ಭಾಗ್ಯಲಕ್ಷ್ಮಿ ಧಾರಾವಾಹಿಯು ಮಹಿಳೆಯರ ಮೇಲಿನ ದೌರ್ಜನ್ಯವನ್ನು ಚಿತ್ರಿಸುತ್ತದೆ. ಒಳ್ಳೆಯ ಪತ್ನಿ, ಸೊಸೆ, ಕೆಲಸಗಾರ್ತಿಯಾಗಲು ಯತ್ನಿಸಿದ ಭಾಗ್ಯಳ ಬದುಕು ಗಂಡನ ದ್ರೋಹದಿಂದ ಕಗ್ಗತ್ತಲಾಗಿದೆ. ಅತ್ತೆ-ಮಾವ, ತಾಯಿಯೂ ಸಹಾಯಕ್ಕೆ ಬಾರದೆ ಭಾಗ್ಯ ಒಂಟಿಯಾಗಿದ್ದಾಳೆ. ಕೆಲಸ ಕಳೆದುಕೊಂಡ ಭಾಗ್ಯಳ ಮುಂದಿನ ಹೆಜ್ಜೆಯೇನೆಂಬುದು ಕುತೂಹಲ. ಛಲಬಿಡದ ಭಾಗ್ಯಳ ಹೋರಾಟ ಮುಂದುವರಿಯಲಿದೆ.

ಒಬ್ಬ ಹೆಣ್ಣಿಗೆ ಅದೆಷ್ಟು ನೋವು, ಅದೆಷ್ಟು ಹಿಂಸೆ, ಅದೆಷ್ಟು ಗೋಳು ನೀಡಬಹುದು ಎನ್ನುವುದಕ್ಕೆ ಸಾಕ್ಷಿಯಾಗಿ ನಿಂತಿದೆ ಕಲರ್ಸ್​ ಕನ್ನಡದ ಭಾಗ್ಯಲಕ್ಷ್ಮಿ. ಇದು ಸೀರಿಯಲ್​ ಕಥೆ ಎನ್ನಿಸಿದರೂ ನಿಜ ಜೀವನದಲ್ಲಿ ಇಂಥದ್ದೇ ನೋವನ್ನು ಅನುಭವಿಸುತ್ತಿರುವ ಮಹಿಳೆಯರು ಅದೆಷ್ಟೋ ಮಂದಿ. ಸೀರಿಯಲ್​ಗಳಲ್ಲಿ ನೋಡುವಾಗ ಅತಿರೇಕ ಸಾಕು, ಸೀರಿಯಲ್​ ನಿಲ್ಲಿಸಿ, ಅವಳು ಹೀಗೆ ಮಾಡಬೇಕಿತ್ತು, ಇವನು ಹೀಗೆ ಮಾಡಬೇಕಿತ್ತು... ಎಂದೆಲ್ಲಾ ಒಂದಷ್ಟು ಕಮೆಂಟ್ಸ್​ ಬರುವುದು ಸಹಜ. ಆದರೆ ಸೀರಿಯಲ್​ಗಳು ಕೂಡ ನಿಜ ಜೀವನದ ಒಂದು ಅಂಗವೇ ಆಗಿದೆ ಎನ್ನುವುದಕ್ಕೆ ಧಾರಾವಾಹಿಗಳನ್ನು ನೋಡಿದವರು ತಮ್ಮ ಜೀವನದ ಘಟನೆಗಳನ್ನು ಹೇಳುವಾಗ ತಿಳಿದುಬರುತ್ತದೆ. ಕೆಲವೊಮ್ಮೆ ಸೀರಿಯಲ್​ಗಳಲ್ಲಿ ಅತಿರಂಜನೀಯ ಎನ್ನುವಂತೆ, ಅತಿಶಯೋಕ್ತಿ ಎನ್ನುವಂತೆ ತೋರಿಸುವುದು ನಿಜವಾದರೂ ನೋವುಂಡ ಜೀವಗಳಿಗೆ ಇದು ತಮ್ಮದೇ ಕಥೆಯೇನೋ ಎಂದು ಎನ್ನಿಸದೇ ಇರಲಾರದು ಎನ್ನುವುದೂ ಅಷ್ಟೇ ಸತ್ಯ.

