ಬಿಗ್‌ಬಾಸ್ ಮನೆಗೆ ಹೋದ ಪ್ರದೀಪ್ ಈಶ್ವರ್‌ಗೆ ಎದುರಾಯ್ತು ಸಂಕಷ್ಟ: ಶಾಸಕ ಸ್ಥಾನ ಅಮಾನತ್ತಿಗೆ ಆಗ್ರಹ
ಕಲರ್ಸ್ ಕನ್ನಡ ವಾಹಿನಿಯ ಬಿಗ್ ಬಾಸ್ ರಿಯಾಲಿಟಿ ಶೋಗೆ ತೆರಳಿರುವ ಪ್ರದೀಪ್ ಈಶ್ವರ್‌ಗೆ ಸಂಕಷ್ಟ ಎದುರಾಗಿದೆ. ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಸ್ಪೀಕರ್‌ಗೆ ಪತ್ರ ಬರೆಯಲಾಗಿದೆ.
ಬೆಂಗಳೂರು (ಅ.09): ವಿಶ್ವದ ಅತ್ಯಂತ ದೊಡ್ಡ ರಿಯಾಲಿಟಿ ಶೋಗಳಲ್ಲಿ ಒಂದಾಗಿರುವ ಭಾರತದ ಬಿಗ್‌ಬಾಸ್ ರಿಯಾಲಿಟಿ ಶೋ ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಳೆದ 9 ಸೀಸನ್‌ಗಳು ನಡೆದಿದ್ದು, ಈಗ 10ನೇ ಸೀಸನ್ ಅಕ್ಟೋಬರ್ 09 ರಿಂದ (ಸೋಮವಾರ) ಆರಂಭವಾಗಿದೆ. ಬಿಗ್‌ಬಾಸ್ ಮನೆಗೆ ಶಾಸಕ ಪ್ರದೀಪ್ ಈಶ್ವರ್ ತೆರಳಿದ್ದಾರೆ. ಆದರೆ, ಒಬ್ಬ ಜನಪ್ರತಿನಿಧಿಯಾಗಿ ಜನರ ಸಮಸ್ಯೆಗಳನ್ನು ಆಲಿಸದೇ ಮನರಂಜನೆ ನೀಡುವ ಮನೆಗೆ ತೆರಳಿದ ಹಿನ್ನೆಲೆಯಲ್ಲಿ ಅವರನ್ನು ಶಾಸಕ ಸ್ಥಾನದಿಂದ ಅಮಾನತು ಮಾಡಬೇಕು ಎಂದು ವಂದೇ ಮಾತರಂ ಸಮಾಜ ಸೇವಾ ಸಂಸ್ಥೆಯಿಂದ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ದೂರು ನೀಡಲಾಗಿದೆ.
ಬಿಗ್‌ಬಾಸ್ ಕನ್ನಡ ಸೀಸನ್ 10 ಗ್ರ್ಯಾಂಡ್ ಪ್ರೀಮಿಯರ್‌ಗೆ ಅದ್ಧೂರಿ ತೆರೆ ಬಿದ್ದಿದೆ. ಈಗಾಗಲೇ 17 ಜನ ಸ್ಪರ್ಧಿಗಳು ಬಿಗ್‌ಬಾಸ್ ಮನೆ ಒಳಗೆ ಎಂಟ್ರಿ ಕೊಟ್ಟಿದ್ದಾರೆ. 7 ಜನ ನೇರವಾಗಿ ದೊಡ್ಮನೆ ಪ್ರವೇಶಿಸಿದರೆ ಇಬ್ಬರು ಫೇಲ್ ಆಗಿ ತಮ್ಮ ಮನೆಗೆ ವಾಪಸ್ ಹೋಗಿದ್ದರು. ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 10 ಶೋನ ಮೊದಲ ದಿನವೇ ಹೊಸ ಶುರುವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ಬಿಗ್ ಬಾಸ್ ಸ್ಪರ್ಧಿಯಾಗಿ ಇರಲಿದ್ದಾರೆ ಎಂದು ಪೋಸ್ಟ್ ವೈರಲ್ ಆಗಿತ್ತು. ಇದೀಗ ಆ ಮಾತು ಕೂಡ ಸತ್ಯವಾಗಿದ್ದು, ಶಾಸಕ ಪ್ರದೀಪ್ ಈಶ್ವರ್ ಬಿಗ್‌ಬಾಸ್ ಮನೆಯನ್ನು ಸೇರಿದ್ದಾರೆ.
BBK 10: ಬಿಗ್‌ಬಾಸ್ ಮನೆಯಲ್ಲೂ ಶುರುವಾಯ್ತು ಪ್ರದೀಪ್ ಈಶ್ವರ್ ಮೋಟಿವೇಷನ್ ಸ್ಪೀಚ್!
ಇನ್ನು ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲಿ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಭಾಗಿ ಹಿನ್ನೆಲೆಯಲ್ಲಿ ಅವರ ವಿರುದ್ಧ ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್ ಅವರಿಗೆ ದೂರು ಸಲ್ಲಿಕೆ ಮಾಡಲಾಗಿದೆ. ವಂದೇ ಮಾತರಂ ಸಮಾಜ ಸೇವಾ ಸಂಸ್ಥೆಯಿಂದ ಲಿಖಿತ ದೂರು ಸಲ್ಲಿಕೆ ಮಾಡಲಾಗಿದ್ದು, ಪ್ರದೀಪ್ ಈಶ್ವರ್ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಮನವಿ ಮಾಡಲಾಗಿದೆ. ಜನರಿಂದ ಆಯ್ಕೆಯಾದ ಒಬ್ಬ ಜವಾಬ್ದಾರಿಯುವ ಜನಪ್ರತಿನಿಧಿಯಾಗಿ ಸ್ಥಳೀಯವಾಗಿ ಜನರಿಗೆ ಉಂಟಾಗುವ ಸಮಸ್ಯೆಗಳನ್ನು ಪರಿಹರಿಸುವುದು ಬಿಟ್ಟು, ಮನರಂಜನೆ ನೀಡುವ ವಾಹಿನಿಯಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ದೂರು ಕೊಡಲಾಗಿದೆ.
