ಕೆಬಿಸಿ ಹಾಟ್‌ಸೀಟ್‌ ಮಹಿಳೆಯ ನೋಡಿ ಬಿದ್ದೂ ಬಿದ್ದೂ ನಕ್ಕ ಅಮಿತಾಭ್‌ ಬಚ್ಚನ್‌, ಅರೆ ಬಾಪ್ರೆ ಎಂಥ ಮಹಿಳೆ  ಜೊತೆ ಸಿಕ್ಕಿಬಿದ್ನಪ್ಪಾ ಎಂದದ್ದೇಕೆ?  

ಬಾಲಿವುಡ್​ ಸ್ಟಾರ್​ ಅಮಿತಾಭ್​ ಬಚ್ಚನ್​ ಅವರು ನಡೆಸಿಕೊಡುವ ಕೌನ್ ಬನೇಗಾ ಕರೋರ್​ಪತಿ (Kaun Banega Crorepati) ಷೋದಲ್ಲಿ ಪಾಲ್ಗೊಳ್ಳಲು ಹತ್ತಿಪ್ಪತ್ತು ವರ್ಷಗಳಿಂದ ಟ್ರೈ ಮಾಡಿದವರಿದ್ದಾರೆ. ಆದರೆ ಬಹುತೇಕ ಮಂದಿಗೆ ಇದರ ಅವಕಾಶವೇ ಸಿಗುವುದಿಲ್ಲ. ಇನ್ನು ಹಾಗೂ ಹೀಗೂ ಕಷ್ಟಪಟ್ಟು ಕೆಬಿಸಿಗೆ ಆಯ್ಕೆಯಾದರೆ ಅವರಿಗೆ ಹಾಟ್‌ಸೀಟ್‌ನಲ್ಲಿ ಕುಳಿತುಕೊಳ್ಳುವ ಅವಕಾಶವೇ ಸಿಗುವುದಿಲ್ಲ. ಅಮಿತಾಭ್‌ ಬಚ್ಚನ್‌ ಎದುರು ಕುಳಿತುಕೊಂಡು ಪ್ರಶ್ನೆಗಳಿಗೆ ಉತ್ತರ ಕೊಟ್ಟು ಒಂದಿಷ್ಟು ಲಕ್ಷಗಳನ್ನು ಗಳಿಸಿ ಹೋಗುವುದು ಕೆಲವೇ ಕೆಲವು ಅದೃಷ್ಟವಂತರಿಗೆ ಮಾತ್ರ ಸಾಧ್ಯ. ಇಂಥ ಅದೃಷ್ಟವನ್ನು ಇದಾಗಲೇ ಹಲವಾರು ಮಂದಿ ಗಳಿಸಿದ್ದಾರೆ. ಕೌನ್ ಬನೇಗಾ ಕರೋರ್​ಪತಿ ಯ 14 ಸೀಸನ್‌ಗಳು ಇದಾಗಲೇ ಮುಗಿದಿದ್ದು, 15ನೇ ಸೀಸನ್‌ ಶುರುವಾಗಿದೆ.

