ದುಡಿಮೆಯ ಶೇ.40ರಷ್ಟನ್ನು ದಾನ ಮಾಡುವ ನಟ ಕಿರಣ್‌ರಾಜ್!
ಕನ್ನಡತಿ ಧಾರಾವಾಹಿ ಹೀರೋ ನಟ ಕಿರಣ್‌ರಾಜ್ ತಮ್ಮ ದುಡಿಮೆಯ ಶೇ.40 ಭಾಗವನ್ನು ಬಡವರ ಸಹಾಯಕ್ಕೆ ಮೀಸಲಿಡುತ್ತಾರೆ. ಕೊರೋನಾ ಸಂಕಷ್ಟದಲ್ಲಿ ನಿತ್ಯ ಸಾವಿರಾರು ಜನರಿಗೆ ಊಟ ನೀಡುತ್ತಾರೆ. ಅವರ ಕೆಲವು ಮಾತುಗಳು.
ಅಯ್ಯೋ ಪಾಪ ಅನ್ನಬೇಡಿ
ಇನ್ನೊಬ್ಬರಿಗೆ ಊಟಕ್ಕೂ ಕಷ್ಟ ಇದೆ ಅನ್ನೋ ಕಾರಣಕ್ಕೆ ನಾವು ಅವರನ್ನು ಪ್ರತ್ಯೇಕವಾಗಿ ನೋಡಬೇಕಿಲ್ಲ. ಅಯ್ಯೋ ಪಾಪ ಅನ್ನಬೇಕಿಲ್ಲ. ಏಕೆಂದರೆ ಹೀಗಾಗಿರೋದಕ್ಕೆ ಅವರು ಹೊಣೆ ಅಲ್ಲ. ಕೆಲವೊಂದು ಸನ್ನಿವೇಶದಿಂದ ಅವರ ಪರಿಸ್ಥಿತಿ ಹಾಗಾಗಿರುತ್ತೆ ಅಷ್ಟೇ. ಅಂಥವರನ್ನು ನಮ್ಮ ಹಾಗೆಯೇ ಅಂತ ನೋಡಿಕೊಂಡು, ನಮ್ಮಲ್ಲಿರುವುದನ್ನೇ ಅವರಿಗೂ ಸ್ಪಲ್ಪ ಹಂಚಿದರಾಯ್ತು ಅಷ್ಟೇ. ನಾನು ಕಳೆದ ಕೆಲವು ವರ್ಷಗಳಿಂದ ಕಿರಣ್‌ರಾಜ್ ಫೌಂಡೇಶನ್ ಮೂಲಕ ಕಷ್ಟದಲ್ಲಿರುವ ಜನಕ್ಕೆ ಸಹಾಯ ಮಾಡುತ್ತಿದ್ದೀನಿ. ನನ್ನ ಸೀರಿಯಲ್ ದುಡಿಮೆಯಿಂದ ಬಂದ ಹಣದಲ್ಲಿ ಶೇ.40 ಅನ್ನು ಅದಕ್ಕೆಂದೇ ಮೀಸಲಿಡುತ್ತೀನಿ. ನನ್ನನ್ನು ಬೆಳೆಸಿದ ಸಮಾಜಕ್ಕೆ ಕೈಲಾದ್ದನ್ನು ನೀಡಬೇಕು ಅನ್ನೋದಷ್ಟೇ ಅದರ ಉದ್ದೇಶ.
ತುತ್ತು ಊಟದಲ್ಲಿ ಸಿಗುವ ಧೈರ್ಯ
ನಾನು ಬಹಳ ಸಲ ಗಮನಿಸಿದ್ದೇನೆ, ಹಸಿದವರಿಗೆ ಊಟ ಕೊಟ್ಟಾಗ ಅವರ ಕಣ್ಣಲ್ಲೊಂದು ಧೈರ್ಯ ಕಾಣುತ್ತೆ. ಇನ್ನು ನಾನು ಬದುಕಬಲ್ಲೆ ಅನ್ನೋ ಧೈರ್ಯ ಅದು. ಅದನ್ನು ಕಂಡಾಗ ಧನ್ಯತೆ ಮೂಡುತ್ತೆ. ಉತ್ತರ ಭಾರತದಿಂದ ಬಂದ ದಿನಗೂಲಿ ನೌಕರರಿಗೆ ಊಟ ಪೂರೈಸುತ್ತಿರುತ್ತೇವೆ. ನಾವಲ್ಲಿಗೆ ಬರೋದಕ್ಕೂ ಮೊದಲು ಅವರು ಅತಂತ್ರ ಸ್ಥಿತಿಯಲ್ಲಿರುತ್ತಾರೆ. ಅವರಿಗೆ ನಮ್ಮ ಭಾಷೆ ಬರೋದಿಲ್ಲ, ದುಡಿಮೆ ಇಲ್ಲದ ಕಾರಣ ಕಾಸಿಲ್ಲ, ಹೊಟ್ಟೆಗೆ ಹಿಟ್ಟಿಲ್ಲ, ಅದು ಸಿಗುವ ಧೈರ್ಯವೂ ಇಲ್ಲ. ಯಾವಾಗ ಹೊಟ್ಟೆಗೆ ಊಟ ಸಿಗುತ್ತೋ ಆಗ ಅವರಿಗೊಂದು ಧೈರ್ಯ ಬಂದು ಬಿಡುತ್ತೆ, ಬದುಕುವ ಧೈರ್ಯ.
