ಸ್ಟ್ಯಾಂಡ್ ಅಪ್ ಕಾಮಿಡಿಗೆ ಈಗ ಬೇಡಿಕೆ ಹೆಚ್ಚಾಗಿದೆ. ಜನರು ಲೈವ್ ನಲ್ಲಿ ತಮ್ಮ ನೆಚ್ಚಿನ ಕಾಮಿಡಿಯನ್ ನೋಡಲು ಇಷ್ಟಪಡ್ತಿದ್ದಾರೆ. ಸಮಯ್ ರೈನಾ ಲೈವ್ ಶೋಗೆ ಒಂದೇ ದಿನದಲ್ಲಿ 2 ಲಕ್ಷ ಟಿಕೆಟ್ ಸೇಲ್ ಆಗಿದೆ.
ಸಿನಿಮಾಗಳಿಗೆ ಮಾತ್ರ ಭರ್ಜರಿ ಓಪನಿಂಗ್ ಸಿಗುತ್ತದೆ ಎಂಬ ಕಾಲ ಈಗ ಬದಲಾಗ್ತಿದೆ. ಇದೀಗ ಲೈವ್ ಕಾಮಿಡಿ ಶೋಗಳಿಗೂ ಜನರಿಂದ ಭಾರೀ ಬೇಡಿಕೆ ಬರ್ತಿದೆ. ಇದಕ್ಕೆ ಮತ್ತೊಂದು ಉದಾಹರಣೆ ಜನಪ್ರಿಯ ಸ್ಟ್ಯಾಂಡ್ಅಪ್ ಕಾಮಿಡಿಯನ್ ಸಮಯ್ ರೈನಾ.
ಒಂದೇ ದಿನದಲ್ಲಿ ಇಷ್ಟೊಂದು ಟಿಕೆಟ್ ಖರೀದಿ
ಸಮಯ್ ರೈನಾ ಅವರ ಮುಂಬರುವ ಸಮಯ್ ರೈನಾ ಲೈವ್ (Samay Raina Live) ಇಂಡಿಯಾ ಟೂರ್ನ ಟಿಕೆಟ್ಗಳು ಭರ್ಜರಿಯಾಗಿ ಮಾರಾಟವಾಗುತ್ತಿವೆ. ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಸುಮಾರು 2 ಲಕ್ಷ ಟಿಕೆಟ್ಗಳು ಒಂದೇ ದಿನದಲ್ಲಿ ಮಾರಾಟವಾಗಿದೆ. ಪ್ರತಿ ಟಿಕೆಟ್ನ ಸರಾಸರಿ ಬೆಲೆ 2,299 ರೂಪಾಯಿ ಆಗಿದ್ದು, ಒಂದೇ ದಿನದಲ್ಲಿ 45.98 ಕೋಟಿ ಮೌಲ್ಯದ ಟಿಕೆಟ್ ಮಾರಾಟವಾಗಿದೆ.
ಇಷ್ಟು ಕೋಟಿ ಸಮಯ್ ರೈನಾ ಅವರ ಗಳಿಕೆಯಲ್ಲ. ಅಂದ್ರೆ ಈ 45.98 ಕೋಟಿ ಸಮಯ್ ರೈನಾ ಅವರ ವೈಯಕ್ತಿಕ ಆದಾಯವಲ್ಲ. ಇದರಲ್ಲಿ ತೆರಿಗೆ, ಪ್ಲಾಟ್ಫಾರ್ಮ್ ಶುಲ್ಕ, ಸ್ಥಳದ ಬಾಡಿಗೆ, ಆಯೋಜನಾ ವೆಚ್ಚ, ಸಿಬ್ಬಂದಿ ಮತ್ತು ಇತರ ಖರ್ಚುಗಳನ್ನು ಕಡಿತ ಮಾಡಬೇಕಾಗುತ್ತದೆ. ಆಯೋಜಕರ ಪ್ರಕಾರ, ಪ್ರೀ-ಸೇಲ್ ಆರಂಭವಾದ ಒಂದು ಗಂಟೆಯೊಳಗೆ 1 ಲಕ್ಷಕ್ಕೂ ಹೆಚ್ಚು ಟಿಕೆಟ್ಗಳು ಮಾರಾಟವಾಗಿವೆ. ಭಾರೀ ಬೇಡಿಕೆಯಿಂದಾಗಿ ಬೆಂಗಳೂರು, ಮುಂಬೈ, ದೆಹಲಿ ಮತ್ತು ಪುಣೆ ಸೇರಿದಂತೆ ನಾಲ್ಕು ನಗರಗಳಲ್ಲಿ ಹೆಚ್ಚುವರಿ 8 ಶೋಗಳನ್ನು ಸೇರಿಸಲಾಗಿದೆ.
