ನನ್ನಮ್ಮ ಕಣ್ಣೀರು ಹಾಕಿದ್ಲು! ಕೀಳು ಮಟ್ಟದ ಪ್ರಚಾರ ಬೇಕಾ? ಪಾಪಿಗಳ ಸಂತೆಯಲ್ಲಿ ಪ್ರಾಣಕ್ಕೆ ಬೆಲೆಯೇ ಇಲ್ವಾ?
ಬಿಗ್ಬಾಸ್ ಮನೆಯಲ್ಲಿ ಟಾಸ್ಕ್ ಹೆಸರಿನಲ್ಲಿ ಹಿಂಸೆ ನಡೆಯುತ್ತಿದೆ ಎಂದು ಆಕ್ರೋಶ ಹೊರಹಾಕಿರುವ ನೆಟ್ಟಿಗರು ಬಿಗ್ಬಾಸ್ ಬಗ್ಗೆ ಕಮೆಂಟ್ ಮಾಡುತ್ತಿದ್ದಾರೆ.
ಬಿಗ್ಬಾಸ್ ಎರಡನೆಯ ತಿಂಗಳಿಗೆ ಕಾಲಿಟ್ಟಿದ್ದು, ಹುಚ್ಚಾಟ ದಿನೇ ದಿನೇ ಹೆಚ್ಚಾಗುತ್ತಿದೆ. ಹುಚ್ಚಾಟ ಹೆಚ್ಚಾದಷ್ಟೂ ಟಿಆರ್ಪಿ ರೇಟೂ ಏರುತ್ತಿದೆ. ಇಂಥ ಗದ್ದಲ, ಗಲಾಟೆ, ಅಶ್ಲೀಲತೆಯನ್ನು ನೋಡಿ ಖುಷಿ ಪಡುವ ದೊಡ್ಡ ವರ್ಗವೇ ಇದೆ ಎನ್ನುವುದು ಬಿಗ್ಬಾಸ್ನ ಎಲ್ಲಾ ಭಾಷೆಗಳ ಟಿಆರ್ಪಿ ರೇಟ್ ನೋಡಿದರೆ ತಿಳಿದುಬರುತ್ತಿದೆ. ಪ್ರತಿದಿನವೂ ಸೋಷಿಯಲ್ ಮೀಡಿಯಾದಲ್ಲಿ ಈ ಷೋಗೆ ಶಾಪ ಹಾಕುತ್ತಲೇ, ಇದರ ವಿರುದ್ಧ ಕಮೆಂಟ್ ಮಾಡುತ್ತಲೇ ಅದನ್ನು ಒಂದು ಕ್ಷಣವೂ ಬಿಡದೆ ನೋಡುವ ಅಸಂಖ್ಯ ಪ್ರೇಕ್ಷಕ ವರ್ಗವಿದೆ. ಪ್ರೇಕ್ಷಕರ ಸಂಖ್ಯೆ ಹೆಚ್ಚಿದ್ದಷ್ಟೂ ಬಿಗ್ಬಾಸ್ ಮನೆಯಲ್ಲಿ ಅಸಭ್ಯ ವರ್ತನೆಗಳು ಮಿತಿಮೀರುತ್ತಲೇ ಇರುತ್ತವೆ ಎಂದು ಇಂಥ ಷೋ ಇಷ್ಟಪಡದವರು ಹೇಳುತ್ತಲೇ ಇರುತ್ತಾರೆ. ಅದೇ ರೀತಿ ಇದೀಗ ಟಾಸ್ಕ್ ಹೆಸರಿನಲ್ಲಿ ಎರಡು ದಿನಗಳ ಹಿಂದೆ ನಡೆದಿರುವ ಘಟನೆಯ ಬಳಿಕ ಜನರು ಬಿಗ್ಬಾಸ್ ಷೋ ವಿರುದ್ಧ ಇನ್ನಷ್ಟು ಕಿಡಿ ಕಾರುತ್ತಿದ್ದಾರೆ.
