Asianet Suvarna News Asianet Suvarna News

Ganesh Golden Gang: ಜೀ ಕನ್ನಡದಲ್ಲಿ ಚಂದನವನದ ಗೆಳೆಯ-ಗೆಳತಿಯರಿಗೋಸ್ಕರ ಹೊಸ ರಿಯಾಲಿಟಿ ಶೋ

ಕನ್ನಡ ಕಿರುತೆರೆಯಲ್ಲಿ ರಿಯಾಲಿಟಿ ಶೋಗಳಿಗೆ ಹೊಸ ತಿರುವನ್ನು ಕೊಟ್ಟ 'ಜೀ ಕನ್ನಡ' ಕಿರುತೆರೆಯ ಇತಿಹಾಸದಲ್ಲಿ ಇದೇ ಪ್ರಪ್ರಥಮ ಬಾರಿಗೆ ಸ್ನೇಹಿತರಿಗಾಗಿ 'ಗೋಲ್ಡನ್​ ಗ್ಯಾಂಗ್​' ಎಂಬ ವಿಶೇಷ ಕಾರ್ಯಕ್ರಮವನ್ನು ರೂಪಿಸಿದೆ. ಎಷ್ಟೋ ಜನ ತಮ್ಮ ಜೊತೆಯಾದ ಕಥೆಯನ್ನು ವೀಕ್ಷಕರಿಗೆ ಉಣಬಡಿಸಲು ಈ ವೇದಿಕೆ ಸಜ್ಜಾಗಿದೆ.

New Kannada Reality Show Golden Gang to go on Air on Zee Kannada from January 8th gvd
Author
Bangalore, First Published Jan 6, 2022, 2:00 PM IST

ಕನ್ನಡ ಕಿರುತೆರೆಯಲ್ಲಿ ಮನರಂಜನಾ ವಾಹಿನಿಗಳ ನಡುವೆ ಭರ್ಜರಿ ಪೈಪೋಟಿ ಇದೆ. ಧಾರಾವಾಹಿಗಳ ಜೊತೆಗೆ ರಿಯಾಲಿಟಿ ಶೋಗಳ (Reality Show) ಮೂಲಕವೂ ಪ್ರೇಕ್ಷಕರನ್ನು ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ. ಈಗಾಗಲೇ ಅನೇಕ ಕಾರ್ಯಕ್ರಮಗಳ ಮೂಲಕ ಗಮನ ಸೆಳೆದಿರುವ 'ಜೀ ಕನ್ನಡ ವಾಹಿನಿ' (Zee Kannada) ಕೇವಲ ಮನೋರಂಜನೆ ಕಾರ್ಯಕ್ರಮಕ್ಕಷ್ಟೇ ಸೀಮಿತವಾಗದೇ ಸದಭಿರುಚಿಯ ಕಾರ್ಯಕ್ರಮಗಳನ್ನು ನೀಡುವ ಮೂಲಕ ಎಲ್ಲಾ ವರ್ಗದ ಜನರನ್ನು ತನ್ನತ್ತ ಆಕರ್ಷಿಸುತ್ತಿದೆ. ಇಂತಹ ವೈವಿಧ್ಯಮಯ ಕಾರ್ಯಕ್ರಮಗಳಲ್ಲಿ 'ವೀಕೆಂಡ್ ವಿತ್ ರಮೇಶ್', 'ಡ್ರಾಮಾ ಜೂನಿಯರ್ಸ್', 'ಸರಿಗಮಪ', 'ಕಾಮಿಡಿ ಕಿಲಾಡಿಗಳು', 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್', 'ಜೀನ್ಸ್', 'ಕನ್ನಡದ ಕಣ್ಮಣಿ', 'ಯಾರಿಗುಂಟು ಯಾರಿಗಿಲ್ಲ', ಹೀಗೆ ಸಾಲು ಸಾಲು ವಿನೂತನ ರಿಯಾಲಿಟಿ ಶೋಗಳ ಮೂಲಕ ಕನ್ನಡಿಗರ ಮನೆ-ಮನಗಳನ್ನು ಮೆಚ್ಚಿಸಿ ಕಿರುತೆರೆಯಲ್ಲಿ ಸತತವಾಗಿ 3 ವರ್ಷದಿಂದ ನಂಬರ್ 1 ಸ್ಥಾನದಲ್ಲಿರುವುದು 'ಜೀ ಕನ್ನಡ'ಕ್ಕೆ ಹೆಮ್ಮೆಯ ಗರಿ. 