ಇದರಲ್ಲಿ ಇದಾಗಲೇ ಒಂದಿಬ್ಬರು ಕೋಟಿ ರೂಪಾಯಿಗಳನ್ನೂ ಗಳಿಸಿದ್ದಾರೆ. ವಿಭಿನ್ನ ಕ್ಷೇತ್ರದ ವಿಭಿನ್ನ ವ್ಯಕ್ತಿಗಳು, ವಿದ್ಯಾರ್ಥಿಗಳಿಂದ ಹಿಡಿದು ದೊಡ್ಡ ದೊಡ್ಡ ಹುದ್ದೆಯಲ್ಲಿ ಇರುವವರು, ಗೃಹಿಣಿಯರಿಂದ ಹಿಡಿದು ಚಿಕ್ಕಪುಟ್ಟ ಕೆಲಸದಲ್ಲಿ ತೊಡಗಿಸಿಕೊಂಡವರು, ನಿರುದ್ಯೋಗಿಗಳು... ಹೀಗೆ ಎಲ್ಲಾ ರೀತಿಯ ಜನರನ್ನೂ ಇದುವರೆಗೆ ಹಾಟ್‌ಸೀಟ್‌ನಲ್ಲಿ ನಟ ಅಮಿತಾಭ್‌ ಬಚ್ಚನ್‌ ನೋಡಿದ್ದಾರೆ. ಆದರೆ ಇವೆಲ್ಲವುಗಳಿಗಿಂತಲೂ ಭಿನ್ನವಾಗಿ ಓರ್ವ ಮಹಿಳೆ ಬಂದಿದ್ದು, ಅರೆ ಬಾಪ್ರೆ... ಇದೆಂಥ ಮಹಿಳೆ ಜೊತೆ ಇಂದು ಸಿಕ್ಕಿಬಿದ್ದೆ ಎಂದು ಬಿದ್ದೂ ಬಿದ್ದೂ ನಕ್ಕಿದ್ದಾರೆ ಅಮಿತಾಭ್‌ ಬಚ್ಚನ್‌.

ಕೋಟ್ಯಧಿಪತಿಯಾಗಿ ಇತಿಹಾಸ ಸೃಷ್ಟಿಸಿದ 14 ವರ್ಷದ ಬಾಲಕ! ಕೋಟಿ ಗೆಲ್ಲಿಸಿದ ಪ್ರಶ್ನೆ ಏನ್​ ಗೊತ್ತಾ?

ಅಷ್ಟಕ್ಕೂ ಈ ಮಹಿಳೆ ಕೋಲ್ಕತ್ತಾ ಮೂಲದ ಅಲೋಲಿಕಾ ಭಟ್ಟಾಚಾರ್‌ಜೀ ಗುಹಾ ಎಂಬುವವರು. ಮಾತು ಮಾತಿಗೂ ನಕ್ಕು ನಗಿಸುತ್ತಿರುವ ಇವರು ಆಟವಾಡಿದ್ದಕ್ಕಿಂತ ಹೆಚ್ಚು ನಕ್ಕಿದ್ದೇ ಜಾಸ್ತಿ. ತಾವೂ ನಕ್ಕಿದ್ದಲ್ಲದೇ ಅಮಿತಾಭ್‌ ಬಚ್ಚನ್‌ ಅವರನ್ನೂ ನಕ್ಕೂ ನಕ್ಕೂ ನಗಿಸಿದ್ದಾರೆ, ಜೊತೆಗೆ ಉಳಿದವರನ್ನೂ ನಗಿಸಿದ್ದಾರೆ. ಇದೇ ಮೊದಲ ಬಾರಿಗೆ ವಿಮಾನದಲ್ಲಿ ಬಂದು, ದೊಡ್ಡ ಹೋಟೆಲ್‌ನಲ್ಲಿ ಉಳಿದುಕೊಂಡಿರುವ ಅಲೋಲಿಕಾ ಅವರಿಗೆ ಹಾಟ್‌ ಸೀಟ್‌ನಲ್ಲಿ ಕುಳಿತುಕೊಂಡೆ ಎನ್ನುವುದಕ್ಕಿಂತ ಹೆಚ್ಚು ಸಂತೋಷ ಕೊಟ್ಟಿದ್ದು ಇದೇ ಎಂದು ಅವರ ಮಾತಿನಲ್ಲಿ ತಿಳಿದುಬಂತು.

