‘ಕನ್ನಡತಿ’ ಹಾಗೂ ‘ಪುಟ್ಟಗೌರಿ ಮದುವೆ’ ಧಾರಾವಾಹಿಗಳ ಮೂಲಕ ಜನಪ್ರಿಯತೆ ಪಡೆದಿರುವ ನಟಿ ರಂಜನಿ ರಾಘವನ್ ಇದೀಗ ಉತ್ತರ ಕನ್ನಡದ ಯಾಣಕ್ಕೆ ಭೇಟಿ ನೀಡಿದ್ದಾರೆ. ಇಟಲಿ ಪ್ರವಾಸದ ಬಳಿಕ ಯಾಣ ಪ್ರವಾಸ ಕೈಗೊಂಡಿದ್ದಾರೆ.
‘ಪುಟ್ಟಗೌರಿ ಮದುವೆ’ ಹಾಗೂ ‘ಕನ್ನಡತಿ’ ಧಾರಾವಾಹಿಗಳ ಮೂಲಕ ಕಿರುತೆರೆ ಪ್ರೇಕ್ಷಕರ ಮನಗೆದ್ದಿರುವ ನಟಿ ರಂಜನಿ ರಾಘವನ್, ಇದೀಗ ನಟನೆಯ ಜೊತೆಗೆ ಪ್ರವಾಸಕ್ಕೂ ಹೆಚ್ಚಿನ ಸಮಯ ನೀಡುತ್ತಿದ್ದಾರೆ. ದೇಶ-ವಿದೇಶಗಳ ಸುಂದರ ತಾಣಗಳಿಗೆ ಭೇಟಿ ನೀಡುತ್ತಾ, ಅಲ್ಲಿನ ಅನುಭವಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಳ್ಳುತ್ತಿದ್ದಾರೆ.
ಇತ್ತೀಚೆಗಷ್ಟೇ ರಂಜನಿ ರಾಘವನ್ ಅವರು ಒಂಟಿಯಾಗಿ ಇಟಲಿ ಪ್ರವಾಸ ಕೈಗೊಂಡು ಗಮನ ಸೆಳೆದಿದ್ದರು. ಇದೀಗ ತಮ್ಮ ಪ್ರವಾಸದ ಪಟ್ಟಿಗೆ ಉತ್ತರ ಕನ್ನಡದ ಯಾಣವನ್ನೂ ಸೇರಿಸಿಕೊಂಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿರುವ ಯಾಣಕ್ಕೆ ಭೇಟಿ ನೀಡಿರುವ ರಂಜನಿ ರಾಘವನ್, ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿದಿದ್ದಾರೆ. ಪ್ರವಾಸದ ಕೆಲ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ನಟಿ, ಯಾಣದ ವಿಶೇಷತೆ ಮಾತ್ರವಲ್ಲದೆ, ಈ ಪ್ರಸಿದ್ಧ ಪ್ರವಾಸಿ ತಾಣದ ಹಿಂದಿರುವ ಕಥೆಯನ್ನೂ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಕಪ್ಪು ಬಣ್ಣದ ವಿಶಿಷ್ಟ ಶಿಲಾರಚನೆಗಳು, ಸುತ್ತಲಿನ ಹಸಿರು ಪ್ರಕೃತಿ ಹಾಗೂ ವಿಭಿನ್ನ ವಾತಾವರಣದಿಂದ ಪ್ರವಾಸಿಗರನ್ನು ಸೆಳೆಯುವ ಯಾಣ, ರಂಜನಿ ರಾಘವನ್ ಅವರಿಗೂ ವಿಶೇಷ ಅನುಭವ ನೀಡಿದಂತಿದೆ. ನಟಿಯ ಈ ಪ್ರವಾಸದ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿವೆ.
ಪೋಸ್ಟ್‌ನಲ್ಲಿ ಏನಿದೆ?
