ರಾತ್ರಿ ಬೆಳಗಾಗುವುದರೊಳಗೆ ಒಳ್ಳೆಯವನಾದ ತಾಂಡವ್? ನಮಗೆ ಹುಚ್ಚು ಹಿಡೀತಿದೆ ಅಂತಿದ್ದಾರೆ ನೆಟ್ಟಿಗರು!
ಪತ್ನಿಯನ್ನು ಕಂಡ್ರೆ ಸದಾ ಮೂದಲಿಸ್ತಿರೋ ತಾಂಡವ್ ಏಕಾಏಕಿ ಬದಲಾಗಿದ್ದಾನೆ, ಭಾಗ್ಯಳನ್ನು ಹೊಗಳ್ತಾ ಇದ್ದಾನೆ. ಪ್ರೊಮೋ ನೋಡಿ ತಲೆ ಕೆಡಿಸಿಕೊಳ್ತಿರೋ ನೆಟ್ಟಿಗರು
ತಾಂಡವ್ ದಿಢೀರ್ ಒಳ್ಳೆಯವನಾಗಿ ಬಿಟ್ಟ ಅಂದ್ರೆ ನಂಬ್ತೀರಾ? ಛೇಛೇ ಇದು ಹೇಗೆ ಸಾಧ್ಯ? ಕನಸು ಇರ್ಬೇಕು ಎಂದುಕೊಳ್ಳುವವರೇ ಹೆಚ್ಚು ಭಾಗ್ಯಲಕ್ಷ್ಮಿ ಸೀರಿಯಲ್ ವೀಕ್ಷಕರು. ಆದರೆ ನಿಜವಾಗಿಯೂ ತಾಂಡವ್ ಒಳ್ಳೆಯವನಾಗಿಬಿಟ್ಟಿದ್ದಾನೆ! ಅದೂ ರಾತ್ರೋರಾತ್ರಿ. ಭಾಗ್ಯಳ ನೃತ್ಯಕ್ಕೆ ಮನಸೋತ ಟೀಚರ್ ಭಾಗ್ಯಳ ಬಳಿ ಕ್ಷಮೆ ಕೋರಿದ್ದಾಳೆ. ಶ್ರೇಷ್ಠಾಳ ಕುತಂತ್ರ ಬುದ್ಧಿಯಿಂದ ಭಾಗ್ಯಳಿಗೆ ಅವಮಾನ ಮಾಡಿದ್ದಳು ಈ ಟೀಚರ್. ಆದರೆ ಆಕೆಗೆ ಬುದ್ಧಿ ಕಲಿಸಲು ಕುಸುಮಾ ಭಾಗ್ಯಳ ಡಾನ್ಸ್ ಕಾರ್ಯಕ್ರಮ ಏರ್ಪಡಿಸಿ ಎಲ್ಲರನ್ನೂ ಕರೆಸಿದ್ದಳು. ಅವಳ ಡಾನ್ಸ್ ನೋಡಿ ಭಾವುಕಳಾದ ಟೀಚರ್ ತಾನು ಚುಚ್ಚು ಮಾತನಾಡಿದ್ದಕ್ಕೆ ಕ್ಷಮೆ ಕೋರಿದಳು.
ಭರತನಾಟ್ಯ ತರಗತಿಯಲ್ಲಿಯೂ ಇಷ್ಟೇ ಚೆನ್ನಾಗಿ ಮಾಡಿದ್ದರೂ ಆಕೆಯನ್ನು ತೆಗಳಿ ಹೊರಕ್ಕೆ ಹಾಕಿದ್ದ ಈ ಶಿಕ್ಷಕಿ, ಈ ಏಕಾಏಕಿ ಹೀಗೆ ಬದಲಾಗಿಬಿಟ್ಟಳಾ, ಇದ್ಯಾಕೋ ವಿಚಿತ್ರ ಅನಿಸಲ್ವಾ ಎಂದು ನೆಟ್ಟಿಗರು ಹೇಳುತ್ತಿರುವ ನಡುವೆಯೇ, ತಾಂಡವ್ ಬಂದು ಭಾಗ್ಯಳನ್ನು ಹಾಡಿ ಹೊಗಳಿದ್ದಾನೆ. ಭಾಗ್ಯಳಿಗೆ ಇದು ಕನಸೋ, ನನಸೋ ಗೊತ್ತಾಗ್ತಿಲ್ಲ. ತುಂಬಾ ಚೆನ್ನಾಗಿ ಡಾನ್ಸ್ ಮಾಡಿದ್ಯಾ ಅಂದಿದ್ದಾನೆ. ಭಾಗ್ಯ ಹಿಂದಿನ ಕಹಿ ಘಟನೆಗಳನ್ನೆಲ್ಲಾ ನೆನಪಿಸಿಕೊಂಡು ನಿಜಕ್ಕೂ ತನ್ನ ಗಂಡನೇನಾ ಹೀಗೆ ಹೇಳ್ತಿರೋದು ಅಂತ ಪ್ರಶ್ನಿಸಿಕೊಂಡಿದ್ದಾಳೆ. ಪೂಜಾ, ಸುಂದರಿ ಹಾಗೂ ಖುದ್ದು ಕುಸುಮಾಗೂ ಇದನ್ನು ಅರಗಿಸಿಕೊಳ್ಳುವುದು ಕಷ್ಟವೇ ಆಗಿದೆ. ಭಾಗ್ಯ ಬಾಯಿ ಬಿಟ್ಟು ಇದನ್ನು ಹೇಳಿದಳು ಕೂಡ. ನಿಜಕ್ಕೂ ನನಗೆ ನಂಬಲು ಆಗ್ತಿಲ್ಲ ಎಂದು. ಕುಸುಮಾ, ಭಾಗ್ಯಳನ್ನು ಬೈದು, ನಿಜಕ್ಕೂ ಅವನು ನಿನ್ನನ್ನು ಹೊಗಳುತ್ತಿದ್ದಾನೆ ಎಂದಿದ್ದಾಳೆ.
ಚೆನ್ನಾಗಿದ್ದ ಶಿಲ್ಪಾ ಶೆಟ್ಟಿಗೆ ಇದೇನಾಗೋಯ್ತು? ಲಕ ಲಕ ಲಕ ಲಕ ಲಕ ಅನ್ನುತ್ತ ವಿಚಿತ್ರವಾಗಿ ನರ್ತಿಸಿದ ನಟಿ!
ಇದರ ಪ್ರೊಮೋಗೆ ಥರಹೇವಾರಿ ಕಮೆಂಟ್ಸ್ ಸುರಿಮಳೆ ಆಗ್ತಿದೆ. ನಿಜಕ್ಕೂ ನಮಗೆ ಹುಚ್ಚು ಹಿಡೀತಿದೆ ಅನ್ನುತ್ತಿದ್ದಾರೆ ನೆಟ್ಟಿಗರು. ಭಾಗ್ಯ ಏನೇ ಸಾಧನೆ ಮಾಡಿದರೂ ಆಕೆಗೆ ಸಿಗ್ತಿದ್ದಿದ್ದು ಬೈಗುಳಗಳು ಮಾತ್ರ. ಆದ್ರೆ ಈಗ ಏಕಾಏಕಿ ಅದೂ ಒಂದು ಭರತನಾಟ್ಯ ನೋಡಿ ಬದಲಾಗಲು ಸಾಧ್ಯನಾ ಎನ್ನುವುದು ನೆಟ್ಟಿಗರ ಪ್ರಶ್ನೆ. ಭಾಗ್ಯಳಿಗೆ ಅದನ್ನು ನಂಬಲು ಅಸಾಧ್ಯವಾಗಿದೆ, ಆದರೆ ಕುಸುಮಾ ನಂಬಿದ್ದಾಳೆ. ಇದರಿಂದ ಕುಸುಮಾಳ ದಡ್ಡತನಕ್ಕೂ ನೆಟ್ಟಿಗರು ಬೈಯುತ್ತಿದ್ದಾರೆ. ತಾಂಡವ್ ಬದಲಾಗುವುದು ಒಳ್ಳೆಯ ಲಕ್ಷಣವೇ. ಆದರೆ, ಯಾವುದೇ ಕಾರಣ ಇಲ್ಲದೇ ಹೀಗೆ ಏಕಾಏಕಿ ಒಳ್ಳೆಯವನ್ನಾಗಿ ಮಾಡಿರುವ ಹಿಂದಿರುವ ಉದ್ದೇಶವೇನು ಅನ್ನೋದು ನೆಟ್ಟಿಗರ ಪ್ರಶ್ನೆ. ನಿಜಕ್ಕೂ ಇದನ್ನು ನೋಡಿ ನಮಗೆ ಹುಚ್ಚು ಹಿಡಿಯುತ್ತಿದೆ ಎನ್ನುತ್ತಿದ್ದಾರೆ ಅವರು.
