ರಾಮ ಸೀತೆಗೆ ಮಂಗಳಾರತಿ: ಭಾರ್ಗವಿ ನಾರಾಯಣ್

ಈಗ ಮತ್ತೆ ರಾಮಾಯಣ ಸೀರಿಯಲ್ ಬರುತ್ತಿರೋದಕ್ಕೆ ತುಂಬಾ ಖುಷಿಯಾಗಿದೆ. ನಮ್ಮ ಕಾಲದಲ್ಲಿ ರಾಮಾಯಣ, ಮಹಾಭಾರತದ ಬಗ್ಗೆ ಹೆಚ್ಚಿನವರಿಗೆ ಗೊತ್ತಿತ್ತು. ಸ್ಕೂಲ್‌ನಲ್ಲಿ ಮೇಷ್ಟ್ರುಗಳು ರಾಮಾಯಣ ಕತೆ ಹೇಳ್ತಿದ್ರು. ನಾವೂ ಪುಸ್ತಕದಲ್ಲಿ ಓದುತ್ತಿದ್ದೆವು. ಆದರೆ ಈಗ ಮಕ್ಕಳ ಪೋಷಕರಿಗೂ ಈ ಬಗ್ಗೆ ಗೊತ್ತಿಲ್ಲ. ಮಕ್ಕಳಿಗೂ ಪುರಾಣದ ಬಗ್ಗೆ ಅಷ್ಟಾಗಿ ಆಸಕ್ತಿ ಉಳಿದಿಲ್ಲ. ಈಗ ಮತ್ತೆ ರಾಮಾಯಣ ಸೀರಿಯಲ್ ಬರ್ತಿದೆ. ಇದು ಈ ಕಾಲದ ಜನರಲ್ಲಿ ಪುರಾಣಗಳ ಬಗ್ಗೆ ಕುತೂಹಲದ ಬೀಜ ಬಿತ್ತುವ ವಿಶ್ವಾಸ ಇದೆ.

ಅಭಿಮಾನಿಗಳ ಮನವಿಗೆ ಸ್ಪಂದಿಸಿದ ಡಿಡಿ, ಮತ್ತೆ ಹಳೇ ರಾಮಾಯಣ ಶುರು

ರಾಮಾಯಣ ಸೀರಿಯಲ್ ಎಲ್ಲರೂ ನೋಡುತ್ತಿದ್ದರು. ಹತ್ತರಲ್ಲಿ ಎಂಟು ಜನ ನೋಡ್ತಿದ್ರು ಅನ್ನಬಹುದೇನೋ. ಯಾವ ಫಂಕ್ಷನ್‌ಗೆ ಕರೆದರೂ ಸೀರಿಯಲ್ ಮುಗಿಸಿ ಬರ್ತೀವಿ ಅನ್ನೋರು, ಸಂಗೀತ ಕಚೇರಿ, ಭಾಷಣಗಳಂಥಾ ಕಾರ್ಯಕ್ರಮಗಳಿದ್ರೂ ಸೀರಿಯಲ್ ಪ್ರಸಾರವಾಗೋ ಟೈಮ್‌ನಲ್ಲಿ ಬ್ರೇಕ್ ಇರುತ್ತಿತ್ತು. ಎಷ್ಟೋ ಕಡೆ ಅಲ್ಲೇ ಟಿವಿ ತಂದು ಸೀರಿಯಲ್ ಹಾಕುತ್ತಿದ್ದರು. ಅಷ್ಟರಮಟ್ಟಿಗೆ ಜನಪ್ರಿಯ. ರಾಮ, ಸೀತೆ ಬರುವ ಹೊತ್ತಿಗೆ ಕೆಲವರೆಲ್ಲ ಎದ್ದು ನಿಂತು ಕೈ ಮುಗಿದು ಮಂಗಳಾರತಿ ಮಾಡಿದ್ದನ್ನು ನಾನು ಕಣ್ಣಾರೆ ಕಂಡಿದ್ದೀನಿ. ಆವಾಗ ಜನರೇ ಅಷ್ಟು ಇನ್ನೋಸೆಂಟ್ ಆಗಿದ್ರು.

