'ಶ್ರಾವಣಿ ಸುಬ್ರಹ್ಮಣ್ಯ' ಸೀರಿಯಲ್‌ನ ಶೂಟಿಂಗ್ ವಿಡಿಯೋವೊಂದು ವೈರಲ್ ಆಗಿದೆ. ಇದರಲ್ಲಿ ನಟಿ ರಕ್ಷಿತಾ ಭಾಸ್ಕರ್, ಸಹನಟ ಅಥರ್ವ ಅವರ ಕೆನ್ನೆಗೆ ಹೊಡೆಯುವ ದೃಶ್ಯದ ಚಿತ್ರೀಕರಣದ ಹಿಂದಿನ ಸವಾಲುಗಳು ಮತ್ತು ತಮಾಷೆಯ ಕ್ಷಣಗಳನ್ನು ತೋರಿಸಲಾಗಿದೆ.

ತೆರೆಯ ಮೇಲೆ ಒಂದು ದೃಶ್ಯವನ್ನು ತೋರಿಸುವಾಗ ಅದರ ಹಿಂದೆ ನಟ-ನಟಿಯರು ಎಷ್ಟೆಲ್ಲಾ ಸರ್ಕಸ್​ ಮಾಡಿರುತ್ತಾರೆ. ಎಷ್ಟೋ ಸಂದರ್ಭದಲ್ಲಿ ಜೀವಕ್ಕೆ ಅಪಾಯ ತಂದುಕೊಂಡಿರುವ ಉದಾಹರಣೆಗಳೂ ಸಾಕಷ್ಟು ಇವೆ. ಅದರಲ್ಲಿಯೂ ಆ್ಯಕ್ಷನ್​ ದೃಶ್ಯಗಳನ್ನು ಮಾಡುವಾಗ ನಟ-ನಟಿಯರಿಗೆ ಗಂಭೀರ ಸ್ವರೂಪದ ಗಾಯಗಳಾಗುವ ಸುದ್ದಿಗಳೂ ಆಗ್ಗಾಗ್ಗೆ ಬರುತ್ತಲೇ ಇರುತ್ತವೆ. ಆದರೆ ಒಂದು ಚಿತ್ರ ಯಶಸ್ಸು ಆಗಬೇಕಾದರೆ ನಟರು ಇವೆಲ್ಲಾ ಮಾಡುವುದು ಅನಿವಾರ್ಯವೇ. ಇಷ್ಟು ಮಾಡಿದ ಮೇಲೂ ಚಿತ್ರ ಯಶಸ್ವಿ ಆಗಿಯೇ ಆಗುತ್ತದೆ ಎಂದೂ ಹೇಳುವುದು ಕಷ್ಟ. ಇದು ಸಿನಿಮಾದ ಮಾತಾದರೆ, ಇಂದು ಸೀರಿಯಲ್​ಗಳೂ ಯಾವ ಸಿನಿಮಾಕ್ಕೂ ಕಮ್ಮಿ ಏನಿಲ್ಲ. ಸಿನಿಮಾಗಳ ಮಾದರಿಯಲ್ಲಿಯೇ ದೃಶ್ಯಗಳ ಶೂಟಿಂಗ್​ ನಡೆಯುತ್ತದೆ.

ಕೆನ್ನೆಗೆ ಏಟು

ಇನ್ನು ಕೆನ್ನೆಗೆ ಹೊಡೆಯುವಾಗ ದೃಶ್ಯದಲ್ಲಂತೂ ಎಷ್ಟೋ ಬಾರಿ ಆವೇಶದಲ್ಲಿ ನಟಿ ಅಥವಾ ನಟನ ಕೆನ್ನೆಗೆ ನಿಜವಾದ ಏಟು ಬಿದ್ದಿರೋ ಘಟನೆಗಳೂ ನಡೆದುಬಿಡುತ್ತವೆ. ಆದರೆ ಕೆನ್ನೆಯ ಮೇಲೆ ಹೊಡೆಯುವಾಗ ಅತ್ಯಂತ ಎಚ್ಚರಿಕೆಯಿಂದ ಇರಬೇಕು. ಸ್ವಲ್ಪ ಹೆಚ್ಚೂ ಕಡಿಮೆಯಾದರೂ ಅಪಾಯವೇ. ಅದಕ್ಕಾಗಿಯೇ ಸೀರಿಯಲ್​ಗಳಲ್ಲಿ ಹಲವಾರು ರೀಟೇಕ್​ಗಳನ್ನು ತೆಗೆದುಕೊಳ್ಳಲಾಗುತ್ತದೆ. ಕೆಲವೊಮ್ಮೆ ನಟ ಅಥವಾ ನಟಿಯರು ಕೆನ್ನೆ ಮೇಲೆ ಹೊಡೆಯುವಾಗ ಏಟು ಆದರೂ ಅದನ್ನು ಸಮಾಧಾನಚಿತ್ತವಾಗಿ ತೆಗೆದುಕೊಳ್ಳಬೇಕಾದ ಅಗತ್ಯವಿರುತ್ತದೆ.

