ಸೀರಿಯಲ್‌ಗಳಲ್ಲಿ ಜೋಗವ್ವ, ಕೊರವಂಜಿ ಶಕುನ, ಈಗ್ಲೂ ಜನ ಇದನ್ನೆಲ್ಲ ನಂಬ್ತಾರಾ?
ಈಗ ನಾವಿರೋ ಕಾಲಕ್ಕೂ ಸೀರಿಯಲ್‌ನಲ್ಲಿ ಬರೋ ಕಾಲಕ್ಕೂ ಅಜಗಜಾಂತರ ವ್ಯತ್ಯಾಸ ಇರುವಂತೆ ಕಾಣುತ್ತಿದೆ. ಈಗಲೂ ಕೊರವಂಜಿ ಹೇಳೋ ಕಣಿಯನ್ನು ನಮ್ಮ ಸೀರಿಯಲ್ ಪಾತ್ರಗಳು ನಂಬುತ್ತವೆ. ತ್ರಿಕಾಲ ಜ್ಞಾನಿಯಂತೆ ಜೋಗವ್ವ ಬರ್ತಾಳೆ. ಈ ಕಾಲದಲ್ಲೂ ಜನ ಇದನ್ನೆಲ್ಲ ನಂಬ್ತಾರಾ ಅನ್ನೋದು ಸದ್ಯ ಹಲವರ ಮನಸ್ಸಲ್ಲಿ ಮೂಡಿರೋ ಪ್ರಶ್ನೆ.
ಹತ್ತು ವರ್ಷ ಕೆಳಗೆ ವೀಕೆಂಡಲ್ಲಿ ಕಬ್ಬನ್ ಪಾರ್ಕ್ ಆಸುಪಾಸಲ್ಲಿ ಓಡಾಡಿದ್ರೆ ವಿಚಿತ್ರ ಉಡುಗೆ, ದೊಡ್ಡ ಬೊಟ್ಟು, ಕೈಲ್ಲೊಂದು ಕವಡೆಯ ಬಟ್ಟಲು ಹಿಡಿದ ಅಪರಿಚಿತ ಹೆಂಗಸರು ಬಂದು ಶಾಸ್ತ್ರ ಹೇಳ್ತೀವಿ ಅಂತಿದ್ರು. ಅವರ ಮಾತನ್ನು ಕೇಳುತ್ತಾ ನಿಂತಿರೋ ನಿಮ್ಮ ಕತೆ ಮುಗೀತು, ಕೈಯಲ್ಲಿ ಕನಿಷ್ಠ ಐವತ್ತೋ ನೂರೋ ಪೀಕದೇ ಅವರು ಮುಂದೆ ಹೋಗ್ತಿರಲಿಲ್ಲ. ಅಮಾಯಕ ಜನರಿಂದ ಬಲವಂತವಾಗಿ ದುಡ್ಡು ಕೀಳುತ್ತಿದ್ದ ಇವರ ಬಗ್ಗೆ ವಿಪರೀತ ದೂರುಗಳು ಕೇಳಿ ಬಂದ ಮೇಲೆ ಕಬ್ಬನ್ ಪಾರ್ಕ್ ಸುತ್ತಮುತ್ತ ಇವರ ಚಟುವಟಿಕೆಯನ್ನು ಪೊಲೀಸರು ನಿಯಂತ್ರಿಸಿದರು. ಈಗ ವೀಕೆಂಡಲ್ಲಿ ಕಬ್ಬನ್ ಪಾರ್ಕ್ ಗೆ ಹೋದರೆ ಥರಾವರಿ ನಾಯಿಗಳನ್ನು ನೋಡ್ಕೊಂಡು ಎನ್‌ಜಾಯ್ ಮಾಡಬಹುದು, ಇವರ ಕಾಟ ಇಲ್ಲ. ಆದರೆ ಸೀರಿಯಲ್‌ಗಳಲ್ಲಿ ಇವರ ಕಾಟ ಮುಂದುವರಿದಿದೆ. ರಿಯಲ್ ಲೈಫಲ್ಲಿ ಕೊರವಂಜಿ ವೇಷ ಧರಿಸಿ ಕೆಲವರು ಬಲವಂತದಲ್ಲಿ ದುಡ್ಡು ಕೀಳುತ್ತಿದ್ದರೆ, ಸೀರಿಯಲ್‌ಗಳಲ್ಲಿ ಬರುವ ಕೊರವಂಜಿಗಳು ಮಾತ್ರ ತ್ರಿಕಾಲ ಜ್ಞಾನಿಗಳು. ನಾಯಕಿಗೆ ಬರುವ ಅಪಾಯದ ಬಗ್ಗೆ ಮೊದಲೇ ಎಚ್ಚರಿಕೆ ಕೊಡುವ ಅವಧೂತರು. ಉತ್ತರ ಕರ್ನಾಟಕ ಭಾಷೆಯಲ್ಲಿ ಮಾತಾಡುತ್ತಾ, ಜನಪದದಲ್ಲಿ ಬರುವ ಕೊರವಂಜಿ ವೇಷ ತೊಟ್ಟು ಸೊಂಟದಲ್ಲೊಂದು ಬುಟ್ಟಿ, ಕೈಯಲ್ಲೊಂದು ಕೋಲು ಹಿಡಿದು ಜೋರಾಗಿ ಮಾತನಾಡುತ್ತಾ ನಾಯಕಿಗೆ ಎದುರಾಗುವ ಇವರು ಸೀರಿಯಲ್ ಕಥೆಯ ಮುಂದಿನ ತಿರುವು ಏನಿರಬಹುದು ಅನ್ನೋದರ ಬಗ್ಗೆ ಇನ್ ಡೈರೆಕ್ಟ್ ಆಗಿ ವೀಕ್ಷಕರಿಗೆ ಸೂಚನೆ ಕೊಡೋದೂ ಇದೆ.
ನೀವು ಕಲರ್ಸ್ ಕನ್ನಡದಲ್ಲಿ ಬರುವ 'ನಮ್ಮೆನೆ ಯುವರಾಣಿ' ಸೀರಿಯಲ್ ನೋಡಿದ್ರೆ ಅದರಲ್ಲೀಗ ಕೊರವಂಜಿ ಎಡವಿ ಬಿದ್ದಿರೋ ಗಂಗಾಳನ್ನು ಮೇಲಕ್ಕೆತ್ತಿದ್ದಾಳೆ. ಅಪಾಯದ ಮುನ್ಸೂಚನೆಯನ್ನು ನೀಡಲೆಂದೇ ಮಹಾದೇವ ತನ್ನನ್ನು ಗಂಗಾಳ ಬಳಿ ಕಳುಹಿಸಿದ್ದಾನೆ ಅಂತಿದ್ದಾಳೆ. ಜನಪದದ ತತ್ವಪದ ಮಾತಾಡುವ ಈ ಹೆಣ್ಣುಮಗಳು ಬದುಕಿನ ಏಳು ಬೀಳುಗಳ ಬಗ್ಗೆ ಅವಳ ಮುಂದಿರುವ ಅಪಾಯಗಳ ಬಗ್ಗೆ ಎಚ್ಚರಿಕೆ ನೀಡಿದ್ದಾಳೆ. 'ಬೀಳೋದು ಬೀಳೋರನ್ನು ಮೇಲೆತ್ತೋದು ಎಲ್ಲ ಆ ಮಹಾದೇವನ ಆಟ ತಾಯೀ. ನೀ ಬೀಳೋ ಸಮಯಕ್ಕೆ ಅಂವ ನನಗೆ ಹೋಗು ಅಂತ ಹೇಳ್ದ. ಅದಕ್ಕೆ ಬಂದೆ ತಾಯೀ. ಮುಂದ ಕೊಳ್ಳ ಐತೀ, ಕೊಳ್ಳ ಅಂದ್ರ ಕೊಳ್ಳ ಅಲ್ಲ, ಮಹಾ ಪ್ರಪಾತ ಐತೀ. ಒಂದು ವೇಳೆ ನೀ ಬಿದ್ದೆ ಅಂದ್ರೆ ಅಂತಿಂಥಾ ಪೆಟ್ಟಲ್ಲ, ದೊಡ್ಡ ಪೆಟ್ಟ ಬೀಳ್ತೈತಿ. ಕಣ್ಣು ತೆಗ್ದು ಹುಷಾರಾಗಿ ಮುಂದ ಕಾಲಿಡು. ಇಲ್ಲಾಂದ್ರೆ ಮನೆ ಕುಸಿದು ಬೀಳ್ತೈತಿ. ಎಲ್ಲ ಸರ್ವನಾಶ ಆಗೈತಿ, ನೀನಾ ತಡೀಬೇಕು ಅದನ್ನ. ಹಾಲೇ ವಿಷ ಆದ್ರ ಯಾವ್ದನ್ನು ಯಾವ್ದನ್ನು ಬಿಡೋದು.. ನಿನ್ನ ಆತ್ಮಕ್ಕೆ ಅನಿಸಿದನ್ನ ಅನುಮಾನಿಸಬೇಡ, ಅದು ಖರೇನ ಹೇಳ್ತೈತಿ' ಅಂತೆಲ್ಲ ಈ ಕೊರವಂಜಿ ಗಂಗಾಳಿಗೆ ಎಚ್ಚರಿಕೆ ನೀಡುತ್ತಾಳೆ. ಈ ಸೀರಿಯಲ್‌ನ ವೀಕ್ಷಕರು ಕೊರವಂಜಿ ಮಾತನ್ನು ಅವರ ನೆಲೆಯಲ್ಲಿ ವಿಶ್ಲೇಷಿಸುತ್ತಿದ್ದಾರೆ. ಅಂದರೆ ಅವರೂ ಇಲ್ಲಿ ಬರುವ ಕೊರವಂಜಿಯನ್ನು, ಅವಳ ಮಾತನ್ನು ನಂಬಿದ್ದಾರೆ. ಆ ಧ್ವನಿಯೂ ಅವರನ್ನು ನಂಬಿಸೋ ಹಾಗೇ ಇದೆ.
ಕನ್ನಡತಿ: ಹರ್ಷ ಭುವಿ ಡಿವೋರ್ಸಾ? ಏನಪ್ಪಾ ಈ ಡೈರೆಕ್ಟರ್ ಕಥೆ?
ಜಿ ಕನ್ನಡದಲ್ಲಿ ಪ್ರಸಾರವಾಗುವ 'ಜೊತೆ ಜೊತೆಯಲಿ' ಸೀರಿಯಲ್‌ನಲ್ಲೂ ಜೋಗದವ್ವ ಬಂದು ಅನುವಿಗೆ ಆಗಾಗ ಎಚ್ಚರಿಕೆ ಕೊಡ್ತಾ, ಸಲಹೆ ನೀಡ್ತಾ, ಮಾರ್ಗದರ್ಶನ ಮಾಡ್ತಾ ಇರ್ತಾಳೆ. ತನ್ನನ್ನು ದೇವಿಯ ಸಂದೇಶವಾಹಕಿ ಅಂತ ಹೇಳಿಕೊಳ್ಳೋ ಜೋಗದವ್ವ ಅಪಾಯದ ಮುನ್ಸೂಚನೆಯನ್ನು ನೀಡೋದೇ ಹೆಚ್ಚು. ಸೀರಿಯಲ್ ಕತೆಗಳಿಗೆ ಪೂರಕವಾಗಿ ಇಂಥಾ ಪಾತ್ರಗಳನ್ನು ತಂದರೆ ಜನ ನಂಬುತ್ತಾರೆ. ಸೀನ್‌ಗಳನ್ನು ಹೆಚ್ಚು ಸೀರಿಯಸ್ ಆಗಿ ತಗೊಳ್ತಾರೆ, ಜೊತೆಗೆ ಕುತೂಹಲ. ಆತಂಕಗಳನ್ನು ಇಲ್ಲಿಂದಲೇ ಹೆಚ್ಚಿಸುತ್ತಾ ಹೋದರೆ ಟಿಆರ್‌ಪಿಯ ಭಯ ಆತಂಕ ಪಡಬೇಕಿಲ್ಲ ಅನ್ನೋದು ಅವರ ಲೆಕ್ಕಾಚಾರ. ಆದರೆ ಕೆಲವು ಪ್ರಜ್ಞಾವಂತರು ಮಾತ್ರ ಇನ್ನೂ ಯಾವ ಕಾಲದಲ್ಲಿದ್ದೀರಿ ಸ್ವಾಮಿ ಎಂದು ಪ್ರಶ್ನೆ ಮಾಡ್ತಿದ್ದಾರೆ.
ಸೀರಿಯಲ್‌ನ ಈ ಪಾತ್ರ ಕಂಡ್ರೆ ಕೆಲವ್ರಿಗೆ ಕೆಂಡದಂಥಾ ಕೋಪ!