Actress Pallavi Mattighatta: ಕನ್ನಡ ಕಿರುತೆರೆ ನಟಿ ಪಲ್ಲವಿ ಮತ್ತಿಘಟ್ಟ ಅವರು ಶೃಂಗೇರಿ ಕ್ಷೇತ್ರದ ಗುರುಗಳ ಜೊತೆ ಒಂದು ಗಂಟೆ ಮಾತನಾಡಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ಮಠದವರು ಸ್ಪಷ್ಟೀಕರಣ ನೀಡಿದ್ದಾರೆ. ಹಾಗಾದರೆ ನಡೆದಿದ್ದು ಏನು? 

ನಟಿ, ಯಕ್ಷಗಾನ ಕಲಾವಿದೆ ಪಲ್ಲವಿ ಮತ್ತಿಘಟ್ಟ ಅವರು ಶೃಂಗೇರಿ ಮಠದ ಗುರುಗಳ ಜೊತೆಗೆ ಒಂದು ಗಂಟೆಗಳ ಕಾಲ ಮಾತನಾಡಿದ್ದಾರೆ ಎನ್ನುವುದು ಶಿರಸಿಯ ಸ್ಥಳೀಯ ಪತ್ರಿಕೆಯಲ್ಲಿ ಪ್ರಕಟಣೆಯಾಗಿದೆ. ಈ ಬಗ್ಗೆ ಶೃಂಗೇರಿ ಮಠವು ಸ್ಪಷ್ಟನೆ ಕೇಳಿದೆ.

ಶೃಂಗೇರಿ ಮಠದವರು ನೀಡಿದ ಸೃಷ್ಟಿಕರಣ ಏನು?

ಪ್ರತಿನಿತ್ಯ ಶೃಂಗೇರಿ ಕ್ಷೇತ್ರಕ್ಕೆ ಸಾವಿರಾರು ಭಕ್ತಾದಿಗಳು ಬಂದು ಶ್ರೀ ಶಾರದಾಮ್ಮನವರ ಹಾಗೂ ಶ್ರೀಶ್ರೀ ಜಗದ್ಗುರು ಮಹಾಸ್ವಾಮಿಗಳವರ ದರ್ಶನ ಪಡೆದು ಧನ್ಯತಾ ಭಾವದಿಂದ ಹಿಂತಿರುಗುತ್ತಿದ್ದಾರೆ. ಪ್ರಸ್ತುತ ಜಗದ್ಗುರು ಶ್ರೀಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರೇ ಭಕ್ತಾದಿಗಳಿಗೆ ದರ್ಶನವನ್ನು ನೀಡುತ್ತಿದ್ದು, ಜಗದ್ಗುರು ಶ್ರೀಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳವರು ಲೋಕಕಲ್ಯಾಣಕ್ಕಾಗಿ ಪ್ರತಿದಿನ ರಾತ್ರಿಯ ಶ್ರೀ ಚಂದ್ರಮೌಳೀಶ್ವರ ಪೂಜೆಯನ್ನು ತಾವೇ ನೆರವೇರಿಸಿ, ನಂತರ ಭಕ್ತಾದಿಗಳಿಗೆ ದರ್ಶನ ನೀಡುತ್ತಿದ್ದಾರೆ. ಜಗದ್ಗುರು ಶ್ರೀಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ವಿಜಯಯಾತ್ರೆಯನ್ನು ಕೈಗೊಂಡ ಸಂದರ್ಭದಲ್ಲಿ ಮಾತ್ರವೇ ಜಗದ್ಗುರು ಶ್ರೀಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳವರು ಭಕ್ತಾದಿಗಳಿಗೆ ಮಧ್ಯಾಹ್ನ ಅಲ್ಪ ಸಮಯದಲ್ಲಿ ಮತ್ತು ರಾತ್ರಿಯ ಪೂಜೆಯ ನಂತರ ದರ್ಶನ ನೀಡಿ ಅನುಗ್ರಹಿಸುತ್ತಿದ್ದಾರೆ.

