ಕೆಂಡಸಂಪಿಗೆ ಸೀರಿಯಲ್‌ನ ಕಥೆಗಾರ ಬಹುಶಃ ಅಥ್ಲೀಟ್ ಆಗಿರಬೇಕು ಅನ್ನೋ ಡೌಟ್ ಈ ಸೀರಿಯಲ್ ವೀಕ್ಷಕರಿಗೆ ಬಂದಿದೆ. ಕಾರಣ ಒಂದಿಲ್ಲೊಂದು ಕಾರಣಕ್ಕೆ ಲೀಡ್ ಪಾತ್ರಗಳು ಓಡ್ತಾನೇ ಇರ್ತವೆ! 

ಕೆಂಡಸಂಪಿಗೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿರೋ ಸೀರಿಯಲ್. ಶುರುವಿಗೆ ಈ ಸೀರಿಯಲ್ ಬಗ್ಗೆ ಒಂದಿಷ್ಟು ಹೋಪ್ ಇತ್ತು. ಕಾರಣ ಇದರ ನಾಯಕಿ ಸ್ಲಮ್‌ನಂಥಾ ಏರಿಯಾದಲ್ಲಿದ್ದುಕೊಂಡು ಹೂವು ಕಟ್ಟಿ ಜೀವನ ಸಾಗಿಸುವ ಹುಡುಗಿ. ತನ್ನ ಕೇರಿಗಾಗುವ ಎಲ್ಲ ಸಮಸ್ಯೆಗಳ ವಿರುದ್ಧವೂ ಅವಳ ಹೋರಾಟ. ತನ್ನ ಜನರಿಗೆ ಸಹಾಯ ಮಾಡಲು ಅವಳು ಸದಾ ಮುಂದೆ. ಇಂಥಾ ದಿಟ್ಟ ಹುಡುಗಿ ಮುಂದೆಯೂ ಹೀಗೇ ಇರಬಹುದು, ಸಾಮಾನ್ಯ ಅಳುಬುರಕ ಸೀರಿಯಲ್‌ಗಿಂತ ಇದು ಕೊಂಚ ಭಿನ್ನವಾಗಿರಬಹುದು ಅಂತ ವೀಕ್ಷಕರು ಅಂದುಕೊಂಡಿದ್ದೇ ಬಂತು, ನಮ್ ಸೀರಿಯಲ್ ಟೀಮ್‌ನವರು ಅಳುಮುಂಜಿಯರೇ ಟಿಆರ್‌ಪಿ ತರ್ತಾರೆ ಅನ್ನೋ ಅಲಿಖಿತ ಶಾಸನವನ್ನು ಅರೆದುಕುಡಿದವರು. ಕನಸು ಮನಸಿನಲ್ಲೂ ಅದೇ ಅವರ ಮನಸ್ಸಿನಲ್ಲಿ ಓಡಾಡುತ್ತಾ ಇರುತ್ತೆ. ಈ ಸೀರಿಯಲ್ ರೈಟರ್, ನಿರ್ದೇಶಕರೂ ಇದಕ್ಕಿಂತ ಭಿನ್ನವಾಗಿಲ್ಲ ಅನಿಸುತ್ತೆ. ದಿಟ್ಟ ಹುಡುಗಿ ಕೊರಳಿಗೆ ತಾಳಿ ಬಿದ್ದಿದ್ದೇ ಅವಳು ಅಪ್ಪಟ ಸೀರಿಯಲ್‌ನ ಅಳುಬುರುಕಿ ನಾಯಕಿಯಾಗಿಯೇ ಬಿಟ್ಟಳು. 

ಅದರಲ್ಲೂ ಅಬಾರ್ಶನ್‌ ಆದಾಗಲಂತೂ ಆಕೆ ಹರಿಸಿದ ಕಣ್ಣೀರ ಕೋಡಿ ಕನ್ನಂಬಾಡಿ ಕಟ್ಟೆ ಕಡೆಗೇನಾದರೂ ಹರಿದಿದ್ದರೆ ಬೆಂಗಳೂರಿನವರಿಗೆ ಈಗ ನೀರಿನ ಸಮಸ್ಯೆಯೇ ಬರುತ್ತಿರಲಿಲ್ಲವೇನೋ!

