ಪ್ರೈಮ್ ವಿಡಿಯೋದ 'ರೈಸ್ ಅಂಡ್ ಫಾಲ್ ಸೀಸನ್ 2' ರಿಯಾಲಿಟಿ ಶೋನಲ್ಲಿ ಸಿವೆಟ್ ತೋಮರ್ ಮತ್ತು ಶಹಜಾದ್ ಪೂನಾವಾಲಾ ನಡುವೆ ಭೌತಿಕ ಹಲ್ಲೆ ನಡೆದಿದೆ. ನಿಯಮ ಉಲ್ಲಂಘಿಸಿದ ಸಿವೆಟ್ ಅವರನ್ನು ಶೋನಿಂದ ಉಚ್ಚಾಟಿಸಲಾಗಿದ್ದು, ಇದನ್ನು ವಿರೋಧಿಸಿ ಸ್ವರಾ ಭಾಸ್ಕರ್ ಮತ್ತು ಕರಣ್ ಪಟೇಲ್ ವಾಕ್ ಔಟ್ ಮಾಡಿದ್ದಾರೆ.

ಮುಂಬೈ (ಸೆ.28): ಖ್ಯಾತ ಒಟಿಟಿ ವಾಹಿನಿ ಪ್ರೈಮ್ ವಿಡಿಯೋದಲ್ಲಿ ಪ್ರಸಾರವಾಗುತ್ತಿರುವ, ಭಾರತದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ನಿರೂಪಕರಾಗಿರುವ 'ರೈಸ್ ಅಂಡ್ ಫಾಲ್ ಸೀಸನ್ 2' (Rise and Fall Season 2) ರಿಯಾಲಿಟಿ ಶೋನಲ್ಲಿ ಹೈಡ್ರಾಮಾ ನಡೆದಿದೆ. ಶೋನ 3ನೇ ಸಂಚಿಕೆಯಲ್ಲಿ ಸ್ಪರ್ಧಿಗಳಾದ ಸಿವೆಟ್ ತೋಮರ್ (Siwet Tomar) ಹಾಗೂ ಶಹಜಾದ್ ಪೂನಾವಾಲಾ (Shehzad Poonawalla) ನಡುವಿನ ವಾಗ್ವಾದ ಹಲ್ಲೆಯಾಗಿ (Physical Fight) ಬದಲಾಗಿದ್ದು, ನಿಯಮ ಉಲ್ಲಂಘಿಸಿದ ಸಿವೆಟ್ ತೋಮರ್ ಅವರನ್ನು ಶೋನಿಂದ ತಕ್ಷಣವೇ ಉಚ್ಚಾಟಿಸಲಾಗಿದೆ.

ಈ ನಿರ್ಧಾರವನ್ನು ವಿರೋಧಿಸಿದ ಸಹ ಸ್ಪರ್ಧಿಗಳಾದ ಬಾಲಿವುಡ್ ನಟಿ ಸ್ವರಾ ಭಾಸ್ಕರ್ (Swara Bhasker) ಹಾಗೂ ಕಿರುತೆರೆ ನಟ ಕರಣ್ ಪಟೇಲ್ (Karan Patel) ಕೂಡ ಶೋನಿಂದ ಹೊರನಡೆದಿದ್ದಾರೆ (Walkout). ಆದರೆ ಅವರಿಬ್ಬರೂ ಸಂಪೂರ್ಣವಾಗಿ ಎಲಿಮಿನೇಟ್ ಆಗಿದ್ದಾರೆಯೇ ಎಂಬುದು ಮುಂದಿನ ಸಂಚಿಕೆಯಲ್ಲಿ ತಿಳಿಯಲಿದೆ.

ಅಷ್ಟಕ್ಕೂ ಸಿವೆಟ್ ಮತ್ತು ಶಹಜಾದ್ ನಡುವೆ ಆಗಿದ್ದೇನು?