ದಿನಾಂಕ 20-12-2025ನೇ ಶನಿವಾರದಂದು ಲೋಕ ಧ್ವನಿ ಎಂಬ ಇ-ಪತ್ರಿಕೆಯಲ್ಲಿ ಪಲ್ಲವಿ ಮತ್ತಿಘಟ್ಟ ಎಂಬ ಕಿರುತೆರೆ ಖ್ಯಾತ ನಟಿ ಶೃಂಗೇರಿಗೆ ಬಂದು ಶ್ರೀ ಶಾರದಾಮ್ಮನವರ ಹಾಗೂ ಜಗದ್ಗುರು ಶ್ರೀಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರ ದರ್ಶನವನ್ನು ಪಡೆದಿರುತ್ತಾರೆ ಹಾಗೆಯೇ ಅವರು ಜಗದ್ಗುರು ಶ್ರೀಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳವರ ಬಳಿಯಲ್ಲಿ ಸುಮಾರು 1 ಘಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿರುವುದು ವಿಶೇಷ ಎಂಬುದಾಗಿ ಪ್ರಕಟಿಸಿರುತ್ತಾರೆ. ಎಲ್ಲರಿಗೂ ತಿಳಿದಿರುವಂತೆ ಜಗದ್ಗುರು ಶ್ರೀಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರು ಇತ್ತೀಚಿನ ಕೆಲವು ವರ್ಷಗಳಿಂದ ಭಕ್ತ ಜನರಿಗೆ ಕೇವಲ ದರ್ಶನವನ್ನು ನೀಡಿ ಅನುಗ್ರಹಿಸುತ್ತಿದ್ದಾರೆಯೇ ಹೊರತು ಯಾರ ಬಳಿಯಲ್ಲೂ ದೀರ್ಘವಾಗಿ ಮಾತುಕತೆ ನಡೆಸಿರುವುದಿಲ್ಲ. ಪಲ್ಲವಿ ಮತ್ತಿಘಟ್ಟರವರು ಎಲ್ಲಾ ಭಕ್ತಾದಿಗಳಂತೆ ಶ್ರೀ ಶಾರದಾಮ್ಮನವರ ಹಾಗೂ ಶ್ರೀಶ್ರೀ ಜಗದ್ಗುರು ಮಹಾಸ್ವಾಮಿಗಳವರ ದರ್ಶನ ಪಡೆದಿರಬಹುದೇ ವಿನಃ ಮೇಲ್ಕಂಡ ಇ-ಪತ್ರಿಕೆಯಲ್ಲಿ ಪ್ರಕಟಿಸಿದಂತೆ ಒಂದು ಘಂಟೆಗೂ ಹೆಚ್ಚು ಮಾತುಕತೆ ನಡೆಸಿದ್ದಾರೆ ಎನ್ನಲಾದ ವಿಷಯವು ಅಪ್ಪಟ ಸುಳ್ಳಾಗಿರುತ್ತದೆ ಎಂಬುದಾಗಿ ಈ ಮೂಲಕ ಸ್ಪಷ್ಟನೆಯನ್ನು ನೀಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಶ್ರೀಮಠದ ಹಾಗೂ ಜಗದ್ಗುರುಗಳ ಕುರಿತಂತೆ ಇಂತಹ ಸುಳ್ಳು ಸುದ್ದಿಗಳನ್ನು ಪ್ರಕಟಿಸಿದಲ್ಲಿ ಕಾನೂನಿನ ಮೊರೆ ಹೋಗುವುದು ನಮಗೆ ಅನಿವಾರ್ಯವಾಗಿರುತ್ತದೆ.

ಪಲ್ಲವಿ ಮತ್ತಿಘಟ್ಟ ಯಾರು?

ಈ ಘಟನೆ ಬಗ್ಗೆ ಪಲ್ಲವಿ ಮತ್ತಿಘಟ್ಟ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಪಲ್ಲವಿ ಮತ್ತಿಘಟ್ಟ ಅವರು ಯಕ್ಷಗಾನ ಕಲಾವಿದೆಯಾಗಿದ್ದು, ಸಾಕಷ್ಟು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಪಲ್ಲವಿ ಮತ್ತಿಘಟ್ಟ ಅವರು ಆಕಾಶದೀಪ ಮಹಾಭಾರತ, ಮಿಸ್ಟರ್‌ & ಮಿಸ್‌ಸ್‌ ರಂಗೇಗೌಡ,ಮದುಮಗಳು, ಮಹಾದೇವಿ, ಬ್ರಹ್ಮಾಸ್ತ್ರ, ನೇತ್ರಾವತಿ ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅಂದಹಾಗೆ ಉಪೇಂದ್ರ ಅವರ ‘ಸೂಪರ್‌ ರಂಗ’, ವಿ ರವಿಚಂದ್ರನ್‌ ಅವರ ‘ಪರಮಶಿವ’ ಸಿನಿಮಾಗಳಲ್ಲಿ ನಟಿಸಿದ್ದಾರೆ.