ಪ್ರಯಾಗರಾಜ್ ಕುಂಭಮೇಳದಲ್ಲಿ ಸಿಹಿ ಆತ್ಮಕ್ಕೆ ಅಘೋರಿ ಬಾಬಾ ಆಶೀರ್ವಾದ ನೀಡಿದ್ದಾರೆ. ರಾಮ ಸಿಹಿ ಆತ್ಮಕ್ಕೆ ಶಾಂತಿ ಕೋರಿದ್ದು, ಹನುಮ ರಕ್ಷೆಯಿಂದ ಸಿಹಿ ದೇಹದ ಸ್ವರೂಪ ಪಡೆದು ವಾಪಸ್ ಬರುತ್ತಾ? ಇಲ್ಲಿದೆ ಮಹತ್ವದ ಮಾಹಿತಿ..
ಪ್ರಯಾಗರಾಜ್ ಕುಂಭಮೇಳಕ್ಕೆ ತೆರಳಿ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ ರಾಮ ಸಿಹಿ ಆತ್ಮಕ್ಕೆ ಶಾಂತಿ ಕೋರಿದ್ದಾನೆ. ಹಾಗಾದರೆ, ಸಿಹಿ ಆತ್ಮಕ್ಕೆ ಮುಕ್ತಿ ಸಿಗುತ್ತದೆಯೇ ಎಂಬ ಅನುಮಾನ ಬಂದಿದೆ. ಮತ್ತೊಂದೆಡೆ ಅಘೋರಿ ಬಾಬಾ ಸಿಹಿಗೆ ಹನುಮ ರಕ್ಷೆ ದಾರ ಕಟ್ಟಿದ್ದಾರೆ. ಹಾಗಾದರೆ, ಅಘೋರಿ ಬಾಬಾ ಆಶೀರ್ವಾದದಿಂದ ಸಿಹಿ ದೇಹದ ಸ್ವರೂಪ ಪಡೆದು ವಾಪಸ್ ಬರುತ್ತಾ? ಸೀತಾ ರಾಮ ಧಾರಾವಾಹಿ ಕುತೂಹಲಕಾರಿ ಸನ್ನಿವೇಶದ ಮಾಹಿತಿ ಇಲ್ಲಿದೆ ನೋಡಿ..
ಸೀತಾರಾಮ ಧಾರಾವಾಹಿಯಲ್ಲಿ ಸಿಹಿ ಪಾತ್ರವೇ ಇದೀಗ ಭಾರೀ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಈ ಧಾರಾವಾಹಿಯ ಖಳನಾಯಕಿ ಭಾರ್ಗವಿ ದೇಸಾಯಿ ಸಿಹಿಯನ್ನು ರುದ್ರಪ್ರತಾಪನಿಂದ ಕೊಲೆ ಮಾಡಿಸಿದ ನಂತರ, ಸಿಹಿ ಆತ್ಮವಾಗಿ ಸುತ್ತಾಡುತ್ತಿದ್ದಾಳೆ. ಈವರೆಗೆ ತನ್ನ ರಕ್ತವನ್ನು ಹಂಚಿಕೊಂಡು ಹುಟ್ಟಿದ ತನ್ನ ಸಹೋದರಿ ಸುಬ್ಬಿಗೆ ಕಾಣಿಸಿಕೊಳ್ಳುತ್ತಾಳೆ. ಆದರೆ, ಇದೀಗ ಹಿಂದೂ ಧರ್ಮದ ಅತ್ಯಂತ್ರ ಪವಿತ್ರ ಸ್ಥಳ ಹಾಗೂ ಪುಣ್ಯಸ್ನಾನದ ಕೇಂದ್ರ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳಕ್ಕೆ ಸೀತಾ, ರಾಮ ಹಾಗೂ ಸುಬ್ಬಿ ಮೂವರೂ ಹೋಗಿದ್ದಾರೆ. ಅಲ್ಲಿಗೆ ಆತ್ಮವಾಗಿಯೇ ತೆರಳಿದ ಸಿಹಿ ಅಘೋರಿ ಬಾಬಾ ಕಣ್ಣಿಗೆ ಕಾಣಿಸಿಕೊಂಡು, ಒಂದು ವರವನ್ನು ಪಡೆದು ಸೀತಾ ಮತ್ತು ರಾಮನನ್ನು ಒಮ್ಮೆ ತಬ್ಬಿಕೊಂಡು ತನ್ನ ಬಹುದಿನದ ಆಸೆ ಈಡೇರಿಸಿಕೊಂಡಿದ್ದಾಳೆ.
