ಲಕ್ಷ್ಮೀ ಬಾರಮ್ಮ ಸೀರಿಯಲ್‌ನಲ್ಲಿ (Lakshmi Baramma Serial) ಕೀರ್ತಿ ಪಾತ್ರ ಸಖತ್ ಚಾಲೆಂಜಿಂಗ್‌. ಎಲ್ಲ ಎಮೋಶನ್‌ಗಳೂ ಇರೋ ಈ ಪಾತ್ರವನ್ನು ತನ್ವಿ ರಾವ್‌ ಸಖತ್ತಾಗಿ ಅಭಿನಯಿಸ್ತಿದ್ರು. ಈಗ ತನ್ವಿ ತನ್ನ ಕೀರ್ತಿ ಪಾತ್ರದಿಂದ ಹೊರಹೋಗ್ತಿದ್ದಾರೆ ಅನ್ನೋ ಸುದ್ದಿ ಹರಿದಾಡ್ತಿದೆ. ಇದು ನಿಜನಾ? 

ಲಕ್ಷ್ಮೀ ಬಾರಮ್ಮ (Lakshmi Baramma Seria) ಕಲರ್ಸ್ ಕನ್ನಡದಲ್ಲಿ (colors kannada) ಪ್ರಸಾರವಾಗ್ತಿರೋ ಜನಪ್ರಿಯ ಸೀರಿಯಲ್‌. ಇದೊಂದು ಸಾಂಸಾರಿಕ ಕಥೆ. ಇಲ್ಲಿ ಲಕ್ಷ್ಮೀ ಅನ್ನೋ ಕೆಳ ಮಧ್ಯಮ ವರ್ಗದ ಹುಡುಗಿ ಶ್ರೀಮಂತ ಹುಡುಗ, ಫೇಮಸ್‌ ಸಿಂಗರ್‌ ವೈಷ್ಣವ್‌ ಮದುವೆ ಆಗುವ ಕಥೆ. ಆದರೆ ಆಲ್‌ರೆಡಿ ಕೀರ್ತಿ ಅನ್ನೋ ಹುಡುಗಿಯನ್ನು ಪ್ರೀತಿಸುತ್ತಿದ್ದ ವೈಷ್ಣವ್‌ ಅವಳನ್ನೇ ಮದುವೆ ಆಗೋ ಪ್ಲಾನ್‌ನಲ್ಲಿ ಇರ್ತಾನೆ. ಕೀರ್ತಿಗೂ ವೈಷ್ಣವ್‌ ಕಂಡರೆ ಬೆಟ್ಟದಷ್ಟು ಪ್ರೀತಿ ಇರುತ್ತದೆ. ಆದರೆ ಅನಿವಾರ್ಯ ಕಾರಣಕ್ಕೆ ಆಕೆ ವೈಷ್ಣವ್‌ನಿಂದ ತಾತ್ಕಾಲಿಕವಾಗಿ ದೂರವಾಗಬೇಕು ಅನ್ನುವ ಮಾತಿಗೆ ಕಟ್ಟುಬಿದ್ದು ಅವನಿಂದ ದೂರವಾಗ್ತಾಳೆ. ವೈಷ್ಣವ್‌ ತನ್ನವನೇ. ಎಂದಾದರೊಂದು ದಿನ ಆತನ ತನ್ನನ್ನು ಮದುವೆ ಆಗ್ತಾನೆ ಅನ್ನೋದು ಕೀರ್ತಿ ಲೆಕ್ಕಾಚಾರ. 

