- ಚಿತ್ರ: ಮಾಲ್ಗುಡಿ ಡೇಸ್ 

 ತಾರಾಗಣ: ವಿಜಯ್‌ ರಾಘವೇಂದ್ರ, ಗ್ರೀಷ್ಮಾ ಶ್ರೀಧರ್‌, ಅರ್ಜುನ್‌ ಕಾಪಿಕಾಡ್‌, ಧನರಾಜ್‌, ಗೋಪಿನಾಥ್‌ ಭಟ್‌, ರೂಪೇಶ್‌, ತೇಜಸ್ವಿನಿ, ನವಿತಾ ಜೈನ್‌, ರಿಚ್ಚರ್ಡ್‌ ಲೂಯಿಸ್‌

ನಿರ್ದೇಶನ: ಕಿಶೋರ್‌ ಮೂಡಬಿದ್ರೆ, ನಿರ್ಮಾಣ: ರತ್ನಾಕರ್‌ ಕಾಮತ್‌, ಛಾಯಾಗ್ರಾಹಣ: ಉದಯ್‌ ಲೀಲಾ, ಸಂಗೀತ: ಗಗನ್‌ ಖಡೇರಿಯಾ

ನಿತ್ಯ ಸುರಿಯುವ ಮಳೆ, ಹಸಿರಿನ ಸೊಬಗು, ಅಲ್ಲೊಂದು ಶಾಲೆ. ಅಲ್ಲಿ ಓದುವ ಮಕ್ಕಳು. ಅವರ ಚೇಷ್ಟೆ- ಚಿಲಿಪಿಲಿ. ಬರವಣಿಗೆಯಲ್ಲಿ ಆಸಕ್ತಿ ತೋರುವ ಹುಡುಗ. ತನ್ನ ವಿದ್ಯಾರ್ಥಿಯ ಸಾಹಿತ್ಯ ಅಭಿರುಚಿಯನ್ನು ಮೆಚ್ಚಿ ಪ್ರೋತ್ಸಾಹಿಸುವ ಶಿಕ್ಷಕಿ, ಮಾತು ಬಾರದ ಹುಡುಗಿ ಜತೆ ಸಾಹಿತ್ಯ ವಿದ್ಯಾರ್ಥಿಯ ಮೊದಲ ಪ್ರೇಮ.

ಈ ಪ್ರೀತಿಗೆ ತಡೆಯಾಗಿ ನಿಲ್ಲುವ ಒಂದು ದುರಂತ. ಇವೆಲ್ಲವನ್ನು ನಿರ್ದೇಶಕರು ಎಷ್ಟುಆಪ್ತವಾಗಿ ಕಲ್ಪನೆ ಮಾಡಿಕೊಂಡಿದ್ದರೋ ಅವರಷ್ಟೆಚಿತ್ರದ ಛಾಯಾಗ್ರಾಹಕನ ಕಣ್ಣು ಕೂಡ ಪ್ರತಿ ದೃಶ್ಯದಲ್ಲೂ ಜೀವಂತವಾಗಿರಿಸಿದೆ. ಹಾಗೆ ಇಡೀ ಕತೆಗೆ ಛಾಯಾಗ್ರಾಹಕ ಹಾಗೂ ನಿರ್ದೇಶಕ ಎರಡು ಕಣ್ಣಾಗಿ ‘ಮಾಲ್ಗುಡಿ ಡೇಸ್‌’ ಚಿತ್ರವನ್ನು ನೋಡುಗನಿಗೆ ಆತ್ಮೀಯವಾಗಿಸುತ್ತಾರೆ.

#MovieReview: ಈ ಜಂಟಲ್‌ಮನ್ ನಿಜಕ್ಕೂ ` ನಂಬರ್ ಒನ್..!'

ಕಳೆದುಕೊಂಡಿದ್ದರ ಮಹತ್ವ ಗೊತ್ತಾಗುವುದು ನಾವು ಅದನ್ನು ಹುಡುಕಲು ಹೊರಟಾಗ. ಹಾಗೆ ಹುಡುಕುತ್ತಲೇ ಮನಸ್ಸಿಗೆ ನಾಟುವಂತೆ ಅಭಿನಯಿಸಿರುವುದು ವಿಜಯ್‌ ರಾಘವೇಂದ್ರ. ಜತೆಗೆ ಚಿತ್ರದ ಹಾಡುಗಳು. ‘ಮಾಲ್ಗುಡಿ ಡೇಸ್‌’ ನೋಡಬಹುದು ಎನ್ನುವುದಕ್ಕೆ ಇವಿಷ್ಟುಕಾರಣಗಳು ಸಾಕು. ನೆನಪುಗಳು ಎಲ್ಲರನ್ನು, ಎಲ್ಲ ಕಾಲಕ್ಕೂ ಕಾಡುವಂತಹುದು. ಆ ನೆನಪುಗಳ ನೆರಳಿನಲ್ಲಿ ನಿರ್ದೇಶಕ ಗಟ್ಟಿಯಾದ ಕತೆ ಹೇಳಿದ್ದಾರೆ.