ಜೀವನದಲ್ಲಿ ಎಂದಿಗೂ ವಿಮಾನ ಏರಿರಲಿಲ್ಲ. ರೈಲಿನಲ್ಲಿ ಕುಳಿತು ಯಾರು ನಮ್ಮ ಸಾಮಾನು ಎತ್ತಿಕೊಂಡು ಹೋಗುತ್ತಾರೆ ಎಂದು ಎಚ್ಚರವಿದ್ದು ನೋಡ್ತಾ ಇರಬೇಕು. ಆದರೆ ವಿಮಾನದಲ್ಲಿ ನಮ್ಮ ಸಾಮಗ್ರಿಗಳನ್ನೆಲ್ಲಾ ಅವರೇ ಇಟ್ಟುಕೊಂಡು ನಮ್ಮನ್ನು ನೆಮ್ಮದಿಯಿಂದ ಇಡುತ್ತಾರೆ ಎಂದು ತಮ್ಮದೇ ಆದ ವಿಶೇಷ ರೀತಿಯಲ್ಲಿ ಹೇಳಿ ನಕ್ಕೂ ನಕ್ಕೂ ನಗಿಸಿದ್ದಾರೆ ಅಲೋಲಿಕಾ. ಇದಕ್ಕಾಗಿ ಪ್ರತಿ ಬಾರಿ ಕೆಬಿಸಿಗೆ ಧನ್ಯವಾದ ಎನ್ನುತ್ತಿದ್ದರು. ಹೋಟೆಲ್‌ ಬಗ್ಗೆ ಅಮಿತಾಭ್‌ ಕೇಳಿದ ಪ್ರಶ್ನೆಗೆ, ನಮ್ಮ ಜೀವಮಾನದಲ್ಲಿ ಇಂಥ ಹೋಟೆಲ್‌ ನೋಡೇ ಇರಲಿಲ್ಲ, ನನ್ನ ಗಂಡನ ದುಡಿಮೆಯಲ್ಲಿ ಇಂಥ ಹೋಟೆಲ್‌ ನೋಡಲು ಸಾಧ್ಯವೇ ಇರಲಿಲ್ಲ. ಅರೆ ಬಾಪ್ರೆ. ಅಷ್ಟು ದೊಡ್ಡ ಹೋಟೆಲ್‌ ಅದು ಎಂದು ಹೇಳಿದರು.

KBC ವೇದಿಕೆಯಲ್ಲಿಯೇ ಕಣ್ಣೀರು ಹಾಕಿದ ಅಮಿತಾಭ್​: ಅದೆಷ್ಟು ಅಂತ ನನ್ನ ಅಳಿಸುವಿರಿ ಎಂದ ಬಿಗ್​-ಬಿ

ನಂತರ ನಾನು ಇಲ್ಲಿ ಸುಮ್ಮನೇ ಬಂದಿದ್ದೇನೆ. ಏನೂ ಓದಿಕೊಂಡು ಬರಲೇ ಇಲ್ಲ. ಹೋಟೆಲ್‌ನಲ್ಲಿ ಉಳಿದುಕೊಂಡಾಗ ಉಳಿದ ಸ್ಪರ್ಧಿಗಳು ಏನೇನೋ ಓದುತ್ತಿದ್ದರು, ನಾನು ಮಜಾಮಾಡಿಕೊಂಡು ಇದ್ದೆ. ನಾನು ಇಲ್ಲಿ ಆಟವಾಡಲು ಬರಲೇ ಇಲ್ಲ ಎಂದೆಲ್ಲಾ ಹೇಳುತ್ತಲೇ 12.50 ಲಕ್ಷ ರೂಪಾಯಿಗಳನ್ನು ಗೆದ್ದರು. ನಂತರ ಮುಂದಿನ ಪ್ರಶ್ನೆಗೆ ಉತ್ತರ ತಿಳಿಯದೇ ಆಟವನ್ನು ಕ್ವಿಟ್‌ ಮಾಡಿದರು. ನಂತರ ತಮ್ಮ ಅನುಭವವನ್ನು ಆಜ್‌ತಕ್‌ ಜೊತೆ ಹಂಚಿಕೊಂಡು, ತಮಗಾಗಿ ಅಭೂತಪೂರ್ವ ಅನುಭವದ ಕುರಿತು ಹೇಳಿಕೊಂಡರು. 

Scroll to load tweet…