* ಮಹಾಭಾರತದ ರಹಸ್ಯಗಳು ನೂರನೇ ಸಂಚಿಕೆ* ವಿದ್ಬಾನ್ ಜಗದೀಶ ಶರ್ಮಾ ಸಂಪ ಜತೆ ನೇರ ಸಂವಾದ* ಜನ ಮನ ಮನ್ನಣೆ ಗಳಿಸಿರುವ ವಿಶಿಷ್ಟ ಕಾರ್ಯಕ್ರಮ
ಬೆಂಗಳೂರು( ಮಾ. 27) ಗೌರೀಶ್ ಅಕ್ಕಿ ಸ್ಟುಡಿಯೋ ಯೂಟ್ಯೂಬ್ ಚಾನೆಲ್ ಪ್ರಸ್ತುತ ಪಡಿಸುವ ಮಹಾಭಾರತದ (Mahabharata) ರಹಸ್ಯಗಳು ಕಾರ್ಯಕ್ರಮದ 100ನೇ ಸಂಚಿಕೆಯ ಸಮಾರಂಭ ಆಲ್ಮಾ ಮೀಡಿಯಾ ಸ್ಕೂಲ್‌ನ ಸಭಾಂಗಣದಲ್ಲಿ ನೆರವೇರಿತು. ನೂರನೇ ಸಂಚಿಕೆಯ ವಿಶೇಷವಾಗಿ ವಿದ್ಬಾನ್ ಜಗದೀಶ ಶರ್ಮಾ ಸಂಪ (Jagadisha Sharma Sampa ) ಹಾಗೂ ವೀಕ್ಷಕರ ನಡುವೆ ನೇರ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಶುರುವಾದಾಗಿನಿಂದಲೂ ಜನರ ಮೆಚ್ಚುಗೆಗೆ ಪಾತ್ರವಾಗಿ ಸಾಗುತ್ತಿರುವ ಕಾರ್ಯಕ್ರಮ ಮಹಾಭಾರತದ ರಹಸ್ಯಗಳು. ಮೂಲ ಮಹಾಭಾರತದ ಕಥಾನಕವನ್ನು ಮನೋಜ್ಞವಾಗಿ ತಮ್ಮ ನಿರೂಪಣೆಯಲ್ಲಿ ತಿಳಿಸುಕೊಡುತ್ತಾರೆ ಜಗದೀಶ ಶರ್ಮಾ ಸಂಪ. ಗೌರೀಶ್ ಅಕ್ಕಿ (Gaurish Akki) ಹಾಗೂ ಜಗದೀಶ ಶರ್ಮಾರ ಸಂವಾದದಲ್ಲಿ ಮೂಡಿಬರುವ ಈ ಕಾರ್ಯಕ್ರಮ ಮೂಲ ಮಹಾಭಾರತದ ಅನೇಕ ಮಗ್ಗುಲುಗಳನ್ನು ವೀಕ್ಷಕರಿಗೆ ತಿಳಿಸಿಕೊಡುತ್ತಿದೆ. ಮಹಾಭಾರತದ ಬಗ್ಗೆ ತಿಳಿಯದಂಥ ಎಷ್ಟೋ ವಿಚಾರಗಳು ಜನರಿಗೆ ತಿಳಿದುಕೊಳ್ಳುವ ಅವಕಾಶ ಒದಗಿಬಂದಿದೆ. ಹಾಗಾಗಿಯೇ ಈ ಕಾರ್ಯಕ್ರಮ ಜನಮನ ಗೆದ್ದು ನೂರರ ಹೊಸ್ತಿಲನ್ನು ಮುಟ್ಟಿದೆ.