‘ಹಾವು ಹಿಡಿದುಕೊಂಡು ಬಂದಿದ್ದಿಯಲ್ಲೋ, ಏನೂ ಆಗಲ್ಲ ಕಣೋ. ಇದು ಹಸಿರಾವು, ಹಸಿರಾದರೂ- ಕೇಸರಿಯಾದರೂ ಹಾವು ಕಚ್ಚುತ್ತೆ ಕಣೋ’ ಹೀಗೊಂದು ಸಂಭಾಷಣೆ ಚಿತ್ರದಲ್ಲಿದೆ. ಈ ಸಂಭಾಷಣೆಗೆ ತಕ್ಕಂತೆ ಆ ಊರಿನಲ್ಲಿ ಒಂದಿಷ್ಟುಘಟನೆಗಳು ನಡೆಯುತ್ತಿರುತ್ತವೆ.

ನಿರ್ದೇಶಕನೊಬ್ಬ ತಾನು ನಂಬಿರುವ ಕಲೆ, ಮಾಧ್ಯಮದ ಮೂಲಕ ಪ್ರಸ್ತುತ ವಿದ್ಯಾಮಾನಗಳಿಗೆ ಮುಖಾಮುಖಿ ಆಗುತ್ತ ತನ್ನ ನಿಲುವು ಹೇಳಲು ಸಾಧ್ಯ ಎನ್ನುವುದನ್ನು ಕಿಶೋರ್‌ ಮೂಡಬಿದ್ರೆ ಅವರು ಚೆನ್ನಾಗಿ ಅರ್ಥ ಮಾಡಿಕೊಂಡು ಅದನ್ನು ಸೂಕ್ಷ್ಮವಾಗಿಯೇ ಕತೆಯಲ್ಲಿ ಜಾರಿ ಮಾಡಿದ್ದಾರೆ.

ಮಾಲ್ಗುಡಿ ಎನ್ನುವ ಪುಟ್ಟಊರು. ಅಲ್ಲಿನ ಶಾಲೆಯಲ್ಲಿ ಓದುತ್ತಿರುವ ಲಕ್ಷ್ಮಿ ನಾರಾಯಣ. ಅವನಿಗೆ ಓದಿನ ಜತೆಗೆ ಕವನ ಬರೆಯುವ ಆಸಕ್ತಿ. ಅದನ್ನು ಪ್ರೋತ್ಸಾಹಿಸುವ ಆತನ ಶಾಲಾ ಶಿಕ್ಷಕಿ. ಅದೇ ಶಾಲೆಯ ಲಿನೇಟ, ಲಕ್ಷ್ಮಿನಾರಾಯಣ ಗೆಳæತಿ. ಶಾಲೆಯಂಗಳದ ಈ ಸ್ನೇಹ ಪ್ರೀತಿ ಎನಿಸಿಕೊಳ್ಳುತ್ತದೆ. ಎಲ್ಲವೂ ಚೆನ್ನಾಗಿದ್ದಾಗಲೇ ಒಂದು ದುರಂತ ನಡೆಯುತ್ತದೆ. ಆ ದುರಂತದ ಬೆಂಕಿಯಿಂದ ತಪ್ಪಿಸಿಕೊಳ್ಳಬೇಕಾದ ಅನಿವಾರ್ಯತೆ ಲಕ್ಷ್ಮಿನಾರಾಯಣನದ್ದು. ಅವನು ಊರು ಬಿಡುತ್ತಾನೆ.

