ಕನ್ನಡತಿ : ಜಗಳವಾಡಿಕೊಂಡ ಹರ್ಷ ಭುವಿ, ಹರ್ಷನಿಗೆ ನೆಟ್ಟಿಗರ ಕ್ಲಾಸ್

ಕನ್ನಡತಿ ಸೀರಿಯಲ್‌ನಲ್ಲಿ ಮದುವೆಯಾದ ಎರಡೇ ದಿನಕ್ಕೆ ಹರ್ಷ ಭುವಿ ನಡುವೆ ದೊಡ್ಡ ವಾಗ್ವಾದ ನಡೆದಿದೆ. ತನಗಾದ ಅವಮಾನಕ್ಕೆ ಪ್ರತಿಯಾಗಿ ಹರ್ಷ, ಮಡದಿ ಭುವಿ ಜೊತೆಗೆ ಕಟುವಾಗಿ ನಡೆದುಕೊಂಡಿದ್ದಾನೆ. ಹರ್ಷನ ಈ ವರ್ತನೆಗೆ ಫ್ಯಾನ್ಸ್ ಕ್ಲಾಸ್ ತಗೊಂಡಿದ್ದಾರೆ.

Harsha and Bhuvi of Kannadathi began quarrel nitizens opposed story

ಸೀರಿಯಲ್ ಅಂದ ಮೇಲೆ ಏರಿಳಿತಗಳಿರೋದು ಸಹಜ. ಕನ್ನಡತಿ ಸೀರಿಯಲ್‌ನಲ್ಲಿ ಇಂಥಾ ಏರಿಳಿತಗಳು ಆರಂಭದಿಂದಲೇ ಬರುತ್ತಿದೆ. ಮಾಲಾ ಕೆಫೆಯ ಸಿಇಓ ಹರ್ಷ ಮತ್ತು ಈ ಸಂಸ್ಥೆ ನಡೆಸುವ ಕಾಲೇಜಲ್ಲಿ ಕನ್ನಡ ಪಾಠ ಮಾಡುವ ಟೀಚರ್ ಭುವಿ ಇವರ ಪರಿಚಯ ಸ್ನೇಹವಾಗಿ, ಆ ಸ್ನೇಹದಲ್ಲೇ ಬಹುಕಾಲ ಕಳೆದು, ನಿಧಾನಕ್ಕಿದು ಪ್ರೀತಿಯಾಗಿ ಅದಕ್ಕೆ ಇಬ್ಬರ ಒಪ್ಪಿಗೆ ಸಿಕ್ಕಿ ಕೆಲ ದಿನಗಳ ಹಿಂದೆ ಮದುವೆಯೂ ಆಗಿ ಹೋಗಿದೆ. ಮದುವೆ ಆದ ಮೇಲೆ ಈ ಸೀರಿಯಲ್ ಮುಗಿದೇ ಹೋಗುತ್ತೆ ಅನ್ನೋ ಗಾಳಿಸುದ್ದಿ ಹಬ್ಬಿತ್ತು. ಆದರೆ ಈಗ ಮದುವೆಯ ಬಳಿಕವೂ ಮುಂದುವರಿದಿದೆ. ಸೀರಿಯಲ್‌ನ ಎಲ್ಲ ಮದುವೆಗಳಲ್ಲೂ ನಡೆಯುವಂತೆ ಗಂಡ ಹೆಂಡತಿ ನಡುವಿನ ಸಂಬಂಧಕ್ಕೆ ಬೆಂಕಿ ಇಡುವ ಕೆಲಸ ಈ ಸೀರಿಯಲ್‌ನ ವಿಲನ್ ಸಾನಿಯಾ ಮಾಡಿದ್ದಾಳೆ. ಅದೇ ನೆವವಾಗಿ ಹರ್ಷ ಭುವಿ ಮೇಲೆ ಕಟುವಾಗಿ ನಡೆದುಕೊಂಡಿದ್ದಾನೆ. ಅವಳಿಗೆ ವಿನಾ ಕಾರಣ ಹರ್ಟ್ ಮಾಡಿದ್ದಾನೆ. ಇವರಿಬ್ಬರ ಸಂಬಂಧದಲ್ಲಿ ಆಗಲೇ ಬಿರುಕು ಮೂಡುತ್ತಿರುವ ಸೂಚನೆಯನ್ನು ಧಾರಾವಾಹಿಯ ಈ ಭಾಗ ಕೊಟ್ಟಿದೆ.