ಸಂಚಿಕೆಯ ಆರಂಭದಲ್ಲಿ ಬೇಸ್‌ಮೆಂಟ್‌ನಲ್ಲಿದ್ದ ಸ್ಪರ್ಧಿಗಳು ಮುಂದಿನ ಟಾರ್ಗೆಟ್‌ ಯಾರ ಮೇಲೆ ಮಾಡಬೇಕು ಎಂದು ಚರ್ಚಿಸುತ್ತಿದ್ದರೆ, ಪೆಂಟ್‌ಹೌಸ್‌ನಲ್ಲಿರುವ 'ರೂಲರ್‌ಗಳು' (Rulers) ತಮ್ಮ ತಂತ್ರಗಳನ್ನು ರೂಪಿಸುತ್ತಿದ್ದರು. ಆಟವು 'ಅಲ್ಟಿಮೇಟ್ ರೂಲರ್' ರೇಸ್‌ಗೆ ತಲುಪಿದಾಗ ವಾತಾವರಣ ಇನ್ನಷ್ಟು ಬಿಸಿಯಾಯಿತು. ಈ ರೇಸ್‌ನಲ್ಲಿ ಗೆದ್ದವರಿಗೆ ಟವರ್‌ನಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರ ಸಿಗುವುದರ ಜೊತೆಗೆ ಈ ವಾರದ ಎಲಿಮಿನೇಷನ್‌ನಿಂದ ಸಂಪೂರ್ಣ ರಕ್ಷಣೆ ಸಿಗುತ್ತಿತ್ತು.

ರೇಸ್ ಆರಂಭವಾಗುವ ಮೊದಲು, ಪ್ರಸ್ತುತ ರೂಲರ್‌ಗಳು ತಮಗೆ ಅತ್ಯಂತ ದುರ್ಬಲ ನಿರ್ಧಾರ ತೆಗೆದುಕೊಳ್ಳುವ ಸ್ಪರ್ಧಿ (Weakest Decision-Maker) ಎಂದು ಅನಿಸುವವರನ್ನು ಆಯ್ಕೆ ಮಾಡಬೇಕಿತ್ತು. ಈ ವೇಳೆ ಸಿವೆಟ್ ತೋಮರ್ ಹೆಸರು ಹಲವು ಬಾರಿ ಕೇಳಿಬಂತು. ಇನ್ನು ಕರಣ್ ಪಟೇಲ್ ಅವರು ಶಹಜಾದ್ ಪೂನಾವಾಲಾ ಅವರ ಹೆಸರನ್ನು ಸೂಚಿಸಿದರು. ಈ ಮತದಾನದ ಪ್ರಕ್ರಿಯೆಯು ಸಿವೆಟ್ ಮತ್ತು ಶಹಜಾದ್ ನಡುವೆ ಹೊಗೆಯಾಡುತ್ತಿದ್ದ ಜಗಳವನ್ನು ಬಹಿರಂಗಪಡಿಸಿತು. ಆರಂಭದಲ್ಲಿ ಒಟ್ಟಾಗಿ ಆಟವಾಡಲು ಯೋಜಿಸಿದ್ದ ಇಬ್ಬರ ನಡುವಿನ ಬಾಂಧವ್ಯ ಸಂಪೂರ್ಣ ಹಾಳಾಗಿತ್ತು.

ಶಹಜಾದ್ ವಿರುದ್ಧ ಕಿಡಿಕಾರಿದ ಸಿವೆಟ್, "ಇವನೊಬ್ಬ ಹೆದರುಪುಕ್ಕ. ಬೆನ್ನ ಹಿಂದೆ ಜೊತೆಗಿರುತ್ತೇನೆ ಎನ್ನುತ್ತಾನೆ. ಸ್ವರಾ ಮುಂದೆ ನಾನು ನಿಂತಾಗ ನನ್ನ ಜೊತೆ ನಿಲ್ಲು ಎಂದು ಕೈ ಮುಗಿದು ಕೇಳಿಕೊಂಡವನೇ ನಿಜವಾದ ಶಕ್ತಿಶಾಲಿ ಹೇಗಾಗುತ್ತಾನೆ" ಎಂದು ಏಕವಚನದಲ್ಲೇ ನಿಂದಿಸಿದರು. ಅಲ್ಲದೆ ಶಹಜಾದ್ ಹಾಗೂ ತೇಜ್ ಪ್ರತಾಪ್ ಯಾದವ್ ಅವರಿಗೆ "ಮಾತಿಗೆ ಬೆಲೆ ಕೊಡಲು ಕಲಿಯಿರಿ" ಎಂದು ಎಚ್ಚರಿಸಿದರು.

