ಅಭಿಮಾನಿಗಳ ಮನವಿಗೆ ಸ್ಪಂದಿಸಿದ ಡಿಡಿ, ಮತ್ತೆ ಹಳೇ ರಾಮಾಯಣ ಶುರು
90ರ ದಶಕದಲ್ಲಿ ಡಿಡಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಖ್ಯಾತ ಧಾರಾವಾಹಿ ರಾಮಾಯಣ ಈಗ ಮತ್ತೊಮ್ಮೆ ಮರು ಪ್ರಸಾರವಾಗುತ್ತಿದೆ. ಅಪಾರ ವೀಕ್ಷಕರನ್ನು ಗಿಟ್ಟಿಸಿಕೊಂಡಿದ್ದ ಈ ಹಳೇ ಧಾರಾವಾಹಿಗಳನ್ನು ಆಧುನಿಕ ತಂತ್ರಜ್ಞಾನದ ಈ ಯುಗದಲ್ಲಿ ಹೇಗೆ ಸ್ವೀಕರಿಸುತ್ತಾರೋ ಕಾದು ನೋಡಬೇಕು...
ಕೊರೋನಾ ವೈರಸ್ ಭೀತಿಯಿಂದ ಮನೆಯಲ್ಲೇ ಬಂಧಿತರಾಗಿರುವ ಅದೆಷ್ಟೋ ಜನರಿಗೆ ಮನರೋರಂಜನೆಯೇ ಟಿವಿ. ಬೆಳಗ್ಗೆ ಪ್ರಸಾರವಾಗುವ ಜಾತಕ ಫಲದಿಂದ ಹಿಡಿದು ರಾತ್ರಿ ಅತ್ತೆ-ಸೊಸೆ ಜಗಳವಾಡುವ ಸೀರಿಯಲ್ ವರೆಗೂ ವೀಕ್ಷಿಸಿ ಮಲಗುತ್ತಾರೆ. ಅಷ್ಟೇ ಏಕೆ ನ್ಯೂನ್ ಚಾಲೆನ್‌ನಲ್ಲಿ ಎಷ್ಟು ಗಂಟೆಗೆ ಏನು ಪ್ರಸಾರವಾಗುತ್ತದೆ, ಎಂದೂ ತಿಳಿದುಕೊಂಡು ತಮ್ಮ ಫುಲ್ ಫ್ರೀ ಸಮಯವನ್ನು ಟಿವಿ ಜೊತೆ ಕಳೆಯುತ್ತಿದ್ದಾರೆ.
"
ಚೀನಾದಲ್ಲಿ ಹುಟ್ಟಿ, ವಿಶ್ವದ ತುಂಬೆಲ್ಲಾ ಹರಡಿರುವ ಮಹಾಮಾರಿ ಕೊರೋನಾ ವೈರಸ್ ಭಾರತಕ್ಕೆ ಕಾಲಿಡುತ್ತಿದ್ದಂತೆ, ದೇಶವನ್ನೇ ಲಾಕ್‌ಡೌನ್ ಮಾಡಲಾಗಿದೆ. ಎಲ್ಲರೂ ಮನೆಯಲ್ಲಿ ಇರುವುದು ಅನಿವಾರ್ಯ. ಜೊತೆಗೆ ಯಾವುದೇ ಚಿತ್ರ ಹಾಗೂ ಧಾರಾವಾಹಿಗಳು ಶೂಟಿಂಗ್ ಸಹ ನಡೆಯುತ್ತಿಲ್ಲ. ಈ ಸಂದರ್ಭದಲ್ಲಿ ಇದೀಗ ಪ್ರಸಾರವಾಗುತ್ತಿರುವ ಧಾರಾವಾಹಿಗಳನ್ನು ಪ್ರಸಾರ ಮಾಡುವುದು ಕಷ್ಟ ಸಾಧ್ಯವಾಗಿರುವುದರಿಂದ, ಹೊಸ ಧಾರಾವಾಹಿಯ ಹಳೇ ಎಪಿಸೋಡ್‌ಗಳನ್ನೇ ಪ್ರಸಾರ ಮಾಡಲಾಗುತ್ತಿದೆ.
ಶೂಟಿಂಗ್ ಬಂದ್; ಗಟ್ಟಿಮೇಳ, ಜೊತೆ ಜೊತೆಯಲಿ ಪ್ರಸಾರ ಸದ್ಯದಲ್ಲೇ ಕಟ್?
ಇತ್ತೀಚಿಗೆ ಕೆಲವು ದಿನಗಳಿಂದ 90 ದಶಕದಲ್ಲಿ ಪ್ರಸಾರವಾಗುತ್ತಿದ್ದ, ಪೌರಾಣಿಕ ಕಥೆ ರಾಮಾಯಣ ಹಾಗೂ ಮಹಾಭಾರತವನ್ನು ಮರು ಪ್ರಸಾರ ಮಾಡುವಂತೆ ವೀಕ್ಷಕರು ದೂರದರ್ಶನಕ್ಕೆ ಮನವಿ ಮಾಡಿಕೊಂಡಿದ್ದರು. ಈಗಿನ ಮಕ್ಕಳು ನೋಡಿ ಪೌರಾಣಿಕ ಕಥೆಗಳನ್ನು ಗೊತ್ತು ಮಾಡಿಕೊಳ್ಳಲ್ಲಿ ಎಂಬುವುದು ವೀಕ್ಷಕರ ಆಶಯವಾಗಿತ್ತು. ಈ ಬೆನ್ನಲ್ಲೇ ದೂರದರ್ಶನ ಈ ಧಾರಾವಾಹಿಯನ್ನು ಮರು ಪ್ರಸಾರ ಮಾಡಲು ನಿರ್ಧರಿಸಿದೆ.