ಒಳ್ಳೆಯ ಪತ್ನಿಯಾಗಿ, ಒಳ್ಳೆಯ ಸೊಸೆಯಾಗಿ, ಒಳ್ಳೆಯ ಕೆಲಸಗಾರ್ತಿಯಾಗಿ ಇರಬೇಕು ಎಂದು ಬಯಸಿದ ಭಾಗ್ಯ ತನ್ನ ಜೀವನಪೂರ್ತಿ ಕುಟುಂಬ, ಮಕ್ಕಳು ಎಂದೇ ಕಳೆದವಳು. ಗಂಡ ಬೇರೊಬ್ಬಳ ಜೊತೆ ಸಂಬಂಧ ಇರಿಸಿಕೊಂಡ ಎಂದು ಗೊತ್ತಾದ ಮೇಲೂ, ತನ್ನ ಸ್ವಾಭಿಮಾನಕ್ಕೆ ಆತ ಪದೇ ಪದೇ ಪೆಟ್ಟು ಕೊಡುತ್ತಿದ್ದರೂ ಮಕ್ಕಳಿಗಾಗಿ ಸಂಸಾರ ಒಡೆಯಬಾರದು ಎಂದು ಬಯಸಿದವಳು ಆಕೆ. ಸ್ವಂತ ಮಗಳಂತೆ ನೋಡಿಕೊಳ್ಳುವ ಅತ್ತೆ-ಮಾವನೇ ಆಕೆಗೆ ಆಧಾರವೂ ಆಗಿ, ನಮಗೆ ಇಂಥ ಅತ್ತೆ-ಮಾವ ಸಿಗಬಾರದೇ ಎಂದುಕೊಂಡವರು ಹಲವರು. ಆದರೆ, ಈಗ ಭಾಗ್ಯಳಿಗೆ ಮತ್ತೆ ಕೇಡುಗಾಲ ಬಂದಿದೆ.

80-90ರ ದಶಕದವರಿಗೆ ಈ ಸೊಸೈಟಿ ಮೆಂಟಾಲಿಟಿನೇ ಒಂಥರಾ ವಿಲನ್​: ಡಿವೋರ್ಸ್​ ಬಗ್ಗೆ ನಟಿ ಆಶಿತಾ ಓಪನ್​ ಮಾತು

ತಾನು ಬದಲಾದಂತೆ ನಾಟಕವಾಗಿ ತಾಂಡವ್​ ಎಲ್ಲರ ಮನಸ್ಸನ್ನು ಗೆದ್ದುಬಿಟ್ಟಿದ್ದಾನೆ. ಅವನು ಎಂಥವನು ಎಂದು ತಿಳಿದಿರುವ ಕಾರಣ, ಸದಾ ಸೊಸೆಗೆ ಬೆನ್ನೆಲುಬಾಗಿ ನಿಲ್ಲುತ್ತಿದ್ದ ಅತ್ತೆ ಕುಸುಮಾ, ಮಗನ ನಿಜವಾದ ಬಣ್ಣ ಗುರುತಿಸದೇ ಹೋದಳು. ಇದು ಅತಿಶಯೋಕ್ತಿ ಎನ್ನಿಸಿದರೂ, ಕುಸುಮಾ ಒಬ್ಬ ಅಮ್ಮ ಕೊನೆಗೆ ಅತ್ತೆ ಎನ್ನುವುದೂ ಅಷ್ಟೇ ದಿಟ. ಅವಳು ಮಗನ ಮೋಡಿಯ ಮಾತಿಗೆ ಮರುಳಾದಳು. ಇನ್ನು ಭಾಗ್ಯಳ ಅಮ್ಮನೋ, ತನ್ನ ಮಗಳ ಜೀವನ ಹೇಗಾದರೂ ಸರಿಯಾಗಲಿ ಎನ್ನುವ ಕಾರಣಕ್ಕೆ ನೀನೇ ಹೊಂದಿಕೊಂಡು ಹೋಗಬೇಕು ಅಂದೆಲ್ಲಾ ಹೇಳತೊಡಗಿದ್ದಾಳೆ. ಎಷ್ಟೆಂದರೂ ಹೆಣ್ಣು ಹೆತ್ತ ಜೀವವಲ್ಲವೆ, ಗಂಡ ಕೈಬಿಟ್ಟರೆ ಮುಂದೇನು ಎನ್ನುವ ಅಮ್ಮನ ಕೊರಗು ಆಕೆಯದ್ದು. 

