ನಟಿ ಮೇಘನಾ ರಾಜ್ ಇತ್ತೀಚಿನ ಸಂದರ್ಶನವೊಂದರಲ್ಲಿ, ಪ್ರೀತಿಪಾತ್ರರನ್ನು ಕಳೆದುಕೊಂಡ ದುಃಖವನ್ನು ಸಾರ್ವಜನಿಕವಾಗಿ ಪ್ರದರ್ಶಿಸಿದ್ದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಕಣ್ಣೀರು ಹಣವಾಗಿ ಬದಲಾಯಿತು ಎಂದಿದ್ದಾರೆ.
ಬೆಂಗಳೂರು (ಫೆ.21): "ಪ್ರೀತಿಗೆ ನಾವು ತೆರುವ ಬೆಲೆಯೇ ದುಃಖ" – ಈ ಒಂದು ವಾಕ್ಯದಲ್ಲಿ ನಟಿ ಮೇಘನಾ ರಾಜ್ ತಮ್ಮ ಬದುಕಿನ ಅತಿದೊಡ್ಡ ಶೋಕವನ್ನು ಕಟ್ಟಿಕೊಟ್ಟಿದ್ದಾರೆ. ಪ್ರೀತಿಪಾತ್ರರನ್ನು ಕಳೆದುಕೊಂಡಾಗ ಅನುಭವಿಸುವ ನೋವು, ಅವರ ಮೇಲೆ ನಾವು ಇಟ್ಟಿದ್ದ ಪ್ರೀತಿಗೆ ಪ್ರತಿಯಾಗಿ ಸಲ್ಲಿಸುವ 'ಬೆಲೆ' ಎಂಬುದು ಮೇಘನಾ ಅವರ ಮಾತು. ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು ತಮ್ಮ ಖಾಸಗಿ ದುಃಖ ಮತ್ತು ಸಾಮಾಜಿಕ ಜಾಲತಾಣಗಳ ಕ್ರೂರತೆಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ಚಿರಂಜೀವಿ ಸರ್ಜಾ ಅವರ ಸಾವಿನ ಸಮಯದಲ್ಲಿ ಮೇಘನಾ ಅನುಭವಿಸಿದ ನೋವು ಇಡೀ ನಾಡಿಗೆ ತಿಳಿದಿದೆ. ಆದರೆ, ಆ ದುಃಖವನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದರ ಬಗ್ಗೆ ಈಗ ಅವರಿಗೆ ಭಿನ್ನಾಭಿಪ್ರಾಯವಿದೆ. "ಅವತ್ತಿನ ಆ ದುಃಖವೇನಾದರೂ ಈಗ ಬಂದಿದ್ದರೆ, ನಾನು ಖಂಡಿತವಾಗಿಯೂ ಅದನ್ನು ಸಾರ್ವಜನಿಕವಾಗಿ ತೋರಿಸಿಕೊಳ್ಳುತ್ತಿರಲಿಲ್ಲ. ಸೆಲೆಬ್ರಿಟಿ ಎಂಬ ಕಾರಣಕ್ಕೆ ನಾವು ದೊಡ್ಡ ಬೆಲೆ ತೆರಬೇಕಾಗುತ್ತದೆ. ಸೋಶಿಯಲ್ ಮೀಡಿಯಾ ಯುಗದಲ್ಲಿ ನಮ್ಮ ಕಣ್ಣೀರು ಕೆಲವರಿಗೆ 'ಹಣ'ವಾಗಿ ಬದಲಾಗುತ್ತದೆ," ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಚಿರು ಹೆಸರಿನ 'ಹೆಡ್‌ಲೈನ್' ನನಗೆ ಬೇಕಿಲ್ಲ