ಪ್ರಾಸ್ತವಿಕ ನುಡಿಗಳನ್ನಾಡಿದ ಪತ್ರಕರ್ತ ಗೌರೀಶ್ ಅಕ್ಕಿ ಅವರು "ಮಹಾಭಾರತದ ಕಾರ್ಯಕ್ರಮ 100ನೇ ಸಂಚಿಕೆ ಮುಟ್ಟುತ್ತೆ ಅನ್ನೋದು ನಿಜಕ್ಕೂ ಗೊತ್ತಿರಲಿಲ್ಲ.. ಇದಕ್ಕೆ ಮುಖ್ಯ ಕಾರಣ ವೀಕ್ಷಕರು ಮತ್ತು ಜಗದೀಶ ಶರ್ಮಾ ಸಂಪ ಅವರು.. ಅವರು ಮಹಾಭಾರತದ ಕಥಾನಕವನ್ನು ಹೇಳುವ ರೀತಿ, ಹೇಳಿರುವ ವಿಚಾರಗಳು, ಹೇಳಿರುವ ಒಳನೋಟಗಳು ಬಹಳ ಅದ್ಭುತ. ಹಾಗಾಗಿಯೇ ಈ ಕಾರ್ಯಕ್ರಮ ಇಂದು ನೂರು ಹೆಜ್ಜೆಗಳನ್ನು ಇಟ್ಟಿದೆ" ಎಂದು ತಮ್ಮ ಸಂತಸವನ್ನು ವ್ಯಕ್ತಪಡಿಸುತ್ತ ಜಗದೀಶ ಶರ್ಮಾರಿಗೆ ಕೃತಜ್ಞತೆ ಅರ್ಪಿಸಿದರು.
ಅನಂತರ ಮಾತಾಡಿದ ವಿದ್ವಾನ್ ಜಗದೀಶ ಶರ್ಮಾ ಸಂಪ ಅವರು "ಮಹಾಭಾರತದ ರಹಸ್ಯಗಳು ಕಾರ್ಯಕ್ರಮದ ಯಶಸ್ಸಿಗೆ ಮುಖ್ಯ ಕಾರಣ ಮೊದಲಿಗೆ ವೀಕ್ಷಕರು, ಅನಂತರ ಮಹಾಭಾರತದಲ್ಲಿರುವಂಥ ವಿಷಯ ಹಾಗೂ ಸತ್ವ.. ಮೂಲ ಮಹಾಭಾರತವನ್ನು ಜನರ ಮುಂದಿಡಲು ಮುಖ್ಯ ಕಾರಣಕರ್ತರು ಗೌರೀಶ್ ಅಕ್ಕಿ. ಈ ಕಾರ್ಯಕ್ರಮದ ಪರಿಕಲ್ಪನೆ ಕೂಡ ಅವರದೇ. ನನ್ನ ಹಾಗೂ ನಿಮ್ಮ ನಡುವೆ ವೇದಿಕೆಯಾಗಿ ಮಹಾಭಾರತವನ್ನು ತಲುಪಿಸಲು ಅವಕಾಶ ಕಲ್ಪಿಸಿದ ಗೌರೀಶ್ ಅಕ್ಕಿ ಹಾಗೂ ಬಳಗಕ್ಕೆ ವಂದನೆ" ಎಂದು ತಮ್ಮ ಸಂತಸದ ಮಾತುಗಳನ್ನು ಹಂಚಿಕೊಂಡರು.
ಇನ್ನು, ಕಾರ್ಯಕ್ರಮದಲ್ಲಿ ಜಗದೀಶ ಶರ್ಮಾ ಸಂಪರಿಗೆ ಗೌರವಪೂರ್ವಕ ಸನ್ಮಾನ ಮಾಡಲಾಯಿತು. ಅನಂತರ ಸಂವಾದದಲ್ಲಿ ಭಾಗಿಯಾಗಿದ್ದ ಪ್ರೇಕ್ಷಕರ ಪ್ರಶ್ನೆಗಳಿಗೆ ಉತ್ತರ ಮತ್ತು ಇನ್ನೂ ಅನೇಕ ವಿಚಾರಗಳ ಬಗೆಗೆ ಮಾತುಕತೆ ನಡೆಯಿತು..ಕಾರ್ಯಕ್ರಮದ ನಂತರ ನೆರೆದಿದ್ದ ಪ್ರೇಕ್ಷಕರು ತಮ್ಮ ನೆಚ್ಚಿನ ಜಗದೀಶ ಶರ್ಮಾ ಸಂಪರ ಕೆಲವು ಪುಸ್ತಕಗಳನ್ನು ಸಹ ಕೊಂಡು ಅವರ ಹಸ್ತಾಕ್ಷರ ಪಡೆದು, ಫೋಟೋಗಳನ್ನು ತೆಗೆದುಕೊಂಡು ಸಂತಸಪಟ್ಟರು. ಗೌರೀಶ್ ಅಕ್ಕಿ ಸ್ಟುಡಿಯೋ ಹಾಗೂ ಆಲ್ಮಾ ಮೀಡಿಯಾ ಸ್ಕೂಲ್‌ಗೆ ವಿಶೇಷ ದಿನ ಇದಾಗಿತ್ತು
ಊರ್ವಶಿ ಕರೆದರೂ ಅರ್ಜುನ ಆಕೆಯ ಜೊತೆಗೆ ಸರಸವಾಡಲಿಲ್ಲ ಯಾಕೆ?
