'ಪುಟ್ಟಕ್ಕನ ಮಕ್ಕಳು' ಧಾರಾವಾಹಿ 900 ಸಂಚಿಕೆಗಳನ್ನು ಪೂರೈಸಿದೆ. ಆರಂಭದಲ್ಲಿ ಸ್ಫೂರ್ತಿದಾಯಕವಾಗಿದ್ದ ಕಥೆ, ನಾಯಕಿ ಸ್ನೇಹಾ ಪಾತ್ರದ ಸಾವಿನ ನಂತರ ತನ್ನತನ ಕಳೆದುಕೊಂಡಿದೆ ಎಂದು ವೀಕ್ಷಕರು ಅಭಿಪ್ರಾಯ ಪಡುತ್ತಿದ್ದಾರೆ. ಉಮಾಶ್ರೀ ಅವರ ನಟನೆಗೆ ಮೆಚ್ಚುಗೆ ವ್ಯಕ್ತವಾದರೂ, ಕಥೆಯು ಹಳಿ ತಪ್ಪಿರುವುದರಿಂದ ಧಾರಾವಾಹಿಯನ್ನು ನಿಲ್ಲಿಸುವಂತೆ ವೀಕ್ಷಕರು ಒತ್ತಾಯಿಸುತ್ತಿದ್ದಾರೆ. 2025ರವರೆಗೂ ಧಾರಾವಾಹಿ ಮುಂದುವರೆಯುವ ಸಾಧ್ಯತೆಯಿದೆ.

 ಪುಟ್ಟಕ್ಕ... ಈ ಶಬ್ದದಿಂದ ರೋಮಾಂಚನಗೊಂಡಿದ್ದ ಮಹಿಳೆಯರು ಅದೆಷ್ಟೋ ಮಂದಿ. ನಮ್ಮಂಥ ದಿಕ್ಕಿಲ್ಲದ ಮಹಿಳೆಯರಿಗೆ ನೀವೇ ಸ್ಫೂರ್ತಿ, ಜೀವನೋತ್ಸಾಹ ಕಳೆದುಕೊಂಡು, ಮಕ್ಕಳನ್ನು ಸಾಕಲು ಸಾಧ್ಯವಾಗದೇ ಕಂಗೆಟ್ಟ ನಮಗೆ ನೀವೇ ಮಾದರಿ... ಎಂದೆಲ್ಲಾ ಎಷ್ಟೋ ಮಹಿಳೆಯರು ಕಣ್ತುಂಬಿಸಿಕೊಂಡು ಪುಟ್ಟಕ್ಕನನ್ನು ಹಾಡಿ ಹೊಗಳಿದ ದಿನವಿತ್ತು. ಪುಟ್ಟಕ್ಕನ ಮಕ್ಕಳು ಕೇವಲ ಸೀರಿಯಲ್​ ಆಗಿರದೇ ಅದು ಹಲವು ದಿಕ್ಕೆಟ್ಟ ಮಹಿಳೆಯರ ಪಾಲಿನ ಜೀವನವೂ ಆಗಿತ್ತು. ಈ ಪುಟ್ಟಕ್ಕನಿಂದ ತಾವು ಸ್ಫೂರ್ತಿ ಪಡೆದಿರುವುದಾಗಿ ವೇದಿಕೆಯ ಮೇಲೆ ಹೇಳಿಕೊಂಡ ಮಹಿಳೆಯರೂ ಹಲವರು. ಗಂಡ ಬಿಟ್ಟು ಹೋದಾಗ, ಮಕ್ಕಳಿಗೆ ತಾಯಿಗೇ ಆಧಾರವಾದ ಸಂದರ್ಭದಲ್ಲಿ ಧೈರ್ಯಗೆಡದೇ ನಾನು ಹೇಗೆ ಮಕ್ಕಳನ್ನು ಸಾಕಿದೆ ಎಂದು ಭಾವುಕರಾಗಿ ಪುಟ್ಟಕ್ಕ ಅರ್ಥಾತ್​ ನಟಿ ಉಮಾಶ್ರೀ ಎದುರು ಕಣ್ಣೀರಾಗಿದ್ದರು ಹಲವು ಅಮ್ಮಂದಿರು. ಇಂತಿಪ್ಪ ಪುಟ್ಟಕ್ಕನ ಮಕ್ಕಳು ಸೀರಿಯಲ್​ ಇದೀಗ 900 ಸಂಚಿಕೆಗಳನ್ನು ಪೂರೈಸಿದೆ. 