ತಮ್ಮ ವೈಯಕ್ತಿಕ ನೋವನ್ನು ಕೆಲವರು ತಮ್ಮ 'ಸ್ಟಾರ್‌ಡಮ್' ಬೆಳೆಸಿಕೊಳ್ಳಲು ಬಳಸಿಕೊಂಡಿದ್ದನ್ನು ಮೇಘನಾ ನೆನಪಿಸಿಕೊಂಡಿದ್ದಾರೆ. "ನನ್ನ ಅಥವಾ ನನ್ನ ಪತಿಯ ಹೆಸರನ್ನು ಬಳಸಿ ಬೆಳೆಯುವವರ ಸಂಖ್ಯೆ ಹೆಚ್ಚಾಯಿತು. ವ್ಯೂಸ್, ಲೈಕ್ಸ್ ಮತ್ತು ಹಣಕ್ಕಾಗಿ ಚಿರು ಹೆಸರನ್ನು ಬಳಸಿಕೊಳ್ಳುವುದು ನನಗೆ ಇಷ್ಟವಿಲ್ಲ. ಅದಕ್ಕಾಗಿಯೇ ನಾನು ಈಗ ಯಾವುದೇ ಸಿನಿಮಾದ ಸಂದರ್ಶನವಿರಲಿ, ಚಿರು ಬಗ್ಗೆ ಕೇಳಬೇಡಿ ಎಂದು ಮೊದಲೇ ಹೇಳುತ್ತೇನೆ. ನನ್ನ ಸಿನಿಮಾದ ಹೆಡ್‌ಲೈನ್ ಚಿರು ಹೆಸರಿನಿಂದ ಇರಬಾರದು, ಬದಲಾಗಿ ಅವರ ಹೆಸರನ್ನು ಯಾವುದಾದರೂ ಒಳ್ಳೆಯ ಕೆಲಸಕ್ಕೆ ಮಾತ್ರ ಬಳಸಬೇಕು," ಎಂದು ಅವರು ಖಡಕ್ ಆಗಿ ಹೇಳಿದ್ದಾರೆ.
ನಾನು ಯಾರ ಹೆಸರನ್ನು ಹೇಳಲು ಈಗ ಬಯಸುತ್ತಿಲ್ಲ. ಅದರೆ, ಜನರು ಚಿರಂಜೀವಿ ಸರ್ಜಾ ಹೆಸರನ್ನು ಬಳಸಿಕೊಂಡಿದ್ದಾರೆ ಅನ್ನೋದಂತೂ ಸತ್ಯ. ಯಾರ ಮೇಲೂ ಬೆರಳು ತೋರಿಸಿ ಮಾತನಾಡುತ್ತಿಲ್ಲ. ಆದರೆ, ಅವರು ಈ ಕೆಲಸ ಮಾಡಿದ್ದಾರೆ ಅನ್ನೋದು ಗೊತ್ತಿದೆ. ನನ್ನ ಪ್ರೀತಿಪಾತ್ರರೇ ಇದನ್ನು ಮಾಡಿದ್ದಾರೆ. ನನಗೆ ಇದು ಇಷ್ಟವಾಗಲಿಲ್ಲ. ಆದರೆ, ಇದನ್ನು ಈಗ ಹೇಳಿ ಏನು ಸಾಧಿಸುತ್ತೇನೆ ಅನ್ನೋದು ಕೂಡ ಗೊತ್ತಿಲ್ಲ. ನಾನು ಯಾರಿಂದ ಇದನ್ನು ನಿರೀಕ್ಷೆಯೇ ಮಾಡಿರಲಿಲ್ಲವೋ ಅವರೇ ಇದನ್ನು ಮಾಡಿದ್ದಾರೆ. ಅವರ ನಿಜಬಣ್ಣ ಈ ಸಮಯದಲ್ಲೇ ಗೊತ್ತಾಗಿತ್ತು ಎಂದು ಮೇಘನಾ ರಾಜ್ ಹೇಳಿದ್ದಾರೆ.
ಸ್ನೇಹಕ್ಕಾಗಿ ಬಿಚ್ಚಿಟ್ಟ ಮಾತು
ಸಾಮಾನ್ಯವಾಗಿ ಸಂದರ್ಶನಗಳಲ್ಲಿ ಪತಿಯ ಬಗ್ಗೆ ಮಾತನಾಡಲು ನಿರಾಕರಿಸುವ ಮೇಘನಾ, ಈ ಬಾರಿ ತಮ್ಮ ಆಪ್ತ ಗೆಳತಿಯ ಕಾರಣಕ್ಕಾಗಿ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ. ದುಃಖವನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದಕ್ಕಿಂತ, ಅದನ್ನು ಖಾಸಗಿಯಾಗಿ ಅನುಭವಿಸುವುದೇ ಹೆಚ್ಚು ಘನತೆವೆತ್ತ ಕೆಲಸ ಎಂಬುದು ಮೇಘನಾ ಅವರ ಮಾತು.



