ಅಮೃತಧಾರೆ ಧಾರಾವಾಹಿ ಖ್ಯಾತಿಯ ರಾಣವ್ ಗೌಡ ಹಾಗೂ ರಾಧಾ ಭಗವತಿ ಮದುವೆ ಶಾಸ್ತ್ರೋಕ್ತವಾಗಿ ನಡೆದಿದೆ. ಮನೆ ತುಂಬಿಸಿಕೊಳ್ಳುವ ವೇಳೆ ನಡೆದ ತಮಾಷೆಯ ಘಟನೆಗಳ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಅಮೃತಧಾರೆಯ ಜೈದೇವ್​ ಉರ್ಫ್​ ರಾಣವ್​ ಗೌಡ ಮತ್ತು ಹಳೆಯ ಮಲ್ಲಿ ರಾಧಾ ಭಗವತಿ ಅವರ ಮದುವೆ ನಿನ್ನೆ ಶಾಸ್ತ್ರೋಕ್ತವಾಗಿ ನಡೆದಿದ್ದು, ಜೈದೇವ್​ ಅವರ ಮನೆಗೆ ರಾಧಾ ಅವರನ್ನು ಮನೆತುಂಬಿಸಿಕೊಳ್ಳುವ ಸಂದರ್ಭದಲ್ಲಿ ನಡೆದ ತಮಾಷೆಯ ವಿಡಿಯೋ ಒಂದು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಸಾಮಾನ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹೆಣ್ಣನ್ನು ಮನೆಗೆ ತುಂಬಿಸಿಕೊಳ್ಳುವಾಗ ತಮಾಷೆಯ ಘಟನೆಗಳನ್ನು ನೋಡಬಹುದು. ಗಂಡಿನ ಸಂಬಂಧಿಕರು, ಮದುಮಗನನ್ನು ಗೋಳುಹೊಯ್ದುಕೊಳ್ಳುವುದು ಇದೆ. ಇದೊಂದು ರೀತಿಯಲ್ಲಿ ಇಡೀ ಮನೆಯಲ್ಲಿ ಖುಷಿಯ ವಾತಾವರಣವನ್ನು ಸೃಷ್ಟಿಸುತ್ತದೆ. ಅದೇ ರೀತಿ ರಾಣವ್​ ಹಾಗೂ ರಾಧಾ ಅವರ ಮದುವೆಯ ನಂತರದ ಮನೆ ತುಂಬಿಸಿಕೊಳ್ಳುವ ಶಾಸ್ತ್ರದಲ್ಲಿಯೂ ನೋಡಬಹುದಾಗಿದೆ.

ರಾಧಾ ಅವರನ್ನು ಮನೆಗೆ ತುಂಬಿಸಿಕೊಳ್ಳುವಾಗ ರಾಣವ್​ ಅವರ ಅಕ್ಕ, ಅಡ್ಡಲಾಗಿ ಕೋಲನ್ನು ಹಿಡಿದು ಮನೆಯ ಒಳಕ್ಕೆ ಬಿಟ್ಟುಕೊಳ್ಳಲ್ಲ, ನೀನು ಯಾರನ್ನು ಕೇಳಿ ಮದುವೆಯಾಗಿ ಬಂದಿದ್ಯಾ ಎಂದು ತಮಾಷೆ ಮಾಡಿದ್ದಾರೆ. ಅದಕ್ಕೆ ರಾಣವ್​, ನೀನೇ ನಿಂತು ಮದ್ವೆ ಮಾಡಿಸಿದ್ಯಲ್ಲಾ ಎಂದಿದ್ದಾರೆ. ನಿನ್ನ ಹೆಂಡ್ತಿಯನ್ನು ಮನೆಗೆ ತುಂಬಿಸಿಕೊಳ್ಳುವುದಿದ್ದರೆ ನನಗೆ ಏನು ಕೊಡ್ತಿಯಾ ಎಂದಾಗ, ರಾಣವ್​ ಅವರು, ಇಲ್ಲಿ ಫೋಟೋ ಎಲ್ಲಾ ಹೊಡೀತಾ ಇದ್ದಾರಲ್ಲ, ಅದನ್ನೆಲ್ಲಾ ಕಳಿಸಿಕೊಡ್ತೇನೆ ಬಿಡು ಎಂದಾಗ, ಅದಷ್ಟೇ ಸಾಲಲ್ಲ ಎಂದಿದ್ದಾರೆ ಅಕ್ಕ. ಅದಕ್ಕೆ ರಾಣವ್​ ಹಾಗಿದ್ರೆ ದುಡ್ಡು ಬೇಕಾ ಕೇಳಿದಾಗ, ಅಕ್ಕ, ಬೇಡ ನನಗೊಂದು ಮನೆ ಕೊಡಿಸು ಎಂದು ತಮಾಷೆಯಾಗಿ ಹೇಳಿದ್ದಾರೆ. ಅದಕ್ಕೆ ಸುಮ್ಮನಾಗದ ರಾಣವ್​ ಅವರು, ನೀನು ನನಗೆ ಮನೆ ಕೊಡಿಸು, ನಾನು ನಿನಗೆ ಕೊಡಿಸುತ್ತೇನೆ ಎಂದಿದ್ದಾರೆ.