12ನೇ ಡಿಸೆಂಬರ್​ 2021ರಿಂದ ಶುರುವಾಗಿದ್ದ ಸೀರಿಯಲ್​ ಮೂರು ವರ್ಷ ಎರಡು ತಿಂಗಳುಗಳನ್ನು ಪೂರೈಸಿದೆ. ಸದಾ ಟಿಆರ್​ಪಿಯಲ್ಲಿ ನಂಬರ್​ 1 ಸ್ಥಾನವನ್ನು ವರ್ಷಗಟ್ಟಲೆ ಕಾದುಕೊಂಡಿದ್ದ ಸೀರಿಯಲ್​, ಬರಬರುತ್ತಾ ಉಳಿದ ಬಹುತೇಕ ಸೀರಿಯಲ್​ಗಳಂತೆ ತನ್ನತನವನ್ನು ಕಳೆದುಕೊಂಡು ಸಾಗುತ್ತಿದೆ ಎನ್ನುವುದು ಇದರ ವೀಕ್ಷಕರ ಅಭಿಮತ. ಪುಟ್ಟಕ್ಕನ ಗಟ್ಟಿಗಿತ್ತಿತನ, ಸ್ನೇಹಾಳ ಸ್ವಾಭಿಮಾನವೇ ಇಲ್ಲಿ ಹೈಲೈಟ್​ ಆಗಿತ್ತು. ಆದರೆ ಈಗ್ಯಾಕೋ ಬಹುತೇಕ ವೀಕ್ಷಕರನ್ನು ಈ ಸೀರಿಯಲ್​ ಕಳೆದುಕೊಂಡು ಬಿಟ್ಟಿದೆ. ಉಮಾಶ್ರೀ ಅಮ್ಮಾ ನೀವು ಈ ಸೀರಿಯಲ್​ ಅಂದೇ ಮುಗಿಸಿಬಿಡಬೇಕಿತ್ತು ಎಂದು ಕಮೆಂಟ್ಸ್​ ತುಂಬಾ ಹಲವರು ಹೇಳುತ್ತಿದ್ದಾರೆ. ಈ ಸೀರಿಯಲ್​ಗೆ ಬಹುದೊಡ್ಡ ಹಿನ್ನಡೆಯಾಗಿದ್ದು ನಾಯಕಿ ಸ್ನೇಹಾಳ ಸಾವು! ಆಕೆಯ ಸಾವಿನ ಬೆನ್ನಲ್ಲೇ ಕಥೆ ಏನೇನೋ ತಿರುವು ಪಡೆದುಕೊಂಡು ಎಲ್ಲೆಲ್ಲಿಯೋ ಹೋಗುತ್ತಾ ಹಳಿ ತಪ್ಪುತ್ತಿದೆ ಎಂದು ವೀಕ್ಷಕರು ಅಸಮಾಧಾನ ಹೊರಹಾಕುತ್ತಲೇ ಇದ್ದಾರೆ.

ಪತ್ನಿ ಕಳಕೊಂಡು ಕಣ್ಣೀರಿಡ್ತಿರೋ ಕಂಠಿಗಿಂದು ಹುಟ್ಟುಹಬ್ಬ: ಶೂಟಿಂಗ್​ ಸೆಟ್​ನಲ್ಲಿ ನಟರಿಂದ ಕೇಕ್​ ಪಾರ್ಟಿ- ವಿಡಿಯೋ ವೈರಲ್​

ಸ್ನೇಹಾ ಮತ್ತು ಕಂಠಿಯ ನಡುವಿನ ವೈಮನಸ್ಸು, ನಂತರ ಅದು ಪ್ರೀತಿಗೆ ಬದಲಾಗಿದ್ದು, ಪುಟ್ಟಕ್ಕನ ಮಗಳಾದ ಸ್ನೇಹಾ ಡಿಸಿಯಾಗಿದ್ದು ಎಲ್ಲವನ್ನೂ ತಮ್ಮ ಬದುಕಿನ ಭಾಗವೆಂದೇ ಅಂದುಕೊಂಡು ವೀಕ್ಷಿಸುತ್ತಿದ್ದ ವೀಕ್ಷಕರಿಗೆ ಸ್ನೇಹಾಳನ್ನು ಸಾಯಿಸಿದ್ದು ಅಸಂಬದ್ಧ ಎನ್ನಿಸಿಬಿಟ್ಟಿತು. ಆಕೆಯಿಂದ ಇನ್ನೇನೋ ನಿರೀಕ್ಷೆ ಮಾಡಿ, ಇಂಥ ಹೆಣ್ಣುಮಕ್ಕಳಿಗೆ ಮಾದರಿಯಾಗುವಂತೆ ಮಾಡಬೇಕು ಎಂದುಕೊಂಡಿದ್ದ ವೀಕ್ಷಕರಿಗೆ ನಿರಾಸೆಯಾಯಿತು. ಸ್ನೇಹಾ ಪಾತ್ರಧಾರಿ ಸಂಜನಾ ಬುರ್ಲಿ ಅವರು, ಸೀರಿಯಲ್​ ಮಧ್ಯೆ ಬಿಟ್ಟ ಕಾರಣದಿಂದ ಆಕೆಯ ಪಾತ್ರವನ್ನು ಉದ್ದೇಶಪೂರ್ವಕವಾಗಿ ಸಾಯಿಸಿ, ಕಥೆಯನ್ನು ಬೇರೆ ದಿಕ್ಕಿಗೆ ತೆಗೆದುಕೊಂಡು ಹೋಗಬೇಕಾಯಿತು ಎಂದು ಇದಾಗಲೇ ನಿರ್ದೇಶಕ ಆರೂರು ಜಗದೀಶ್​ ಅವರು ಸಂದರ್ಶನಗಳಲ್ಲಿ ಸ್ಪಷ್ಟಪಡಿಸಿದ್ದಾರೆ. ಆದರೂ ಈ ಸೀರಿಯಲ್​ ಈಗ ಕಳಾಹೀನವಾಗುತ್ತಾ ಸಾಗಿದೆ ಎನ್ನುವುದು ಬಹುತೇಕ ವೀಕ್ಷಕರ ಅಭಿಮತ. 