ಟಿವಿ ಮುಂದೆ ತಿಂಡಿ ಸಮಾರಾ‘ನೆ: ಗಿರಿಜಾ ಲೋಕೇಶ್

ರಾಮಾಯಣ ಸೀರಿಯಲ್ ಅಂದರೆ ನಮಗೆಲ್ಲ ಸಂಭ್ರಮ. ವಾರಪೂರ್ತಿ ಕೆಲಸ ಮಾಡುತ್ತಿದ್ದ ನಾವು ಆ ಹೊತ್ತಿಗೆ ಮಾತ್ರ ಟಿವಿ ಮುಂದಿನಿಂದ ಎದ್ದು ಹೋಗುತ್ತಿರಲಿಲ್ಲ. ಮುಂಜಾನೆಯೇ ಮಾರ್ಕೆಟ್ ಗೆ ಹೋಗಿ ತರಕಾರಿ, ಅಡುಗೆ ಸಾಮಗ್ರಿ ಎಲ್ಲ ತಂದಿಡುತ್ತಿದ್ವಿ. ಮೊದಲೇ ಬೇಗ ಬೇಗ ಕೆಲಸ ಮುಗಿಸಿಕೊಳ್ತಿದ್ವಿ. ನಮ್ಮನೆ ಮಹಡಿ ಮೇಲೆ ಟಿವಿ ಇರ್ತಿತ್ತು, ಮಾಡಿದ ತಿಂಡಿಯನ್ನೆಲ್ಲ ಮೇಲೆ ತಗೊಂಡು ಹೋಗಿ ಎಲ್ಲರಿಗೂ ಕೊಡ್ತಾ ಇದ್ವಿ. ಆಗ ಮನೆಯಲ್ಲೂ ಬಹಳ ಜನ ಇದ್ರು. ಪ್ರತಿಯೊಬ್ಬರಿಗೂ ‘ರಾಮಾಯಣ’ ಸೀರಿಯಲ್ ಬಗ್ಗೆ ಆಸಕ್ತಿ. ಈ ಅದನ್ನೆಲ್ಲ ನೆನೆಸಿಕೊಂಡರೆ ಥ್ರಿಲ್ ಅನಿಸುತ್ತೆ. ಮಕ್ಕಳೆಲ್ಲ ಕೇಳ್ತಿದ್ದ ಪ್ರಶ್ನೆಗಳೂ ನಗೆ ತರಿಸುತ್ತಿದ್ದ, ನಾವು ಚಿಂತನೆ ಮಾಡೋ ಹಾಗೂ ಮಾಡುತ್ತಿದ್ದವು. ‘ಅಮ್ಮಾ, ಈ ರಾಮ ಸೀತೆ ಅಷ್ಟು ವರ್ಷ ಕಾಡಲ್ಲಿದ್ರೂ ಅವರಿಗ್ಯಾಕೆ ಒಂದು ಪಾಪೂನೂ ಆಗ್ಲಿಲ್ಲ?’ ಅಂತ ಮಗನ ಪ್ರಶ್ನೆ. ನಾವು ಉತ್ತರಕ್ಕೆ ತಡಕಾಡುತ್ತಿದ್ದೆವು. ‘ರಾಮ ಸೀತೆಯನ್ನು ಬಿಡಬಾರದಿತ್ತಲ್ಲಾ, ಅವಳು ಪಾಪ ರಾಮನಿಗಾಗಿ ಎಷ್ಟೆಲ್ಲ ಕಷ್ಟ ಪಟ್ಟಿದ್ದಾಳೆ..’ ಅಂತ ಮಗಳು ಹೇಳುತ್ತಿದ್ದಳು. ರಾಮಾಯಣ ಸೀರಿಯಲ್ ಅಂದಕೂಡಲೇ ಇದೆಲ್ಲ ನೆನಪಾಗಿ ಬಿಡುತ್ತೆ.

ರಾಮ-ಸೀತೆ ಪಾತ್ರಧಾರಿಗೆ ಹಸಿಬಿಸಿ ದೃಶ್ಯಗಳಲ್ಲಿ ನಟಿಸಲು ಆಫರ್!

ಮಗನಿಗೆ ಈ ಸೀರಿಯಲ್ ತೋರಿಸುತ್ತೇನೆ: ತಾರಾ ಅನೂರಾಧಾ

ನನಗೆ ಈ ಸೀರಿಯಲ್ ನೋಡಿದ ನೆನಪಿಲ್ಲ. ಆದರೆ ದೂರದರ್ಶನದಲ್ಲಿ ಈ ಸೀರಿಯಲ್ ಬಂದು ಹೋದ ಸ್ವಲ್ಪ ವರ್ಷದ ನಂತರ ವಿಸಿಡಿಯಲ್ಲಿ ಅಷ್ಟೂ ಎಪಿಸೋಡ್‌ಗಳನ್ನೂ ಒಟ್ಟಿಗೇ ಮನೆಯವರೆಲ್ಲ ನೋಡಿದ್ವಿ. ಬಹುಶಃ ದೀಪಾವಳಿ ಟೈಮ್ ಅನಿಸುತ್ತೆ. ಬಹಳ ಇಷ್ಟ ಆಗಿತ್ತು. ಈಗ ಮತ್ತೆ ರಾಮಾಯಣ ಸೀರಿಯಲ್ ಬರುತ್ತಿರೋದು ತುಂಬ ಒಳ್ಳೆಯದು. ಈ ಕಾಲದ ಮಕ್ಕಳು ಬರೀ ಕಾರ್ಟೂನ್ ನೋಡುತ್ತಾ ಇರುತ್ತವೆ. ನಮ್ಮ ಪುರಾಣಗಳ ಬಗ್ಗೆ ಅವರ ತಿಳುವಳಿಕೆಯನ್ನು ಇಂಥಾ ಸೀರಿಯಲ್‌ಗಳು ಹೆಚ್ಚಿಸುತ್ತವೆ. ನನ್ನ ಮಗನಿಗೂ ಈ ಸೀರಿಯಲ್ ತೋರಿಸುತ್ತೀನಿ. ನಾವು ಕತೆ ಹೇಳಿದ್ದಕ್ಕಿಂತ ಹೀಗೆ ಸೀರಿಯಲ್ ಮೂಲಕ ರಾಮಾಯಣ ಕತೆ ತೋರಿಸೋದು ಹೆಚ್ಚು ಪರಿಣಾಮಕಾರಿ ಅನಿಸುತ್ತೆ.