ನಟ ಕಿಶೋರ್ ಸಂದರ್ಶನವೊಂದರಲ್ಲಿ ತಮ್ಮ ಇಬ್ಬರು ಗಂಡು ಮಕ್ಕಳಾದ ವಾಲಿ ಮತ್ತು ರುದ್ರನ ಹೆಸರಿನ ಹಿಂದಿನ ಕಥೆಯನ್ನು ಹಂಚಿಕೊಂಡಿದ್ದಾರೆ. ತಾವು ಸಾಕಿದ್ದ ಕೋತಿಯ ನೆನಪಿಗಾಗಿ ಹಿರಿಯ ಮಗನಿಗೆ ವಾಲಿ ಎಂದೂ, ಕಷ್ಟಪಟ್ಟು ಜನಿಸಿದ್ದಕ್ಕಾಗಿ ಕಿರಿಯ ಮಗನಿಗೆ ರುದ್ರ ಎಂದೂ ಹೆಸರಿಟ್ಟಿರುವುದಾಗಿ ಅವರು ವಿವರಿಸಿದ್ದಾರೆ.

ಬೆಂಗಳೂರು (ಜೂ.4): ತಮ್ಮ ವಿಭಿನ್ನ ಆಲೋಚನೆಗಳು ಹಾಗೂ ಮಾತುಗಳ ಕಾರಣದಿಂದಾಗಿ ಸದಾ ಸುದ್ದಿಯಲ್ಲಿರುವ ನಟ ಕಿಶೋರ್‌, ಇತ್ತೀಚೆಗೆ ಕಲಾಮಾಧ್ಯಮ ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಹೆಚ್ಚಿನವರಿಗೆ ನಟ ಕಿಶೋರ್‌ ಸಿನಿಮಾದಿಂದ ಹಾಗೂ ಅವರ ಮಾಡುತ್ತಿರುವ ಕೃಷಿ ಆಧಾರಿತ ಜೀವನದಿಂದ ಪರಿಚಯ. ಅವರ ವೈಯಕ್ತಿಕ ಜೀವನದ ಬಗ್ಗೆ ಅಷ್ಟಾಗಿ ಯಾರಿಗೂ ತಿಳಿದಿಲ್ಲ. ಅದನ್ನೂ ಕಿಶೋರ್‌ ಕೂಡ ಅಷ್ಟಾಗೊ ಎಲ್ಲಿಯೂ ಹೇಳಿಕೊಳ್ಳೋದಿಲ್ಲ. ಆದರೆ, ಸಂದರ್ಶನದಲ್ಲಿ ತನ್ನ ಇಬ್ಬರು ಗಂಡು ಮಕ್ಕಳ ಬಗ್ಗೆ ಕಿಶೋರ್‌ ಮಾತನಾಡಿದ್ದಾರೆ. ಕಿಶೋರ್‌ ಅವರ ಹಿರಿಯ ಮಗ ವಾಲಿ. ಆತನಿಗೆ ಈಗ 20 ವರ್ಷ. ಇನ್ನು ಕಿರಿಯ ಮಗ ರುದ್ರ. ಆತನಿಗೆ ಈಗ 16 ವರ್ಷ ಎಂದು ಸ್ವತಃ ಅವರೇ ಹೇಳಿದ್ದಾರೆ.

ಇದರ ನಡುವೆ ತನ್ನಿಬ್ಬರು ಮಕ್ಕಳಿಗೆ ಇಟ್ಟ ಹೆಸರುಗಳ ಬಗ್ಗೆಯೂ ಕಿಶೋರ್‌ ಮಾತನಾಡಿದ್ದಾರೆ. 'ನನ್ನ ದೊಡ್ಡ ಮಗನಿಗೆ ವಾಲಿ ಎನ್ನುವ ಹೆಸರು ಏಕೆ ಅಂದರೆ, ನನ್ನ ಮನೆಯಲ್ಲಿ ಒಂದು ಕೋತಿ ಇತ್ತು. ಹೆಂಡತಿ ಇವನ ಪ್ರಗ್ನೆಂಟ್‌ ಇದ್ದ ಸಮಯದಲ್ಲಿಯೇ ನಾನು ಸಾಕಿದ್ದ ಆ ಕೋತಿ ತೀರಿಕೊಂಡಿತ್ತು. ಹಾಗಾಗಿ ಆ ಹೆಸರು ಇಟ್ಟೆ ಎಂದಿದ್ದಾರೆ. ಎಲ್ಲರಿಗೂ ಗೊತ್ತಿರುವ ಹಾಗೆ ವಾಲಿ ರಾಮಾಯಣದ ಪಾತ್ರ. ವಾಲಿ ಇರೋದರಲ್ಲೇ ತುಂಬಾ ನೇರವಂತಿಗೆ ಇದ್ದಂಥ ಕೋತಿ. ಹಾಗಾಗಿ ಅದೇ ಹೆಸರನ್ನು ಇಟ್ಟೆ' ಎಂದು ಹೇಳಿದ್ದಾರೆ.

