Kannadathi : ಚಿತ್ಕಳಾ ನಿಜ ಹೆಸರು ಊರ್ಮಿಳಾ, ಅದ್ಯಾಕೆ ಹೆಸರು ಬದಲಿಸಿದ್ರು?
ಕನ್ನಡತಿಯಲ್ಲಿ ಅಮ್ಮಮ್ಮ ಅರ್ಥಾತ್ ರತ್ನಮಾಲಾ ಪಾತ್ರ ಮಾಡ್ತಿರೋ ಚಿತ್ಕಳಾ ಬಿರಾದಾರ್‌ಗೆ ಅವರ ಹೆಸರಿನ ವಿಷಯಕ್ಕೆ ಹೆಮ್ಮ ಮತ್ತು ಬೇಜಾರು ಎರಡೂ ಇದೆಯಂತೆ. ಊರ್ಮಿಳಾ ಅಂತಿದ್ದ ಅವರ ಹೆಸರು ಚಿತ್ಕಳಾ ಆಗಿದ್ದರ ಹಿಂದೆ ಇಂಟರೆಸ್ಟಿಂಗ್ ಕಥೆ ಇದೆ.
ಚಿತ್ಕಳಾ ಬೀರಾದಾರ್ ಕನ್ನಡತಿಯ ಅಮ್ಮಮ್ಮನಾಗಿ ಮನೆಮಾತಾದ ನಟಿ. ಇವರ ಖ್ಯಾತಿ ಎಲ್ಲೀವರೆಗೆ ಹಬ್ಬಿದೆ ಅಂದರೆ ಮೊನ್ನೆ ಮೊನ್ನೆ ಅಮೆರಿಕಾಗೆ ಹೋಗಿದ್ದಾಗ ಅಲ್ಲೂ ಇವರ ಫ್ಯಾನ್ಸ್ ಕಂಡು ಮನೆಯವರೇ ಇವರ ಜನಪ್ರಿಯತೆಗೆ ಬೆರಗಾಗಿದ್ದಾರೆ. 'ಕನ್ನಡತಿ' ಸೀರಿಯಲ್‌ನಲ್ಲಿ ಬರುವ ಈ ಕನ್ನಡತಿ ಬಗ್ಗೆ ಕನ್ನಡಿಗರು ಅದೆಷ್ಟು ಕನೆಕ್ಟ್ ಆಗಿದ್ದಾರೆ ಅಂದರೆ ತನ್ನ ತಾಯಿಯನ್ನು ಕಳೆದುಕೊಂಡ ಒಬ್ಬ ಹೆಣ್ಣುಮಗಳು ಅವರ ಬಳಿ ಬಂದು ತನ್ನ ತಾಯಿಯ ಸೀರೆಗಳನ್ನೆಲ್ಲ ಅವರಿಗೆ ಕೊಟ್ಟು ಇದರಲ್ಲಿ ಒಂದನ್ನಾದರೂ ಕನ್ನಡತಿ ಸೀರಿಯಲ್‌ನಲ್ಲಿ ಉಟ್ಟುಕೊಳ್ಳಬೇಕು, ಆಗಲೇ ತಾಯಿ ಆತ್ಮಕ್ಕೆ ಶಾಂತಿ ಸಿಗೋದು ಅಂದಿದ್ರಂತೆ. ಇವರ ಮನೆಯಲ್ಲಿ ಇವರ ಪತಿಯೇ ಕನ್ನಡತಿ ಸೀರಿಯಲ್ ನ ಕಟ್ಟಾ ಅಭಿಮಾನಿ. ಹೆಂಡ್ತಿ ಹತ್ರ ಮುಂದೇನಾಗುತ್ತೆ ಅಂತ ಕುತೂಹಲದಿಂದ ಕೇಳ್ತಾರಂತೆ. ಚಿತ್ಕಳಾ ಅದಕ್ಕೆ ಉತ್ತರ ಏನೋ ಕೊಡ್ತಾರೆ, ಆದರೆ ಅದು ಯಾವತ್ತೂ ಸತ್ಯ ಆಗಿರಲ್ವಂತೆ. ಅದನ್ನು ನೋಡಿ ಈಗೀಗ ಅವರ ಗಂಡ, ಸ್ನೇಹಿತರು, ಬಂಧುಗಳು ಸೀರಿಯಲ್‌ನಲ್ಲಿ ಮುಂದೇನಾಗುತ್ತೆ ಅನ್ನೋದನ್ನು ಕೇಳೋದನ್ನೇ ಬಿಟ್ಟಿದ್ದಾರಂತೆ. ಇದಕ್ಕಿಂತ ಇಂಟೆರೆಸ್ಟಿಂಗ್ ಅನಿಸೋದು ಚಿತ್ಕಳಾ ಅವರ ಹೆಸರಿನ ಹಿಂದಿನ ಅಚ್ಚರಿ. ಇವರು ಹುಟ್ಟಿದಾಗ ಇಟ್ಟ ಹೆಸರು ಊರ್ಮಿಳಾ ಅಂತ. ಚಿಕ್ಕ ಮಗುವಿದ್ದಾಗ ಇದ್ದ ಈ ಹೆಸರು ಚಿತ್ಕಳಾ ಆಗಿ ಬದಲಾದದ್ದು ಇಂಟರೆಸ್ಟಿಂಗ್ ಸ್ಟೋರಿ.
