ಕೊರೋನಾದಿಂದ ಕುಟುಂಬದ ಇಬ್ಬರು ಸದಸ್ಯರನ್ನು ಕಳೆದುಕೊಂಡ ನಟಿ ವರ್ಷಿತಾ ಮನಸ್ಸು ಧೈರ್ಯ ಮಾಡಿಕೊಂಡು, ಜೀವನ ಸಾಗಿಸಿದ ಕ್ಷಣಗಳ ಬಗ್ಗೆ ಹಂಚಿಕೊಂಡಿದ್ದಾರೆ.
'ಕಸ್ತೂರಿ ನಿವಾಸ' ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಲೋಕದ ಚಿರಪರಿಚಿತ ನಟಿ ವರ್ಷಿತಾ ಕುಟುಂಬಕ್ಕೆ ಕೊರೋನಾ ಸೋಂಕು ತಗುಲಿದ ಕಾರಣ ಧಾರಾವಾಹಿಯಿಂದ ಹೊರ ಬಂದರು. ಕುಟುಂಬ ಆರೈಕೆಯಲ್ಲಿ ತೊಡಗಿಸಿಕೊಂಡ ವರ್ಷಿತಾಗೆ ಕೊರೋನಾ ಪಾಸಿಟಿವ್ ಬಂದಿತ್ತು. ಆದರೂ ಧೈರ್ಯ ಕಳೆದುಕೊಳ್ಳದೇ ಗಟ್ಟಿಗಿತ್ತಿಯಾಗಿ ನಿಂತ, ವರ್ಷಿತಾ ಜೀವನ ಹೇಗೆ ಎದುರಿಸಿದ್ದರು ಎಂದು ಟೈಮ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಕೊರೋನಾ ಪಾಸಿಟಿವ್ ಕಾರಣ ಧಾರಾವಾಹಿಯಿಂದ ಹೊರ ನಡೆದ ನಟಿ ವರ್ಷಿತಾ!
ಕುಟುಂಬದ ಆರೋಗ್ಯ ಮುಖ್ಯ:
ಅಪ್ಪ, ಅಮ್ಮ, ಅಣ್ಣ ಮತ್ತು ಅಜ್ಜಿಗೆ ಕೊರೋನಾ ಪಾಸಿಟಿವ್ ಬಂದಿತ್ತು. 'ಕಸ್ತೂರಿ ನಿವಾಸ' ಧಾರಾವಾಹಿ ಚಿತ್ರೀಕರಣದಿಂದ ಬ್ರೇಕ್ ತೆಗೆದುಕೊಂಡು ನಾನು ತಾಯಿ ಮನೆಗೆ ಹೋದೆ. ತಂದೆ ಆರೋಗ್ಯ ಸ್ಥಿತಿ ಗಂಭೀರವಾದ ಕಾರಣ ನಾವು ಆಸ್ಪತ್ರೆಗೆ ದಾಖಲಿಸಿದೆವು. ಸ್ವಲ್ಪ ದಿನಗಳಲ್ಲಿ ನನಗೂ ರೋಗ ಲಕ್ಷಣಗಳು ಕಾಣಿಸಿಕೊಂಡಿತ್ತು. ವಾಸನೆ ಇಲ್ಲ, ಜ್ವರ ಹಾಗೂ ಸುಸ್ತು ಹೆಚ್ಚಾಗಿತ್ತು. ವೈದ್ಯರ ಸಲಹೆ ಮತ್ತು ಚಿಕಿತ್ಸೆ ಪಡೆದು ನಾನೂ ಐಸೋಲೇಟ್ ಆದೆ. 16 ದಿನಗಳ ನಂತರ ಕೋವಿಡ್ ಟೆಸ್ಟ್ ಮಾಡಿಸಿದೆ. ಆದರೂ ಪಾಸಿಟಿವ್ ಬಂತು. 5 ದಿನಗಳ ನಂತರ ಖಾಸಗಿ ಆಸ್ಪತ್ರೆಯಲ್ಲಿ ಟೆಸ್ಟ್ ಮಾಡಿಸಿದಾಗ ನೆಗೆಟಿವ್ ಬಂತು. ಆದರೂ ಆತಂಕ ಕಡಿಮೆ ಆಗಿರಲಿಲ್ಲ.
![]()
'ಜ್ವರ ಬಂದಾಗ ನನಗೆ ಮುಟ್ಟಿನ ಸಮಯ. ನನಗೆ PCOD ಇದೆ. ಮೂಡ್ ಸ್ವಿಂಗ್ ಹೆಚ್ಚಾಗಿತ್ತು. ನನಗೆ ಶಕ್ತಿ ಇಲ್ಲದಿದ್ದರೂ ಏನಾದರೂ ಒಂದು ಕೆಲಸ ಮಾಡಬೇಕು ಅಂತ ಮನೆಯಲ್ಲಿ ಓಡಾಡುತ್ತಿದ್ದೆ. ಈ ಸಮಯದಲ್ಲಿ ಚಿತ್ರೀಕರಣ ಮಾಡುವುದು ಸರಿಯಲ್ಲ, ನನ್ನಿಂದ ತಂಡಕ್ಕೆ ತೊಂದರೆ ಆಗಬಾರದು ಎಂದು ಧಾರಾವಾಹಿಯಿಂದ ಹೊರ ಬಂದೆ. ಇದೇ ಸಮಯಕ್ಕೆ ಮನೆಯಲ್ಲಿ ಅಜ್ಜಿ ಕೊನೆಯುಸಿರೆಳೆದರು. ಎರಡು ದಿನಗಳ ಅಂತರದಲ್ಲಿ ತಂದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಕೊನೇ ಕ್ಷಣದಲ್ಲಿ ತಂದೆಯನ್ನು ನೋಡಲು ಆಗಲಿಲ್ಲ, ಎಂಬ ನೋವು ಈಗಲೂ ನಮ್ಮನ್ನು ಕಾಡುತ್ತಿದೆ. ಅಮ್ಮನಿಗಾಗಿ ಧೈರ್ಯ ತೆಗೆದುಕೊಳ್ಳುವೆ. ನಾನು ಭಾವುಕ ವ್ಯಕ್ತಿ, ಎಲ್ಲರ ಎದುರು ಧೈರ್ಯದಿಂದ ಇರುತ್ತಿದ್ದೆ. ಒಬ್ಬಳೇ ಇದ್ದರೆ ಅಳುತ್ತೇನೆ, ' ಎಂದು ವರ್ಷಿತಾ ಮಾತನಾಡಿದ್ದಾರೆ.
