Amrutadhare: ಭೂಮಿ ಗೌತಮ್ ನಡುವೆ ಪ್ರೇಮ ಅರಳಿದೆ! ಇದನ್ನೂ ಕನಸು ಅಂತ ತೋರಿಸಬೇಡ್ರೋ ಅಂತಿದ್ದಾರೆ ಫ್ಯಾನ್ಸ್!
ಅಮೃತಧಾರೆ ಸೀರಿಯಲ್‌ನಲ್ಲಿ ಗೌತಮ್ ಭೂಮಿ ನಡುವಿನ ಅನುಮಾನ ಕಳೆದು ಪ್ರೇಮ ಮೂಡಿದೆ. ಈ ಪ್ರೋಮೋ ನೋಡಿ ಇದನ್ನೂ ಕನಸು ಅಂತ ತೋರಿಸಬೇಡ್ರೋ ನಮ್ಮಮ್ಮ ಟಿವಿನೇ ಒಡೆದುಹಾಕ್ತಾರೆ ಅಂತ ಫ್ಯಾನ್ ಒಬ್ರು ರಿಕ್ವೆಸ್ಟ್ ಮಾಡ್ತಿದ್ದಾರೆ.
ಜೀ ಕನ್ನಡದಲ್ಲಿ ಪ್ರಸಾರವಾಗ್ತಿರುವ ಜನಪ್ರಿಯ ಸೀರಿಯಲ್ 'ಅಮೃತಧಾರೆ'ಯಲ್ಲಿ ಇದೀಗ ಪ್ರೇಮ ಪರ್ವಕ್ಕೆ ಮುನ್ನುಡಿಯೊಂದು ರೆಡಿಯಾಗಿದೆ. ಗೌತಮ್ ಭೂಮಿ ನಡುವಿನ ಇಷ್ಟು ದಿನದ ಶೀತಲ ಸಮರ ಮುಗಿದು ಇದೀಗ ಚಳಿಗಾಲದ ನಡುವಿನ ಹೂಬಿಸಿಲಿನಂಥಾ ಪ್ರೇಮ ಟಿಸಿಲೊಡೆದಿದೆ. ಅಷ್ಟಕ್ಕೂ ಇದು ಒರಿಜಿನಲ್ ಕನ್ನಡದ ಸೀರಿಯಲ್ ಅಲ್ಲ. 'ಬಡೆ ಅಚ್ಚೆ ಲಗ್ತಾ" ಧಾರಾವಾಹಿ ರೀಮೆಕ್ ಇದಾಗಿದ್ದು ಕನ್ನಡ ವೀಕ್ಷಕರ ಮನಗೆದ್ದಿದೆ. ರಾಜೇಶ್ ನಟರಂಗ ಹಾಗೂ ಛಾಯಾಸಿಂಗ್ ಅವರ ನಟನೆ ಜನರಿಗೆ ಬಹಳ ಇಷ್ಟವಾಗಿದೆ.
ಹೆಸರಾಂತ ಕಲಾವಿದರ ದಂಡೇ ಈ ಧಾರಾವಾಹಿಯಲ್ಲಿ ಇದ್ದು, ಗೌತಮ್ ದಿವಾನ್ ಆಗಿ ರಾಜೇಶ್ ನಟರಂಗ, ಭೂಮಿಕಾ ಪಾತ್ರದಲ್ಲಿ ಛಾಯಾಸಿಂಗ್ ಅಭಿನಯಿಸಿದ್ದಾರೆ. ಸಿಹಿಕಹಿ ಚಂದ್ರು, ಅಮೃತ ನಾಯಕ್, ವನಿತಾ ವಾಸು, ಚೈತ್ರಾ ಶೆಣೈ, ಶಶಿ ಹೆಗ್ಡೆ ಹೀಗೆ ಹಲವಾರು ಕಲಾವಿದರು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ತಮ್ಮ ತಮ್ಮ ಕುಟುಂಬಕ್ಕಾಗಿ ಭೂಮಿಕಾ ಹಾಗೂ ಗೌತಮ್ ತಮ್ಮ ಬದುಕನ್ನೇ ತ್ಯಾಗ ಮಾಡುವ ಕಥೆ ಆರಂಭದಲ್ಲಿತ್ತು.
