ಕೌನ್​ ಬನೇಗಾ ಕರೋರ್​ಪತಿಯಲ್ಲಿ ಒಂದು ಕೋಟಿ ರೂ. ಗೆದ್ದು, ಅತಿ ಕಿರಿಯ ವಯಸ್ಸಿನ ಸ್ಪರ್ಧಿ ಎನ್ನುವ ದಾಖಲೆ ಬರೆದಿದ್ದಾನೆ 14 ವರ್ಷದ ಪೋರ. 

ಬಾಲಿವುಡ್​ ಸ್ಟಾರ್​ ಅಮಿತಾಭ್​ ಬಚ್ಚನ್​ ಅವರು ನಡೆಸಿಕೊಡುವ ಕೌನ್ ಬನೇಗಾ ಕರೋರ್​ಪತಿ (Kaun Banega Crorepati) ಷೋನಲ್ಲಿ ಇದಾಗಲೇ ಕೆಲವರು ಒಂದು ಕೋಟಿ ರೂಪಾಯಿ ಗೆದ್ದವರಿದ್ದಾರೆ. ಇನ್ನು ಹಲವರು ಕೋಟಿ ಗೆಲ್ಲುವಷ್ಟರಲ್ಲಿಯೇ ತಪ್ಪು ಉತ್ತರ ಕೊಟ್ಟು ಕೆಲವು ಲಕ್ಷ ರೂಪಾಯಿಗಳನ್ನು ಗಳಿಸಿದವರಿದ್ದಾರೆ. ಹಾಟ್​ ಸೀಟಿನಲ್ಲಿ ಕುಳಿತುಕೊಳ್ಳುವಲ್ಲಿ ಯಶಸ್ವಿಯಾದರೂ, ಸರಿಯಾದ ಉತ್ತರ ಕೊಡಲು ಸಾಧ್ಯವಾಗಲೇ ಬರಿಗೈನಲ್ಲಿ ವಾಪಸಾದವರೂ ಇದ್ದಾರೆ. ಇದಾಗಲೇ 14 ಸೀಸನ್​ಗಳು ನಡೆದಿದ್ದು, ಇದೀಗ 15ನೇ ಸೀಸನ್​ ಶುರುವಾಗಿದೆ. ಈ ಸೀಸನ್​ನಲ್ಲಿಯೂ ಕೋಟ್ಯಧಿಪತಿಯಾದವರಿದ್ದಾರೆ. ಆದರೆ ಇದೀಗ 14 ವರ್ಷದ ಪೋರನೊಬ್ಬ ಒಂದು ಕೋಟಿ ರೂಪಾಯಿಗಳನ್ನು ಗೆದ್ದಿದ್ದಾನೆ. ಈ ಮೂಲಕ, ಕೌನ್ ಬನೇಗಾ ಕರೋರ್​ಪತಿ ಷೋನಲ್ಲಿ ಇಷ್ಟು ಬೃಹತ್​ ಮೊತ್ತವನ್ನು ಗೆದ್ದಿರುವ ಅತ್ಯಂತ ಕಿರಿಯ ಸ್ಪರ್ಧಿ ಎಂಬ ಹೆಗ್ಗಳಿಕೆ ಪಡೆದುಕೊಂಡಿದ್ದಾನೆ!

ಹೌದು. 8ನೇ ಕ್ಲಾಸ್​ ವಿದ್ಯಾರ್ಥಿ ಮಯಾಂಕ್​ ಒಂದು ಕೋಟಿ ರೂಪಾಯಿಗೆ ಕೇಳಲಾಗಿದ್ದ ಪ್ರಶ್ನೆಗೆ ಸರಿಯುತ್ತರ ಕೊಟ್ಟು ಕೋಟ್ಯಧಿಪತಿಯಾಗಿದ್ದಾನೆ. ಹರಿಯಾಣದ ಮಹೇಂದ್ರಗಢ್‌ ವಿದ್ಯಾರ್ಥಿ ಈತ. ಒಂದು ಕೋಟಿಯ ಪ್ರಶ್ನೆಗೆ ಬರಬೇಕಾದರೆ 15 ಪ್ರಶ್ನೆಗೆ ಸರಿಯಾದ ಉತ್ತರ ಕೊಟ್ಟು, 16ನೇ ಪ್ರಶ್ನೆಯವರೆಗೆ ಬರಬೇಕು. 16ನೇ ಪ್ರಶ್ನೆ ಒಂದು ಕೋಟಿ ರೂಪಾಯಿಯದ್ದಾಗಿರುತ್ತದೆ. ಮಯಾಂಕ್​ 16ನೇ ಪ್ರಶ್ನೆಗೂ ಉತ್ತರ ಕೊಟ್ಟು ಬೃಹತ್​ ಮೊತ್ತ ಗಳಿಸಿದ್ದರೂ ಅಲ್ಲದೇ ಇತಿಹಾಸ ನಿರ್ಮಿಸಿದ್ದಾನೆ. ಇದರ ಪ್ರೊಮೋ ಬಿಡುಗಡೆಯಾಗಿದ್ದು, ಬಾಲಕನನ್ನು ಬಿಗ್​ ಬಿ ಹಾಡಿ ಕೊಂಡಾಡಿರುವುದನ್ನು ನೋಡಬಹುದು. 

KBC ವೇದಿಕೆಯಲ್ಲಿಯೇ ಕಣ್ಣೀರು ಹಾಕಿದ ಅಮಿತಾಭ್​: ಅದೆಷ್ಟು ಅಂತ ನನ್ನ ಅಳಿಸುವಿರಿ ಎಂದ ಬಿಗ್​-ಬಿ

ಈ ಷೋನಲ್ಲಿ ಸ್ಪರ್ಧಿಗಳಿಗೆ ಮೂರು ಲೈಫ್​ ಲೈನ್​ ನೀಡಲಾಗುತ್ತದೆ. ಆಟದುದ್ದಕ್ಕೂ ಮೂರು ಬಾರಿ ಲೈಫ್​ಲೈನ್​ ಬಳಸಬಹುದು. ಕುತೂಹಲದ ಸಂಗತಿ ಎಂದರೆ, ಮಯಾಂಜ್​ 3.2 ಲಕ್ಷ ರೂಪಾಯಿವರೆಗೆ ಪ್ರಶ್ನೆಗೆ ಯಾವುದೇ ಲೈಫ್​ಲೈನ್​ ಬಳಕೆ ಮಾಡಲಿಲ್ಲ. 12.5 ಲಕ್ಷ ರೂಪಾಯಿಯ ಪ್ರಶ್ನೆಗೆ ಮೊದಲ ಲೈಫ್‌ಲೈನ್ ಅನ್ನು ಬಳಸಿ ಆ ಮೊತ್ತ ಗಳಿಸಿ ಹಂತಹಂತವಾಗಿ ಮೇಲೇರಿ ಒಂದು ಕೋಟಿ ರೂಪಾಯಿ ಪ್ರಶ್ನೆಗೂ ಸರಿಯುತ್ತರ ಕೊಟ್ಟಿದ್ದಾನೆ. ಅಷ್ಟಕ್ಕೂ ಈತನಿಗೆ ಒಂದು ಕೋಟಿ ರೂಪಾಯಿಗೆ ಕೇಳಿದ ಪ್ರಶ್ನೆಯೇನೂ ಸುಲಭವಾಗಿರಲಿಲ್ಲ. ಹೊಸದಾಗಿ ಪತ್ತೆಯಾದ ಖಂಡಕ್ಕೆ ಅಮೆರಿಕ ಎಂಬ ಹೆಸರನ್ನು ಹೊಂದಿರುವ ನಕ್ಷೆಯನ್ನು ರಚಿಸಿದ ಯುರೋಪಿನ ಕಾರ್ಟೋಗ್ರಾಫರ್ ಯಾರು? ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು. ಇದಕ್ಕೆ ಉತ್ತರವಾಗಿ ಅಬ್ರಹಾಂ ಒರ್ಟೆಲಿಯಸ್, ಗೆರಾಡಸ್ ಮರ್ಕೇಟರ್, ಜಿಯೋವಾನಿ ಬಟಿಸ್ಟಾ ಆಗ್ನೆಸ್ ಮತ್ತು ಮಾರ್ಟಿನ್ ವಾಲ್ಡ್​ಸೀಮುಲ್ಲರ್ ಎಂಬ ಆಯ್ಕೆ ನೀಡಲಾಗಿತ್ತು. ಆಗ ಮಯಾಂಕ್​ ಎರಡನೆಯ ಲೈಫ್​ ಲೈನ್​ ಬಳಸಿದ. ‌ ‘ಆಸ್ಕ್ ದಿ ಎಕ್ಸ್‌ಪರ್ಟ್’ ಸಹಾಯ ಪಡೆದು ಸರಿಯುತ್ತರ ಕೊಟ್ಟ. ಈ ಪ್ರಶ್ನೆಗೆ ಸರಿಯಾದ ಉತ್ತರ ಮಾರ್ಟಿನ್ ವಾಲ್ಡ್‌ಸೀಮುಲ್ಲರ್ ಎನ್ನುವುದು. ಈ ಉತ್ತರ ಸರಿಯಾಗಿದ್ದ ಕಾರಣ, ಕೋಟ್ಯಧಿಪತಿಯಾದ ಮಯಂಕ್​.