ಕಾಮಿಡಿ ಶೋಗಳಿಗೆ ಹೆಚ್ಚುತ್ತಿದೆ ಬೇಡಿಕೆ
ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಸ್ಟ್ಯಾಂಡ್ಅಪ್ ಕಾಮಿಡಿ ಕೇವಲ ಸಣ್ಣ ಕಾಮಿಡಿ ಕ್ಲಬ್ಗಳಿಗೆ ಸೀಮಿತವಾಗಿಲ್ಲ. ಜನಪ್ರಿಯ ಕಾಮಿಡಿಯನ್ನರು ಈಗ ದೊಡ್ಡ ವೇದಿಕೆಗಳಲ್ಲಿ, ದೊಡ್ಡ ನಗರಗಳಲ್ಲಿ ಮತ್ತು ಬಹು-ನಗರ ಟೂರ್ಗಳಲ್ಲಿ ಶೋಗಳನ್ನು ನಡೆಸುತ್ತಿದ್ದಾರೆ. ಆನ್ಲೈನ್ನಲ್ಲಿ ಕಾಮಿಡಿ ಕ್ಲಿಪ್ಗಳು ಮತ್ತು ಶಾರ್ಟ್ ವಿಡಿಯೋಗಳ ಮೂಲಕ ಜನಪ್ರಿಯರಾದ ಕಲಾವಿದರಿಗೆ ಈಗ ಲೈವ್ ಶೋಗಳಲ್ಲೂ ದೊಡ್ಡ ಪ್ರೇಕ್ಷಕ ಬಳಗ ಸಿಗುತ್ತಿದೆ. ಅದರಲ್ಲೂ ಸಮಯ್ ರೈನಾ ಅವರ ವಿಚಾರದಲ್ಲಿ ಈ ಟ್ರೆಂಡ್ ಇನ್ನಷ್ಟು ಸ್ಪಷ್ಟವಾಗಿ ಕಾಣಿಸುತ್ತಿದೆ.
ಸ್ಟ್ಯಾಂಡ್ಅಪ್ ಕಾಮಿಡಿ, ಆನ್ಲೈನ್ ಕಂಟೆಂಟ್, ಚೆಸ್ ಸ್ಟ್ರೀಮ್ಸ್ ಮತ್ತು India Got Latent ಮೂಲಕ ಸಮಯ್ ರೈನಾ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಆನ್ಲೈನ್ನಲ್ಲಿ ಅವರನ್ನು ನೋಡುವ ಪ್ರೇಕ್ಷಕರು ಇದೀಗ ಅವರನ್ನು ನೇರವಾಗಿ ವೇದಿಕೆಯಲ್ಲಿ ನೋಡಲು ಟಿಕೆಟ್ ಖರೀದಿಸುತ್ತಿದ್ದಾರೆ.
ಬೆಂಗಳೂರಿನಲ್ಲಿ ಎಂದು ಸಮಯ್ ರೈನಾ ಪ್ರೋಗ್ರಾಂ?
ಸಮಯ್ ರೈನಾ ಅವರ ಈ ಬಹು-ನಗರ ಇಂಡಿಯಾ ಟೂರ್ನಲ್ಲಿ ಬೆಂಗಳೂರು ಕೂಡ ಪ್ರಮುಖ ನಗರವಾಗಿದೆ. ಪ್ರಸ್ತುತ ಘೋಷಿಸಿರುವ ವೇಳಾಪಟ್ಟಿಯ ಪ್ರಕಾರ, ಬೆಂಗಳೂರಿನಲ್ಲಿ 2027ರ ಫೆಬ್ರವರಿ 19 ರಿಂದ 21ರವರೆಗೆ ಲೈವ್ ಶೋಗಳು ನಡೆಯಲಿವೆ ಎನ್ನಲಾಗಿದೆ. ಕೋರಮಂಗಲ ಇಂಡೋರ್ ಸ್ಟೇಡಿಯಮ್ ನಲ್ಲಿ ಕಾರ್ಯಕ್ರಮ ನಡೆಯಲಿದೆ. ಆರಂಭದಲ್ಲಿ ಘೋಷಿಸಿದ್ದ ದಿನಾಂಕಗಳಿಗೆ ಭಾರೀ ಪ್ರತಿಕ್ರಿಯೆ ಬಂದ ನಂತರ ಬೆಂಗಳೂರಿನಲ್ಲೂ ಹೆಚ್ಚುವರಿ ಶೋಗಳನ್ನು ಸೇರಿಸಲಾಗಿದೆ ಎಂದು ವರದಿಯಾಗಿದೆ. ಅಂದರೆ ಬೆಂಗಳೂರಿನ ಕಾಮಿಡಿ ಪ್ರೇಕ್ಷಕರಿಗೂ ಸಮಯ್ ರೈನಾ ಅವರನ್ನು ನೇರವಾಗಿ ನೋಡುವ ಅವಕಾಶ ಸಿಗಲಿದೆ.
ಟಿಕೆಟ್ ನಲ್ಲಿ ವೆರೈಟಿ
ಸಮಯ್ ರೈನಾ ಅವರ ಶೋಗಳ ಟಿಕೆಟ್ಗಳಲ್ಲಿ ಹಲವು ವಿಭಾಗಗಳಿವೆ. ಪ್ರೇಕ್ಷಕರಿಗೆ ಬಾಲ್ಕನಿ ಸೇರಿದಂತೆ ವಿವಿಧ ಸೀಟಿಂಗ್ ಕ್ಯಾಟಗರಿಗಳ ಆಯ್ಕೆ ಇದೆ. ಕೆಲವು ಶೋಗಳಲ್ಲಿ ಟಿಕೆಟ್ ದರಗಳು ಸಾಮಾನ್ಯ ಲೈವ್ ಕಾಮಿಡಿ ಕಾರ್ಯಕ್ರಮಗಳಿಗಿಂತ ಹೆಚ್ಚಿನ ಮಟ್ಟದಲ್ಲಿದ್ದರೂ, ಬೇಡಿಕೆ ಕಡಿಮೆಯಾಗಿಲ್ಲ ಎಂಬುದು ಟಿಕೆಟ್ ಮಾರಾಟದಿಂದ ಗೊತ್ತಾಗುತ್ತಿದೆ.