ಈ ಬಗ್ಗೆ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವೇಡ್ಕರ್ ಸ್ಪಷ್ಟನೆ ನೀಡಿದ್ದಾರೆ. 'ಸಾರ್ವಜನಿಕ ಬೇಡಿಕೆಯಿಂದ, ನಾಳೆ ಅಂದ್ರೆ ಮಾರ್ಚ್ 28ರ ಶನಿವಾರದಂದು ಡಿಡಿ ನ್ಯಾಷನಲ್‌ನಲ್ಲಿ ಬೆಳಗ್ಗೆ 9 ರಿಂದ 10 ರವರೆಗೆ ಒಂದು, ರಾತ್ರಿ 9 ರಿಂದ ರಾತ್ರಿ 10 ರವರೆಗೆ ರಾಮಾಯಣವನ್ನು ಪ್ರಸಾರ ಮಾಡುತ್ತಿದ್ದೇವೆ ಎಂದು ಟ್ವೀಟ್ ಮಾಡುವ ಮೂಲಕ ಘೋಷಿಸಿದ್ದಾರೆ.
ಸರಳವಾಗಿ ಪೌರಾಣಿಕ ಕಥೆಗಳನ್ನು ವಿವರಿಸುವ ಈ ಧಾರಾವಾಹಿಗಳನ್ನು ಭಾರತೀಯರು ಕಾತುರದಿಂದ ವೀಕ್ಷಿಸುತ್ತಿದ್ದರು. ಆಗ ಎಲ್ಲರ ಮನೆಯಲ್ಲಿಯೂ ಟಿವಿಗಳಿನ್ನು ಕಾಲಿಡದ ಕಾಲ. ಟಿವಿ ಇದ್ದ ಹಳ್ಳಿಗಳ ಮನೆಯಲ್ಲಿ ಈ ಧಾರಾವಾಹಿಗಳು ಪ್ರಸಾರವಾಗುವ ವೇಳೆ ಚಿತ್ರಮಂದಿರದಂತೆ ಜನರು ಕಿಕ್ಕಿರಿದು ತುಂಬಿ ಕೊಳ್ಳುತ್ತಿದ್ದರು. ಭಯ, ಭಕ್ತಿಯಿಂದ ರಾಮಾಯಣ ಹಾಗೂ ಮಹಾಭಾರತ ಕಥೆಗಳನ್ನು ವೀಕ್ಷಿಸುತ್ತಿದ್ದರು. ಅಷ್ಟೇ ಅಲ್ಲ, ಈ ಕಥೆಗಳ ಪ್ರಮುಖ ಪಾತ್ರಧಾರಿಗಳು ಬಂದಾಗ ಮನೆಯ ಹಿರಿಯರು ಟಿವಿಗೇ ಪೂಜೆ ಸಲ್ಲಿಸುತ್ತಿದ್ದರು. ಒಟ್ಟಿನಲ್ಲಿ ಪೂರ್ಣ ಭಾರತದೊಂದಿಗೆ ಈ ಧಾರಾವಾಹಿಗಳು ವಿಶೇಷ ಬಾಂಧವ್ಯವನ್ನು ಹೊಂದಿತ್ತು. ಈಗೀಗ ಸಾಕಷ್ಟು ಪೌರಾಣಿಕ ಕಥೆಯುಳ್ಳ ಧಾರಾವಾಹಿಗಳು ಪ್ರಸಾರವಾಗುತ್ತಿದ್ದರೂ, ಆಗಿನಷ್ಟು ಖ್ಯಾತಿ ಗಳಿಸಲು ಸಾಧ್ಯವಾಗುತ್ತಿಲ್ಲ. ಈಗ ತಂತ್ರಜ್ಞಾನ ಮುಂದುವರಿದರೂ ಜನರನ್ನು ಹಿಂದಿನಷ್ಟು ಭಾವಾನಾತ್ಮಕವಾಗಿ ಹಿಡಿದು ಕೊಳ್ಳುವುದು ಸಾಧ್ಯವೇ ಇಲ್ಲ ಎಂದೆನಿಸುತ್ತದೆ.
ಅರುಣ್ ಗೋವಿಲ್ ರಾಮನಾಗಿ, ದೀಪಿಕಾ ಸೀತೆಯಾಗಿ ಅಭಿನಯಿಸಿರುವ ರಾಮಾಯಣವನ್ನು ಮಧ್ಯ ವಯಸ್ಸಿನ ಭಾರತೀಯರು ಖಂಡಿತ ಖುಷಿಯಾಗಿ ಸ್ವೀಕರಿಸುತ್ತಾರೆ ಎಂದೆನಿಸುತ್ತದೆ.