ಕೊನೆಗೆ ಪತ್ನಿ ರಾಧಾ ಅವರನ್ನೇ ಉದ್ದೇಶಿಸಿ, ರಾಣವ್​ ಏನು ಕೊಡಬೇಕು ಇವರಿಗೆ ಎಂದಾಗ, ರಾಧಾ ಭಗವತಿ, ಅವರು ಏನು ಕೇಳ್ತಾರೋ ಅದನ್ನೇ ಕೊಡಿ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಮನೆ ತುಂಬುವ ಶಾಸ್ತ್ರವನ್ನು ಅತ್ಯಂತ ಸುಂದರವಾಗಿ, ತಮಾಷೆಯಾಗಿ ಮಾಡಲಾಗಿದ್ದು, ಇದರ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

ತಾರಾ ಜೋಡಿಯ ಪ್ರೇಮ ಪಯಣ ಹೀಗಿದೆ..

ಅಷ್ಟಕ್ಕೂ ಇವರ ಲವ್​ಸ್ಟೋರಿ ತುಂಬಾ ಇಂಟರೆಸ್ಟಿಂಗ್​ ಆಗಿದೆ. ಇದೀಗ ಆರಂಭದಲ್ಲಿ ನಟಿ ರಾಧಾ ಭಗವತಿ ಅವರು ಪ್ರಪೋಸ್‌ ಮಾಡಿದಾಗ, ರಾಣವ್‌ ಬೇಡ ಎಂದ ಬಗ್ಗೆ ನಟಿ ಮಾತನಾಡಿದ್ದಾರೆ. ಸುಮನ್ ಟಿವಿಗೆ ನೀಡಿರುವ ಸಂದರ್ಶನದಲ್ಲಿ ನಟಿ, ನನಗೆ ಗೊತ್ತಿಲ್ಲದೇ ಅವರ ಮೇಲೆ ಲವ್‌ ಆಯ್ತು, ಅವರ ಕ್ಯೂಟ್‌ನೆಸ್‌ ನನ್ನನ್ನ ಅಟ್ರ್ಯಾಕ್ಟ್‌ ಮಾಡಿತು. ಆದರೆ ಅವರ ಹಿನ್ನೆಲೆ ಏನೂ ಗೊತ್ತಿರಲಿಲ್ಲ. ಅವರು ಹಣವಂತರಾ, ಕಾರು, ಬಂಗ್ಲೆ ಇದ್ಯಾ ಏನೂ ಅರಿವು ಇರಲಿಲ್ಲ. ಮನಸ್ಸು ಅವರನ್ನು ಕೇಳುತ್ತಿತ್ತು ಅಷ್ಟೇ ಎಂದು ತಮಗೆ ಆರಂಭದಲ್ಲಿ ಆದ ಲವ್‌ ಫೀಲಿಂಗ್ಸ್‌ ಬಗ್ಗೆ ಹೇಳಿದ್ದಾರೆ. ಮನಸ್ಸು ಕೇಳದೇ ನಾನೇ ಒಂದು ದಿನ ನಾನು ಅವರಿಗೆ ಹೋಗಿ ಹೇಳಿಬಿಟ್ಟೆ. ಆದರೆ ಅವರು ಅದಕ್ಕೆ ಒಪ್ಪಲಿಲ್ಲ. ಈಗ ಸದ್ಯಕ್ಕೆ ಅದರ ಬಗ್ಗೆ ಏನೂ ಪ್ಲ್ಯಾನ್ಸ್‌ ಇಲ್ಲ, ಸಾರಿ ಅಂತ ಹೇಳಿಬಿಟ್ಟರು. ನನಗೆ ಆಗ ಏನು ಮಾತಾಡಬೇಕು ಅಂತ ಗೊತ್ತಾಗಿರ್ಲಿಲ್ಲ. ಕಂಪ್ಲೀಟ್‌ ಆಗಿ ಬ್ಲ್ಯಾಂಕ್‌ ಆಗಿಬಿಟ್ಟೆ. ಅದು ನನಗೆ ಹರ್ಟ್‌ ಆಯ್ತು ಎಂದು ನಟಿ ಹೇಳಿದ್ದಾರೆ.ಅವರು ನನ್ನ ಪ್ರೀತಿಯನ್ನ ರಿಜೆಕ್ಟ್‌ ಮಾಡಿದ್ದಾರೆ ಅಂತ ಗೊತ್ತಿದ್ರೂ ಕೂಡ, ಅವರ ಮೇಲೆ ಇದ್ದ ಪ್ರೀತಿ ಹೋಗ್ತಾನೆ ಇರ್ಲಿಲ್ಲ. ಮದುವೆ ಆದರೆ ಇವರನ್ನೇ ಆಗ್ತೀನಿ. ಇಲ್ಲದೇ ಇದ್ರೆ ಆ ಮದುವೆ ಅನ್ನೋ ಕಾನ್ಸೆಪ್ಟ್‌ ಬೇಡ ನನ್ನ ಜೀವನದಲ್ಲಿ ಅಂತ ನಾನು ಫಿಕ್ಸ್‌ ಅಗಿಬಿಟ್ಟಿದ್ದೆ. ಆದರೂ ಶೂಟಿಂಗ್‌ನಲ್ಲಿ ಏನೂ ಗೊತ್ತಿಲ್ಲದವರ ರೀತಿ ಭಾಗಿಯಾಗಿದ್ದೆ ಎಂದು ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ.