Asianet Suvarna News Asianet Suvarna News

Bhagyalakshmi: ಅಪ್ಪನಿಗೆ ಮಕ್ಕಳಿಂದ ಸಿಗೋ ಗೌರವ ಅವನ ಹೆಂಡ್ತಿ ನೀಡೋ ಭಿಕ್ಷೆ!

ಜನಪ್ರಿಯ ಸೀರಿಯಲ್ ಭಾಗ್ಯಲಕ್ಷ್ಮೀ ಯಲ್ಲಿ ತಾಂಡವ್ ತಂದೆ ಆತನಿಗೆ ಹೇಳೋ ಹಿತವಚನನ ಎಲ್ಲರಿಗೂ ಪಾಠದ ಹಾಗಿದೆ. ಅಪ್ಪನಿಗೆ ಮಕ್ಕಳಿಂದ ಗೌರವ ಸಿಗುತ್ತೆ ಅಂದರೆ ಅದು ಅವನ ಹೆಂಡತಿ ಅವನಿಗೆ ನೀಡಿರುವ ಭಿಕ್ಷೆ. ಮಕ್ಕಳು ಅಮ್ಮನನ್ನು ಕಾಲ ಕಸದಂತೆ ನೋಡ್ತಾರೆ ಅಂದರೆ ಅದು ಅಪ್ಪ ಮಾಡಿರೋ ಮಹಾಪರಾಧ ಅನ್ನೋ ಮಾತನ್ನು ಅವರು ಹೇಳ್ತಾರೆ.

Fathers suggetion to Tandav in Bhagyalaxmi serial
Author
First Published May 20, 2023, 1:28 PM IST

ಭಾಗ್ಯಲಕ್ಷ್ಮೀ ಸೀರಿಯಲ್ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿರೋ ಸೀರಿಯಲ್. ದಿನದಿಂದ ದಿನಕ್ಕೆ ಈ ಸೀರಿಯಲ್ ಟಿಆರ್‌ಪಿ ಏರ್ತಾನೇ ಇರೋದೇ ಇದರ ಜನಪ್ರಿಯತೆಗೆ ಸಾಕ್ಷಿ. ಈ ಸೀರಿಯಲ್‌ ನಾಯಕಿ ಭಾಗ್ಯ ಸದ್ಗೃಹಿಣಿ. ಹಳೇ ಕಾಲದ ನಾಯಕಿಯಂಥಾ ಮನಸ್ಸು. ಅತೀ ಒಳ್ಳೆಯತನ. ಅತ್ತೆ ಮಾವನನ್ನು ಗೌರವಿಸುವ, ಮಕ್ಕಳು ಮನೆ ಗಂಡನನ್ನು ಕಾಳಜಿ ಮಾಡುವ ಹೆಣ್ಣು. ಅವಳನ್ನು ಕಂಡರೆ ಗಂಡ ತಾಂಡವ್‌ಗೆ ಅಷ್ಟಕ್ಕಷ್ಟೇ. ಅವರಿಬ್ಬರ ಮದುವೆಯಾಗಿ ಹದಿನಾರು ವರ್ಷ ಕಳೆದಿದೆ. ಆದರೂ ಹೆಂಡತಿ ಬಗ್ಗೆ ಕಿಂಚಿತ್ ಪ್ರೀತಿಯೂ ಹುಟ್ಟಿಲ್ಲ. ಅವಳನ್ನು ಪದೇ ಪದೇ ಹೀಯಾಳಿಸಿದ ಪರಿಣಾಮ ಮಕ್ಕಳೂ ಅದನ್ನೇ ನೋಡಿ ಕಲಿತಿದ್ದಾರೆ. ಅಮ್ಮ ಅಂದರೆ ಕಾಲ ಕಸ ಅನ್ನುವಷ್ಟು ಕ್ಷುಲ್ಲಕವಾಗಿ ಅವಳನ್ನು ನೋಡುತ್ತಿದ್ದಾರೆ. ಇನ್ನೊಂದೆಡೆ ತನ್ನನ್ನು ಕಂಡರೆ ಗಂಡನಿಗೆ ಇಷ್ಟ ಇಲ್ಲ ಅನ್ನೋದು ಭಾಗ್ಯನಿಗೆ ತಿಳಿದುಹೋಗಿದೆ. ಅದನ್ನು ತಾಂಡವ್ ನೇರವಾಗಿ ಅವಳಿಗೇ ಹೇಳಿದ್ದಾನೆ. ಅವನ ಆಕರ್ಷಣೆಯ ಕೇಂದ್ರ ಆಧುನಿಕ ಹುಡುಗಿ ಶ್ರೇಷ್ಠ. ಮನೆಯವರು ಹೇಳಿದ್ರು ಅಂತ ಭಾಗ್ಯ ಎನ್ನುವ ಹುಡುಗಿಯನ್ನು ತಾಂಡವ್‌ ಮದುವೆಯಾಗಿರುತ್ತಾನೆ. ಆಫೀಸ್‌ನಲ್ಲಿ ಕೆಲಸ ಮಾಡುವ ಹುಡುಗಿ ಶ್ರೇಷ್ಠ ಜೊತೆ ಈಗ ತಾಂಡವ್‌ ಲವ್‌ನಲ್ಲಿದ್ದಾನೆ. ಈಗ ಅವನು ಹೇಗಾದರೂ ಮಾಡಿ ಭಾಗ್ಯಳನ್ನು ಮನೆಯಿಂದ ಹೊರಹಾಕೋಣ ಎನ್ನುತ್ತಿದ್ದಾನೆ.

