Asianet Suvarna News Asianet Suvarna News

ಕೊರೋನಾ ಮಧ್ಯೆ ಬಂತು ಒಂದು ಸರ್ಪ್ರೈಸ್ ; ಮನೆಮನೆಗೂ ಮತ್ತೊಮ್ಮೆ ಮಾಲ್ಗುಡಿ ಡೇಸ್

ಮಾಲ್ಗುಡಿ ಡೇಸ್ ಈ ಹೆಸರು ಕೇಳುತ್ತಲೇ ಪ್ರತಿಯೊಬ್ಬ ಕನ್ನಡಿಗನೂ ರೋಮಾಂಚಿತನಾಗುತ್ತಾನೆ ಅಂದ್ರೆ ತಪ್ಪಲ್ಲ ಅದಕ್ಕೆ ಕಾರಣ ಈ ಅದ್ಭುತವನ್ನು ಸೃಷ್ಟಿಸಿದ್ದು  ಕರ್ನಾಟಕದ ಹೆಮ್ಮೆ ಶಂಕರ್ ನಾಗ್ . ಮಾಲ್ಗುಡಿ ಡೇಸ್ ಪ್ರಸಾರವಾಗುವ ಸಮಯಕ್ಕೆ ಮನೆಮಂದಿಯಲ್ಲಾ ಒಟ್ಟಿಗೆ ಕೂತು ನೋಡುವ ಕಾಲವೊಂದಿತ್ತು ಈಗ ಆ ಕಾಲ ಮತ್ತೊಮ್ಮೆ  ಸಮೀಪಿಸಿದೆ . 

Malgudi Days makes its way to Kannada tv during Lockdown
Author
Bangalore, First Published May 4, 2020, 3:41 PM IST

ಸದ್ಯದಲ್ಲೇ ಜೀ ಕನ್ನಡ ವಾಹಿನಿಯಲ್ಲಿ ಮಾಲ್ಗುಡಿ ಡೇಸ್ ಪ್ರಸಾರವಾಗಲಿದೆ . ಸರಿಗಮಪ , ಡ್ರಾಮಾ ಜೂನಿಯರ್ಸ್ , ವೀಕ್ ಎಂಡ್ ವಿಥ್ ರಮೇಶ್ , ಕಾಮಿಡಿಕಿಲಾಡಿಗಳು , ಜೊತೆಜೊತೆಯಲಿ , ಗಟ್ಟಿಮೇಳ ಹೀಗೆ ಅನೇಕ ಜನಪ್ರಿಯ ಧಾರವಾಹಿ ಮತ್ತು ಕಾರ್ಯಕ್ರಮಗಳ ಮೂಲಕ ಈಗಾಗಲೇ ಜೀ ವಾಹಿನಿ ಕರ್ನಾಟಕದ ಜನತೆಯನ್ನು ರಂಜಿಸುತ್ತಿದೆ.  ಇದೀಗ ಶಂಕರ್ ನಾಗ್ ಅವರ ಈ ಸರಣಿ ಧಾರಾವಾಹಿಯನ್ನು ಪ್ರಸಾರ ಮಾಡುತ್ತಿರುವುದು ಮತ್ತೊಂದು ಹೆಗ್ಗಳಿಕೆಗೆ ಪಾತ್ರವಾಗಿರುವುದಲ್ಲದೆ ಆ ದಿನಗಳನ್ನು ನೆನಪಿಸುತ್ತಿದೆ . 

29 ವರ್ಷಗಳ ನಂತರ ತೆರೆ ಮೇಲೆ 'ಮಾಲ್ಗುಡಿ ಡೇಸ್' ಸ್ವಾಮಿ; ಇಂದು ರಾತ್ರಿ 9 ಕ್ಕೆ ಮಿಸ್ ಮಾಡ್ಲೇಬೇಡಿ!