ವಾಲಿಯನ್ನು ವಿಲನ್‌ ಮಾಡಿರೋದು ಮನುಷ್ಯರು ಎಂದ ಕಿಶೋರ್,‌ ಸಾಮಾನ್ಯವಾಗಿ ಕೋತಿಗಳ ಜಗತ್ತಿನಲ್ಲಿ ಆಲ್ಫಾ ಮೇಲ್‌ ಅಂತಾ ಇರುತ್ತೆ. ನಮ್ಮ ಜನಾಂಗದ ಬೆಸ್ಟ್‌ ಜೆನೆಟಿಕ್ಸ್ ಮುಂದಿನ ಜನರೇಷನ್‌ಗೆ ಹೋಗಬೇಕು ಅನ್ನೋದು ಎಲ್ಲರ ಆಸೆ. ಹಾಗಾಗಿ ಈ ಸ್ಟ್ರಾಂಗೆಸ್ಟ್‌ ಮೇಲ್‌ ಆಗಿರುವ ಈ ಕೋತಿಗೆ ಎಲ್ಲಾ ಹೆಣ್ಣು ಕೋತಿ ಜೊತೆ ಸಂಭೋಗಕ್ಕೆ ಅವಕಾಶ ಇರುತ್ತೆ. ಸೋ ಇಲ್ಲಿ ವಾಲಿ ಅಂಥಾ ಅಲ್ಫಾ ಮೇಲ್‌. ಬಳಿಕ ಸುಗ್ರೀವ ಹಾಗೂ ವಾಲಿ-ಸುಗ್ರೀವರ ಕಥೆ ಬರುತ್ತೆ. ಮೂಲ ರಾಮಾಯಣಕ್ಕೂ ಈಗಿನ ರಾಮಾಯಣಕ್ಕೂ ತುಂಬಾನೇ ವ್ಯತ್ಯಾಸ ಇದೆ. ಮನುಷ್ಯ ಸಮಾಜದಲ್ಲಿ ಇರುವ ನ್ಯಾಯವನ್ನು ಕೋತಿಗಳ ಸಾಮ್ರಾಜ್ಯದಲ್ಲಿ ಮಾಡೋಕಾಗಲ್ಲ. ಇಲ್ಲಿ ರಾಮ ಇವರಿಬ್ಬರ ನಡುವೆ ಮನುಷ್ಯರ ಸಮಾಜದ ನ್ಯಾಯ ಮಾಡಿದ. ಹಾಗಾಗಿ ನನಗೆ ಕೋತಿಗಳ ಮೇಲೆ ಪ್ರೀತಿ' ಎಂದು ಕಿಶೋರ್‌ ಹೇಳಿದ್ದಾರೆ.

ನಾನು ಸಾಕಿದ್ದ ಕೋತಿಗೆ ಮೋಗ್ಲಿ ಅಂತಾ ಹೆಸರಿಟ್ಟಿದ್ದೆ. ಅದು ರೆಸ್ಕೂಡ್‌ ಕೋತಿ. ರೆಸ್ಕ್ಯೂ ಆಗಿರೋ ಇಂಥ ಕೋತಿಗಳನ್ನು ಕೋತಿಗಳ ಗುಂಪು ಸೇರಿಸಿಕೊಳ್ಳೋದಿಲ್ಲ. ಅವು ಬದುಕುವ ಸಾಧ್ಯತೆ ಕಡಿಮೆ. ಹಾಗಾಗಿ ಅದನ್ನು ನಾನೇ ಸಾಕಿದ್ದೆ. ಅದು ನನ್ನ ಎದುರಲ್ಲೇ ತೀರಿ ಹೋಗಿತ್ತು. ಹಾಗಾಗಿ ಇರೋ ಕೋತಿಗಳಲ್ಲಿ ಬೆಸ್ಟ್‌ ಕೋತಿ ಯಾವುದು ಎಂದಾಗ ವಾಲಿ ಹೆಸರು ಸಿಕ್ತು. ಅದನ್ನೇ ಮಗನಿಗೆ ಇಟ್ಟೆ ಎಂದಿದ್ದಾರೆ.

2ನೇ ಮಗನ ಹೆಸರು ರುದ್ರ

ಇನ್ನೊಬ್ಬ ಮಗನ ಹೆಸರು ರುದ್ರ. ಆತನಿಗೆ ನಾನು ವಾಲಿ-2 ಅಂತಾ ಹೆಸರಿಡೋಣ ಅಂತಿದ್ದೆ. ಆಗ ಎಲ್ಲಾ ಬೈದ್ರು. ಬಳಿಕ ಬೆಟ್ಟ ಅಂತಾ ಇಡೋಣ ಅಂತಾ ಅಂದ್ಕೊಂಡಿದ್ದೆ. ಯಾಕೆಂದರೆ ನನಗೆ ಬೆಟ್ಟ ಬಹಳ ಇಷ್ಟ. ಅದರ ಮುಂದೆ ನಿಂತಾಗ ನಾವು ಎಷ್ಟು ಚಿಕ್ಕವರು ಅನಿಸುತ್ತೆ. ಆ ಕಾರಣಕ್ಕಾಗಿ. ಕೊನೆಗೆ ನನ್ನ 2ನೇ ಮಗ ಹುಟ್ಟುವಾಗ ಆತನ ಕುತ್ತಿಗೆಗೆ ಕರುಳಬಳ್ಳಿ ಸುತ್ತಿಕೊಂಡಿತ್ತು. ಕಷ್ಟಪಟ್ಟು ಭೂಮಿಗೆ ಬಂದಿದ್ದ. ಇಷ್ಟು ಕಷ್ಟಪಟ್ಟು ಭೂಮಿಗೆ ಬಂದ್ನಲ್ಲ ಅಂದುಕೊಂಡು ಯಾವುದಾದರೂ ಕ್ಷುದ್ರ ದೇವತೆಗಳ ಹೆಸರನ್ನಿಡಬೇಕು ಅಂದುಕೊಂಡು ರುದ್ರ ಅನ್ನೋ ಹೆಸರನ್ನಿಟ್ಟೆ ಎಂದಿದ್ದಾರೆ.

"ನಟ ಕಿಶೋರ್ ಇಬ್ಬರು ಗಂಡು ಮಕ್ಕಳು ಏನೇನ್ ಮಾಡ್ತಿದ್ದಾರೆ?!-E03-Actor Kishore-Kalamadhyama-#param