ಬಿಗ್‌ಬಾಸ್‌ ಗೆದ್ದ ನಂತರ ಗಿಲ್ಲಿ ನಟನ ಜನಪ್ರಿಯತೆ ಗಗನಕ್ಕೇರಿದ್ದು, ಇನ್ಸ್‌ಟಾಗ್ರಾಮ್‌ನಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ. 2.2 ಮಿಲಿಯನ್ ಫಾಲೋವರ್ಸ್‌ ಹೊಂದುವ ಮೂಲಕ, ಬಿಗ್‌ಬಾಸ್ ಸ್ಪರ್ಧಿಗಳಲ್ಲಿ ಅತಿ ಹೆಚ್ಚು ಫಾಲೋವರ್ಸ್‌ ಹೊಂದಿದ್ದ ನಿವೇದಿತಾ ಗೌಡ ಅವರ ದಾಖಲೆಯನ್ನು ಮುರಿದಿದ್ದಾರೆ.

ಬಿಗ್‌ಬಾಸ್‌ ಗೆದ್ದ ಬಳಿಕ ಗಿಲ್ಲಿ ನಟನಿಗೆ ಒಂಚೂರು ಬಿಡುವಿಲ್ಲ. ಒಂದರ ಹಿಂದೆ ಒಂದರಂತೆ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದಾರೆ. ಅದರಲ್ಲೂ ತಮಗೆ ಸಿಕ್ಕಿರುವ ಪಾಪ್ಯುಲಾರಿಟಿ ಕಂಡು ಮೂಕವಿಸ್ಮಿತರಾಗಿದ್ದಾರೆ. ಈ ಬಗ್ಗೆ ಎಲ್ಲಾ ವೇದಿಕೆಯಲ್ಲೂ ಅವರು ಮಾತನಾಡಿದ್ದಾರೆ. ಹಾಗಂತ ಗಿಲ್ಲಿ ಹೊರಗೆ ಬಂದ ಮೇಲೆ ವಿವಾದವೇನೂ ತಪ್ಪಿಲ್ಲ. ಗಿಲ್ಲಿ ಚಿತ್ರವನ್ನು ಕೈಮೇಲೆ ಹಚ್ಚೆ ಹಾಕಿಸಿಕೊಂಡಿದ್ದ ವ್ಯಕ್ತಿ, ಗಿಲ್ಲಿ ನಟನ ವಿರುದ್ಧ ಅಸಮಾಧಾನ ತೋಡಿಕೊಂಡಿದ್ದರು. ಬಿಗ್‌ಬಾಸ್‌ನಿಂದ ಹೊರಬಂದ ಬಳಿಕ ಗಿಲ್ಲಿ ಒಮ್ಮೆಯೂ ತಮ್ಮ ಭೇಟಿ ಮಾಡಲಿಲ್ಲ ಎಂದು ಹೇಳಿದ್ದರು. ಅದಕ್ಕೆ ಗಿಲ್ಲಿ ನಟ ಕೂಡ ಕ್ಷಮೆ ಯಾಚಿಸಿದ್ದರು.

ಇದರ ನಡುವೆ ಗಿಲ್ಲಿ ಬಿಗ್‌ಬಾಸ್‌ ಮನೆಯಲ್ಲಿದ್ದಾಗ ಒಮ್ಮೆ, ಇನ್ಸ್‌ಟಾಗ್ರಾಮ್‌ನಲ್ಲಿ 1 ಮಿಲಿಯನ್‌ ಫಾಲೋವರ್ಸ್‌ ಆಗಿದ್ರೆ ಸಾಕು ಎಂದು ಆಸೆ ತೋಡಿಕೊಂಡಿದ್ದರು. ಆದ್ರೆ ಅದು ಆಗುತ್ತಾ ಇಲ್ವಾ ಅನ್ನೋದರ ಬಗ್ಗೆಯೇ ಅವರಿಗೆ ಅನುಮಾನವಿತ್ತು. ಆದರೆ, ಬಿಗ್‌ಬಾಸ್‌ ಗೆದ್ದ ಮರುದಿನವೇ ಇನ್ಸ್‌ಟಾಗ್ರಾಮ್‌ನಲ್ಲಿ 1 ಮಿಲಿಯನ್‌ ಫಾಲೋವರ್‌ ಗಡಿ ದಾಟಿದ್ದ ಗಿಲ್ಲಿ ನಟ ಅದಾದ ಕೆಲವೇ ದಿನಗಳಲ್ಲಿ 2 ಮಿಲಿಯನ್‌ ಫಾಲೋವರ್‌ ಗಡಿ ಮುಟ್ಟಿ ವಿಕ್ರಮ ಸಾಧಿಸಿದ್ದರು. ಈಗ ಗಿಲ್ಲಿ ನಟ ತಮ್ಮ ಇನ್ಸ್‌ಟಾಗ್ರಾಮ್‌ ಪೇಜ್‌ ಮೂಲಕ ಹೊಸ ದಾಖಲೆ ಮಾಡಿದ್ದಾರೆ. ಹೌದು ನಿವೇದಿತಾ ಗೌಡ ಅವರ 2.1 ಮಿಲಿಯನ್‌ ಫಾಲೋವರ್ಸ್‌ ಅನ್ನು ಮೀರಿಸಿ ಗಿಲ್ಲಿ ಈಗ 2.2 ಮಿಲಿಯನ್‌ ಗಡಿ ದಾಟಿದ್ದಾರೆ.

ಗಿಲ್ಲಿ ಅವರ ಈ ದಾಖಲೆ ವಿಶೇಷ ಕೂಡ. ಯಾಕೆಂದರೆ, ಇಲ್ಲಿಯವರೆಗೂ ಬಿಗ್‌ಬಾಸ್‌ನ 12 ಸೀಸನ್‌ಗಳು ನಡೆದಿವೆ. ಆದರೆ ಯಾವೊಬ್ಬ ಸ್ಪರ್ಧಿಗೂ ಸಿಗದೇ ಇರುವಂಥ ರೆಸ್ಪಾನ್ಸ್‌ ಗಿಲ್ಲಿಗೆ ಸಿಕ್ಕಿದೆ. ಬಿಗ್‌ಬಾಸ್‌ನಲ್ಲಿ ಭಾಗವಹಿಸಿ ಗರಿಷ್ಠ ಇನ್ಸ್‌ಟಾಗ್ರಾಮ್‌ ಫಾಲೋವರ್ಸ್‌ಗಳನ್ನು ಪಡೆದ ಪಟ್ಟಿಯಲ್ಲಿ ನಿವೇದಿತಾ ಗೌಡ ಇಲ್ಲಿಯವರೆಗೂ ಅಗ್ರಸ್ಥಾನದಲ್ಲಿದ್ದರು. ಆದರೆ, ಈಗ ಗಿಲ್ಲಿ ಈ ಸ್ಥಾನಕ್ಕೇರಿದ್ದಾರೆ. ನಂತರದ ಸ್ಥಾನಗಳಲ್ಲಿ ಚಂದನ್‌ ಶೆಟ್ಟಿ, ಶೈನ್‌ ಶೆಟ್ಟಿ, ನವೀನ್‌ ಸಜ್ಜು, ವಾಸುಕಿ ವೈಭವ್‌, ನಮ್ರತಾ ಗೌಡ ಅವರೆಲ್ಲರೂ ಇದ್ದಾರೆ.

ಇನ್ನು ನಿವೇದಿತಾ ಗೌಡ ಅವರ ಹೆಚ್ಚಿನ ಫಾಲೋವರ್ಸ್‌ ಬಿಗ್‌ಬಾಸ್‌ ನಂತರ ಅವರ ಅಕೌಂಟ್‌ಗೆ ಸೇರಿದ್ದರೆ, ಗಿಲ್ಲಿ ನಟನ ಹೆಚ್ಚಿನ ಫಾಲೋವರ್ಸ್ ಅವರ ಬಿಗ್‌ಬಾಸ್‌ ಗೇಮ್‌ನಿಂದ ಸೇರ್ಪಡೆಯಾಗಿದ್ದಾರೆ. ಸದ್ಯಕ್ಕಂತೂ ಗಿಲ್ಲಿ ಕ್ರೇಜ್‌ಗೆ ಶೀಘ್ರದಲ್ಲೇ ಅವರು 3 ಮಿಲಿಯನ್‌ ಫಾಲೋವರ್ಸ್‌ ಕೂಡ ದಾಟುವ ಹಾದಿಯಲ್ಲಿದ್ದಾರೆ.

ಗರಿಷ್ಠ ಇನ್ಸ್‌ಟಾಗ್ರಾಮ್‌ ಫಾಲೋವರ್ಸ್‌ ಇರುವ ಕನ್ನಡದ ಸೆಲೆಬ್ರಿಟಿಗಳು

ಗರಿಷ್ಠ ಇನ್ಸ್‌ಟಾಗ್ರಾಮ್‌ ಫಾಲೋವರ್ಸ್‌ ಇರುವ ಕನ್ನಡದ ಸೆಲೆಬ್ರಿಟಿಗಳನ್ನು ನೋಡೋದಾದರೆ, ರಾಕಿಂಗ್‌ ಸ್ಟಾರ್‌ ಯಶ್‌ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. 14.1 ಮಿಲಿಯನ್‌ ಫಾಲೋವರ್ಸ್‌ ಅವರಿಗಿದ್ದಾರೆ. ನಟಿ ಶ್ರೀನಿಧಿ ಶೆಟ್ಟಿಗೆ 5.5 ಮಿಲಿಯನ್‌ ಫಾಲೋವರ್ಸ್‌ ಇದ್ದಾರೆ.ಯಶ್‌ ಅವರ ಪತ್ನಿ ಹಾಗೂ ನಟಿ ರಾಧಿಕಾ ಪಂಡಿತ್‌ಗೆ 4.9 ಮಿಲಿಯನ್‌ ಫಾಲೋವರ್ಸ್‌ ಇದ್ದಾರೆ. ನಟ ಧ್ರುವ ಸರ್ಜಾ 3.2 ಮಿಲಿಯನ್‌ ಫಾಲೋವರ್ಸ್‌ ಹೊಂದಿದ್ದಾರೆ. ಇನ್ನು ಬಿಗ್‌ಬಾಸ್‌ ನಿರೂಪಕ, ನಟ ಕಿಚ್ಚ ಸುದೀಪ್‌ಗೆ 2.9 ಮಿಲಿಯನ್‌, ದರ್ಶನ್‌ಗೆ 2.6 ಮಿಲಿಯನ್‌ ಫಾಲೋವರ್ಸ್‌ಗಳು ಇದ್ದಾರೆ.