BhagyaLakshmi: ಫುಲ್ ಟೈಟಾದ ತಾಂಡವ್! ಆದ್ರೂ ನೆಟ್ಟಿಗರು ಜೈ ಅಂತಿರೋದ್ಯಾಕೆ?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗ್ತಿರೋ ಭಾಗ್ಯಲಕ್ಷ್ಮಿ ಧಾರಾವಾಹಿ ಹೊಸ ಹಂತಕ್ಕೆ ಬಂದು ನಿಂತಿದೆ. ಭಾಗ್ಯಾಳ ಗಂಡ ತಾಂಡವ್ ಕುಡಿದ ಮತ್ತಿನಲ್ಲಿ ಅಮ್ಮನ ಬಗ್ಗೆಯೇ ಮಾತನಾಡುತ್ತಿದ್ದಾನೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶನಿವಾರ ಸಂಜೆ ಏಳುಗಂಟೆಗೆ ಪ್ರಸಾರ ಆಗುತ್ತಿರುವ ಭಾಗ್ಯಲಕ್ಷ್ಮೀ (BhagyaLakshmi) ಸೀರಿಯಲ್ ಮನೆಮನೆ ಮಾತಾಗಿದೆ. ಟಿಆರ್‌ಪಿಯಲ್ಲೂ ಮುಂದಿರೋ ಈ ಧಾರಾವಾಹಿಯ ಪ್ರತಿಯೊಂದು ಪಾತ್ರವನ್ನೂ ತಮ್ಮ ಜೀವನದ ಪಾತ್ರವೇ ಎಂದು ಅಂದುಕೊಂಡು, ನೋಡುವವರ ಅದರಲ್ಲಿಯೂ ಮಹಿಳಾ ಪ್ರೇಕ್ಷಕರ ಸಂಖ್ಯೆ ಹೆಚ್ಚಿದೆ. ಹಲವು ಸಂಚಿಕೆಯಲ್ಲಿಯೂ ಭಾಗ್ಯಳನ್ನು ಅಳುಮುಂಜಿ ಪಾತ್ರದಲ್ಲಿಯೇ ನೋಡಿರೋ ಪ್ರೇಕ್ಷಕರಿಗೆ ಇತ್ತೀಚೆಗೆ ಸಮಾಧಾನ ಆಗುವ ಸಂಗತಿಯೂ ನಡೆದಿತ್ತು. ಈಕೆ ಪ್ರತಿಯೊಂದು ಮನೆಯ ಗೃಹಿಣಿಯ ಪ್ರತಿರೂಪ. ಆದರೆ ಇತರ ಹಲವು ಧಾರಾವಾಹಿಗಳಿಂದ ಭಾಗ್ಯಳ ಪಾತ್ರವನ್ನೂ ಅಳುಮುಂಜಿ ಮಾಡಿಬಿಟ್ಟರೆ ಈ ಧಾರಾವಾಹಿಯ ವೀಕ್ಷಕರಿಸಿದೆ ತಲೆ ಚಿಟ್ಟು ಹಿಡಿಯುತ್ತದೆ, ಈಕೆ ಗಟ್ಟಿಯಾದರೆ ಈ ಥರ ಇರೋ ಹೆಣ್ಮಕ್ಕಳಿಗೂ ಪಾಠ ಆಗುತ್ತೆ ಅನ್ನೋ ಮಾತನ್ನು ವೀಕ್ಷಕರು ಕಳೆದ ಕೆಲವು ಸಮಯದಿಂದ ಹೇಳುತ್ತಲೇ ಬಂದಿದ್ದರು. ಅದಕ್ಕೆ ಒಪ್ಪಿಗೆ ಎಂಬಂತೆ ಭಾಗ್ಯಳನ್ನು ಗಟ್ಟಿಗಿತ್ತಿ ಮಾಡಿ ಕೆಲವೊಂದು ಕಂತುಗಳನ್ನು ತೋರಿಸಲಾಗಿತ್ತು. ಆದರೆ ಇದೀಗ ಧಾರಾವಾಹಿ ಮತ್ತಿಷ್ಟು ಟ್ವಿಸ್ಟ್ನೊಂದಿಗೆ ಪ್ರಸಾರವಾಗುತ್ತಿದೆ.