ಮಾಲ್ಗುಡಿ ಡೇಸ್ ಆರ್. ಕೆ. ನಾರಾಯಣ್ ಅವರ ಸಣ್ಣ ಕಥೆಗಳ ಸಂಕಲನ. ಎಲ್ಲಾ ಕಥೆಗಳೂ ದಕ್ಷಿಣ ಭಾರತದಲ್ಲಿನ 'ಮಾಲ್ಗುಡಿ' ಎನ್ನುವ ಕಾಲ್ಪನಿಕ ಹಳ್ಳಿಯಲ್ಲಿ ನಡೆಯುತ್ತವೆ. ಇದನ್ನು ಸರಣಿ ಧಾರಾವಾಹಿಯಾಗಿಸಿದ್ದು ಕನ್ನಡ ಚಿತ್ರರಂಗದ ಹೆಸರಾಂತ ನಟ ಹಾಗು ನಿರ್ದೇಶಕರಾದ ಶಂಕರ್ ನಾಗ್ ಅವರು .  ಇದು ಜನಪ್ರಿಯಗೊಂಡು ಇತಿಹಾಸ ನಿರ್ಮಿಸಿದ ರೀತಿ ಕನ್ನಡಿಗರಾದ ನಮಗೆ ಹೆಮ್ಮೆಯ ಸಂಗತಿಯೇ ಸರಿ. ಶಂಕ್ರಣ್ಣನನ ಈ ಕನಸಿನ ಕೂಸು ಅಂದಿಗೂ , ಇಂದಿಗೂ , ಎಂದೆಂದಿಗೂ ಹಿಟ್ ಅಂತ ನಿರೂಪಿಸುತ್ತಲೇ ಇದ್ದಾರೆ ವೀಕ್ಷಕರು .

ವಿಶೇಷವೆಂದರೆ , ಈ ಸರಣಿ ಧಾರಾವಾಹಿಯ ಎಲ್ಲಾ ಭಾಗಗಳನ್ನು ಚಿತ್ರೀಕರಿಸಿರುವುದು ಮಲೆನಾಡ ಹೆಬ್ಬಾಗಿಲು  ಶಿವಮೊಗ್ಗದ ಆಗುಂಬೆಯಲ್ಲಿ. ಇದಕ್ಕೆ ಎಲ್. ವೈದ್ಯನಾಥನ್ ಅವರು ಸಂಗೀತ ನೀಡಿದ್ದು, ಪದಮ್ ರಾಗ್ ಫಿಲಂಸ್ ಸಂಸ್ಥೆಯ ಟಿ.ಎಸ್. ನರಸಿಂಹನ್ ಅವರು ನಿರ್ಮಿಸಿದ್ದಾರೆ.

ಹಿಂದಿ ಭಾಷೆಯಲ್ಲಿದ್ದ ಮಾಲ್ಗುಡಿ ಡೇಸ್ ಈಗ ಕನ್ನಡ ಭಾಷೆಯ್ಲಲೂ ಪ್ರಸಾರವಾಗುತ್ತಿರುವುದು ಅತ್ಯಂತ ಖುಷಿಯ ಸಂಗತಿಯಾಗಿದೆ. ಕನ್ನಡದಲ್ಲಿ ಡಬ್ಬಿಂಗ್ ಪರ , ವಿರೋಧ ಹೋರಾಟ , ಚರ್ಚೆಗಳು ನಡೆಯುತ್ತಿರುವಾಗಲೇ ಇಂಥದ್ದೊಂದು ಬೆಳವಣಿಗೆ ಅಚ್ಚರಿ ಮೂಡಿಸಿದೆ . ಇಂತಹ ಮಾಸ್ಟರ್ ಪೀಸ್ ಸರಣಿಯನ್ನು ಕನ್ನಡಲ್ಲೇ ಕಣ್ಣುತುಂಬಿಕೊಳ್ಳಲು ಕೋಟ್ಯಂತರ ಕನ್ನಡಿಗರು ತುದಿಗಾಲಲ್ಲಿ ಕಾಯುತ್ತಿದ್ದಾರೆ ಎಂದರೆ ಸುಳ್ಳಲ್ಲ .. 

