ತೂಕದ ಬಗ್ಗೆ ನನಗೆ ಪ್ರಶ್ನೆ ಮಾಡಿದ್ದರು ಎಂದು ನಟಿ ಹಿತಾ ಚಂದ್ರಶೇಖರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ದಪ್ಪಗಿದ್ದರೂ ಮಾತಾಡ್ತಾರೆ, ಸಣ್ಣ ಆದರೂ ಮಾತಾಡ್ತಾರೆ ಎಂದು ಅವರು ಹೇಳಿದ್ದಾರೆ.
ಇತ್ತೀಚೆಗೆ ಪತ್ರಕರ್ತರೊಬ್ಬರು ತಮಿಳು ನಟಿ ಗೌರಿ ಕಿಶನ್ ಅವರಿಗೆ ನಿಮ್ಮ ತೂಕ ಎಷ್ಟು ಎಂದು ಕೇಳಿದ್ದಾರೆ. ಆಗ ಗೌರಿಗೆ ಸಿಟ್ಟು ತಂದಿದ್ದು, ಇದರ ಬಿರುದ್ಧ ಸಿಡಿದೆದ್ದರು. ಬಾಡಿ ಶೇಮಿಂಗ್ ಮಾಡುವ ವಿಚಾರಕ್ಕೆ ಸಂಬಂಧಪಟ್ಟಂತೆ ಈಗ ಭಾರತದಲ್ಲಿ ದೊಡ್ಡ ಸಂಚಲನ ಸೃಷ್ಟಿಯಾಗಿದೆ. ಈಗ ಕನ್ನಡ ನಟಿ ಹಿತಾ ಚಂದ್ರಶೇಖರ್ ಕೂಡ ತನಗೂ ಈ ರೀತಿ ಅನುಭವ ಆಗಿದೆ ಎಂದಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಏನಾಯ್ತು?
2022 ರ ಸಮಯವದು, ಒಂದು ಪತ್ರಿಕಾಗೋಷ್ಠಿಯಲ್ಲಿ ಕ್ಯಾಮೆರಾಗಳಿಲ್ಲದಿದ್ದಾಗ ಒಂದು ಘಟನೆ ನಡೆಯಿತು,. ಅದನ್ನು ನಾನು ಇದುವರೆಗೂ ಎಂದಿಗೂ ಮಾತನಾಡಿಲ್ಲ. ಕ್ಯಾಮೆರಾಗಳು ಆಫ್ ಆಗಿದ್ದಾಗ, ನಮ್ಮಲ್ಲಿ ಕೆಲವರು ಅನೌಪಚಾರಿಕವಾಗಿ ಮಾತನಾಡುತ್ತಿದ್ದರು. ಒಂದು ಮಾಧ್ಯಮದವರು ನನ್ನ ಬಳಿಗೆ ಬಂದು, "ಓಹ್, ಮದುವೆ ದಪ್ಪ ಆಗಿದ್ದೀರಿ ಅಂತ ಕಾಣತ್ತೆ, ಬ್ಯಾಲೆನ್ಸ್ ಮಾಡಬೇಕು ಅಲ್ವಾ?" ಎಂದು ಪ್ರಶ್ನೆ ಮಾಡಿದರು. ಆಗ ನನಗೆ ಹೇಗೆ ರಿಯಾಕ್ಟ್ ಮಾಡಬೇಕು ಎಂದು ಗೊತ್ತಾಗಲಿಲ್ಲ, ನಾನು ನಕ್ಕು ಬಂದೆ,
ನನಗೆ ಏನು ಹೇಳಬೇಕು ಅಂತ ಗೊತ್ತಾಗಲಿಲ್ಲ
ನನಗೆ ಹೇಗೆ ರಿಯಾಕ್ಟ್ ಮಾಡಬೇಕು ಅಂತ ಗೊತ್ತಾಗಲಿಲ್ಲ, ನಾನು ತಲೆ ಅಲ್ಲಾಡಿಸಿ ನಕ್ಕು ಬಂದೆ, ಇದು ಅನೇಕ ಮಹಿಳೆಯರ ವಾಸ್ತವವಾಗಿದೆ. ಕೆಲವೊಮ್ಮೆ ನೀವು ಅದನ್ನು ಆಮೇಲೆ ಅರ್ಥಮಾಡಿಕೊಳ್ಳುತ್ತೀರಿ. ನಮ್ಮ ಜೀವನದಲ್ಲಿ ಇಂತಹ ಕಾಮೆಂಟ್‌ಗಳನ್ನು ನಾವು ನಿರೀಕ್ಷಿಸುವುದಿಲ್ಲ. ವಿಶೇಷವಾಗಿ ಆಫೀಸ್‌ನಲ್ಲಿಯೂ ಹೀಗೆ ಆಗುತ್ತದೆ. ಆದ್ದರಿಂದ ನಾವು ಆ ಕ್ಷಣದಲ್ಲಿ ಬ್ಲ್ಯಾಂಕ್ ಆಗುತ್ತೇವೆ ಅಥವಾ ಅದನ್ನು ಸುಮ್ಮನೆ ತಳ್ಳಿಹಾಕಿ ಬಿಡ್ತೀವಿ.