ಕನ್ನಡ ಕಿರುತೆರೆಯಲ್ಲಿ ರಿಯಾಲಿಟಿ ಶೋಗಳಿಗೆ ಹೊಸ ತಿರುವನ್ನು ಕೊಟ್ಟ 'ಜೀ ಕನ್ನಡ' ಕಿರುತೆರೆಯ ಇತಿಹಾಸದಲ್ಲಿ ಇದೇ ಪ್ರಪ್ರಥಮ ಬಾರಿಗೆ ಸ್ನೇಹಿತರಿಗಾಗಿ 'ಗೋಲ್ಡನ್​ ಗ್ಯಾಂಗ್​' (Golden Gang) ಎಂಬ ವಿಶೇಷ ಕಾರ್ಯಕ್ರಮವನ್ನು ರೂಪಿಸಿದೆ. ಪ್ರತಿಸಲ ರಿಯಾಲಿಟಿ ಶೋಗಳಲ್ಲಿ ಮನೋರಂಜನೆಯ ಜೊತೆಗೆ ಒಂದು ಭಾವನಾತ್ಮಕ ಸತ್ಯ ಸಂದೇಶವನ್ನು ನೀಡುವ ನಮ್ಮ ವಾಹಿನಿ ಈ ಬಾರಿ ನಮ್ಮ ಚಂದನವನದ ಬಹುಕಾಲದ ಗೆಳೆಯ-ಗೆಳತಿಯರ ಸ್ನೇಹ ಸಮ್ಮಿಲನದ ಬುತ್ತಿಯನ್ನು ಬಿಚ್ಚಿ ಅಲ್ಲಿ ಎಷ್ಟೋ ಜನ ತಮ್ಮ ಜೊತೆಯಾದ ಕಥೆಯನ್ನು ವೀಕ್ಷಕರಿಗೆ ಉಣಬಡಿಸಲು ಮನೆ (ವೇದಿಕೆ) ಸಜ್ಜಾಗಿದೆ.

ನೋವಲ್ಲಿ ಸಾಂತ್ವನಗೈದವರು, ನಲಿವಲ್ಲಿ ನಮ್ಮೊಡನೆ ನಕ್ಕು ನಲಿದವರು, ಕಷ್ಟಕ್ಕೆ ಬೆಂಬಲವಾಗಿ ನಿಂತವರು, ಸುಖದಲ್ಲಿ ಸವಿಯಾದವರು, ಸೋತಾಗ ಕಣ್ಣೀರಾದವರು, ಗೆದ್ದಾಗ ಗೆಲುವನ್ನು ಸಂಭ್ರಮಿಸಿದವರು, ನಮ್ಮ ತರಲೆ-ತುಂಟಾಟಗಳಿಗೆ ಜೊತೆಯಾದವರು ಹೀಗೆ ಜೀವನದ ಭಾಗವಾಗಿರುವ ಈ ಎಲ್ಲ ಸ್ನೇಹಿತರೆಂಬ ಪಾತ್ರಗಳು ಜೀವನದ ಪ್ರತಿಯೊಂದು ಹಂತದಲ್ಲೂ ಕುಟುಂಬದಷ್ಟೇ ಸರಿಸಮನಾಗಿ ಕೊನೆಗೆ ತಾನೇ ಒಂದು ಕುಟುಂಬವಾಗುತ್ತದೆ. ಜೀವದ ಗೆಳೆಯರಿಗೆ ಈ ಕಾರ್ಯಕ್ರಮವನ್ನು ಜೀ ಕನ್ನಡ ಸಮರ್ಪಿಸುತ್ತಿದೆ. ಇದರೊಂದಿಗೆ ಒಂದಷ್ಟು ಮೋಜು-ಮಸ್ತಿ, ಆಟ-ತುಂಟಾಟ ಎಲ್ಲವನ್ನು ಒಳಗೊಂಡ ವಿಭಿನ್ನ ಮನೋರಂಜನೆಯ ರಸಗವಳವನ್ನು ಕನ್ನಡಿಗರು ಸವಿಯಬಹುದಾಗಿದೆ. 
   
ಗಣೇಶ್ ಹೊಸ ಶೋ ಶುರು; ಮೇಘನಾ ರಾಜ್, ವಸಿಷ್ಠ ಸಿಂಹ ಸ್ಪರ್ಧಿಸುತ್ತಾರಂತೆ!
 
ಈ ಕಾರ್ಯಕ್ರಮದಲ್ಲಿ ನಮ್ಮ ಸ್ಯಾಂಡಲ್‍ವುಡ್‍ನ ತಾರೆಯರ ಜೊತೆಗೆ ಕಿರುತೆರೆಯಲ್ಲಿ ಮೋಡಿ ಮಾಡಿದ ಹಿಂದಿನ ಧಾರವಾಹಿ ಗ್ಯಾಂಗ್, ಹಾಸ್ಯಕ್ಕೆ ಮೆರುಗು ತಂದಂತಹ ಹರಟೆ ಗ್ಯಾಂಗ್, ಟ್ರೆಂಡ್ ಸೆಟ್ ಮಾಡಿದಂತಹ ಸಿನಿಮಾಗಳು, ಜೊತೆಗೆ ಕರ್ನಾಟಕದ ವಿವಿಧ ಕ್ಷೇತ್ರಗಳಾದ ರಾಜಕೀಯ ದಿಗ್ಗಜರು, ಕ್ರೀಡಾ ತಾರೆಗಳು, ಪತ್ರಿಕೋದ್ಯಮದ ಪ್ರವರ್ತಕರು ಕೂಡ ಭಾಗವಹಿಸುವ ಎಲ್ಲಾ ನಿರೀಕ್ಷೆಗಳಿವೆ. ಅಪೂರ್ವ ಸ್ನೇಹಿತರ ಅನನ್ಯ ಸ್ನೇಹವನ್ನು ಸಂಭ್ರಮಿಸಲೆಂದೇ ಸಿದ್ಧಗೊಂಡಿರುವ ಈ ಶೋ ವೀಕ್ಷಕರ ಮನದಲ್ಲಿ ಹೊಸ ಸಂಚಲನವನ್ನು ಸೃಷ್ಠಿಸುತ್ತದೆ ಎಂದು ಹೇಳಲು ಸಂತೋಷಪಡುತ್ತದೆ. 