ಪಾತ್ರಗಳಿಗೆ ಪರಕಾಯ ಪ್ರವೇಶ ಮಾಡಿದಂತೆ ನಟಿಸುತ್ತಲೇ ಚಿತ್ರಪ್ರಿಯರ ಕಣ್ಮಣಿಯಾಗಿದವರು ಉಮಾಶ್ರೀ. ಅವರು ಮಾಡುವ ಪ್ರತಿಯೊಂದು ಪಾತ್ರಗಳಲ್ಲೂ ಸ್ವಂತಿಕೆ, ಜೀವಂತಿಕೆ ಇದೆ. ನಟಿಯ ಭಾವುಕತೆಯಲ್ಲಾಗಲಿ, ಹಾವ ಭಾವಗಳಲ್ಲಾಗಲಿ, ಅಭಿವ್ಯಕ್ತಿಯಲ್ಲಾಗಲಿ ಅವರ ಸಮಕ್ಕೆ ಇರುವ ಕಲಾವಿದರು ಅಪರೂಪವೆಂಬುದು ಚಿತ್ರಪ್ರಿಯರ ಅಭಿಪ್ರಾಯ. ಕೆಲವೊಂದು ವೈಶಿಷ್ಟ್ಯಪೂರ್ಣ ಪಾತ್ರಗಳಲ್ಲಿ ಕಣ್ಣುಗಳಲ್ಲಿಯೇ ತುಂಬಿಕೊಡುತ್ತಾರೆ. ಹಲವು ವಿವಿಧ ಪಾತ್ರಗಳಲ್ಲಿ ಲೀಲಾಜಾಲವಾಗಿ ನಟಿಸುವ ಇವರು ಪುಟ್ಟಕ್ಕನ ಪಾತ್ರಕ್ಕೆ ಜೀವ ತುಂಬಿದ್ದರೂ, ಕಥೆಯೇ ಯಾವುದೋ ದಿಕ್ಕಿಗೆ ಹೋಗುತ್ತಿರುವುದರಿಂದ ಯಾಕೋ ಜನರಿಗೆ ಅದು ಹಿಡಿಸುತ್ತಿಲ್ಲ. ಇದೀಗ 900ರ ಸಂಚಿಕೆ ಎಂದು ಜೀ ಕನ್ನಡ ಪೋಸ್ಟ್​ ಮಾಡಿದಾಗಲೂ, ಅದಕ್ಕೆ ಬಂದಿರುವ ಕಮೆಂಟ್​ಗಳ ತುಂಬೆಲ್ಲಾ ಸೀರಿಯಲ್​ ಮುಗಿಸಿ ಎನ್ನುವ ಮಾತೇ ಕೇಳಿಬರುತ್ತಿದೆ. ಹಿಂದೊಮ್ಮೆ ಸಂದರ್ಶನದಲ್ಲಿ ಆರೂರು ಜಗದೀಶ್​ ಅವರು, 2025ರಲ್ಲಿಯೂ ಸೀರಿಯಲ್​ ಮುಂದುವರೆಯುತ್ತದೆ ಎಂದಿದ್ದರು. ಈ ಹಿನ್ನೆಲೆಯಲ್ಲಿ, ಧಾರಾವಾಹಿ ಮತ್ತೆ ವೀಕ್ಷಕರನ್ನು ತನ್ನತ್ತ ಸೆಳೆಯುವಲ್ಲಿ ಸಫಲವಾಗುತ್ತಾ ಎಂದು ಕಾದು ನೋಡಬೇಕಿದೆ. 

ಬಾವಿಯ ತಣ್ಣೀರು ಮೈಮೇಲೆ ಸುರಿದುಕೊಳ್ಳುವಾಗ ಬಿಸಿಯಾಗೋದು ಹೇಗೆ? ಶೂಟಿಂಗ್​ನಲ್ಲಿ ಏನೇನಾಗತ್ತೆ ನೋಡಿ!