ಹೊಸತಾಗಿ ಮದುವೆಯಾದ ಜೋಡಿ ಹರ್ಷ ಭುವಿ ಮದುವೆ ಮುಗಿದ ಮರುದಿನವೇ ಆಫೀಸಿಗೆ ಹೊರಟಿದ್ದಾರೆ. ಇಲ್ಲಿ ಇವರ ಸ್ವಾಗತಕ್ಕೆ ಸಿಬ್ಬಂದಿಗಳು ಹೂವು ಹಿಡಿದು ನಿಂತಿರುತ್ತಾರೆ. ಇದನ್ನು ನೋಡಿದ ಸಾನಿಯಾಗೆ ಸಿಡಿಮಿಡಿ ಆಗಿದೆ. ಹಾಗಂತ ಈ ಸೀನ್ ಹೀಗೇ ಮುಂದುವರಿಯೋದಕ್ಕೆ ಬಿಟ್ಟರೆ ಅವಳೆಲ್ಲಿ ವಿಲನ್ ಆಗ್ತಾಳೆ, ಸೋ ಅವಳು ಸಿಕ್ಕ ಚಾನ್ಸನ್ನೇ ಚೆನ್ನಾಗಿ ಬಳಸಿಕೊಂಡು ಇಬ್ಬರ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿಸುವ ಪ್ರಯತ್ನ ಮಾಡಿ ಯಶಸ್ವಿಯಾಗಿದ್ದಾಳೆ. ಹರ್ಷ ಭುವಿ ಜೊತೆಯಾಗಿ ಬಂದಿಳಿದಾಗ ಎಲ್ಲರೂ ಭುವಿ ಒಬ್ಬಳಿಗೇ ಮಾಲೆ ಹಾಕಿ ಅವಳೊಬ್ಬಳನ್ನೇ ಹೊಗಳಿ ಹರ್ಷನನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡುತ್ತಾರೆ. ಇದನ್ನು ಅವಮಾನವೆಂದೇ ತಿಳಿದ ಹರ್ಷನಲ್ಲಿ ಇನ್‌ಸೆಕ್ಯುರಿಟಿ ಹೆಚ್ಚಾಗುತ್ತೆ. ಭುವಿ ಬಂದಮೇಲೆ ತಾನು ಸೈಡ್‌ಲೈನ್‌ ಆಗ್ತಿದ್ದೀನಿ ಅನ್ನೋ ಫೀಲ್ ಹೆಚ್ಚಾಗುತ್ತದೆ. ಮಾನವ ಸಹಜವಾದ ಈ ವರ್ತನೆಯನ್ನು ಸೀರಿಯಲ್‌ನಲ್ಲಿ ಬಹಳ ಚೆನ್ನಾಗಿ ತಂದಿದ್ದಾರೆ. ಮೊದಲಿಂದಲೂ ಹರ್ಷನ ಪಾತ್ರ ಎಕ್ಸ್‌ಪ್ರೆಸ್ಸಿವ್. ಆತ ತನ್ನ ಫೀಲಿಂಗ್‌ಗಳನ್ನು ಒಂದಲ್ಲ ಒಂದು ರೀತಿ ವ್ಯಕ್ತಪಡಿಸುತ್ತಾನೆ. ಭುವಿ ಹಾಗಲ್ಲ ತನ್ನೊಳಗೆ ಜ್ವಾಲಾಮುಖಿ ಕುದಿಯುತ್ತಿದ್ದರೂ ಹೊರಗೆ ಶಾಂತವಾಗಿ ನಗು ನಗುತ್ತಾ ಇರಬಲ್ಲಳು. 

ಇದನ್ನೂ ಓದಿ:  ಒಲವಿನ ನಿಲ್ದಾಣ: ಚಿಪ್ಪು ಸೇರಲಿರುವ ಪ್ರೀತಿಯ ಹನಿ, ಅದು ಮುತ್ತಾಗುತ್ತಾ?