ಅಂತಿಮವಾಗಿ ಸಿವೆಟ್ ಅವರನ್ನು ಅತ್ಯಂತ ದುರ್ಬಲ ಎಂದು ಘೋಷಿಸಲಾಯಿತು. ಇದರಿಂದಾಗಿ ಅವರು 'ಅಲ್ಟಿಮೇಟ್ ರೂಲರ್' ರೇಸ್‌ನಲ್ಲಿ ಸ್ಪರ್ಧಿಸುವ ಅವಕಾಶವನ್ನು ಕಳೆದುಕೊಂಡರು. ಬಳಿಕ ತಮ್ಮ ಪ್ರಕಾರ ಯಾರು ದುರ್ಬಲ ಎಂದು ಸಿವೆಟ್‌ಗೆ ಕೇಳಿದಾಗ, ಅವರು ಶಹಜಾದ್ ಅವರ ಹೆಸರನ್ನು ನೀಡಿದರು. ಶಹಜಾದ್ ಅವರು ಕರಣ್ ಹೆಸರನ್ನು, ಕರಣ್ ಅವರು ಸ್ವರಾ ಹೆಸರನ್ನು ಹಾಗೂ ಸ್ವರಾ ಅವರು ರಾಜ್ ಹೆಸರನ್ನು ಸೂಚಿಸಿದರು. ಅಂತಿಮವಾಗಿ ಪ್ರಿಯಾಂಕಾ ಚಹರ್ ಚೌಧರಿ, ತೇಜ್ ಪ್ರತಾಪ್ ಯಾದವ್ ಮತ್ತು ಐರಿನಾ ರುಡಕೋವಾ 'ಅಲ್ಟಿಮೇಟ್ ರೂಲರ್' ರೇಸ್‌ನ ಮೊದಲ ಮೂರು ಸ್ಪರ್ಧಿಗಳಾಗಿ ಹೊರಹೊಮ್ಮಿದರು.

ಕೈಕೈ ಮಿಲಾಯಿಸಿದ ಸ್ಪರ್ಧಿಗಳು!

ಘಟನೆ ಇಲ್ಲಿಗೆ ಮುಗಿಯಲಿಲ್ಲ. ಈ ಮುಂಚೆ ಸ್ವರಾ ಭಾಸ್ಕರ್ ಜೊತೆ ಇನ್ಮುಂದೆ ಮಾತನಾಡುವುದಿಲ್ಲ ಎಂದಿದ್ದ ಸಿವೆಟ್, ಆನಂತರ ಆಕೆಯ ಜೊತೆ ಸಂಭಾಷಣೆ ನಡೆಸುತ್ತಿರುವುದು ಕಂಡುಬಂತು. ಇದನ್ನು ಶಹಜಾದ್ ಪ್ರಶ್ನಿಸಿದರು. ಈ ವೇಳೆ ಇಬ್ಬರ ನಡುವೆ ಭಾರಿ ಬಿಸಿಬಿಸಿ ವಾಗ್ವಾದ ನಡೆಯಿತು.

ಕೋಪದ ಕೈಗೆ ಬುದ್ಧಿ ಕೊಟ್ಟ ಸಿವೆಟ್, ಶಹಜಾದ್ ಅವರ ಕುತ್ತಿಗೆಯನ್ನು ಗಟ್ಟಿಯಾಗಿ ಹಿಡಿದು ಕೆಳಗೆ ದೂಡಿದರು. ಈ ಗಲಾಟೆಯಲ್ಲಿ ಶಹಜಾದ್ ಅವರಿಗೆ ಗಾಯಗಳಾಗಿದ್ದು, ಅವರ ಬಟ್ಟೆಯೂ ಹರಿದುಹೋಯಿತು. 'ಟವರ್' ಒಳಗಡೆ ಭೌತಿಕ ಹಲ್ಲೆ ನಡೆಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿರುವುದರಿಂದ, ನಿರೂಪಕರು ಹಾಗೂ ನಿರ್ಮಾಣ ಸಂಸ್ಥೆಯು ಸಿವೆಟ್ ವಿರುದ್ಧ ಶಿಸ್ತುಕ್ರಮ ಕೈಗೊಂಡು ಅವರನ್ನು ಶೋನಿಂದ ತಕ್ಷಣವೇ ಹೊರಹಾಕಿತು.