ಆದರೆ ವೈಷ್ಣವ್‌ಗೆ ಪರಿಸ್ಥಿತಿ ಏನು ಅಂತಲೇ ಅರ್ಥ ಆಗಲ್ಲ. ಕೀರ್ತಿ ತನ್ನನ್ನು ಬಿಟ್ಟು ಹೋಗಿದ್ದು ಸಹಿಸಲಾಗದ ನೋವು ತಂದರೂ ಆತ ಪರಿಸ್ಥಿತಿಗೆ ಹೊಂದಿಕೊಳ್ಳುತ್ತಾನೆ. ತನ್ನನ್ನು ಕೈ ಹಿಡಿದ ಲಕ್ಷ್ಮೀಯನ್ನೇ ಸಂಗಾತಿಯಾಗಿ ಸ್ವೀಕರಿಸುತ್ತಾನೆ. ಅವಳಿಗೆ, ಅವಳ ಕುಟುಂಬದವರಿಗೆ ನೋವಾಗದಂತೆ ಇರಲು ಯತ್ನಿಸುತ್ತಾನೆ. ಆದರೆ ಇತ್ತ ಇವರಿಬ್ಬರಿಗೂ ಡಿವೋರ್ಸ್ ಮಾಡಿಸಿ ತಾನು ವೈಷ್ಣವ್ ಕೈ ಹಿಡೀಬೇಕು ಅನ್ನೋದು ಕೀರ್ತಿ ಗುರಿ. ಆಕೆ ತನ್ನ ಗುರಿ ಮುಟ್ಟುತ್ತಾಳಾ ಅನ್ನೋದು ಕುತೂಹಲ. 

ಈ ಕೀರ್ತಿ ಪಾತ್ರಕ್ಕೆ ಹತ್ತಾರು ಶೇಡ್‌ಗಳಿವೆ. ಅದನ್ನು ನಿರ್ವಹಿಸೋದು ಅಂದುಕೊಂಡಷ್ಟು ಸುಲಭ ಅಲ್ಲ. ಆದರೆ ಈ ಪಾತ್ರವನ್ನು ತನ್ವಿ ರಾವ್ ಲೀಲಾಜಾಲವಾಗಿ ನಿಭಾಯಿಸುತ್ತಿದ್ದಾರೆ. 

ಈ ನಡುವೆಯೇ ಈ ನಟಿ ಲಕ್ಷ್ಮೀ ಬಾರಮ್ಮ ಸೀರಿಯಲ್‌ನಿಂದ ಹೊರ ನಡೆಯುತ್ತಾರೆ ಅನ್ನೋ ಸುದ್ದಿ ಬಂದಿದೆ. ‘ಜಮೀಲ’ ಎಂಬ ತಮಿಳು ಧಾರಾವಾಹಿಯಲ್ಲಿ ತನ್ವಿ ನಟಿಸಿದ್ದರು. ಕನ್ನಡದಲ್ಲಿ ಲಕ್ಷ್ಮೀ ಬಾರಮ್ಮ ಸೀರಿಯಲ್‌ಗೂ ಮೊದಲು 'ಆಕೃತಿ’, ‘ರಾಧೆ ಶ್ಯಾಮ’ ಸೀರಿಯಲ್‌ಗಳಲ್ಲಿ ಅಭಿನಯಿಸಿದ್ದರು. 

ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ ಈ ಕನ್ನಡದ ಹುಡುಗಿ ಬಾಲಿವುಡ್ ಸಿನಿಮಾಗಳಲ್ಲಿ ಮಿಂಚಬೇಕಿತ್ತು. ಏಕೆಂದರೆ ತನ್ವಿ ಈಗಾಗಲೇ ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆ ಸಿನಿಮಾದ ಹೆಸರು 'ಗುಲ್‌ಮೊಹರ್‌'. ಮನೋಜ್‌ ಭಾಜ್‌ಪೇಯಿ, ಶರ್ಮಿಳಾ ಠಾಗೋರ್‌ ಮೊದಲಾದವರಿದ್ದ ಚಿತ್ರವದು. ಅದಾಗಿ ಮಾಧುರಿ ದೀಕ್ಷಿತ್ ಜೊತೆಗೆ 'ಗುಲಾಬ್ ಗ್ಯಾಂಗ್' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಕನ್ನಡದಲ್ಲಿ ಈಕೆ ನಟಿಸಿರೋ ಸಿನಿಮಾದ ಹೆಸರು 'ರಂಗ್‌ ಬಿ ರಂಗ್‌'. ಇನ್ನೂ ಒಂದೆರಡು ಸಿನಿಮಾಗಳು ತನ್ವಿ ಕೈಯಲ್ಲಿವೆ. ಆ ಬಗ್ಗೆ ಅಧಿಕೃತ ಘೋಷಣೆ ಆಗಬೇಕಿದೆ. 