ಈ ಸೀರಿಯಲ್‌ನ ಕಥೆಗೆ ಮತ್ತೊಂದು ಎಕ್ಸ್ಟ್ರಾ ಫಿಟ್ಟಿಂಗ್ ಅಂದರೆ ಇದರಲ್ಲಿರುವ ಪಾತ್ರಗಳ ಓಟ. ಶುರುವಿಂದಲೇ ನಾಯಕಿ ಸುಮನಾಗೆ ಓಡೋದೇ ಕೆಲಸ ಆಗಿತ್ತು. ಮನೆ ಬಿಟ್ಟು ಓಡೋದು, ಮಳೆಯಲ್ಲಿ ಓಡೋದು, ತಮ್ಮನ ಕೊಲೆಗಾರನನ್ನು ಹುಡುಕಿಕೊಂಡು ಓಡೋದು ಹೀಗೆ.. ಆಮೇಲೂ ಈ ರೇಸ್ ಮುಂದುವರಿದಿದೆ. ಸುಮನಾ ಮಾವನ ಜೊತೆಗೆ ಕಾಶಿಗೆ ಹೋಗ್ತಾಳೆ. ಅಲ್ಲೂ ಅವರನ್ನು ಹುಡುಕಿ ಇವರು ಇವರನ್ನು ಹುಡುಕಿ ಅವರು ಓಡಿದ್ದೇ ಓಡಿದ್ದು. 

ಈಗ ಕಥೆ ಮತ್ತೊಂದು ಹಂತಕ್ಕೆ ಟರ್ನ್ ಪಡೆದುಕೊಂಡಿದೆ. ರಾಜೇಶನ ಕೊಲೆ ಪ್ರಕರಣದ ಕುರಿತಾಗಿ ಸಾಧನಾ ವಿರುದ್ಧ ವಿಜಿಯಮ್ಮನ ಬಳಿ ಸ್ಟ್ರಾಂಗ್ ಎವಿಡೆನ್ಸ್ ಇದೆ. ಹಿಂದೆ ರಾಜಕೀಯ ಮುಖಂಡ ತೀರ್ಥಂಕರ್ ಪ್ರತಿಭಟನೆ ನಡೆಸಲು ಮುಂದಾದಾಗ ಸುಮನಾ ತಮ್ಮ ರಾಜೇಶ್ ಅದಕ್ಕೆ ಬಲಿಯಾಗಿದ್ದ. ಪ್ರತಿಭಟನೆ ವೇಳೆ ಪೆಟ್ರೋಲ್ ಅಂತ ಬಿಂಬಿಸಿ ನೀರು ಸುರಿದುಕೊಂಡು, ಬೆಂಕಿ ಹಚ್ಚಿಕೊಳ್ಳುವಂತೆ ನಾಟಕ ಮಾಡಲು ರಾಜೇಶ ಮುಂದೆ ಬಂದಿದ್ದ. ತೀರ್ಥನ ಬೆನ್ನ ಹಿಂದೆ ಹಗೆ ಸಾಧಿಸುತ್ತಿರುವ ಸಾಧನಾಗೆ ಈ ಪ್ಲಾನ್ ಗೊತ್ತಿತ್ತು.