ಇದೀಗ ಪುನಃ ತಾನು ಅಪ್ಪ-ಅಮ್ಮನನ್ನು ಮುಟ್ಟಬೇಕು, ಜೊತೆಗೇ ಇರಬೇಕು ಎಂದು ಅಘೋರಿ ಬಾಬಾನ ಬಳಿ ಕೇಳಿಕೊಂಡಿದ್ದಾಳೆ. ಇದಕ್ಕೆ ನೀನು ಒಂದು ಮಾತನ್ನು ಕೇಳಿದ್ದು, ಅದು ಈಡೇರಿಸಿ ಆಗಿದೆ ಅಲ್ವಾ ಎಂದು ಬಾಬಾ ಹೇಳುತ್ತಾರೆ. ಆದರೆ, ಪರಿಪರಿಯಾಗಿ ಸಿಹಿ ಬೇಡಿಕೊಂಡಿದ್ದನ್ನು ನೋಡಿದ ಬಾಬಾ, ನಿನಗೆ ದೇಹವೇ ಇಲ್ಲದ್ದರಿಂದ ನೀನು ಯಾರಿಗೂ ಕಾಣಿಸುವುದಿಲ್ಲ. ಯಾರನ್ನೂ ಮುಟ್ಟೋದಕ್ಕೂ ಆಗೊಲ್ಲ ಎಂದು ಬಾಬಾ ಹೇಳಿದ್ದಾರೆ. ಆದರೆ, ಒಂದು ಸಲ ಮುಟ್ಟಿದ್ನಲ್ಲಾ, ಈಗಲೂ ಹಾಗೇ ಮಾಡಿ. ನೀವು ದೇವರು ಅಲ್ವಾ, ಆಗ ಮಾಡಿದಂತೆಯೇ ಮತ್ತೊಮ್ಮೆ ಮ್ಯಾಜಿಕ್ ಮಾಡಿ ಎಂದು ಸಿಹಿ ಕೇಳಿಕೊಂಡಿದ್ದಾಳೆ. ಇದಕ್ಕೆ ಬಾಬಾ ನಾನು ದೇವರಲ್ಲ, ನೀನು ದೇವರ ಆರಾಧನೆ ಮಾಡುವುದರಿಂದ ನೀನು ಶಕ್ತಿ ಪಡೆದುಕೊಳ್ಳಬಹುದು ಎಂದು ಬಾಬಾ ಹೇಳಿದರು.
ಇದನ್ನೂ ಓದಿ: ಮಹಾ ಕುಂಭಮೇಳದಲ್ಲಿ ಹುಟ್ಟುಹಬ್ಬ ಆಚರಿಸಿದ ವೈಷ್ಣವಿ ಗೌಡ… ಕತ್ತಿನಲ್ಲಿ ತಾಳಿ ನೋಡಿ ಫ್ಯಾನ್ಸ್ ಶಾಕ್
ಬಾಬಾ ಮಂತ್ರಪಠಣೆ ಮೂಲಕ ಸಿದ್ಧಿಸಿದ ದಾರವೊಂದನ್ನು ಸಿಹಿಗೆ ಕೊಡುತ್ತಾರೆ. ಇದೇನೆಂದು ಕೇಳಿದ್ದಕ್ಕೆ ಹನುಮಂತನ ಕೃಪೆ ಇರುವ ರಕ್ಷೆ ಇದು. ಇದನ್ನು ನಿನ್ನ ಬಳಿ ಇಟ್ಟುಕೊಂಡರೆ ಹನುಮಪ್ಪನ ಶಕ್ತಿ ನಿನಗೆ ಬರುತ್ತದೆ ಎಂದು ಹೇಳುತ್ತಾರೆ. ಆಗ ಸಿಹಿ ದಾರವನ್ನು ಬಾಬಾನಿಂದ ಕೈಗೆ ಕಟ್ಟಿಸಿಕೊಳ್ಳುತ್ತಾಳೆ. ನಂತರ, ದಿನಾ ಹನುಮಾನ್ ಚಾಲೀಸಾ ಮಂತ್ರವನ್ನು ಪಠಣೆ ಮಾಡು ಶಕ್ತಿ ಬರುತ್ತದೆ ಎಂದು ಹೇಳುತ್ತಾರೆ. ಅದಕ್ಕೆ ಸಿಹಿ ನನಗೆ ಪವರ್ ಬರುತ್ತದೆಯೇ ಎಂದು