ದೂರು ಪತ್ರದಲ್ಲೇನಿದೆ: ಮಾನ್ಯ ಪ್ರದೀಶ್ ಈಶ್ವರ್ ಅವರು ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕರಾಗಿದ್ದಾರೆ. ರಾಜ್ಯ ಸರ್ಕಾರ ಅವರಿಗೆ ಗೌರವಧನ ನಿಡಲಾಗುತ್ತಿದ್ದು, ಆ ಕ್ಷೇತ್ರದ ಜವಾಬ್ದಾರಿಯುತ ಪ್ರಜೆ ಮತ್ತು ವ್ಯಕ್ತಿಯಾಗಿದ್ದಾರೆ. ಆ ಕ್ಷೇತ್ರದ ಯಾವುದೇ ಸಂದರ್ಭದಲ್ಲಿ ಕ್ಷೇತ್ರದ ಜನರಿಗೆ ಸಮಸ್ಯೆಯಾದಾಗ ಅವರು ಸ್ಪಂದಿಸುವುದು ಆದ್ಯ ಕರ್ತವ್ಯವಾಗಿರುತ್ತದೆ. ಆದರೆ, ಅವರು ಆ ಜವಾಬ್ದಾರಿಯಂತೆ ನಡೆದುಕೊಳ್ಳದೇ ಬಿಗ್‌ಬಾಸ್ ಎಂಬ ಮನರಂಜನೆ ಕಾರ್ಯಕ್ರಮಕ್ಕೆ ಹೋಗಿರುವುದರಿಂದ ಅವರನ್ನು ಶಾಸಕ ಸ್ಥಾನದಿಂದ ವಜಾ ಮಾಡಬೇಕು. ಅವರಿಗೆ ಯಾವುದೇ ರೀತಿಯ ಶಾಸಕ ಭತ್ಯೆಗಳನ್ನು ನೀಡಬಾರದು. ಈಗಿನಿಂದಲೇ ಅವರನ್ನು ಅಮಾನತ್ತಿನಲ್ಲಿ ಇಡಬೇಕು ಎಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇವೆ ಎಂದು ಪತ್ರದಲ್ಲಿ ಬರೆದಿದ್ದಾರೆ.
BBK 10: ಮೊದಲ ದಿನವೇ ಬಿಗ್ ಬಾಸ್ ಮನೆಗೆ ಕಾಲಿಟ್ಟ ಎಂಎಲ್ಎ ಪ್ರದೀಪ್ ಈಶ್ವರ್: ಸ್ಫರ್ಧಿಗಳಿಗೆ ಶಾಕ್!
ಬಿಗ್ ಬಾಸ್ ಕನ್ನಡ ಸೀಸನ್ 10 ಶೋನ ಮೊದಲ ದಿನವೇ ಹೊಸ ಎಂಟ್ರಿಯಾಗಿದೆ. ಹೌದು, ಸಾಮಾಜಿಕ ಜಾಲತಾಣದಲ್ಲಿ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ಬಿಗ್ ಬಾಸ್ ಸ್ಪರ್ಧಿಯಾಗಿ ಇರಲಿದ್ದಾರೆ ಎಂದು ಪೋಸ್ಟ್ ವೈರಲ್ ಆಗಿತ್ತು. ಅಂತೆಯೇ ಅವರು ದೊಡ್ಮನೆಗೆ ಕಾಲಿಟ್ಟಿದ್ದಾರೆ. ಡೊಳ್ಳು ಕುಣಿತ ಮೂಲಕ ಅವರನ್ನು ಬಿಗ್ ಬಾಸ್ ಮನೆಗೆ ಸ್ವಾಗತ ನೀಡಿದ್ದಾರೆ. 'ನಾನು ಬಿಗ್ ಬಾಸ್ ಮನೆಗೆ ನಿನ್ನೆಯೇ ಬರಬೇಕಿತ್ತು. ಆದರೆ ಇವತ್ತು ಬಂದಿದ್ದೇನೆ. ಸ್ಪರ್ಧಿಯಾಗಿ ನಾನು ಬಿಗ್ ಬಾಸ್ ಮನೆಗೆ ಬಂದಿರೋದಿಕ್ಕೆ ಖುಷಿಯಾಗಿದೆ. ನಾವೆಲ್ಲ ಬೆಂಗಳೂರಿಗೆ ಸೋಲೋಕೆ ಬಂದವರು' ಎಂದು ಪ್ರದೀಪ್ ಈಶ್ವರ್ ಹೇಳಿದ್ದಾರೆ. 'ನಾವು ಎಂಎಲ್‌ಎ ಜೊತೆ ಸ್ಪರ್ಧೆ ಮಾಡ್ತಿದ್ದೇವೆ, ಇದು ತಮಾಷೆ ವಿಷಯವೇ ಅಲ್ಲ' ಎಂದು ಪ್ರದೀಪ್ ಈಶ್ವರ್ ಅವರಿಗೆ ಸಂತು ಹೇಳಿದ್ದಾರೆ.