Maryade Ramanna: ಸ್ಟಾರ್ ಸುವರ್ಣ ವಾಹಿನಿಯಲ್ಲಿ ಶೀಘ್ರದಲ್ಲಿ ಶುರುವಾಗಲಿರುವ ‘ಮರ್ಯಾದೆ ರಾಮಣ್ಣ’ ಧಾರಾವಾಹಿಯ ಹೊಸ ಪ್ರೊಮೋ ರಿಲೀಸ್ ಆಗಿದ್ದು, ಬ್ರಹ್ಮಚಾರಿ ಮತ್ತು ಸಿಡಿ ಮದ್ದು ಜೊತೆಯಾದ್ರೆ ಹೇಗೆ ಸದ್ದು ಮಾಡಬಹುದು ಎನ್ನುವುದನ್ನು ನೀವೇ ಶೀಘ್ರದಲ್ಲಿ ಕಣ್ತುಂಬಿಕೊಳ್ಳಬಹುದು.
ಇನ್ನೊಂದು ವಾರದಲ್ಲಿ ಕಿರುತೆರೆಗೆ ಎಂಟ್ರಿ ಕೊಡಲಿದ್ದಾರೆ ‘ಮರ್ಯಾದೆ ರಾಮಣ್ಣ’
ಸ್ಟಾರ್ ಸುವರ್ಣ ವಾಹಿನಿಯು ಈಗಾಗಲೇ ಟೀಸರ್ ಬಿಟ್ಟು ವೀಕ್ಷಕರ ಕುತೂಹಲ ಹೆಚ್ಚಿಸಿದ್ದ ‘ಮರ್ಯಾದೆ ರಾಮಣ್ಣ’ ಧಾರಾವಾಹಿಯ ಹೊಸ ಪ್ರೊಮೋ ಇದೀಗ ರಿಲೀಸ್ ಆಗಿದ್ದು, ಶೀಘ್ರದಲ್ಲೆ ಶುರುವಾಗಲಿರುವ ಧಾರಾವಾಹಿಯ ಜಬರ್ ದಸ್ತ್ ಪ್ರೊಮೋ ನೋಡಿ ವೀಕ್ಷಕರು ಸಖತ್ ಖುಷಿಯಾಗಿದ್ದಾರೆ. ಸಿನಿಮಾ ರೇಂಜಿಗೆ ಬಂದಿರುವ ಪ್ರೋಮೋವನ್ನು ವಾಹಿನಿಯು ‘ಅಮ್ಮನ ಮಾತನ್ನು ಪಾಲಿಸೋ ಕಟ್ಟಾ ಬ್ರಹ್ಮಚಾರಿ ರಾಮಣ್ಣ, ಮುದ್ದಾಗಿರೋ ಸಿಡಿಮದ್ದು ಐಶ್ವರ್ಯ ಇವರಿಬ್ರು ಒಂದಾಗೋ...ಹೊಸ ಕಥೆ ಶುರುವಾಗ್ತಿದೆ..... "ಮರ್ಯಾದೆ ರಾಮಣ್ಣ" ಎನ್ನುವ ಶೀರ್ಷಿಕೆ ಕೊಟ್ಟು ಪ್ರಸಾರ ಮಾಡಿದೆ. ಹಾಗಾಗಿ ಸಖತ್ ಇಂಟ್ರೆಸ್ಟಿಂಗ್ ಆಗಿ ಬರಲಿದೆ ಧಾರಾವಾಹಿ ಎನ್ನುವುದು ಎಲ್ಲರಿಗೂ ಗೊತ್ತಾಗಿದೆ.

ಧಾರಾವಾಹಿಯ ಕಥೆ ಏನು?