Malgudi Days makes its way to Kannada tv during Lockdown

ಈ ಸರಣಿ ಧಾರಾವಾಹಿಯಲ್ಲಿ ಕನ್ನಡದ ಮೇರು ನಟರುಗಳಾದ ಡಾ .ವಿಷ್ಣುವರ್ಧನ್ , ಅನಂತ್ ನಾಗ್ , ಮಾಸ್ಟರ್ ಮಂಜುನಾಥ್ , ರಮೇಶ್ ಭಟ್ , ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ದಿವಂಗತ ಗಿರೀಶ್ ಕಾರ್ನಾಡ್ , ಪದ್ಮಿನಿ ಶಿರಿಶ್ , ಅರುಂಧತಿನಾಗ್ , ಡೇವಿನ್ ಭೋಜನಿ ರಘುರಾಮ್ ಸೀತಾರಾಮ್ ಮತ್ತು ಬಿ ಜಯಶ್ರೀ ಅವರ ಅಮೋಘ ನಟನೆಯನ್ನು ಇದರಲ್ಲಿ ನಾವು ಕಾಣಬಹುದು . 

ಚಿತ್ರ ವಿಮರ್ಶೆ: ಮಾಲ್ಗುಡಿ ಡೇಸ್

ಮಾಲ್ಗುಡಿ ಡೇಸ್ ಈ ಒಂದು ಸರಣಿ ಒಟ್ಟು 39 ಸಂಚಿಕೆಗಳಿದ್ದು ದೂರದರ್ಶನ ವಾಹಿನಿಯು ಪ್ರಸಾರ ಮಾಡುತ್ತಿತ್ತು . ಇತ್ತೀಚಿಗೆ ಅಮೆಜಾನ್ ಪ್ರೈಮ್ ನಲ್ಲೂ ಇದು ಬಿಡುಗಡೆಯಾಗಿತ್ತು. ಕೊರೋನಾ ವೈರಸ್ ಕಾಟದಿಂದ ಲಾಕ್ ಡೌನ್ ಆಗಿರುವುದರಿಂದ ದೂರದರ್ಶನ ಸೇರಿದಂತೆ ಅನೇಕ ಖಾಸಗಿ ಮನರಂಜನಾ ವಾಹಿನಿಗಳು ಕೂಡ ಹಳೆಯ ಧಾರವಾಹಿ ಮತ್ತು ಕಾರ್ಯಕ್ರಮಗಳನ್ನು ಮರುಪ್ರಸಾರ ಮಾಡುತ್ತಿವೆ. ಈಗಾಗಲೇ ರಾಮಾಯಣ ಮರುಪ್ರಸಾರದ್ಲಲೂ ಜನರ ಮನಸ್ಸನ್ನು ಗೆದ್ದು ದಾಖಲೆ ನಿರ್ಮಿಸಿರುವುದು ಇತಿಹಾಸ . 

ಜೀ ಕನ್ನಡ ವಾಹಿನಿಯು ಮಾಲ್ಗುಡಿ ಡೇಸ್ ಪ್ರಸಾರ ಮಾಡುವ ಬಗ್ಗೆ ಪ್ರೋಮೋ ಬಿಡುಗಡೆ ಮಾಡಿದ್ದು ಮೂಲಗಳ ಪ್ರಕಾರ ಇದೇ ತಿಂಗಳು 11 ರಿಂದ ಪ್ರಸಾರಗೊಳ್ಳಲಿದೆ ಆದರೆ ದಿನಾಂಕ ಇನ್ನೂ ಅಧಿಕೃತವಾಗಿ ಘೋಷಣೆಯಾಗಬೇಕಿದೆ . 

ಇದೇ ಶೀರ್ಷಿಕೆಯಡಿ ಚಿನ್ನಾರಿಮುತ್ತ ವಿಜಯ್ ರಾಘವೇಂದ್ರ ಅವರು ಅಭಿನಯಿಸದ್ದ ಚಿತ್ರವೊಂದು ಇತ್ತೀಚಿಗೆ ಬಿಡುಗಡೆಯಾಗಿ ಜನರ ಪ್ರಶಂಸೆ ಗಳಿಸಿದ್ದು ನಾವಿಲ್ಲಿ ಸ್ಮರಿಸಬಹುದು.

"

 

Follow Us:
Download App:
  • android
  • ios