ಈಗ ಕಥೆಯ ಎಳೆ ಪ್ರೇಮದ ಹಾದಿ ಹಿಡಿದಿದೆ. ಬದುಕನ್ನು ಬಂದ ಹಾಗೆ ಸ್ವೀಕರಿಸುವ ಭೂಮಿ, ಗೌತಮ್‌ಗೆ ಇದೀಗ ವಿಧಿಯೇ ಮನಸೋತು ಒಳ್ಳೆಯ ದಿನಗಳನ್ನು ದಯಪಾಲಿಸಿದ ಹಾಗಿದೆ. ಈ ಧಾರಾವಾಹಿಯ ನಿರ್ಮಾಣವನ್ನು ಕೀರ್ತಿ ಅಕ್ಷಯ್ ಸಂಸ್ಥೆ ಮಾಡುತ್ತಿದ್ದು, ಮಹೇಶ್ ರಾವ್ ನಿರ್ವಹಣೆ ಜವಾಬ್ದಾರಿ ಹೊತ್ತಿದ್ದಾರೆ. ಉತ್ತಮ್ ಮಧು ಅವರ ನಿರ್ದೇಶನದಲ್ಲಿ 'ಅಮೃತಧಾರೆ' ಧಾರಾವಾಹಿ ಉತ್ತಮವಾಗಿ ಮೂಡಿಬರುತ್ತಿದ್ದು, ಪ್ರೇಕ್ಷಕರ ಮನಸು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಅಮೃತಧಾರೆಯ ಶೀರ್ಷಿಕೆ ಗಾಯನಕ್ಕೂ ಜನರು ಮನಸೋತಿದ್ದಾರೆ. ಸದ್ಯ ಈ ಸೀರಿಯಲ್ ಕಥೆಗೂ ಪ್ರೇಕ್ಷಕರು ಫಿದಾ ಆಗಿದ್ದಾರೆ. ಗೌತಮ್ ದಿವಾನ್ ಹಾಗೂ ಭೂಮಿಕಾ ಇಬ್ಬರ ನಟನೆಗೂ ಒಳ್ಳೆಯ ಅಂಕ ಸಿಗುತ್ತಿದೆ.
ಇದೀಗ ಈ ಸೀರಿಯಲ್ ಹೊಸದೊಂದು ಪ್ರೇಮ ಅಧ್ಯಾಯಕ್ಕೆ ಮುನ್ನುಡಿ ಬರೆದಿದೆ. ಗೌತಮ್ ಮತ್ತು ಭೂಮಿಯ ಸಂಬಂಧದಲ್ಲಿ ಹುಳಿ ಹಿಂಡಲು ಮಾಡಿದ ಪ್ರಯತ್ನ ವಿಫಲವಾಗಿದೆ. ಗೌತಮ್ ವಿಲನ್ ಅನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ತಕ್ಕಪಾಠ ಕಲಿಸಿದ್ದಾನೆ. ಯಥಾರ್ಥ ಏನು ಅನ್ನುವುದನ್ನು ಎಲ್ಲರಿಗೂ ಸಾರಿ ಹೇಳಿದ್ದಾನೆ. ಭೂಮಿಯ ಒಳ್ಳೆಯತನವನ್ನು ಎತ್ತಿ ಹಿಡಿದಿದ್ದಾನೆ. ಈ ನಡುವೆ ಎಮೋಶನಲ್ ಆದ ಭೂಮಿ ಅತ್ತುಕೊಂಡು ಬಾತ್‌ರೂಮಿಗೆ ಬಂದಿದ್ದಾಳೆ. ಆಕೆಯನ್ನು ಅಲ್ಲಿಗೆ ಹಿಂಬಾಲಿಸಿಕೊಂಡು ಬಂದ ಗೌತಮ್ ಅವಳಿಗೆ ಪ್ರೀತಿಯ ಮಾತು ಹೇಳಿದ್ದಾನೆ.
