ನಾ ನಿನ್ನ ಬಿಡಲಾರೆ ಧಾರಾವಾಹಿಯಲ್ಲಿ ದುರ್ಗಾ ಮತ್ತು ಶರತ್ ದೂರಾಗಿದ್ದು, ಕಥೆ ಹೊಸ ತಿರುವು ಪಡೆದುಕೊಂಡಿದೆ. ವರ್ಷಗಳ ನಂತರ ದುರ್ಗಾಳ ಮಗಳು ಹಿತಾ ದೊಡ್ಡವಳಾಗಿದ್ದು, ಅದ್ಭುತವಾಗಿ ನಟಿಸುತ್ತಿದ್ದ ಬಾಲಕಿ ಮಹಿತಾ ಪಾತ್ರ ಮುಕ್ತಾಯಗೊಂಡಿದೆ. ಇದೀಗ ದೊಡ್ಡವಳಾದ ಹಿತಾ ಪಾತ್ರಕ್ಕೆ ಹೊಸ ನಟಿಯ ಎಂಟ್ರಿಯಾಗಿದ್ದು, ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ.
ನಾ ನಿನ್ನ ಬಿಡಲಾರೆ ಸೀರಿಯಲ್ನಲ್ಲಿ ಇದೀಗ ಮಹತ್ತರ ಟ್ವಿಸ್ಟ್ ಸಿಕ್ಕಿದ್ದು, ದುರ್ಗಾ ಮತ್ತು ಶರತ್ ಬೇರೆ ಬೇರೆ ಆಗಿದ್ದಾರೆ. ಶರತ್ ಹಿತದೃಷ್ಟಿಯಿಂದ ದುರ್ಗಾ ಅನಿವಾರ್ಯವಾಗಿ ಬೇರೆಯಾಗಿದ್ದಾಳೆ. ಬೇರೆ ಆಗುವ ಸಂದರ್ಭದಲ್ಲಿ ಆಕೆ ಗರ್ಭಿಣಿಯಾಗಿದ್ದಳು. ಆ ವಿಷಯವನ್ನು ಪತಿಗೂ ಆಕೆ ತಿಳಿಸಿರಲಿಲ್ಲ. ಇದೀಗ ಅವಳಿಗೆ ಮಗುಹುಟ್ಟಿದ್ದು, ದುರ್ಗಾ ಎಲ್ಲಿ ಹೋದಳು ಎನ್ನೋದನ್ನು ತಿಳಿಯದೇ ಶರತ್ ಅವಳಿಗಾಗಿ ಕಾಯುತ್ತಿದ್ದಾನೆ. ಇಷ್ಟು ದಿನ ಅಕ್ಕನ ಆತ್ಮ ಮತ್ತು ತಂಗಿಯ ಪ್ರೀತಿಯ ಸೆಂಟಿಮೆಂಟ್ ಸ್ಟೋರಿ ತೋರಿಸಲಾಗಿತ್ತು. ಅಂಬಿಕಾಳ ಆತ್ಮ ತನ್ನ ತಂಗಿಗೆ ಮಾತ್ರ ಕಾಣಿಸುತ್ತಿತ್ತು. ಅಕ್ಕ-ತಂಗಿಯ ಈ ರೋಚಕ ಘಟನೆ ಇದೀಗ ಹೊಸ ತಿರುವು ಪಡೆದುಕೊಂಡಿದೆ.
ದೊಡ್ಡವಳಾದ ಮಗಳು
ದುರ್ಗಾ ಮರೆಯಾಗಿ ವರ್ಷಗಳೇ ಕಳೆದಿವೆ. ಆಕೆಯ ಮಗಳು ಐದಾರು ವರ್ಷ ದೊಡ್ಡವಳಾಗಿದ್ದಾಳೆ. ಆದರೆ ಇಲ್ಲಿಯವರೆಗೆ ಈ ಸೀರಿಯಲ್ನಲ್ಲಿ ಹೈಲೈಟ್ ಆಗಿದ್ದು ಪುಟಾಣಿ ಹಿತಾ. ಪುಟಾಣಿ ಹಿತಾ ಪಾತ್ರ ಈಗ ಮುಕ್ತಾಯ ಕಂಡಿದೆ. ಇದಕ್ಕೆ ಕಾರಣ, ಹಿತಾ ದೊಡ್ಡವಳಾಗಿರುವ ಹಿನ್ನೆಲೆಯಲ್ಲಿ ಹೊಸಬಳ ಎಂಟ್ರಿಯಾಗಿದ್ದು, ಹಿತಾ ಪಾತ್ರ ಮಾಡುತ್ತಿದ್ದ ಬಾಲಕಿ ಮಹಿತಾ ಇನ್ಮುಂದೆ ಸೀರಿಯಲ್ನಲ್ಲಿ ಕಾಣಿಸುವುದಿಲ್ಲ. ಇದು ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ನೋವು ಕೊಟ್ಟಿದೆ. ಅಷ್ಟಕ್ಕೂ ನಾ ನಿನ್ನ ಬಿಡಲಾರೆ (Naa Ninna Bidalaare) ಸೀರಿಯಲ್ನಲ್ಲಿ ಎಲ್ಲರ ಗಮನ ಸೆಳೆಯುತ್ತಿರುವ ಬಾಲಕಿ ಎಂದರೆ ಹಿತಾ. ತನ್ನ ಅದ್ಭುತ ನಟನೆಯಿಂದ ಭೇಷ್ ಎನ್ನಿಸಿಕೊಂಡಿದ್ದಾಳೆ ಈ ಪುಟಾಣಿಯ ರಿಯಲ್ ಹೆಸರು ಮಹಿತಾ. ನಾ ನಿನ್ನ ಬಿಡಲಾರೆ ಸೀರಿಯಲ್ನಲ್ಲಿ ಅದ್ಭುತ ನಟನೆಯಿಂದ ಮೋಡಿ ಮಾಡ್ತಿರೋ ಬಾಲಕಿ ಅಷ್ಟೇ ಅದ್ಭುತ ಗಾಯಕಿ ಕೂಡ. ಮಹಿತಾ, ಸ್ಕೂಲ್ ಮತ್ತು ಸೀರಿಯಲ್ ಎರಡನ್ನೂ ಮ್ಯಾನೇಜ್ ಮಾಡುತ್ತಿದ್ದಾಳೆ.