ಚಿತ್ಕಳಾ ಮೂಲತಃ ಉತ್ತರ ಕರ್ನಾಟಕದ ಕಲಬುರಗಿಯವ್ರು. ಬೆಂಗಳೂರಿಗೆ ಬಂದು ಬಹಳ ವರ್ಷಗಳಾಗಿವೆ. ಇಲ್ಲಿ, ವಿದೇಶದಲ್ಲಿ ಇವರು ಇಂಗ್ಲೀಷ್ ಪಾಠ ಮಾಡಿದ್ದಾರೆ. ಈ ಕಾರಣಕ್ಕೋ ಏನೋ ಇವರದೀಗ ಬೆಂಗಳೂರು ಕನ್ನಡವೇ ಇದೆ. ಆದರೆ ಉತ್ತರ ಕರ್ನಾಟಕದ ಕಲಬುರ್ಗಿ ಕಡೆಯ ಕನ್ನಡವನ್ನು ಚೆಂದವಾಗಿ ಮಾತಾಡ್ತಾರೆ. ಚಿತ್ಕಳಾ ಅವರ ತಂದೆ ಸಾಹಿತಿಗಳು. ಈ ಕಾರಣಕ್ಕೋ ಏನೋ ಚಿತ್ಕಳಾ ಅವರ ಭಾಷೆ ಸ್ವಚ್ಛ, ಸುಲಲಿತ. ಜೊತೆಗೆ ಇವರೂ ಸಾಹಿತ್ಯ ಓದಿಕೊಂಡಿರೋದು ಇದಕ್ಕೆ ಕಾರಣ ಇರಬಹುದು. ಮಾತಿನ ಸ್ಪಷ್ಟತೆ, ಪಾತ್ರಕ್ಕೆ ಬೇಕಾದ ಗಾಂಭೀರ್ಯ, ಉತ್ತಮ ಅಭಿನಯ ಇವೆಲ್ಲ ಇರುವ ಕಾರಣ ಇವರ ಪಾತ್ರ ಸೀರಿಯಲ್‌ನಿಂದ ಮಿಸ್ ಆಯ್ತು ಅಂದಕೂಡಲೇ ವೀಕ್ಷಕರ ಗೊಣಗಾಟ ಶುರುವಾಗುತ್ತೆ.
ಇದಕ್ಕೆ ಇವರ ಗಂಡ, ಅಮ್ಮ, ಅಪ್ಪನೂ ಹೊರತಲ್ವಂತೆ. ಹಾಗಂತ ಅದನ್ನೇನೋ ಚಿತ್ಕಳಾ ಕೊಚ್ಚಿಕೊಳ್ಳಲ್ಲ. ಹೆತ್ತವರಿಗೆ ಹೆಗ್ಗಣ ಮುದ್ದು ಅಂದ ಹಾಗೆ ನಮ್ಮ ಮನೆಯವರಿಗೆ ನನ್ನ ಪಾತ್ರ ಮುದ್ದು ಅಂದು ಸುಮ್ಮನಾಗ್ತಾರೆ. ಆದರೆ ಸೋಷಿಯಲ್ ಮೀಡಿಯಾ(Social media)ದಲ್ಲಿ ಬರುವ ಕಮೆಂಟ್(Comement) ಗಳು ಮಾತ್ರ ಅವರು ಈ ವಿಚಾರವನ್ನು ನಂಬೋ ಹಾಗೆ ಮಾಡುತ್ತೆ. ಆದರೆ ಅಮ್ಮನ ಈ ಜನಪ್ರಿಯತೆ ಚಿಕ್ಕ ಮಗನಿಗೆ ಚೆನ್ನಾಗಿ ಅರಿವಾಗಿದೆ. ಆದರೆ ದೊಡ್ಡ ಮಗನಿಗೆ ಇಷ್ಟು ದಿನ ಗೊತ್ತಿರಲಿಲ್ಲ. ಈಗ ಅವರು ಅಮೆರಿಕಗೆ ಹೋದಮೇಲೆ ಅಲ್ಲೂ ಅವರಿಗಿರುವ ಫ್ಯಾನ್ಸ್(Fans) ನೋಡಿ ದೊಡ್ಡ ಮಗನಿಗೂ ಅಮ್ಮ ಅಂದ್ಕೊಂಡಂಗಲ್ಲ ಅನಿಸಿಬಿಟ್ಟಿದೆ.