ಈಕೆ ನಟಿಸುತ್ತಿದ್ದ ಲಕ್ಷ್ಮೀ ಬಾರಮ್ಮ ಸೀರಿಯಲ್‌ನಲ್ಲಿ ತನ್ವಿ ಕೀರ್ತಿ ಅನ್ನುವ ನಾನಾ ಶೇಡ್‌ಗಳ ಪಾತ್ರದಲ್ಲಿ ಕಾಣಿಸಿಕೊಂಡರೆ, ವೈಷ್ಣವ್ ಪಾತ್ರದಲ್ಲಿ ಶಮಂತ್ ಗೌಡ ನಟಿಸಿದ್ದಾರೆ. ನಾಯಕಿ ಲಕ್ಷ್ಮೀ ಪಾತ್ರಕ್ಕೆ ಭೂಮಿಕಾ ರಮೇಶ್ ಬಣ್ಣ ಹಚ್ಚಿದ್ದಾರೆ. ವೈಷ್ಣವ್‌ ತಾಯಿ, ಕೀರ್ತಿ ಹಾಗೂ ವೈಷ್ಣವ್‌ ದೂರವಾಗಲು ಕಾರಣವಾದ ಕಾವೇರಿ ಪಾತ್ರದಲ್ಲಿ ಸುಷ್ಮಾ ನಾಣಯ್ಯ ಅಭಿನಯಿಸಿದ್ದಾರೆ. ಈ ಸೀರಿಯಲ್‌ನ ನಟನೆ, ಕಥೆ ಎಲ್ಲವೂ ವೀಕ್ಷಕರಿಗೆ ಸಖತ್ ಇಷ್ಟವಾಗಿತ್ತು. ಟಿಆರ್‌ಪಿಯಲ್ಲೂ ಈ ಸೀರಿಯಲ್‌ ಮುಂದಿತ್ತು. ಆದರೆ ಕಳೆದ ಎರಡು ವಾರಗಳಿಂದ ಅಷ್ಟಾಗಿ ಸೌಂಡ್‌ ಮಾಡ್ತಿಲ್ಲ. ಆದರೆ ವರ್ಷಾನುಗಟ್ಟಲೆ ನಡೆಯೋ ಸೀರಿಯಲ್‌ಗಳಲ್ಲಿ ಇಂಥದ್ದೆಲ್ಲ ಕಾಮನ್‌. 

ಈಗ ನಮ್ಮ ಮುಂದಿರೋ ಪ್ರಶ್ನೆ ಅಂದರೆ ತನ್ವಿ ಅನ್ನೋ ಈ ಟ್ಯಾಲೆಂಟೆಡ್‌ ಹುಡುಗಿ ಈ ಸೀರಿಯಲ್‌ನಿಂದ ಯಾಕೆ ಆಚೆ ಹೋಗ್ತಿದ್ದಾರೆ ಅನ್ನೋದು. ಅರ್ಧದಿಂದಲೇ ಪಾತ್ರದಿಂದ ಹೊರ ನಡೆಯೋದು ಕನ್ನಡ ಮಾತ್ರ ಅಲ್ಲ, ಎಲ್ಲ ಭಾಷೆಗಳ ಸೀರಿಯಲ್‌ಗಳಲ್ಲೂ ಕಾಮನ್‌ ಆಗಿದೆ. ಕೆಲವರು ಕಾರಣ ಹೇಳ್ತಾರೆ. ಕೆಲವರು ಹೇಳಲ್ಲ. ಈಗ ತನ್ವಿ ರಾವ್‌ ಮಾತ್ರ ಈ ಸುದ್ದಿ ಬಗ್ಗೆ ಕಮಕ್‌ ಕಿಮಕ್‌ ಅಂದಿಲ್ಲ. ಚಾನೆಲ್‌ನಲ್ಲೂ ಹೊಸ ಕಲಾವಿದೆ ಎಂಟ್ರಿಯ ಸೂಚನೆ ಸಿಕ್ಕಿಲ್ಲ. ಹಾಗಿದ್ದರೆ ಇದೆಲ್ಲ ಸುಳ್ಳಾ ಅಥವಾ ತೆರೆಮರೆಯಲ್ಲಿ ಏನೋ ನಡೆದಿದೆಯಾ ಅನ್ನೋದಕ್ಕೆ ಉತ್ತರ ನಮಗೂ ಗೊತ್ತಿಲ್ಲ.