ರಾಮನ ವಂಶದವರು ಯುದ್ಧದಲ್ಲಿ ಪಾಲ್ಗೊಂಡಿದ್ದರು: ರಾಮಾಯಣ ಹಾಗೂ ಮಹಾಭಾರತ, ಭಾರತದ ಎರಡು ಮಹಾಕಾವ್ಯಗಳು. ಹಾಗೂ ಇವನ್ನು ಅಂದಿನ ಇತಿಹಾಸ ಎಂದೂ ಹೇಳಲಾಗುತ್ತದೆ. ಮೊದಲು ತ್ರೇತಾಯುಗದಲ್ಲಿ ರಾಮಾಯಣ ನಡೆಯಿತು, ನಂತರ ದ್ವಾಪರ ಯುಗದಲ್ಲಿ ಮಹಾಭಾರತ ಯುದ್ಧ ನಡೆಯಿತು ಎಂದು ನಂಬಿಕೆ. ಇದಕ್ಕೆ ಪೂರಕ ಎನಿಸುವಂತೆ ರಾಮಾಯಣದ ಹಲವು ಪಾತ್ರಗಳು ಮಹಾಭಾರತದಲ್ಲೂ ಬರುತ್ತವೆ.
ರಾಮಾಯಣದಲ್ಲಿನ ಅವತಾರ ಪುರುಷ ರಾಮನ ಸೂರ್ಯ ವಂಶ ಅಥವಾ ಇಕ್ಷ್ವಾಕು ವಂಶಕ್ಕೆ ಸೇರಿದವರು ಮಹಾಭಾರತದ ಕಾಲದಲ್ಲೂ ಇದ್ದರೆಂದು ತಿಳಿಯುತ್ತದೆ. ಶ್ರೀರಾಮನಿಗೆ ಮೂವರು ಸಹೋದರರು. ಈ ಪೈಕಿ ಭರತ ತಕ್ಷಶಿಲೆ ನಗರಿಯನ್ನು ನಿರ್ಮಿಸಿದ, ಅದೇ ಮುಂದೆ ತಕ್ಷಶಿಲಾ ವಿಶ್ವವಿದ್ಯಾನಿಲಯ ಎಂದು ಪ್ರಸಿದ್ಧಿ ಪಡೆದು ಇಂದು ಪಾಕಿಸ್ತಾನ ಪ್ರಾಂತ್ಯದಲ್ಲಿರುವ ತಕ್ಸಿಲಾ ನಗರ ಎಂದು ಕರೆಯಲ್ಪಡುತ್ತಿದೆ. ಲಕ್ಷ್ಮಣ ನಿರ್ಮಿಸಿದ್ದ ಲಕ್ಷ್ಮಣ ಪುರಿ ಎಂಬ ನಗರವನ್ನು ಇಂದು ಲಖನೌ ಎಂದು ಕರೆಯುತ್ತಿದ್ದೇವೆ. ಹೀಗೆ ಅನೇಕ ವಿವರಗಳು ಲಭ್ಯವಾಗುತ್ತವೆ.
