ಸೀತಾರಾಮ ಧಾರಾವಾಹಿಯಲ್ಲಿ ಕುಂಭಮೇಳದ ಸನ್ನಿವೇಶ ಚಿತ್ರೀಕರಿಸಲಾಗಿದ್ದು, ಅಲ್ಲಿ ಸಿಹಿಗೆ ಅಘೋರಿ ಬಾಬಾ ದೈವಶಕ್ತಿಯನ್ನು ನೀಡಿದ್ದಾರೆ. ಈ ಶಕ್ತಿಯಿಂದ ಸಿಹಿ ಏನೆಲ್ಲಾ ಮಾಡಲು ಸಾಧ್ಯವಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಬೆಂಗಳೂರು (ಮಾ.01): ಸೀತಾರಾಮ ಪ್ರಯಾಗ್‌ರಾಜ್ ಕುಂಭಮೇಳಕ್ಕೆ ತೆರಳಿ ಅಲ್ಲಿ ಪುಣ್ಯಸ್ನಾನ ಮಾಡಿದ್ದಾರೆ. ಆದರೆ, ದೇಹದ ಸ್ವರೂಪವೇ ಇಲ್ಲದೆ ಆತ್ಮವಾಗಿ ಸುತ್ತಾಡುತ್ತಿರುವ ಸಿಹಿ ಯಾರ ಕಣ್ಣಿಗೆ ಕಾಣಿಸದಿದ್ದರೂ, ಆ ಪುಟ್ಟ ಮಗುವಿನ ಮುಗ್ದ ಮನಸ್ಸನ್ನು ನೋಡಿದ ದೇವರೇ ಅಘೋರಿ ಬಾಬಾ ರೂಪದಲ್ಲಿ ಬಂದು ಹನುಮ ಶ್ರೀರಕ್ಷೆಯುಳ್ಳ ದಾರವನ್ನು ಕೈಗೆ ಕಟ್ಟಿ ಹೋಗಿದ್ದಾರೆ. ಇದರಿಂದ ಸಿಹಿಗೆ ದಿವ್ಯ ಶಕ್ತಿಯೊಂದು ಬರಲಿದೆ ಎಂದು ಅಘೋರಿ ಬಾಬಾ ಹೇಳಿದ್ದಾರೆ. ಹಾಗಾದರೆ, ಯಾವ ಶಕ್ತಿ ಬರುತ್ತದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ..
ಕನ್ನಡ ಕಿರುತೆರೆಯ ಇತಿಹಾಸದಲ್ಲಿ ಹೊಸ ಪ್ರಯತ್ನಕ್ಕೆ ನಾಂದಿ ಹಾಡಿರುವ ಜೀ ಕನ್ನಡ ವಾಹಿನಿಯಿಂದ ಸೀತಾರಾಮ ಧಾರಾವಾಹಿಯ ಪ್ರಮುಖ ಪಾತ್ರಧಾರಿಗಳನ್ನು ಹಿಂದೂ ಧಾರ್ಮಿಕ ಪದ್ದತಿಯ ಅನುಸಾರ 144 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭಮೇಳಕ್ಕೆ ಕಳುಹಿಸಿ ಅದನ್ನು ಶೂಟಿಂಗ್ ಮಾಡಲಾಗಿದೆ. ಇನ್ನು ಧಾರಾವಾಹಿಯ ಪಾತ್ರಕ್ಕೆ ಅನುಗುಣವಾಗಿ ಎಲ್ಲ ಸನ್ನಿವೇಶವನ್ನೂ ಕೂಡ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ. ಸೀತಾರಾಮ ಮದುವೆ ಮಾಡಿಕೊಂಡಾಗಿನಿಂದ ಒಂದಲ್ಲಾ ಒಂದು ತೊಂದರೆ ಆಗುತ್ತಲೇ ಇದೆ. ಇದಕ್ಕೆಲ್ಲ ಮನೆಯಲ್ಲಿರುವ ಖಳನಾಯಕಿ ಭಾರ್ಗವಿ ದೇಸಾಯಿ ಎಂಬ ಅರಿವೂ ಅವರಿಗಿಲ್ಲ. ಜೊತೆಗೆ, ಮುದ್ದಾದ ಮಗಳು ಸಿಹಿಯನ್ನು ಕಳೆದುಕೊಂಡು ನೋವಿನಲ್ಲಿದ್ದರಿಂದ ಹಿಂದೂ ಧರ್ಮದಲ್ಲಿ ಆಚರಣೆ ಮಾಡುವ 144 ವರ್ಷಗಳಿಗೊಮ್ಮೆ ಬರುವ ಮಹಾಕುಂಭಮೇಳದಲ್ಲಿ ಭಾಗಿಯಾಗಿದ್ದಾರೆ. ಧಾರಾವಾಹಿ ಸನ್ನಿವೇಶದಲ್ಲಿಯೇ ಪ್ರಯಾಗ್‌ರಾಜ್‌ನ ಮಹಾಕುಂಭಮೇಳಕ್ಕೆ ತೆರಳಿ ಅಲ್ಲಿ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ.