ಈ ಧಾರಾವಾಹಿ ವೀಕ್ಷಕರಿಗೆ ತಿಳಿದಿರುವಂತೆ, ಭಾಗ್ಯಳನ್ನು ಮದುವೆ ಆಗಿರುವುದು ತಾಂಡವ್‍ಗೆ ಇಷ್ಟ ಇಲ್ಲ. ಅಮ್ಮನ ಬಲವಂತಕ್ಕೆ ಮದುವೆ ಆಗಿದ್ದಾನೆ. ಪ್ರತಿ ದಿನ ಭಾಗ್ಯಗೆ ಬೈಯುತ್ತಲೇ ಇರುತ್ತಾನೆ. ಇಬ್ಬರು ಮಕ್ಕಳ ಮುಂದೆಯೂ ಆಕೆಗೆ ಸಿಗಬೇಕಾದ ಮರ್ಯಾದೆ ಕೊಡುವುದಿಲ್ಲ. ತನ್ನ ಅಮ್ಮ ತನಗೆ ತಪ್ಪು ಆಯ್ಕೆ ಮಾಡಿ ಮದುವೆ ಮಾಡಿದ್ಲು ಎಂದು ಮನೆಯಲ್ಲಿ ಜಗಳ ಆಡ್ತಾನೆ. ಈಗ ಅದಕ್ಕೆ ಅಮ್ಮ ಕುಸುಮಳಿಗೆ (Kusuma) ಬೈದರೂ, ಒಂದು ಮಿತಿ ದಾಟದಂತೆ ಎಚ್ಚರವಹಿಸಿರುತ್ತಾನೆ. ತಾಯಿಗೆ ಕೊಡಬೇಕಾದ ಗೌರವವನ್ನು ಯಾವತ್ತೂ ಕಡಿಮೆ ಮಾಡಿರೋಲ್ಲ. ಆದೀಗ ಇದು ಅತಿರೇಕಕ್ಕೆ ಹೋಗಿದ್ದು, ತಾಂಡವ್ ಕಂಠಪೂರ್ತಿ ಕುಡಿದು ಅಮ್ಮನಿಗೆ ಬೈದಿದ್ದು, ಪ್ರೇಕ್ಷಕರಿಗೆ ಯಾಕೋ ಅಸಮಾಧಾನ ಉಂಟು ಮಾಡುವಂತಿದೆ. ಕುಡಿದ ಅಮಲಿನಲ್ಲಿ ಅಮ್ಮನಿಗೆ ಬಾಯಿಗೆ ಬಂದ ಹಾಗೆ ಬೈಯುತ್ತಿದ್ದಾನೆ ತಾಂಡವ್. ಭಾಗ್ಯ, ಕುಸುಮಾ ಎಲ್ಲರೂ ಅಳುತ್ತಿದ್ದರೂ ಅದಕ್ಕೆ ಕ್ಯಾರೇ ಮಾಡದೇ, ಮೈಮೇಲೆ ಪರಿವೇ ಇಲ್ಲದೇ ತಾಂಡವ್ ಬೈಯುತ್ತಲೇ ಇದ್ದಾನೆ. 'ಮಾತನಾಡು ಅಮ್ಮ. ಇನ್ನೊಬ್ಬರ ತಲೆ ಮೇಲೆ ಕೂತು ದಬ್ಬಾಳಿಕೆ ಮಾಡುವುದು. ಅದೇ ತಾನೇ ನಿನಗೆ ಇಷ್ಟ. ಜಗದಾಂಬೆ, ಜಗತ್ ಜನನಿ, ಜಗದೀಶ್ವರಿ, ನನ್ನ ಹೆತ್ತವಳೇ, ನಿನಗ ಒಂದು ಕೋಟಿ ನಮನ. ನಾನು ಪರಮ ಪುಣ್ಯವಂತ. ಜಗತ್ತಿನ ಎಲ್ಲಾ ಪುಣ್ಯಗಳು ನನ್ನ ಪಾಲಾಗಿ, ನಿನ್ನ ಹೊಟ್ಟೆಯಲ್ಲಿ ಜನಿಸಿದೆ. ಕುಸುಮಾಂಬೆ ಧನ್ಯೋಸ್ಮಿ,' ಎಂದು ಕೈ ಮುಗಿದಿದ್ದಾನೆ ಎಂದು ಒಂದೇ ಸಮನೆ ಹೇಳುತ್ತಾನೆ.