ಪತ್ನಿ ಭಾಗ್ಯಳ ಮೇಲೆ ತಾಂಡವ್‌ಗೆ ಶುರುವಾಯ್ತಾ ಲವ್ವು? ಇಂಗು ತಿಂದ ಮಂಗನಂತಾದ ಶ್ರೇಷ್ಠಾ

ಪರಿಣಾಮ, ತೀರ್ಥಂಕರ್ ಪ್ರಸಾದ್‌ ವಿರೋಧಿ ಕಾಶಿ ಮತ್ತವನ ತಾಯಿ ವಿಜಿಯಮ್ಮನ ಜೊತೆ ಸಾಧನಾ ಡೀಲ್ ಕುದುರಿಸಿದ್ದಳು.’ನೀರಿನ ಬದಲು ಪೆಟ್ರೋಲ್ ಇಡುವ ಜವಾಬ್ದಾರಿ ನನ್ನದು, ರಾಜೇಶನ ಮೇಲೆ ಬೆಂಕಿ ಬೀಳುವ ಹಾಗೆ ಮಾಡುವ ಜವಾಬ್ದಾರಿ ನಿನ್ನದು’ ಅಂತ ಕಾಶಿಗೆ ರಾಜೇಶನನ್ನ ಕೊಲೆ ಮಾಡಲು ಸಾಧನಾ ಸುಪಾರಿ ಕೊಟ್ಟಿದ್ದಳು. ಇದಕ್ಕಾಗಿ ಕಾಶಿ ಮತ್ತು ವಿಜಿಯಮ್ಮಗೆ ಸಾಧನಾ 25 ಲಕ್ಷ ರೂಪಾಯಿ ಕೊಟ್ಟಿದ್ದಳು. ಯಾವುದಕ್ಕೂ ಇರಲಿ ಅಂತ ಸಾಧನಾ ಸುಪಾರಿ ಕೊಟ್ಟಿದ್ದ ವಿಡಿಯೋವನ್ನ ಕಾಶಿ ಹಾಗೂ ವಿಜಿಯಮ್ಮ ರೆಕಾರ್ಡ್ ಮಾಡಿಕೊಂಡಿದ್ದರು. ಅದೇ ವಿಡಿಯೋವನ್ನ ಇದೀಗ ತೀರ್ಥಂಕರ್ ಪ್ರಸಾದ್‌ಗೆ ಕೊಡಲು ವಿಜಿಯಮ್ಮ ಮುಂದಾಗಿದ್ದಾರೆ. 

ಮಗನ ಕಣ್ತಪ್ಪಿಸಿ ವಿಜಿಯಮ್ಮ ಓಡಿ ಬಂದಿದ್ದಾರೆ. ಅವರನ್ನು ಹುಡುಕಿಕೊಂಡು ಎಂದಿನಂತೆ ಸುಮನಾ ಓಟ ಶುರು ಮಾಡಿದ್ದಾಳೆ. ಇಲ್ಲಿ ವಿಲನ್ ಸಾಧನಾ ಮಾಡಿದ ಕುಕೃತ್ಯ ಬಯಲಾಗೋ ಚಾನ್ಸಸ್ ಕಡಿಮೆ. ಸುಮನಾ ಮತ್ತೆ ಮತ್ತೆ ಓಡೋದು ಗ್ಯಾರಂಟಿ. ಮೊದಲೇ ಸಣ್ಣಗಿರೋ ಈ ಸುಮನಾಳನ್ನು ಈ ಪಾಟಿ ಓಡಾಡಿಸಿದ್ರೆ ಒಂದಿನ ಅವಳು ಗಾಳಿಯಲ್ಲಿ ಹಾರಿ ಹೋದ್ರೆ ಕಷ್ಟ ಅನ್ನೋದು ಬಡಪಾಯಿ ವೀಕ್ಷಕರ ಕಾಳಜಿ. 

 ಕೆಂಡಸಂಪಿಗೆ’ ಧಾರಾವಾಹಿಯಲ್ಲಿ ಸುಮನಾ ಆಗಿ ಕಾವ್ಯ ಶೈವ, ರಾಜೇಶ ಆಗಿ ಸುನೀಲ, ತೀರ್ಥಂಕರ್ ಪ್ರಸಾದ್ ಆಗಿ ಆಕಾಶ್, ಕೇಶವ್ ಪ್ರಸಾದ್ ಆಗಿ ದೊಡ್ಡಣ್ಣ, ಪದ್ಮ ಆಗಿ ಜ್ಯೋತಿ ಬಂಟ್ವಾಳ, ಸಾಧನಾ ಆಗಿ ಅಮೃತಾ ರಾಮಮೂರ್ತಿ ನಟಿಸುತ್ತಿದ್ದಾರೆ.

ಶ್ರೀರಸ್ತು-ಶುಭಮಸ್ತು ತುಳಸಿಗೆ ಮನಮೆಚ್ಚಿದ ನಾಯಕಿ ಅವಾರ್ಡ್‌: ಸುಧಾರಾಣಿ ಕುರಿತು ಇಂಟರೆಸ್ಟಿಂಗ್ ಮಾಹಿತಿ