ಕಳೆದ ಗುರುವಾರ ರಾತ್ರಿ ಏಕಾಏಕಿ ಭಾರಿ ಬೆಳವಣಿಗೆ ಬಿಗ್ಬಾಸ್ ಮನೆಯಲ್ಲಿ ನಡೆದಿದೆ ಎನ್ನಲಾಗುತ್ತಿದ್ದು, ಪ್ರಮುಖ ಸ್ಪರ್ಧಿಗಳು ಎನಿಸಿಕೊಂಡಿರುವ ಡ್ರೋನ್ ಪ್ರತಾಪ್ (Drone Pratap) ಮತ್ತು ಸಂಗೀತಾ ಶೃಂಗೇರಿ ಹೊರಹೋಗಿದ್ದಾರೆ ಎನ್ನಲಾಗಿದೆ. ಕಳೆದ ಕೆಲವು ದಿನಗಳಿಂದ ಬಿಗ್ಬಾಸ್ ಮನೆಯಲ್ಲಿ ಟಾಸ್ಕ್ ಭರಾಟೆ ಬಲು ಜೋರಾಗಿಯೇ ನಡೆಯುತ್ತಿದೆ. ಈ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ಜಗಳ, ಕಿತ್ತಾಟ, ಮಾರಾಮಾರಿಗಳು ನಡೆದಿವೆ. ಈ ಮೂಲಕವೇ ಬಿಗ್ಬಾಸ್ನ ಟಿಆರ್ಪಿ ರೇಟೂ ಹೆಚ್ಚಾಗುತ್ತಿವೆ. ಇದೀಗ ಇದೇ ಟಾಸ್ಕ್ ಸಮಯದಲ್ಲಿ ಡ್ರೋನ್ ಪ್ರತಾಪ್ ಮತ್ತು ಸಂಗೀತಾ (Sangeetha Sringeri) ಅವರಿಗೆ ಹಾನಿ ಆಗಿದೆ ಎನ್ನಲಾಗುತ್ತಿದೆ. ಸೋಪ್ ನೀರನ್ನು ಪರಸ್ಪರ ಎರೆಚಿಕೊಳ್ಳುವ ಟಾಸ್ಕ್ನಲ್ಲಿ ಇವರಿಬ್ಬರ ಮುಖಕ್ಕೆ ರಾಸಾಯನಿಕ ನೀರು ಬಿದ್ದಿದೆ ಎನ್ನಲಾಗುತ್ತಿದ್ದು, ಇಬ್ಬರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂಬ ಸುದ್ದಿ ಇದೆ. ನಿನ್ನೆ ರಾತ್ರಿಯೇ ಈ ಘಟನೆ ನಡೆದಿದೆ ಎನ್ನುವ ಸುದ್ದಿಯಾಗುತ್ತಿದ್ದು, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರ ಬಂದಿಲ್ಲ. ಸದ್ಯ ಈ ಗಾಳಿಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಬಿಗ್ಬಾಸ್ ಮನೆಯಿಂದ ಸಂಗೀತಾ- ಡ್ರೋನ್ ಪ್ರತಾಪ್ ಹೊರಕ್ಕೆ, ಆಸ್ಪತ್ರೆಗೆ ದಾಖಲು? ಏನಿದು ಸುದ್ದಿ?
ಡ್ರೋನ್ ಪ್ರತಾಪ್ ಮತ್ತು ಸಂಗೀತಾ ಅವರ ಕಣ್ಣು, ಮೂಗು, ಬಾಯಿಗೆ ನೀರು ಬಿದ್ದಿದ್ದರಿಂದ ಇಬ್ಬರೂ ಅಸ್ವಸ್ಥಗೊಂಡಿದ್ದಾರೆ ಎನ್ನಲಾಗಿದ್ದು, ಬಿಗ್ಬಾಸ್ ಮನೆಯಿಂದ ಅವರನ್ನು ಹೊರಕ್ಕೆ ಕರೆದುಕೊಂಡು ಬಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ ಎನ್ನುವ ಸುದ್ದಿ ಹರಡುತ್ತಿದೆ. ಘಟನೆ ನಡೆದು ಎರಡು ದಿನಗಳಾಗಿದ್ದರೂ ಈ ಸುದ್ದಿಯ ಸತ್ಯಾಸತ್ಯತೆ ಹೊರಬಂದಿಲ್ಲ. ಆದರೆ ನೇರ ಪ್ರಸಾರದ ಕಾರ್ಯಕ್ರಮದಲ್ಲಿ ಇವರಿಬ್ಬರೂ ಕಾಣಿಸುತ್ತಿಲ್ಲ. ಇದರಿಂದ ಈ ಸುದ್ದಿಯಲ್ಲಿ ಸತ್ಯಾಂಶ ಇದೆ ಎಂದೇ ಹೇಳಲಾಗುತ್ತಿದೆ.