ಇದನ್ನೂ ಓದಿ: ಸಿಹಿ ಆತ್ಮಕ್ಕೆ ಮುಕ್ತಿ ಸಿಗುತ್ತಾ? ಅಥವಾ 'ಹನುಮ ರಕ್ಷೆ'ಯಿಂದ ಪುನಃ ಜೀವ ಬರುತ್ತಾ? ಇಲ್ಲಿದೆ ಉತ್ತರ!
ಪ್ರಯಾಗ್ ರಾಜ್ ಕುಂಭಮೇಳದಲ್ಲಿ ಸೀತಾ, ರಾಮ ಹಾಗೂ ಮಗಳು ಸುಬ್ಬಿ ಪುಣ್ಯಸ್ನಾನ ಮಾಡಿದ್ದಾರೆ. ಈ ವೇಳೆ ಆತ್ಮವಾಗಿ ಸುತ್ತಾಡುತ್ತಿರುವ ಸಿಹಿ ತುಂಬಾ ಅಪ್ಪ-ಅಮ್ಮನೊಂದಿಗೆ ತಾನಿಲ್ಲವಲ್ಲಾ ಎಂದು ನೊಂದುಕೊಂಡಿದ್ದಾಳೆ. ಈ ಮಗುವಿನ ನೋವು ದೇವರಿಗೂ ಸಹಿಸಲಾಗದೇ ಅಘೋರಿ ಬಾಬಾನ ರೂಪದಲ್ಲಿ ಭೂಮಿಗೆ ಬಂದು ಸಿಹಿಗೆ ಆಶೀರ್ವಾದ ಮಾಡಿದ್ದಾನೆ. ಮೊದಲು ಅಪ್ಪ-ಅಮ್ಮನನ್ನು ಮುಟ್ಟಲೂ ಆಗ ಸಿಹಿಗೆ ಒಮ್ಮೆ ತಬ್ಬಿಕೊಳ್ಳಲು ಅವಕಾಶವನ್ನು ಮಾಡಿಕೊಡಲಾಯಿತು. ಇದಾದ ನಂತರ ಪುನಃ ಸಿಹಿ ತಾನು ಅಪ್ಪ-ಅಮ್ಮನೊಂದಿಗೆ ಇರಬೇಕು ಎಂದು ಕೇಳಿಕೊಂಡಾಗ ಸಮ್ಮತಿ ಕೊಡಲಿಲ್ಲ. ಇದರ ಬದಲಾಗಿ ನಿನಗೆ ದೇಹದ ಸ್ವರೂಪವಿಲ್ಲ, ಯಾರನ್ನೂ ಮುಟ್ಟಲಾಗಲ್ಲ ಎಂದು ಹೇಳಿ ಮನವರಿಕೆ ಮಾಡಿಕೊಡುತ್ತಾನೆ. ನಂತರ ಅಘೋರಿ ಬಾಬಾ ಸಿಹಿಗೆ ಒಂದು ದಾರವನ್ನು ಮಂತ್ರಿಸಿಕೊಟ್ಟು ಇದನ್ನು ನಿನ್ನ ಬಳಿ ಇಟ್ಟುಕೊಂಡು ಹನುಮಂತನನ್ನು ಜಪಿಸಿದರೆ ಶಕ್ತಿ ಬರುತ್ತದೆ ಎಂದು ಹೇಳಿದ್ದಾರೆ.