ಸೀರಿಯಲ್ ಮದುವೆಗಳಲ್ಲಿ ನಿಜಕ್ಕೂ ಮೂರು ಗಂಟು ಹಾಕ್ತಾರಾ?
ಒಂದು ಹಂತದಲ್ಲಿ ರೇಗಿ ಹೋದ ಕುಸುಮಾ, ನಿನಗೆ ಮಾತನಾಡುವುದೇ ಇಷ್ಟ ತಾನೇ, ಮಾತನಾಡು ಎಂದು ರೇಗುತ್ತಾಳೆ. ಆಗ ಇನ್ನಿಷ್ಟು ಸಿಟ್ಟಿನಿಂದ ತಾಂಡವ್ (Tandav), 'ನಿನ್ನ ನೀನು ಏನ್ ಅಂದುಕೊಂಡಿದ್ದೀಯಾ? ನಿನಗೆ ಜೈಕಾರ ಹಾಕಬೇಕು ಅಷ್ಟೇ. ನನಗೆ ಮಾಡೋಕೆ ಬೇರೆ ಏನೂ ಕೆಲಸ ಇಲ್ಲಾ ಅಂದುಕೊಂಡಿದ್ಯಾ? ನಿನ್ನದೇ ಎಲ್ಲಾ ಫೈನಲ್, ಯಾರಿಂದಲೂ ಬದಲಾಯಿಸಲು ಆಗಲ್ಲ ಎನ್ನೋದೇ ಆಗೋಯ್ತು. ನಿನಗೆ ಒಂದು ದೊಡ್ಡ ಕಿರೀಟ ಹಾಕಿ, ಪಾದಕ್ಕೆ ನಮಸ್ಕಾರ ಮಾಡಬೇಕು. ಎಲ್ಲರು ಜೈ ಜೈ ಅನ್ನಬೇಕು ನಿನಗೆ ಅಲ್ವಾ?' ಎಂದು ಅಮ್ಮಂಗೇ ಬಯ್ಯುತ್ತಾನೆ.
ಭಾಗ್ಯ ಎಷ್ಟೇ ತಡೆದ್ರೂ ತಾಂಡವ್ ಮಾತನಾಡುತ್ತಲೇ ಇರುತ್ತಾನೆ. ಅಮ್ಮನನ್ನು ನೋಡಿ ಇನ್ಮುಂದೆ ನಿನ್ನ ಆಟವೆಲ್ಲ ನಡಿಯಲ್ಲ. ಇದು ನನ್ನ ಮನೆ. ಇಲ್ಲಿ ನಾನು ಹೇಳಿದ ರೀತಿಯೇ ನಡೆಯಬೇಕು. ಇನ್ಮೇಲೆ ನಾನು ಹೇಳುವುದನ್ನು ಕೇಳಿಕೊಂಡು ಸೈಲೆಂಟ್ ಆಗಿ ಬಿದ್ದಿರಬೇಕು ಎಂದು ತಾಂಡವ್ ಜಬರ್ದಸ್ತ್ ಮಾಡುತ್ತಾನೆ. ಇದನ್ನು ನೋಡಿ ನೆಟ್ಟಿಗರು ತಾಂಡವ್ ಪಾತ್ರದ್ದು ಯಾಕೋ ಅತಿಯಾಯ್ತು ಎಂದರೂ, ತಾಂಡವ್ ಆ್ಯಕ್ಟಿಂಗ್ಗೆ (Acting) ಫಿದಾ ಆಗಿದ್ದಾರೆ. ಆ್ಯಕ್ಟಿಂಗ್ ನೋಡಿ ಜೈ ಜೈಕಾರ ಹಾಕುತ್ತಿದ್ದಾರೆ. ಕುಡಿದ ಅಮಲಿನಲ್ಲಿ ತಾಂಡವ್ ಇನ್ನೇನು ಹೇಳ್ತಾನೆ? ಭಾಗ್ಯಲಕ್ಷ್ಮಿ ಏನು ನಿರ್ಧರಿಸುತ್ತಾಳೆ ಎನ್ನೋದು ಮುಂದಿರುವ ಕುತೂಹಲ. ಇದೀಗ ಮಗಳೂ ಅಪ್ಪನ ನಡೆಗೆ ಸಿಟ್ಟಾಗಿದ್ದು, ಇನ್ನಾದರೂ ಅಮ್ಮನ ಪರ ನಿಲ್ತಾಳಾ ಕಾದು ನೋಡಬೇಕು.