ಈ ಕಾರ್ಯಕ್ರಮ ನಮ್ಮ ವೀಕ್ಷಕರಿಗೆ ವೈವಿಧ್ಯಮಯ ಜನಪ್ರಿಯ ವ್ಯಕ್ತಿಗಳ ಸ್ನೇಹವಲಯದ ವಿಸ್ತಾರವನ್ನು ಪರಿಚಯ ನೀಡುವುದರ ಜೊತೆಗೆ ತಮ್ಮ ಬಾಲ್ಯಯವ್ವನವನ್ನು ಮತ್ತೊಮ್ಮೆ ಕಾರ್ಯಕ್ರಮದೊಂದಿಗೆ ಮೆಲುಕು ಹಾಕಿ ತಮ್ಮ ಗೆಳೆಯರ ಬಳಗದ ಜೀವನವನ್ನು ಮರುಸೃಷ್ಟಿಸುವುದರಲ್ಲಿ ಸಂಶಯವಿಲ್ಲ ಎಂದು ಹೇಳಲು 'ಜೀ ಕನ್ನಡ' ಹೆಮ್ಮೆ ಪಡುತ್ತದೆ. ಈಗಾಗಲೇ ಬಿಡುಗಡೆಗೊಂಡಿರುವ ಪ್ರೋಮೋ ಬಹಳಷ್ಟು ಜನ ಮೆಚ್ಚುಗೆ ಗಳಿಸಿದ್ದು ನೋಡುಗರಲ್ಲಿ ಕಾರ್ಯಕ್ರಮದ ಬಗ್ಗೆ ಸಾಕಷ್ಟು ಕುತೂಹಲ ಮೂಡಿಸಿದೆ. 

Sudeep sings for Anil Kumble: ಕ್ರಿಕೆಟಿಗನ ವಿಶೇಷ ಹಾಡು ಹಾಡಿದ ಕಿಚ್ಚ!

ನಮ್ಮ ವಿವಿಧ ಕ್ಷೇತ್ರದ ತಾರೆಗಳು ಈ ವೇದಿಕೆಯಲ್ಲಿ ತಮ್ಮ ಬದುಕಿನ ದಾರಿಯಲ್ಲಿ ಜೊತೆಯಾದವರ ಸ್ನೇಹವನ್ನು ಸಂಭ್ರಮಿಸುವ ಈ ಕಾರ್ಯಕ್ರಮದ ನಿರೂಪಣೆಯನ್ನು ನಮ್ಮ ಮನೆಮಗ, ಮಳೆ ಹುಡುಗ, ಭಾವುಕ ಕಣ್ಣೀರಿನ ಅಮರ ಪ್ರೇಮಿ, ಚೆಲುವಿನ ಚಿತ್ತಾರದ ಚಿತ್ತಾರವನ್ನು ಚಂದನವನದಲ್ಲಿ ಮೂಡಿಸಿದ 'ಗೋಲ್ಡನ್ ಸ್ಟಾರ್' ಗಣೇಶ್ (Golden Star Ganesh) ನಿರ್ವಹಿಸುತ್ತಿರುವುದು ಈ ಕಾರ್ಯಕ್ರಮದ ಮತ್ತೊಂದು ಹೆಗ್ಗಳಿಕೆ. ಗೆಳೆತನವೆಂಬ ಸಿರಿತನಕ್ಕೆ ಸೋಲದವರಾರೂ ಇಲ್ಲ, ಗೋಲ್ಡನ್ ತಾರೆಗಳ ಗೋಲ್ಡನ್ ಕ್ಷಣಗಳನ್ನು ಸೆರೆಹಿಡಿದು ವೀಕ್ಷಕರಿಗೆ ಮನರಂಜನೆಯ ರಸದೌತಣವನ್ನು ನೀಡಲಿದೆ ಈ 'ಗೋಲ್ಡನ್ ಗ್ಯಾಂಗ್'. ಈ ಕಾರ್ಯಕ್ರಮ ಮನೋರಂಜನೆಯ ಜೊತೆಗೆ ನಗೆಯ ರಸದೌತಣವನ್ನೂ ನೀಡಲಿದೆ. ಕರ್ನಾಟಕದ ಬಹುನಿರೀಕ್ಷೆಯ ಈ ರಿಯಾಲಿಟಿ ಶೋ ಇದೇ ಜನವರಿ 8 ರಿಂದ ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 9ಕ್ಕೆ ಪ್ರಸಾರವಾಗಲಿದೆ.

Follow Us:
Download App:
  • android
  • ios