ರಾಮಣ್ಣ ಕುಸ್ತಿ ಪಟು, ಅಖಾಡಕ್ಕೆ ಯಾರೆ ಇಳಿದರೂ ಸಹ ಅವರನ್ನು ಸೋಲಿಸಿ, ತೊಡೆ ತಟ್ಟಿ ನಿಲ್ಲುವ ಗಟ್ಟಿಗ ರಾಮಣ್ಣ. ಆದರೆ ಅಮ್ಮನ ಮಾತಿಗೆ ಕಟ್ಟು ಬಿದ್ದು, ಜೀವನ ಪೂರ್ತಿ ಬ್ರಹ್ಮಚಾರಿಯಾಗಿ ಉಳಿಯುವ ಪ್ರಮಾಣ ಮಾಡಿದ್ದಾನೆ ಈತ. ಆದರೆ ಈಗ ಅಮ್ಮನ ಮಾತು ಮೀರದ ಮರ್ಯಾದ ರಾಮಣ್ಣನ ಜೀವನಕ್ಕೆ ಬಿರುಗಾಳಿಯಂತೆ ಬರುತ್ತಿದ್ದಾಳೆ ಶ್ರೀಮಂತ ಹುಡುಗಿ ಐಶ್ವರ್ಯ. ಈಕೆ ನೋಡೋದಕ್ಕೆ ಮಾತ್ರ ಮುದ್ದು, ಆದರೆ ಸ್ವಭಾವ ಮಾತ್ರ ಸಿಡಿ ಮದ್ದು. ಮದುವೆಯಾಗೋದೆ ಇಲ್ಲ ಎನ್ನುವ ರಾಮಣ್ಣನ ಜೀವನದಲ್ಲಿ ಈ ಸುಂಟರಗಾಳಿ ಬಂದ್ರೆ ಹೇಗಿರುತ್ತೆ ಅನ್ನೋದೆ ಧಾರಾವಾಹಿಯ ಕಥೆ. ಅಂದ ಹಾಗೆ ಈ ಧಾರಾವಾಹಿ ಇದೇ ಮೇ 25ರಿಂದ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.
ಧಾರಾವಾಹಿಯ ನಾಯಕ-ನಾಯಕಿ ಯಾರು?
ಕಿರುತೆರೆಯಲ್ಲಿ ಹಲವಾರು ವರ್ಷಗಳಿಂದ ವಿವಿಧ ಧಾರಾವಾಹಿಗಳಲ್ಲಿ ನಟಿಸಿ, ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದ ಜೊತೆಗೆ ಚಂದನವನದಲ್ಲೂ ಮಿಂಚಿದ ನಟ ಚೇತನ್ ಚಂದ್ರ ಈ ಧಾರಾವಾಹಿಯಲ್ಲಿ ನಾಯಕರಾಗಿ ನಟಿಸುತ್ತಿದ್ದಾರೆ. ಚೇತನ್ 6 ವರ್ಷಗಳ ಬಳಿಕ ಮತ್ತೆ ಈ ಧಾರಾವಾಹಿ ಮೂಲಕ ಕಿರುತೆರೆಗೆ ಕಮ್ ಬ್ಯಾಕ್ ಆಗ್ತಿದ್ದಾರೆ. ಈ ಹಿಂದೆ ‘ಸತ್ಯಂ ಶಿವಂ ಸುಂದರಂ’, ‘ಗಿರಿಜಾಕಲ್ಯಾಣ’ ಹಾಗೂ’ ನಾನು ನನ್ನ ಕನಸು’ ಧಾರವಾಹಿಯಲ್ಲಿ ನಾಯಕನಾಗಿ ನಟಿಸಿದ್ದರು. ಇನ್ನು ಧಾರಾವಾಹಿಯಲ್ಲಿ ನಾಯಕಿಯಾಗಿ ಕನ್ನಡ ಕಿರುತೆರೆಯಲ್ಲಿ ‘ ದೇವಿ ಮಹಾತ್ಮೆ’ ಧಾರಾವಾಹಿಯಲ್ಲಿ ದೇವಿಯಾಗಿ, ಕಾಳಿಯಾಗಿ, ಪಾರ್ವತಿಯ ಪಾತ್ರದ ಮೂಲಕ ಭಕ್ತಿಯ ಸುರಿಮಳೆ ಹರಿಸಿದ ನಟಿ ‘ಜೀವಿತಾ ವಷಿಷ್ಠ ಅಭಿನಯಿಸುತ್ತಿದ್ದಾರೆ. ದೇವಿ ಪಾತ್ರದಲ್ಲಿ ನಟಿಸುತ್ತಿದ್ದವರು, ಈ ಬಾರಿ ಮಾಡರ್ನ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ರಾಮಣ್ಣನ ತಾಯಿ ಪಾತ್ರದಲ್ಲಿ ವೀಣಾ ಸುಂದರ್ ನಟಿಸುತ್ತಿದ್ದಾರೆ.