ಅಷ್ಟಕ್ಕೂ, ಕೆಲವರಿಗೆ ಹಾಗೆನೇ. ಟ್ಯಾಲೆಂಟ್ ಎನ್ನುವುದು ಹುಟ್ಟುತ್ತಲೇ ಬಂದು ಬಿಡುತ್ತದೆ. ಹಿಂದಿನ ಜನ್ಮದಿಂದ ಬಂದ ಕಲೆ ಅದು ಎಂದು ಹೇಳುವವರೇ ಹೆಚ್ಚು ಮಂದಿ. ನಟನೆ, ಸಂಗೀತ, ಚಿತ್ರಕಲೆ, ಅಭಿನಯ, ನೃತ್ಯ... ಹೀಗೆ ವಿಭಿನ್ನ ಕ್ಷೇತ್ರಗಳಲ್ಲಿ ಚಿಕ್ಕಪುಟಾಣಿ ಇರುವಾಗಲೇ ಇವರು ಮಾಡುವ ಸಾಧನೆ ನೋಡಿದರೆ ನಿಜಕ್ಕೂ ಅದು ಈ ಜನ್ಮದಂತೂ ಇದ್ದಿರಲಿಕ್ಕೆ ಸಾಧ್ಯವೇ ಇಲ್ಲವೇನೋ ಅನ್ನಿಸಿಬಿಡುವುದು ಉಂಟು. ಅಂಥವಳಲ್ಲಿ ಒಬ್ಬಳು ಈ ಪುಟಾಣಿ ಮಹಿತಾ. ನಾ ನಿನ್ನ ಬಿಡಲಾರೆ ಸೀರಿಯಲ್ ಸೀರಿಯಲ್ನಲ್ಲಿ ಈಕೆಯ ಒಂದೊಂದು ಅಭಿನಯಕ್ಕೂ ವೀಕ್ಷಕರು ಮನಸೋತಿದ್ದಾರೆ. ನಗು, ಅಳು, ತಮಾಷೆ ಏನೇ ಇರಲಿ. ಯಾವುದೇ ಭಾವ ಇರಲಿ ಅದಕ್ಕೆ ತಕ್ಕಂತೆ ನಟಿಸುತ್ತಾಳೆ. ದುಃಖದ ಸನ್ನಿವೇಶದಲ್ಲಿ ವೀಕ್ಷಕರನ್ನು ಅಳಿಸುತ್ತಾಳೆ.
ನಟನೆಯಿಂದ ಮೋಡಿ
ನಟನೆಯಲ್ಲಿ ಮಾತ್ರ ಮಹಿತಾ ಒಂದು ಹೆಜ್ಜೆ ಮುಂದು. ಅಬ್ಬಾ ಎನ್ನುವಂಥ ನಟನೆ ಈಕೆಯದ್ದು. ಇದೀಗ ಅಮ್ಮನ ನೆನಪಿನಲ್ಲಿ, ಅಮ್ಮನಿಗಾಗಿ ಹಂಬಲಿಸುತ್ತಾ, ಒಮ್ಮೆ ಬಂದು ನನ್ನನ್ನು ಹಗ್ ಮಾಡು, ಪ್ಲೀಸ್ ಬಾ ಅಮ್ಮಾ... ನನ್ನನ್ನು ಯಾಕೆ ಬಿಟ್ಟುಹೋದೆ... ಎಂದು ಕೇಳುವ ಪರಿ ಮಾತ್ರ ಬಹುತೇಕ ವೀಕ್ಷಕರು , ನೆಟ್ಟಿಗರ ಕಣ್ಣಲ್ಲಿ ನೀರನ್ನು ತರಿಸಿದ್ದನ್ನು ಕಮೆಂಟ್ನಲ್ಲಿ ಹಾಕಿರುವ ಸಂದೇಶಗಳಿಂದಲೇ ನೋಡಬಹುದು. ಇದೀಗ ಸೀರಿಯಲ್ನಲ್ಲಿ ಹಿತಾ ದೊಡ್ಡವಳಾಗಿರುವ ಕಾರಣ, ಹೊಸಬಳ ಎಂಟ್ರಿಯಾಗಿದ್ದು, ಅದರ ಪ್ರೊಮೋ ಶೇರ್ ಮಾಡಲಾಗಿದೆ. ಯಾರೀ ನಟಿ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.