ಆದರೆ, ಭಾಗ್ಯಳಿಗೆ ಗಂಡನ ಕುತಂತ್ರ ಗೊತ್ತಾಗಿದೆ. ಆದರೆ ಆಕೆಯನ್ನು ನಂಬುವ ಸ್ಥಿತಿಯಲ್ಲಿ ಯಾರೂ ಇಲ್ಲ. ಭಾಗ್ಯಳಿಂದ ಅವಳ ದುಡಿಮೆಯನ್ನೇ ಕಿತ್ತುಕೊಳ್ಳಲು ಪ್ಲ್ಯಾನ್​ ಹಾಕಿದ್ದ ಶ್ರೇಷ್ಠಾ ಸಕ್ಸಸ್​ ಕಂಡಿದ್ದಾಳೆ. ಭಾಗ್ಯಳ ಕೆಲಸವೂ ಹೋಗಿದೆ. ಗಂಡನೂ ಇಲ್ಲ. ಅತ್ತೆ- ಮಾವ ಕೂಡ, ಮಗನ ಪರವಾಗಿ ಆಗಿದ್ದಾರೆ. ಇನ್ನು ಅಮ್ಮನೋ ಮೊದಲಿನಿಂದಲೂ ಭಾಗ್ಯಳದ್ದು ಸರಿಯಿಲ್ಲ ಎಂದೇ ಹೇಳುತ್ತಾ ಬಂದಿದ್ದಾಳೆ. ಎಲ್ಲವೂ ಕೈತಪ್ಪಿ ಹೋಗಿದೆ. ಒಳ್ಳೆಯ ಪತ್ನಿ, ಸೊಸೆ, ಕೆಲಸಗಾರ್ತಿ ಆಗುವ ಹಂಬಲದಿಂದ ಬದುಕುಪೂರ್ತಿ ಸವೆಸಿದ ಭಾಗ್ಯಳ ಬಾಳಲ್ಲಿ ಈಗ ಅಂಧಕಾರ. ಆದರೆ ಛಲ ಬಿಟ್ಟಿಲ್ಲ ಭಾಗ್ಯ. ಅವಳ ಮುಂದಿನ ನಡೆಯೇನು ಎನ್ನುವುದು ಈಗಿರುವ ಕುತೂಹಲ. ಪಾರ್ಟಿಯೊಂದರಲ್ಲಿ ಜೋಕರ್​ ವೇಷತೊಟ್ಟು ಭಾಗ್ಯ ಕುಣಿದಾಡುತ್ತಿರುವುದನ್ನು ಪ್ರೊಮೋದಲ್ಲಿ ನೋಡಬಹುದು. ಮುಂದೇನಾಗುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ. 

'ನಾನು ಹುಟ್ಟಿದ್ದೇ ನಿನಗಾಗಿ' ಎಂದು ಬರೆದುಕೊಂಡಿದ್ದ ನಟಿ ಅಪರ್ಣಾ, ಎರಡೇ ವರ್ಷದಲ್ಲಿ ಡಿವೋರ್ಸ್​ ಘೋಷಣೆ!