ಹಾಗಾದರೆ, ಅಘೋರಿ ಬಾಬಾ ಸಿಹಿಗೆ ಕೊಟ್ಟ ಹನುಮ ರಕ್ಷೆಯಿಂದ ಯಾವ ಶಕ್ತಿ ಬರುತ್ತದೆ ಎಂಬುದು ಎಲ್ಲರಿಗೂ ಕುತೂಹಲವಾಗಿದೆ. ಈವರೆಗೆ ಸಿಹಿ ತನ್ನ ಸಹೋದರಿ ಸುಬ್ಬಿ ಕಣ್ಣಿಗೆ ಮಾತ್ರ ಕಾಣಿಸುತ್ತಿದ್ದಳು. ಅವಳೊಂದಿಗೆ ಮಾತ್ರ ಮಾತನಾಡುತ್ತಿದ್ದಳು. ಆದರೆ, ಸಿಹಿಯಿಂದ ಏನೊಂದು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಅಲ್ಲಿ ತಪ್ಪು ನಡೆಯುತ್ತಿದ್ದರೂ ಕಣ್ಣಿಂದ ನೋಡಬೇಕೆ ಹೊರತು ತಡೆಯುವ ಶಕ್ತಿ ಇರಲಿಲ್ಲ. ಯಾವುದೇ ವಸ್ತು ಮುಟ್ಟಲು ಆಗುತ್ತಿರಲಿಲ್ಲ. ಇದೀಗ ಹನುಮ ರಕ್ಷೆ ಪಡೆದಿರುವ ಸಿಹಿ ಯಾರ ಕಣ್ಣಿಗೂ ಕಾಣದಂತೆ ವಸ್ತುಗಳನ್ನು ಮುಟ್ಟುವ, ಕೆಡುಕು ಆಗುವುದನ್ನು ತಡೆಯುವುದಕ್ಕೆ ಶಕ್ತಿ ಬರಬಹುದು. ಈ ಶಕ್ತಿಯಿಂದ ಭಾರ್ಗವಿ ದೇಸಾಯಿ ಹಾಗೂ ರುದ್ರ ಪ್ರತಾಪ್‌ಗೆ ಸರಿಯಾದ ಬುದ್ಧಿ ಕಲಿಸಬಹುದು.
ಇದನ್ನೂ ಓದಿ: ನೀರು ನೋಡಿ ಗಗನ್ ಚಿನ್ನಪ್ಪ ಹೆದರಿದ್ರಾ? ʼಸೀತಾರಾಮʼ ಕುಂಭಮೇಳ ಶೂಟಿಂಗ್ ಹಿಂದಿನ ವಿಡಿಯೋ ರಿವೀಲ್!
ಈವರೆಗೆ ಸಿಹಿ ಹೇಳಿದ್ದನ್ನು ಸುಬ್ಬಿ ಮಾಡಬೇಕಿತ್ತು. ಇದೀಗ ಹನುಮಾನ್ ಚಾಲೀಸ ಮಂತ್ರ ಹೇಳಿದರೆ ಸಿಹಿಗೆ ಕೂಡ ಎಲ್ಲ ವಸ್ತುಗಳನ್ನು ಮುಟ್ಟುವ, ಎತ್ತುವ, ರವಾನಿಸುವ ಶಕ್ತಿ ಪಡೆದುಕೊಳ್ಳಬಹುದು. ಆದರೆ, ಈಗಲೂ ತಾನು ಸುಬ್ಬಿ ಹೊರತಾಗಿ ಯಾರ ಕಣ್ಣಿಗೂ ಕಾಣಿಸುವುದಿಲ್ಲ. ಸಿಹಿ ಆತ್ಮದಿಂದ ಧಾರಾವಾಹಿಯ ಎಲ್ಲ ಖಳನಾಯಕರಿಗೆ ಸರಿಯಾಗಿ ಬುದ್ಧಿ ಕಲಿಸಲಾಗುತ್ತದೆ ಎಂದು ಹೇಳಬಹುದು. ಅಸಲಿಯಾಗಿ ಕಥೆಯಲ್ಲಿ ಏನಾಗುತ್ತದೆ ಎಂಬುದನ್ನು ಮುಂದಿನ ಸಂಚಿಕೆಗಳನ್ನು ನೋಡಿದಾಗಲೇ ತಿಳಿಯಲಿದೆ.