ಮಧ್ಯಪ್ರದೇಶದಲ್ಲಿ ಬೆಳೆದ ಕಿರಣ್ ರಾಜ್ ಈಗ ಕನ್ನಡತಿಯ ಜನ ಮೆಚ್ಚಿದ ಹೀರೋ
ಮಂಗಳಮುಖಿಯರ ಕಷ್ಟ
ಇಂಥಾ ಟೈಮ್‌ನಲ್ಲಿ ಬಹಳ ಸಂಕಷ್ಟಕ್ಕೆ ಸಿಲುಕುವವರು ಮಂಗಳಮುಖಿಯರು. ಅವರಿಗೆ ಅಷ್ಟೂ ದಿನ ಸಂಪಾದನೆ ಇಲ್ಲ. ಫ್ಯಾಮಿಲಿಯ ಸಪೋರ್ಟೂ ಇರಲ್ಲ. ಅದೆಲ್ಲ ಬಿಡಿ, ನೆರವು ಸಿಗಬೇಕು ಅಂದರೆ ಬೇಸಿಕ್ ಐಡೆಂಟಿಟಿ ಕಾರ್ಡ್‌ಗಳಾದ್ರೂ ಬೇಕಲ್ವಾ, ಹೆಚ್ಚಿನವರಲ್ಲಿ ಅದೂ ಇರಲ್ಲ. ಕೆಲವೇ ಕೆಲವರಿಗೆ ರೇಷನ್ ಕಾರ್ಡ್ ಇರುತ್ತೆ. ಅವರು ಕರೆ ಮಾಡಿ ನಮ್ಮಲ್ಲಿಂದ ಊಟ ತರಿಸ್ಕೊಳ್ತಾರೆ. ಅಲ್ಲಿಗೆ ಹೋದಾಗ ತಮ್ಮ ಕಷ್ಟಗಳನ್ನೆಲ್ಲ ಹಂಚಿಕೊಳ್ಳುತ್ತಾರೆ.
ಆ ಪುಟ್ಟ ಮಗು, ನಂಗಿಷ್ಟೇ ಸಾಕು ಅಂದಿತ್ತು
ಬಡ ಜನರಲ್ಲಿ ದುರಾಸೆ ಹೆಚ್ಚು ಅನ್ನೋದು ಸುಳ್ಳು. ಕಳೆದ ಬಾರಿ ಬಹಳ ಕಷ್ಟದಲ್ಲಿದ್ದ ಒಂದು ಸ್ಲಮ್‌ಗೆ ಊಟ ತಗೊಂಡು ನಮ್ಮ ಟೀಮ್ ಜೊತೆಗೆ ಹೋಗಿದ್ದೆ. ಸುಮಾರು 200 ಜನ ಮೂರು ದಿನಗಳಿಂದ ಊಟ ಇಲ್ಲದೇ ಹಸಿದುಕೊಂಡಿದ್ದರು. ಒಂದು ಸಣ್ಣ ಮಗು ಅನ್ನಕ್ಕಾಗಿ ಪ್ಲೇಟ್ ಮುಂದೆ ಚಾಚಿತು. ತುಂಬ ಹಸಿದುಕೊಂಡಿದೆಯಲ್ಲ ಅಂತ ಸ್ವಲ್ಪ ಹೆಚ್ಚು ಅನ್ನ ಹಾಕಿದೆ. ಅದು ತಗೊಳ್ಳೋದಕ್ಕೇ ಒಪ್ಪಲಿಲ್ಲ. ನಂಗೆ ಇಷ್ಟೇ ಸಾಕು, ಉಳಿದಿದ್ದು ಪಕ್ಕದ ಮನೆ ಆಂಟಿ ಮಕ್ಕಳಿಗಾಯ್ತು ಅಂದಿತು. ಆ ಮಗುವಿನ ಯೋಚನೆ ನಮಗೆ ಬದುಕಿನ ಮತ್ತೊಂದು ದರ್ಶನ ಮಾಡಿಸಿತು.
ಕನ್ನಡತಿ ನಟನಿಗೆ ಬಂತು ರಿಯಲ್ ಅಮ್ಮನ ಪತ್ರ: ಕಣ್ಣೀರಾದ ಹರ್ಷ..!
- ಕಿರಣ್‌ರಾಜ್ ಫೌಂಡೇಶನ್ ಬೆಂಗಳೂರಿನ ನಾಗರಭಾವಿ, ಉಲ್ಲಾಳ ಮೊದಲಾದ ಭಾಗಗಳಲ್ಲಿ ನಿತ್ಯ ಸಾವಿರಕ್ಕೂ ಅಧಿಕ ಜನರಿಗೆ ಊಟದ ವ್ಯವಸ್ಥೆ ಮಾಡುತ್ತಿದೆ.
- ಕೊರೋನಾದಿಂದ ಹೋಂ ಕ್ವಾರೆಂಟೈನ್ ಆದವರೂ ಈ ಸಹಾಯ ಪಡೆಯಬಹುದು.
- ದೂರದಲ್ಲಿರುವವರಿಗೆ ಸಹಾಯ ಬೇಕಿದ್ದರೆ, ಫೌಂಡೇಶನ್‌ಗೆ ಕಾಲ್ ಮಾಡಿ ಅವರ ಸಮೀಪದ ಅಂಗಡಿಯ ಯುಪಿಐ ನಂಬರ್ ಕೊಟ್ಟರೆ ಸಾಕು, ಫೌಂಡೇಶನ್‌ನಿಂದ ಆ ಶಾಪ್‌ಗೆ ಹಣ ಹೋಗುತ್ತೆ, ಕಷ್ಟದಲ್ಲಿದ್ದವರು ರೇಶನ್ ಪಡೆಯಬಹುದು.
- ಕಿರಣ್‌ರಾಜ್ ಫೌಂಡೇಶನ್ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ಅವಶ್ಯಕತೆ ತಿಳಿಸಿದರೆ ಅವರಿಂದ ಸಹಾಯ ದೊರಕುತ್ತದೆ.