ಚಿತ್ರ ವಿಮರ್ಶೆ: ಲವ್ ಮಾಕ್ಟೇಲ್

ಮಾತು ಬಾರದ ಲಿನೇಟ, ‘ನಿನಗಾಗಿ ಕಾಯುತ್ತೇನೆ’ ಎಂದು ಸನ್ನೆ ಮಾಡುತ್ತಾಳೆ. ಹೀಗೆ ಊರು ಬಿಟ್ಟಲಕ್ಷ್ಮಿ ಮತ್ತೆ ಬರುತ್ತಾನೆಯೇ, ಲಿನೇಟ ಏನಾಗಿರುತ್ತಾಳೆ, ಆ ಊರಿನ ಚರ್ಚು, ಕೇಸರಿ ದ್ವಜಗಳ ನಡುವೆ ಇವರ ಪ್ರೇಮ ಕತೆ ಏನಾಗುತ್ತದೆ ಎಂಬುದನ್ನು ಯಾವುದೇ ವೈಭವೀಕರಣ ಅಲ್ಲದೆ ಅತ್ಯಂತ ಸಹಜವಾಗಿ ನಿರೂಪಿಸಿದ್ದಾರೆ ನಿರ್ದೇಶಕರು. ಸಿನಿಮಾ ಕ್ಲೈಮ್ಯಾಕ್ಸ್‌ ಹಂತಕ್ಕೆ ಬರುವ ಹೊತ್ತಿಗೆ ನೋಡಗ, ಇದು ತಮ್ಮದೇ ನೆನಪುಗಳು ಎಂದುಕೊಳ್ಳುತ್ತಾನೆ.

ಬಾಲ್ಯದ ಜೀವನ, ಹಳ್ಳಿಯ ಸೌಂದರ್ಯ, ನಗರದ ಯಾಂತ್ರಿಕ ಬದುಕು, ಈಗಿನ ಜನರೇಷನ್‌ನ ಪ್ರೀತಿ- ಪ್ರೇಮವನ್ನು ಬಲಿ ಮಾಡುವ ಧರ್ಮದ ಬೆಂಕಿ, ಸಾಹಿತಿಯ ಪುಟಗಳು ಹೀಗೆ ಹಲವು ಅಂಶಗಳು ಸೇರಿಕೊಂಡು ‘ಮಾಲ್ಗುಡಿ ಡೇಸ್‌’ ಹೆಸರಿಗೆ ತಕ್ಕಂತೆ ಕ್ಲಾಸಿಕ್‌ ಎನಿಸಿಕೊಳ್ಳುತ್ತದೆ.

ಪುಟ್ಟಮಗುವೊಂದು ತನ್ನ ಅಪ್ಪನ ಕಿರು ಬೆರಳು ಹಿಡಿದು ಸಂಭ್ರಮದಿಂದ ರಸ್ತೆಯಲ್ಲಿ ಹೆಜ್ಜೆ ಹಾಕುವಂತೆ ಚಿತ್ರದ ಪ್ರತಿ ದೃಶ್ಯವನ್ನು ಕಟ್ಟುತ್ತಾ ಹೋಗಿರುವ ಕಿಶೋರ್‌ ಮೂಡಬಿದ್ರೆ ಅವರದ್ದು ಒಳ್ಳೆಯ ಪ್ರಯತ್ನ. ಆದರೆ, ಹುಡುಕಾಟದ ಎಪಿಸೋಡ್‌ಗಳಲ್ಲಿ ಇನ್ನಷ್ಟುವೇಗ ಹೆಚ್ಚಿಸುವ ಅಗತ್ಯವಿತ್ತು ಅನಿಸುತ್ತದೆ. ಗ್ರೀಷ್ಮಾ ಶ್ರೀಧರ್‌, ಅರ್ಜುನ್‌ ಕಾಪಿಕಾಡ್‌ ಒಳ್ಳೆಯ ಕಾಂಬಿನೇಷನ್‌. ತುಂಬಾ ವರ್ಷಗಳ ನಂತರ ವಿಜಯ್‌ ರಾಘವೇಂದ್ರ ಅವರಿಗೆ ಅತ್ಯುತ್ತಮ ಪಾತ್ರ ಸಿಕ್ಕಿದ್ದು, ಅದರಲ್ಲಿ ತಮ್ಮನ್ನು ಶಕ್ತಿಮೀರಿ ತೊಡಗಿಸಿಕೊಂಡಿದ್ದಾರೆ. ಉದಯ್‌ ಲೀಲ ಕ್ಯಾಮೆರಾ, ಗಗನ್‌ ಖಡೇರಿಯಾ ಸಂಗೀತ ನೆನಪಿಟ್ಟುಕೊಳ್ಳುವಂತಿದೆ.

- ಆರ್. ಕೇಶವಮೂರ್ತಿ