ವಂದನೆ ವಂದನೆ 'ಪುನೀತ ಕನ್ನಡಿಗರೇ' ನಿಮಗೆ ವಂದನೆ: 'ಕ್ವಾ' ಅವಾರ್ಡ್ ಖುಷಿಯಲ್ಲಿ ನಟಿ ಅನುಶ್ರೀ ಮಾತಿದು...
'ದುಡ್ಡಿಂದ ಎಲ್ಲವನ್ನೂ ಕೊಂಡ್ಕೋಬಹುದು ಅಂತ ತುಂಬ ಜನ ಅಂದ್ಕೊಂಡಿದ್ದಾರೆ, ಆದರೆ ಪ್ರೀತಿ ಭಾವನೆಗಳನ್ನು ಕೊಂಡ್ಕೊಳಕ್ಕಾಗಲ್ಲ. ಮದುವೆ ಆಸೆಯನ್ನೇ ಕೈ ಬಿಟ್ಟಿದ್ದ ನನಗೆ ನೀವು ಸಿಕ್ಕಿದಿರಿ' ಅಂದಾಗ ಭೂಮಿಗೆ ಅನುಮಾನ ಬಂದಿದೆ. 'ಈ ಮಾತನ್ನು ನೀವು ಹಿಂದೆ ಯಾರಿಗಾದರೂ ಹೇಳಿದ್ದಿರಾ?' ಅಂತ ಕೇಳಿದ್ದಾಳೆ. 'ಹೌದು ಅಪರ್ಣಾ ಅಂದುಕೊಂಡು ಯಾರಿಗೂ ಹೇಳಿದ್ದೆ' ಎನ್ನುತ್ತಾನೆ ಗೌತಮ್. ಆಗ ಭೂಮಿಗೆ ಹಿಂದೆ ತನಗೆ ಸಾಂತ್ವನ ಹೇಳಿದ ದನಿ ಗೌತಮ್‌ದೇ ಎಂದು ಗೊತ್ತಾಗಿದೆ. ಆಕೆ ಭಾವುಕವಾಗಿ ಗೌತಮ್‌ನ ತಬ್ಬಿಕೊಳ್ತಾಳೆ.
ಈ ಪ್ರೋಮೋಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಇದು ಟೆಲಿಕಾಸ್ಟ್ ಆದ ಎರಡೇ ಗಂಟೆಯಲ್ಲಿ ಐವತ್ತೈದು ಸಾವಿರಕ್ಕೂ ಹೆಚ್ಚು ಮಂದಿ ಇನ್‌ಸ್ಟಾಗ್ರಾಂ ಒಂದರಲ್ಲೇ ಇದನ್ನು ಮೆಚ್ಚಿಕೊಂಡಿದ್ದಾರೆ. ಲಕ್ಷಾಂತರ ವೀಕ್ಷಣೆ ದಾಖಲಾಗಿದೆ. ನೂರಾರು ಮಂದಿ ಮೆಚ್ಚಿ ಕಾಮೆಂಟ್ಸ್ ಮಾಡಿದ್ದಾರೆ. ಒಬ್ಬ ಫ್ಯಾನ್ ಅಂತೂ, 'ಇನ್ನು ಇದನ್ನೂ ಕನಸು ಅಂತ ತೋರಿಸಬೇಡ್ರೋ, ನಮ್ಮಮ್ಮ ಟಿವಿನೇ ಒಡೆದುಹಾಕ್ತಾರೆ' ಅಂತ ಕಾಮೆಂಟ್ ಮಾಡಿದ್ದು ಹಲವರ ಮುಖದಲ್ಲಿ ನಗು ತರಿಸಿದೆ. ಹೆಚ್ಚಿನವರು ಇದು ಸೂಪರ್ ಎಕ್ಸೈಟಿಂಗ್ ಪ್ರೋಮೋ ಎಂದು ಮೆಚ್ಚಿಕೊಂಡಿದ್ದಾರೆ.