ತನಗಾದ ಅವಮಾನದ ನೋವನ್ನು ಹರ್ಷ ಹೇಗಾದರೂ ಹೊರ ಹಾಕಲೇ ಬೇಕು. ಅದಕ್ಕೆ ಅವನಿಗೆ ಸಿಕ್ಕಿದ್ದು ಭುವಿ. ಅವಳಿಂದಾಗಿಯೇ ತನಗೆ ಅವಮಾನವಾಗಿದೆ ಅನ್ನೋದೂ ಇದ್ದ ಕಾರಣ ಆತ ಆಫೀಸ್ ವಿಷಯವನ್ನೇ ಎತ್ತಿಕೊಂಡು ಅವಳಿಗೆ ಹಿಗ್ಗಾಮುಗ್ಗಾ ಝಾಡಿಸಿದ್ದಾನೆ. ಈ ಅನಿರೀಕ್ಷಿತ ಅಟ್ಯಾಕ್ ಭುವಿಗೆ ಆಘಾತ ತಂದಿದೆ. ಹರ್ಷನ ಈ ವರ್ತನೆ ಅವರಿಬ್ಬರ ನಡುವಿನ ಸಂಬಂಧದಲ್ಲಿ ಸಣ್ಣ ಬಿರುಕು ಮೂಡಿಸುವ ಥರ ಕಾಣುತ್ತಿದೆ. ಇದರ ಜೊತೆಗೆ ಅಮ್ಮಮ್ಮನ ಅಷ್ಟೂ ಆಸ್ತಿ ಭುವಿಗೆ ಹೋದದ್ದು ತಿಳಿದರೆ ಹರ್ಷ ಹೇಗೆ ರಿಯಾಕ್ಟ್ ಮಾಡಬಹುದು ಅನ್ನೋದರ ಗ್ಲಿಂಪ್ಸ್ ಇಲ್ಲಿ ಸಿಕ್ಕಿದೆ.

 

ಆಮೇಲೆ ತನ್ನ ತಪ್ಪಿನ ಅರಿವಾಗಿ ಹರ್ಷ ಭುವಿಯನ್ನು ಕನ್ವಿನ್ಸ್ ಮಾಡಲು ಬಹಳ ಪ್ರಯತ್ನಿಸಿದ್ದಾನೆ. ಆದರೆ ಭುವಿ ಇದಕ್ಕೆ ಸೊಪ್ಪು ಹಾಕುತ್ತಿಲ್ಲ. ಬಹುಶಃ ಇದಕ್ಕೆ ಒಂದಲ್ಲ ಒಂದು ಘಟನೆಗಳು ಸೇರಿಕೊಳ್ಳುತ್ತಾ ಹೋಗಿ ವರೂ ಮತ್ತು ಸಾನಿಯಾ ಪ್ಲಾನ್‌ನಂತೆ ಅವರಿಬ್ಬರು ಮೂರು ತಿಂಗಳಲ್ಲಿ ಸಂಪೂರ್ಣ ಬೇರ್ಪಡುವ ಸ್ಥಿತಿಗೆ ಬರಬಹುದು. ಅಷ್ಟೊತ್ತಿಗೆ ಅಮೆರಿಕಾಗೆ ಹೋಗಿರುವ ಅಮ್ಮಮ್ಮ ವಾಪಾಸ್ ಬರ್ತಾರೆ. ಅವರ ಮೂಲಕ ಇವರ ಸಂಬಂಧ ಸರಿ ಹೋಗಬಹುದೇನೋ?

ಸೀರಿಯಲ್‌ನ ಈ ಪಾತ್ರ ಕಂಡ್ರೆ ಕೆಲವ್ರಿಗೆ ಕೆಂಡದಂಥಾ ಕೋಪ!

ಆದರೆ ಹರ್ಷ ಭುವಿ ಜೊತೆಗಿನ ಸಂಬಂಧವನ್ನು ಸದಾ ರೊಮ್ಯಾಂಟಿಸೈಸ್ ಮಾಡಿ ನೋಡುವ ಫ್ಯಾನ್ಸ್‌ಗೆ ಇದೆಲ್ಲ ಇಷ್ಟ ಆಗಿಲ್ಲ. ಅವರು ಹರ್ಷನಿಗೆ ನೇರವಾಗಿ ಕ್ಲಾಸ್ ತಗೊಂಡಿದ್ದಾರೆ. ಕೆಲವರಂತೂ ಹರ್ಷನ ವರ್ತನೆಗೆ ಹಿಗ್ಗಾಮುಗ್ಗಾ ಝಾಡಿಸಿದ್ದಾರೆ. ಇನ್ನೂ ಕೆಲವು ಹಳೆ ಕಾಲದ ವೀಕ್ಷಕರು ಭುವಿ ಅನುಸರಿಸಿಕೊಂಡು ಹೋಗಲಿ ಎಂಬರ್ಥದಲ್ಲಿ ಕಮೆಂಟ್ ಹಾಕಿದ್ದಾರೆ. ನೋಡೋಣ, ಮುಂದೇನಾಗುತ್ತೆ ಅಂತ. ಹರ್ಷನ ಪಾತ್ರದಲ್ಲಿ ಕಿರಣ್‌ ರಾಜ್ ಹಾಗೂ ಭುವಿಯ ಪಾತ್ರದಲ್ಲಿ ರಂಜನಿ ರಾಘವನ್ ನಟಿಸಿದ್ದಾರೆ.

Latest Videos
Follow Us:
Download App:
  • android
  • ios