ರೆಸ್ಪಾನ್ಸ್‌ ಕಂಡು ಪದ್ಮಜಾ ರಾವ್ ಫುಲ್‌ ಖುಷ್‌!

ಈ ನಡುವೆ ಕಥೆ ಸಖತ್ ಇಂಟರೆಸ್ಟಿಂಗ್ ಆಗಿ ಸಾಗ್ತಿದ್ದ ಕಾರಣ ಪ್ರೇಕ್ಷಕ ಸತ್ಯ ಕೂದಲನ್ನು ಮರೆತು ಸೀರಿಯಲ್‌ ಕಥೆಗೆ ಅಡ್ಜೆಸ್ಟ್ ಆದರು. ಎಲ್ಲ ನಿರೀಕ್ಷೆಯಂತೆ ಮದುವೆ ಆದದ್ದೇ ಗಂಡನ ಮನೆಯವರ ಮನ ಗೆಲ್ಲುವ ಟಾಸ್ಕ್‌ನಲ್ಲಿ ಸತ್ಯ ಒಂದೊಂದೆ ಹೆಜ್ಜೆ ಮುಂದಿಡುತ್ತ ಬಂದಳು. ಸದ್ಯಕ್ಕೀಗ ಅವಳ ಗಂಡ ಕಾರ್ತಿಕ್ ಪತ್ನಿಯನ್ನು ಮನಸಾರೆ ಪ್ರೇಮಿಸುವಷ್ಟು ಬದಲಾಗಿದ್ದಾನೆ. ಕಳೆದ ವಾರದ ಸಂಚಿಕೆಯಲ್ಲಿ ಅವಳ ಕೈಗಳನ್ನು ಹಿಡಿದು ಸಖತ್ ರೊಮ್ಯಾಂಟಿಕ್ ಮಾತುಗಳನ್ನು ಹೇಳಿದ್ದಾಳೆ.

ಈ ನಡುವೆ ಮತ್ತೊಂದು ಸುದ್ದಿ ಬಂದಿದೆ. ಅದು ನಿಜವೋ, ಗಾಸಿಪ್ಪೋ ಅನ್ನೋದಿನ್ನೂ ಕನ್‌ಫರ್ಮ್(Confirm) ಆಗಿಲ್ಲ. ಆದರೆ ಸೀರಿಯಲ್ ಆಪ್ತ ಮೂಲಗಳ ಪ್ರಕಾರ ಸತ್ಯ ಬಾಯ್‌ ಕಟ್‌ ಲುಕ್‌(Boy cut look) ಇನ್ನು ಕೆಲವೇ ದಿನಗಳಲ್ಲಿ ಬದಲಾಗುತ್ತೆ. ಅವಳು ಉದ್ದ ಕೂದಲಿನ ಸುಂದರಿಯಾಗಿ ಬದಲಾಗ್ತಾಳೆ. ಈ ಮೂಲಕ ರಗಡ್‌ ಲುಕ್‌ನ ಸತ್ಯ ಇನ್ಮೇಲೆ ಸೌಮ್ಯ ಸ್ವಭಾವದ ಚೆಲುವೆಯಾಗಿ ಬದಲಾಗಬಹುದು. ಈ ಪಾತ್ರ ಮಾಡೋ ಗೌತಮಿ ಜಾಧವ್ ಶುರುವಲ್ಲಿ ಈ ಪಾತ್ರಕ್ಕೋಸ್ಕರ ಬಾಯ್‌ ಕಟ್ ಮಾಡಿಸಿಕೊಂಡಿದ್ದರು. ಆದರೆ ತನ್ನ ಉದ್ದ ಕೂದಲನ್ನು ಇಷ್ಟ ಪಡ್ತಿದ್ದ ಆಕೆ ಕ್ರಮೇಣ ಕೂದಲು ಉದ್ದಬಿಟ್ಟು ಈ ಪಾತ್ರಕ್ಕಾಗಿ ವಿಗ್‌ ಧರಿಸುತ್ತಿದ್ದರು. ಇದೀಗ ವಿಗ್‌ ತೆರೆದು ಆಕೆ ತನ್ನ ನೈಜ ಕೂದಲಲ್ಲೇ ಕಾಣಿಸಿಕೊಳ್ಳಬಹುದು.

ಆದರೆ ಕನ್ನಡ ಸೀರಿಯಲ್‌ ಇತಿಹಾಸದಲ್ಲಿ ಇಂಥದ್ದೊಂದು ಪಾತ್ರ ಇದೇ ಮೊದಲು ಅನ್ನಬಹುದು. ಬಹಳ ವಿಭಿನ್ನವಾದ ಈ ಪಾತ್ರವನ್ನು ಜನ ಇಷ್ಟಪಟ್ಟಿದ್ದರು. ಇದೀಗ ಅಂಥದ್ದೊಂದು ಪಾತ್ರವೂ ಮಾಮೂಲಿ ಸೀರಿಯಲ್‌ ಹೀರೋಯಿನ್‌ ಪಾತ್ರದಂತೆ ಬದಲಾಗ್ತಿದೆ ಅನ್ನೋದು ಕೆಲವರಿಗೆ ಬೇಸರ ತಂದಿದೆ.

ಮಗಳಿಗೆ ಕಿವಿ ಚುಚ್ಚುವಾಗ ಕಣ್ಣೀರಿಟ್ಟ ಚಂದು ಗೌಡ; ಭಾವುಕ ವಿಡಿಯೋ ವೈರಲ್