ಈ ಟಾಸ್ಕ್ ಪ್ರೊಮೋ ರಿಲೀಸ್ ಆಗುತ್ತಿದ್ದಂತೆಯೇ ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಪ್ರೊಮೋದಲ್ಲಿ 9 ಮಂದಿಗೆ ಹೊರಕ್ಕೆ ಹೋಗುವ ಭೀತಿ ಎಂದು ತೋರಿಸಲಾಗಿದೆ. ಆದರೆ ಈ ಪ್ರೊಮೋ ನೋಡಿದ ವೀಕ್ಷಕರು ಸಂಗೀತಾ ಮತ್ತು ಡ್ರೋನ್ ಪ್ರತಾಪ್ಗೆ ಅನುಕಂಪದ ಅಲೆ ಹರಿದುಬರುತ್ತಿದೆ. ನಿನ್ನ ಸಂಗೀತಾಗೆ ಪಾಪಿಗಳು ಹಿಂಸೆ ಕೊಡೋದನ್ನ ನೋಡಿ ನನ್ನ ತಾಯಿ ಟಿವಿ ನೋಡುತ್ತಾ ಕಣ್ಣೀರು ಹಾಕಿದಳು, ಹೆತ್ತ ತಾಯಿ ಇನ್ನೆಷ್ಟು ಕಣ್ಣೀರು ಹಾಕಿರಬೇಡಾ ಎಂದು ಬ್ಲಾಸೋಮ್ ಎಂಬ ನೆಟ್ಟಿಗರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಿಯಾ ಎನ್ನುವವರೂ ಇದೇ ಮಾತನ್ನು ಹೇಳಿದ್ದಾರೆ. ಸಂಗೀತ ಅಂಡ್ ಪ್ರತಾಪ್ ಅವರಿಗೆ ಕಿಚ್ಚನ ಪಂಚಾಯತಿಯಲ್ಲಿ ನ್ಯಾಯ ಸಿಗ್ಲೇ ಬೇಕು ಎಂದು ಇನ್ನು ಕೆಲವರು ಒತ್ತಾಯಿಸಿದರೆ, ಇಂಥ ಕೀಳುಮಟ್ಟದ ಪ್ರಚಾರ ಬೇಕಾ ಎಂದು ಮತ್ತಿಷ್ಟು ಮಂದಿ ಆಕ್ರೋಶ ಹೊರಹಾಕುತ್ತಿದ್ದಾರೆ. ವರಲಕ್ಷ್ಮಿ ಕೆ. ಎನ್ನುವವರು ಈ ಷೋ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಪಾಪಿಗಳ ಸಂತೆಯಲ್ಲಿ ಪ್ರಾಣಕ್ಕೆ ಬೆಲೆಯೇ ಇಲ್ಲ ಅನ್ನಿಸುತ್ತೆ... ಅಷ್ಟು ಕೀಳು ಮಟ್ಟದಲ್ಲಿ ಬಿಗ್ ಬಾಸ್ ಆಟ ಆಡೋ ಅವಶ್ಯಕತೆ ಇದೆಯಾ ಎಂದು ಪ್ರಶ್ನಿಸಿದ್ದಾರೆ. ನೆನ್ನೆಯ ಎಪಿಸೋಡ್ ನಲ್ಲಿ ಸಂಗೀತ ಮತ್ತು ಪ್ರತಾಪ್ ಅವರನ್ನು ನೋಡಿ ಕಣ್ಣಂಚಿನಲ್ಲಿ ನೀರು ತುಂಬಿಕೊಂಡಿತ್ತು. ನಮಗೆ ಸಂಬಂಧ ಇಲ್ಲದ ಸ್ಪರ್ಧಿಗಳ ನೋಡಿ ಇನ್ನು ಅವರ ತಂದೆ ತಾಯಿಯ ಪರಿಸ್ಥಿತಿ ಏನಾಗಬಹುದು. ಬಿಗ್ ಬಾಸ್ ಮನೆಯಲ್ಲಿ ಮಾನವೀಯತೆ ಇದೆಯಾ ಅಥವಾ ಸತ್ತು ಹೋಯಿತಾ ಎಂದು ಪ್ರಶ್ನಿಸಿದ್ದಾರೆ.
ಬಿಗ್ಬಾಸ್ ಮನೆಯಲ್ಲಿ ಹೊಸಲೋಕ ಸೃಷ್ಟಿ! ಗಂಧರ್ವರಿಗೆ ರಾಕ್ಷಸರಿಂದ ಕಿರುಕುಳ: ಯಾರಿಗೆ ಸಿಕ್ತು ಜಯ?