ಖುಷಿಯಿಂದ ಸಂಭ್ರಮಿಸಿದ್ದಾಳೆ. ನನ್ನ ಜೊತೆಗೆ ನೀವೂ ಇರುವಂತೆ ಅಘೋರಿ ಬಾಬಾನಿಗೆ ಕೇಳಿದ್ದಕ್ಕೆ ನಿನ್ನೊಂದಿಗೆ ಸಾಕ್ಷಾತ್ ಆಂಜನೇಯನೇ ಇರುವಾಗ, ನಾನ್ಯಾಕೆ ಮಗೂ ಎಂದು ಬಾಬಾ ಹೇಳುತ್ತಾರೆ. ಹಂಗಿದ್ರೆ ಸೀತಮ್ಮ, ರಾಮಪ್ಪ ಯಾವಾಗಲೂ ಖುಷಿಯಿಂದ ಇರುವ ಹಾಗೆ ಮಾಡು. ಸುಬ್ಬಿಗೂ ಒಳ್ಲೆಯದಾಗಲಿ, ಮುಖ್ಯವಾಗಿ ಸೀತಮ್ಮಗೆ ಅವಳು ಸಿಹಿ ಅಲ್ಲವೆಂದು ಅನುಮಾನ ಬರದಂತೆ ಮಾಡು ಎಂದು ಬಾಬಾನ ಬಳಿ ಕೇಳಿಕೊಂಡಿದ್ದಾಳೆ.
ಸೀತಾ, ರಾಮನ ಬಳಿ ಹೋದ ಅಘೋ ಬಾಬಾ ಸಿಹಿ ಯಾವಾಗಲೂ ನಿಮ್ಮ ಜೊತೆಗೇ ಇರಲಿ. ಈ ಜಾಗದಲ್ಲಿರೋ ಹನುಮಪ್ಪನ ದಯೆ ನಿಮ್ಮ ಮೇಲೆ ಸದಾ ಇರುತ್ತದೆ. ನಿಮ್ಮ ಹೆಸರೇ ಸೀತಾ, ರಾಮ ಎಂದಮೇಲೆ ಹನುಮಪ್ಪನ ಸದಾ ಜೊತೆಗೆ ಇದ್ದೇ ಇರುತ್ತಾನೆ ಎಂದು ಮೂವರಿಗೂ ಆಶೀರ್ವಾದ ಮಾಡಿ ಬಾಬಾ ಮಾಯವಾಗುತ್ತಾರೆ.
ಇದನ್ನೂ ಓದಿ: ಕಿರುತೆರೆಯಲ್ಲಿ ಮಹಾ ಪ್ರಯೋಗ… ಪ್ರಯಾಗದ ಕುಂಭಮೇಳದಲ್ಲಿ ಸುಬ್ಬಿ ಜೊತೆ ಸೀತಾ-ರಾಮ… ತ್ರಿವೇಣಿ ಸಂಗಮದಲ್ಲಿ ಸ್ನಾನ
ಇದೀಗ ರಾಮ ಪುಣ್ಯಸ್ನಾದ ಬಳಿಕ ಕೇಳಿಕೊಂಡಂತೆ ಸಿಹಿ ಆತ್ಮಕ್ಕೆ ಮುಕ್ತಿ ಸಿಗಲಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಆದರೆ, ಸದ್ಯದಲ್ಲಿ ಸಿಹಿ ಆತ್ಮಕ್ಕೆ ಮುಕ್ತಿ ಸಿಗುವ ಲಕ್ಷಣ ಕಂಡುಬಂದಿಲ್ಲ. ಭಾರ್ಗವಿ ದೇಸಾಯಿ ಹಾಗೂ ರುದ್ರಪ್ರತಾಪನ ಅಂತ್ಯವಾಗದೇ ಸಿಹಿಗೆ ಮುಕ್ತಿ ಕೊಡುವುದಿಲ್ಲ ಎಂಬಂತೆ ಕಾಣುತ್ತಿದೆ. ಇನ್ನು ಹನುಮ ರಕ್ಷೆಯಿಂದ ಸಿಹಿ ದೇಹದ ಸ್ವರೂಪ ಪಡೆದುಕೊಂಡು ವಾಪಸ್ ಬರುತ್ತಾಳಾ? ಎಂಬುದನ್ನು ಕಾದುನೋಡಬೇಕಿದೆ.