ಕನ್ನಡತಿ: ಬೆಂಗಳೂರಿಗೆ ಬಂದಿಳಿದ ಚೀತ್ಕಳಾ, ಅಮ್ಮಮ್ಮನ ಎಂಟ್ರಿ ಸೂಚನೆಯೂ ಸಿಕ್ತು!
ಇನ್ನು ಹೆಸರಿನ ವಿಷಯಕ್ಕೆ ಬರೋದಾದ್ರೆ ಚಿತ್ಕಳಾ ಅವಳಿಗೆ ಹುಟ್ಟಿದ ಕೂಡಲೇ ಇಟ್ಟ ಹೆಸರು ಊರ್ಮಿಳಾ. ಆದರೆ ಸ್ವತಃ ಚಿತ್ಕಳಾ ಅವರಿಗೇ ಈ ಹೆಸರು ಇಷ್ಟ ಆಗ್ತಿರಲಿಲ್ಲ. ಮನೆಯವರಿಗೂ ಅದೇನನಿಸಿತೋ ಏನೋ, ಇವ್ರಿಗೆ ಎರಡು- ಮೂರು ವರ್ಷ ವಯಸ್ಸಾದಲೇ ಹೆಸರನ್ನು ಚಿತ್ಕಳಾ ಅಂತ ಬದಲಾಯಿಸಿದರಂತೆ. ಚಿತ್ಕಳಾ ಅಂದರೆ ಪಾರ್ವತಿ ಹೆಸರಂತೆ. ಶಿವನ ಚಿತ್ತದ ಕಳೆದ ಚಿತ್ಕಳೆ, ಅದು ಚಿತ್ಕಳೆ ಹೋಗಿ ಇವರಿಗೆ ಹೆಸರಿಡುವಾಗ ಚಿತ್ಕಳಾ ಆಯ್ತಂತೆ. ಲಲಿತಾ ಸಹಸ್ರನಾಮದಲ್ಲೂ ಈ ಹೆಸರು ಬರುತ್ತಂತೆ. ಚಿತ್ಕಳಾ ಅವರಿಗೆ ತನ್ನ ಹೆಸರಿನ ಬಗ್ಗೆ ಖುಷಿ ಇದೆ. ಆದರೆ ಅವರಿಗಿರುವ ಒಂದು ಬೇಜಾರು ಅಂದರೆ ಅವರ ಹೆಸರನ್ನು ಎಲ್ಲೂ ಸರಿಯಾಗಿ ಬರೆಯೋದಿಲ್ಲ ಅನ್ನೋದು. ಇಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲೆಲ್ಲೂ ಅವರ ಹೆಸರು ಕರೆಕ್ಟಾಗಿ ಬರೆದಿಲ್ವಂತೆ. ಈಗೀಗ ಎಲ್ಲ ಕಡೆ ಇವರ ಹೆಸರು ಓಡಾಡ್ತಿದೆ. ಜನ ಸೋಷಿಯಲ್ ಮೀಡಿಯಾದಲ್ಲಿ, ಯೂಟ್ಯೂಬ್(Youtube)ಗಳಲ್ಲೆಲ್ಲ ಇವರ ಹೆಸರನ್ನು ತಪ್ಪಾಗಿಯೇ ಬರೀತಾರಂತೆ.
ಚಿತ್ಕಲಾಗೀಗಿ 50K ಫ್ಯಾನ್ಸ್! ಖುಷಿ ಹಂಚಿಕೊಂಡ ಕನ್ನಡತಿ ಅಮ್ಮಮ್ಮ!