ಶ್ರಾವಣಿ ಸುಬ್ರಹ್ಮಣ್ಯ ಸೀರಿಯಲ್​

ಕೆನ್ನೆಯ ಮೇಲೆ ಹೊಡೆಯುವ ದೃಶ್ಯವೊಂದರ ಶೂಟಿಂಗ್ ವಿಡಿಯೋ ಇದೀಗ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಅದು ಶ್ರಾವಣಿ ಸುಬ್ರಹ್ಮಣ್ಯ ಸೀರಿಯಲ್​ನ ಸ್ಟೋರಿ. ಇದರಲ್ಲಿ ಸಾವಿತ್ರಿ ಪಾತ್ರದಲ್ಲಿ ರಕ್ಷಿತಾ ಭಾಸ್ಕರ್​ ನಟಿಸುತ್ತಿದ್ದು, ಅವರ ಪತಿಯಾಗಿ ವಿಲನ್​ ರೋಲ್​ನಲ್ಲಿ ಅಥರ್ವ ನಟಿಸುತ್ತಿದ್ದಾರೆ. ಒಂದು ಹಂತದಲ್ಲಿ ಸಾವಿತ್ರಿ ಗಂಡನ ಮೇಲೆ ಕೈ ಮಾಡುವ ಸನ್ನಿವೇಶ ಬರುತ್ತದೆ. ಹೆಜ್ಜೆ ಹೆಜ್ಜೆಗೂ ಹಿಂಸೆ ಕೊಡುವ ಪತಿಯಿಂದ ನೋವು ಅನುಭವಿಸುವ ಸಾವಿತ್ರಿ ಒಂದು ಹಂತದಲ್ಲಿ ಕೆನ್ನೆಯ ಮೇಲೆ ಹೊಡೆಯುತ್ತಾಳೆ. ಆ ದೃಶ್ಯದ ಶೂಟಿಂಗ್​ ವೇಳೆ ಏನೆಲ್ಲಾ ತಮಾಷೆ ನಡೆಯಿತು ಎನ್ನುವ ಬಗ್ಗೆ ಅಥರ್ವ ಅವರು ತಮ್ಮ ಇನ್​ಸ್ಟಾಗ್ರಾಮ್​ ಪುಟದಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

ಸಾಹಸದ ಕೆಲಸ

ಮೊದಲಿಗೆ ರಕ್ಷಿತಾ ಅವರು ಕೆನ್ನೆಗೆ ಹೊಡೆದು ಆಮೇಲೆ ನಿಜವಾಗಿಯೂ ಅಥರ್ವ ಅವರನ್ನು ಸಮಾಧಾನ ಪಡಿಸುವುದನ್ನು ನೋಡಬಹುದು. ಬಳಿಕ ಇಬ್ಬರೂ ನಗು ತಡೆಯಲಾರದೇ ಜೋರಾಗಿ ನಕ್ಕಿದ್ದಾರೆ. ಮತ್ತೆ ರೀಟೇಕ್​ ಮಾಡಲಾಗಿದೆ. ಮುಂದಿನ ಡೈಲಾಗ್​ಗಳನ್ನು ಹೇಗೆ ಹೇಳಬೇಕು ಎನ್ನುವ ಬಗ್ಗೆ ಎಲ್ಲರೂ ಹೇಗೆಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎನ್ನುವುದನ್ನು ಇದರಲ್ಲಿ ನೋಡಬಹುದಾಗಿದೆ. ಚಿಕ್ಕದೊಂದು ದೃಶ್ಯಕ್ಕೆ ಎಷ್ಟು ಸಮಯ ಕಳೆಯುತ್ತದೆ. ಇಂಥ ಅದೆಷ್ಟೋ ದೃಶ್ಯಗಳ ಶೂಟಿಂಗ್​ ಮಾಡಿ ಐದಾರು ವರ್ಷ ಸೀರಿಯಲ್​ ನಡೆಸುವುದು ಎಂದರೆ ಸಾಹಸದ ಕೆಲಸವೇ ಎನ್ನುವುದು ತಿಳಿಯುತ್ತದೆ.

View post on Instagram