ಮತ್ತೆ ಮೆಸೇಜ್ ಮಾಡಿದ್ರು
ಕೆಲವು ವರ್ಷಗಳ ನಂತರ, ನಾನು ಉದ್ದೇಶಪೂರ್ವಕವಾಗಿ ತೂಕ ಇಳಿಸಿಕೊಂಡೆ. ಅದೇ ವ್ಯಕ್ತಿ ನನಗೆ ವ್ಯಾಟ್ಸಪ್ ಮೆಸೇಜ್ ಮಾಡಿದರು. “ಓಹ್ ಮೈ ಗಾಡ್, ನೀವು ಸಿಕ್ಕಾಪಟ್ಟೆ ಸಣ್ಣ ಆಗಿದ್ದೀರಿ ಎಂದರು. ನಾನು ನನ್ನ ಮೇಲೆ ವರ್ಕ್ ಮಾಡುತ್ತಿದ್ದೇನೆ ಎಂದು ಹೇಳಿದೆ. ಆಮೇಲೆ ಅವರು ಹುಷಾರಾಗಿರಿ, ಕಾಳಜಿ ಮಾಡಿ ಎಂದರು. ನನ್ನ ಆರೋಗ್ಯ ಅಥವಾ ನಾನು ಮಾಡಿದ್ದು ಏನಾದರೂ ತಪ್ಪಾಗಿದೆಯಾ ಎಂದು ಯೋಚನೆ ಮಾಡಿದೆ. ಅವರು ಹೇಳಿದ ಮಾತು ಮನಸ್ಸಿನಲ್ಲಿಯೇ ಉಳಿದುಕೊಂಡಿತ್ತು” ಎಂದು ಅವರು ಹೇಳಿದ್ದಾರೆ.
ಇನ್ನು ನಾನು ಸುಮ್ನ ಇರಲ್ಲ
ಇದುವೇ ನಿಜವಾದ ಸಮಸ್ಯೆಯಾಗಿದೆ. ಒಂದು ಮಹಿಳೆ ತೂಕ ಹೆಚ್ಚಿಸಿಕೊಂಡರೂ ಅಥವಾ ತೂಕ ಇಳಿಸಿಕೊಂಡರೂ ಜನರಿಗೆ ಸಮಸ್ಯೆ ಆಗುತ್ತದೆ. ಎರಡೂ ರೀತಿಯಲ್ಲಿ ತೀರ್ಪು ಕೊಡುತ್ತಾರೆ. ನನ್ನ ವಿಷಯದಲ್ಲಿ, ಇದು ಈಗಾಗಲೇ ನನ್ನೊಂದಿಗೆ ಒಂದು ಬಾರಿ ಗಡಿ ಮೀರಿ ಮಾತನಾಡಿದ್ದ ಅದೇ ವ್ಯಕ್ತಿಯಿಂದ ಬಂದಿತ್ತು. ಇಂತಹ ವಿಷಯಗಳು ಕ್ಯಾಮೆರಾ ಇಲ್ಲದೆ, ಯಾರೂ ನೋಡದ ಕ್ಷಣಗಳಲ್ಲಿ ಸದ್ದಿಲ್ಲದೆ ಆಗಿ ಬಿಡುತ್ತದೆ, ಇದನ್ನೆಲ್ಲ ಮಹಿಳೆಯರು ಸೌಜನ್ಯದಿಂದ ಸ್ವೀಕರಿಸಬೇಕು ಎಂದು ಹೇಳ್ತಾರೆ. ಇನ್ನು ಮುಂದೆ ಹಾಗೆ ಆಗೋದಿಲ್ಲ.
ನಾನು ಪ್ರಾಮಾಣಿಕವಾಗಿ ಗೌರಿ ಕಿಶನ್ ಅವರಿಂದ ಸ್ಫೂರ್ತಿ ಪಡೆದುಕೊಂಡಿದ್ದೀನಿ. ಇದನ್ನು ಹಾಸ್ಯವಾಗಿ ತಗೊಳೋದಿಲ್ಲ, ಕಾಮಿಡಿ ಇಮೋಜಿಯಿಂದ ರಿಪ್ಲೇ ಕೂಡ ಮಾಡೋದಿಲ್ಲ.