ಸಿವೆಟ್ ಪರ ನಿಂತ ಸ್ವರಾ ಭಾಸ್ಕರ್ ಹಾಗೂ ಕರಣ್ ಪಟೇಲ್

ಬಿಗ್ ಬಾಸ್ ಮಾದರಿಯ ಈ ನಿರ್ಧಾರವನ್ನು ನಟಿ ಸ್ವರಾ ಭಾಸ್ಕರ್ ಮತ್ತು ಕರಣ್ ಪಟೇಲ್ ತೀವ್ರವಾಗಿ ವಿರೋಧಿಸಿದರು. "ಶಹಜಾದ್ ನೀಡಿದ ತೀವ್ರ ಪ್ರಚೋದನೆಯೇ ಈ ಗಲಾಟೆಗೆ ಮುಖ್ಯ ಕಾರಣ" ಎಂದು ಇಬ್ಬರೂ ವಾದಿಸಿದರು. ಸಿವೆಟ್ ಅವರನ್ನು ಉಚ್ಚಾಟಿಸಿದ್ದಕ್ಕೆ ಪ್ರತಿಭಟನೆಯಾಗಿ ಅವರಿಬ್ಬರೂ ಸಿವೆಟ್ ಜೊತೆಗೆ 'ಟವರ್'ನಿಂದ ಹೊರನಡೆದರು (Walkout). ಸಂಚಿಕೆಯ ಅಂತ್ಯದ ವೇಳೆಗೆ ಕರಣ್ ಪಟೇಲ್, ತೇಜ್ ಪ್ರತಾಪ್ ಯಾದವ್, ಶಹಜಾದ್ ಪೂನಾವಾಲಾ, ಪ್ರಿಯಾಂಕಾ ಚಹರ್ ಚೌಧರಿ, ಸ್ವರಾ ಭಾಸ್ಕರ್, ಸಿವೆಟ್ ತೋಮರ್, ಐರಿನಾ ರುಡಕೋವಾ ಮತ್ತು ರಾಜ್ ಅವರು ಪೆಂಟ್‌ಹೌಸ್‌ನಲ್ಲಿದ್ದರು.

ಇನ್ನೊಂದೆಡೆ ನೀಹಾರಿಕಾ ತಿವಾರಿ, ಕೈರಾ ಅನು, ಅನೀಶ್ ಭಗತ್, ಸಾರಾ ಗುರ್ಪಾಲ್, ಮನೀಶ್ ಕಶ್ಯಪ್, ಗೌತಮ್ ಗುಲಾಟಿ ಮತ್ತು ಕಾಜಲ್ ರಾಘವಾನಿ ಅವರು ಬೇಸ್‌ಮೆಂಟ್‌ನಲ್ಲಿದ್ದರು. ಬನಿಜಯ್ ಏಷ್ಯಾ (Banijay Asia) ನಿರ್ಮಾಣದ 'ರೈಸ್ ಅಂಡ್ ಫಾಲ್ ಸೀಸನ್ 2' ಪ್ರೈಮ್ ವಿಡಿಯೋದಲ್ಲಿ ಪ್ರಸಾರವಾಗುತ್ತಿದ್ದು, ಮುಂದಿನ ಹಂತದಲ್ಲಿ ಸ್ವರಾ ಹಾಗೂ ಕರಣ್ ಅವರ ಭವಿಷ್ಯ ಏನಾಗಲಿದೆ ಎಂಬ ಕುತೂಹಲ ಮೂಡಿದೆ.

Scroll to load tweet…