ಯಾಣದ ಹಿಂದಿನ ಕಥೆ - ಸಾವಿರಾರು ವರ್ಷಗಳ ಹಿಂದೆ.. ವಿಜ್ಞಾನಕ್ಕೆ ಇವತ್ತಿನ ಭಾಷೆ ಇರಲಿಲ್ಲ. ಆದರೆ ಮನುಷ್ಯನಿಗೆ ಕುತೂಹಲ ಇತ್ತು. ಆ ಕಾಲದಲ್ಲಿ ಯಾಣದ ಈ ಕಪ್ಪು ಬಂಡೆಗಳ ನಡುವೆ ನಿಂತಾಗ, ಭಸ್ಮಾಸುರ-ಮೋಹಿನಿ ಯಾರ ಮನಸ್ಸಲ್ಲಾದರೂ ಖಂಡಿತ ಹುಟ್ಟಿಕೊಳ್ತಾರೆ. ಭಸ್ಮಾಸುರ ತಪಸ್ಸು ಮಾಡಿ ಶಿವನಿಂದ ವರ ಪಡೀತಾನೆ. ತಾನು ಯಾರ ತಲೆಯ ಮೇಲೆ ಕೈ ಇಟ್ಟರೂ ಅವರು ಭಸ್ಮವಾಗಬೇಕು ಅಂತ. ಆ ಶಕ್ತಿಯನ್ನೇ ಶಿವನ ಮೇಲೆ ಪ್ರಯೋಗಿಸಲು ಹೊರಟಾಗ, ವಿಷ್ಣು ಮೋಹಿನಿಯ ರೂಪದಲ್ಲಿ ಬಂದು ಅವನೇ ಭಸ್ಮವಾಗೋ ತರ ಮಾಡ್ತಾನೆ. ಇದು ಕೇವಲ ದೇವರು-ಅಸುರರ ಕಥೆ ಅಷ್ಟೇ ಅಲ್ಲ ಅನ್ಸತ್ತೆ.
ನಮ್ಮ ಪೂರ್ವಜರು ಶಕ್ತಿ, ಅಹಂಕಾರ, ಮೋಹ, ಬುದ್ಧಿವಂತಿಕೆ ಮತ್ತು ಮನುಷ್ಯನ ಮನಸ್ಸಿನ ಬಗ್ಗೆ ಹೇಳಬೇಕಿದ್ದ ಕೆಲವು ವಿಚಾರಗಳನ್ನ ಕಥೆಗಳ ರೂಪದಲ್ಲಿ ಉಳಿಸಿಕೊಂಡಿರಬಹುದಲ್ವಾ? ಇವತ್ತು ನಾವು psychology, philosophy, science ಅಂತ ಬೇರೆ ಬೇರೆ ಪದಗಳನ್ನು ಬಳಸುತ್ತೇವೆ. ಅವರು ಅದನ್ನೇ ಕಥೆಗಳ ಮೂಲಕ ಹೇಳುತ್ತಿದ್ದರು. ಅದಕ್ಕೇ ನನಗೆ ನಮ್ಮ ಪುರಾಣಗಳ ಬಗ್ಗೆ ಕುತೂಹಲ. ಅವು ನಡೆದಿದ್ದವೋ ಇಲ್ಲವೋ ಅನ್ನುವುದಕ್ಕಿಂತ.. ಅವುಗಳನ್ನು ಕಲ್ಪಿಸಿದ ಮನಸ್ಸು ಅಷ್ಟು ಸಾವಿರ ವರ್ಷಗಳ ಹಿಂದೆ ಇಷ್ಟೊಂದು ದೂರ ಹೇಗೆ ಯೋಚಿಸಿತು ಅನ್ನೋದೇ ನನಗೆ ವಿಸ್ಮಯ! ನಿಮಗೆ ಯಾಣ ಅಂದ್ರೆ ಏನು ನೆನಪಾಗುತ್ತೆ? ಎಂದು ಬರೆದುಕೊಂಡಿದ್ದಾರೆ.