ಕುಸುಮಾ ಒಂದು ತಿಂಗಳಿನಲ್ಲಿ ಭಾಗ್ಯಳನ್ನು ಬದಲಾಯಿಸುವ ಪಣ ತೊಟ್ಟಿದ್ದಾಳೆ. ಭಾಗ್ಯ ನಿನಗೆ ಹೇಗೆ ಬೇಕೋ ಹಾಗೆ ಇರ್ತಾಳೆ. ಇವಳೇ ನನ್ನ ಹೆಂಡತಿ ಅನ್ನೋ ರೀತಿಯಲ್ಲಿ ಭಾಗ್ಯ ಬದಲಾಗ್ತಾಳೆ. ಭಾಗ್ಯಳನ್ನು ಬಿಟ್ಟು ಯಾರನ್ನೂ ನೀನು ನೋಡಲ್ಲ ಹಾಗೆ ಇರ್ತಾಳೆ ಎಂದೆಲ್ಲಾ ಹೇಳಿದ್ದಾಳೆ. ಅದೇ ರೀತಿ ಭಾಗ್ಯಳನ್ನು ಚೆನ್ನಾಗಿ ರೆಡಿ ಮಾಡಿದ್ದಳು. ಅರೆ ಕ್ಷಣ ಭಾಗ್ಯಳ ಸೌಂದರ್ಯ ನೋಡಿ ತಾಂಡವ್ ಖುಷಿ ಪಟ್ಟರೂ ಕೊನೆಗೆ ಇನ್ನಿಲ್ಲದ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದ. ಗೂಬೆ, ಕತ್ತೆ ಎಂದಿದ್ದ. ಗೂಬೆಗೆ ಸೌಂದರ್ಯ ಮಾಡಿದರೆ ನವಿಲು ಆಗಲ್ಲ. ಮಾಡುವ ನಾಲ್ಕು ದೋಸೆ, ಚಪಾತಿಗೆ ಏಪ್ರಾನ್ ಸಾಕು, ಇದೆಲ್ಲಾ ಯಾಕೆ ಎಂದು ನಿಂದಿಸಿದ್ದ. ಆದರೂ ಈಗ ತಾಂಡವ್ ಭಾಗ್ಯಳನ್ನು ಒಪ್ಪಿಕೊಳ್ಳುವಂತೆ ಮಾಡುವ ಪಣ ಬಿಡಲಿಲ್ಲ ಕುಸುಮಾ. ಭಾಗ್ಯಳಿಗೆ ಈಗ ಮಾವ ಸಾಥ್ ನೀಡಿದ್ದು, ಕಾರು ಕಲಿಸಿದ್ದ. ಕಾರನ್ನೂ ಕಲಿತಿದ್ದಾಳೆ ಭಾಗ್ಯ. ಇಷ್ಟಾದರೂ ಒಪ್ಪಿಕೊಳ್ಳದಿದ್ದ ತಾಂಡವ್ ಈಗ ಏಕಾಏಕಿ ಒಳ್ಳೆಯವನಾಗಿ ಬಿಟ್ಟರೆ ಹೇಗೆ ಎನ್ನುವುದು ನೆಟ್ಟಿಗರ ಪ್ರಶ್ನೆ. ಹಾಗಾದ್ರೆ ಸೀರಿಯಲ್ ಮುಗಿಯತ್ತಾ ಎಂದು ಕೆಲವರು ಪ್ರಶ್ನಿಸಿದ್ರೆ, ಇದು ನಿಜಕ್ಕೂ ಆತನ ಕುತಂತ್ರ. ಕುಸುಮಾ ಹಾಕಿರೋ ಚಾಲೆಂಜ್ ಅನ್ನು ಹೀಯಾಳಿಸಲು ಹೀಗೆಲ್ಲಾ ಹೇಳ್ತಾ ಇದ್ದಾನೆ ಎನ್ನುವುದು ಮತ್ತಷ್ಟು ವೀಕ್ಷಕರ ಅಭಿಪ್ರಾಯ. ಒಟ್ಟಿನಲ್ಲಿ ತಾಂಡವ್ ಒಳ್ಳೆಯವನಾದ್ರೂ ಜನರು ಸ್ವೀಕರಿಸಲು ಸಾಧ್ಯವಿಲ್ಲ ಎನ್ನುವುದು ಇದರಿಂದ ತಿಳಿಯುತ್ತಿದೆ.
ನಿಮ್ಗೆ ಖುಷಿಯಾಗೋದಾದ್ರೆ ಸಾಯಿಸಿಬಿಡಿ... ಇಷ್ಟು ಹಿಂಸೆ ಕೊಡ್ಬೇಡಿ... ನಿರ್ದೇಶಕರ ವಿರುದ್ಧ ನೆಟ್ಟಿಗರು ಗರಂ