ಒಂದು ಕೋಟಿ ರೂಪಾಯಿ ಪ್ರಶ್ನೆಯ ಬಳಿಕ ಇದ್ದುದು ಏಳು ಕೋಟಿಯ ಪ್ರಶ್ನೆ. ಇಲ್ಲಿ ಆತನಿಗೆ ಎರಡನೇ ಮಹಾಯುದ್ಧದ ಸಮಯದಲ್ಲಿ ಯಾವ ನಗರಕ್ಕೆ ಸರಬರಾಜುಗಳನ್ನು ರವಾನಿಸಿದ್ದಕ್ಕಾಗಿ ಸುಬೇದಾರ್ ಎನ್‌ಆರ್ ನಿಕ್ಕಮ್ ಮತ್ತು ಹವಾಲ್ದಾರ್ ಗಜೇಂದ್ರ ಅವರಿಗೆ ರಷ್ಯಾದಿಂದ ರೆಡ್ ಸ್ಟಾರ್ ಆರ್ಡರ್ ನೀಡಲಾಯಿತು ಎಂಬ ಪ್ರಶ್ನೆ ಕೇಳಲಾಯಿತು. ಆದರೆ ಬಾಲಕನಿಗೆ ಸರಿಯಾದ ಉತ್ತರ ಗೊತ್ತಿಲ್ಲದ ಕಾರಣ, ಆಟವನ್ನು ಬಿಟ್ಟ. ಕೋಟಿ ರೂಪಾಯಿ ಗೆದ್ದ ಬಳಿಕ ಆನಂದ ಬಾಷ್ಪ ಹರಿಸಿದ್ದಾನೆ ಬಾಲಕ. ಈತನ ಜಾಣ್ಮೆಗೆ ಹರಿಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಕೂಡ ಅಭಿನಂದನೆ ಸಲ್ಲಿಸಿದದ್ದಾರೆ. ಜೊತೆಗೆ ಮಯಾಂಕ್​ ಪಾಲಕರು ಹರ್ಷ ವ್ಯಕ್ತಪಡಿಸಿದ್ದಾರೆ. ಇಂತಹ ದೊಡ್ಡ ವೇದಿಕೆಯಲ್ಲಿ ನನಗೆ ಅವಕಾಶ ಕಲ್ಪಿಸಿರುವ ಕಾರಣಕ್ಕೆ ಎಲ್ಲರಿಗೂ ಧನ್ಯವಾದ, ಇದು ನನ್ನ ಅದೃಷ್ಟ ಎಂದಿದ್ದಾನೆ ಮಯಾಂಕ್​.

ಮರು ಜನ್ಮವಿದ್ದರೆ ನನಗಿರುವ ಒಂದೇ ಆಸೆ ಎಂದರೆ... 80 ವರ್ಷದ ಅಮಿತಾಭ್ ಹೇಳಿದ್ದೇನು?