ಶ್ರೇಷ್ಠ ಮಹಾನ್ ಸ್ವಾರ್ಥಿ. ಅವಳಿಂದಾಗಿ ತಾಂಡವ್ ಇಬ್ಬಂದಿಗೆ ಸಿಲುಕಿದ್ದಾನೆ. ಈಗ ಅವನಿಗೆ ಭಾಗ್ಯ ಮುಖ ಕಂಡರೂ ಕೂಡ ಆಗೋದಿಲ್ಲ. ಅಪ್ಪ-ಅಮ್ಮನನ್ನು ಬಿಟ್ಟು ಮನೆಯಿಂದ ಹೊರಗಡೆ ಹೋಗೋಕೂ ಆಗ್ತಿಲ್ಲ, ಭಾಗ್ಯ ಕೂಡ ಮನೆಯಿಂದ ಹೊರಗಡೆ ಹೋಗಲ್ಲ ಅಂತ ತಾಂಡವ್‌ ಬೇಜಾರು ಮಾಡಿಕೊಂಡಿದ್ದಾನೆ. ಇದನ್ನೇ ಶ್ರೇಷ್ಠ ಬಳಸಿಕೊಂಡು ತನ್ನ ಬೇಳೆ ಬೇಯಿಸಿಕೊಳ್ಳಲು ನೋಡುತ್ತಿದ್ದಾಳೆ.

ಇಂಥಾ ಟೈಮಲ್ಲಿ ಒಂದು ಘಟನೆ ನಡೆಯುತ್ತೆ. ತಾನು ಮಹಾ ಸತಿಯಂತೆ ಗಂಡ, ಮಕ್ಕಳನ್ನು ನೋಡಿಕೊಂಡ ಭಾಗ್ಯಾಳನ್ನು ಅವಳ ಮಕ್ಕಳೇ ಹೀಗಳೆದು ಮಾತಾಡ್ತಾರೆ. ಅಮ್ಮನ ಬಗ್ಗೆ ಹಗುರವಾಗಿ ಕಮೆಂಟ್ ಮಾಡ್ತಾರೆ. ಅಮ್ಮಂಗೆ ಏನೂ ಗೊತ್ತಿಲ್ಲ, ಅವಳು ಪೆದ್ದಿ ಅನ್ನೋ ಹಾಗೆ ಆಡ್ತಾರೆ. ಇದು ಭಾಗ್ಯ ಅತ್ತೆ ಕುಸುಮಾಗೆ ಬೇಸರ ತಂದಿದೆ. ಆಕೆ ಮೊಮ್ಮಗಳನ್ನು ಕರೆದು ಬುದ್ಧಿ ಹೇಳ್ತಾಳೆ. ಇನ್ನೊಂದೆಡೆ ತಾಂಡವ್‌ ಅಪ್ಪನಿಗೆ ಈ ಘಟನೆಯನ್ನು ಅರಗಿಸಿಕೊಳ್ಳಲಾಗೋದಿಲ್ಲ. ಆತ ಮಗನಿಗೆ ಬುದ್ಧಿವಾದ ಹೇಳ್ತಾರೆ. ಅವರು ಹೇಳೋ ಪ್ರತೀ ಮಾತೂ ಅಹಂಕಾರಿ ಗಂಡಸರಿಗೆ ಪಾಠದ ಹಾಗಿದೆ.

ವೇದಿಕೆ ಮೇಲೆ ಮಗಳಿಂದ ಶಾಲಿನಿಗೆ ಪಂಚ್ ಮೇಲೆ ಪಂಚ್; ಭಾವುಕ ವಿಡಿಯೋ ವೈರಲ್!

'ಹೆಂಡತಿ ಆದವಳು ಮಕ್ಕಳ ಮುಂದೆ ಗಂಡನಿಗೆ ಎಷ್ಟು ಮರ್ಯಾದೆ ಕೊಡ್ತಾಳೋ ಅವನನ್ನು ಎಷ್ಟು ಎತ್ತರದಲ್ಲಿ ಇಡ್ತಾಳೋ ಅವನನ್ನು ಎಷ್ಟು ವಿಜೃಂಭಿಸುತ್ತಾಳೋ ಮಕ್ಕಳೂ ಕೂಡ ಅಷ್ಟೇ ಪ್ರೀತಿ(Love), ಗೌರವದಿಂದ ತಂದೆಯನ್ನು ನೋಡ್ತಾರೆ. ಅಪ್ಪನಿಗೆ ಮಕ್ಕಳಿಂದ ಸಿಗೋ ಗೌರವ ಅವನ ಹೆಂಡ್ತಿ ಅವನಿಗೆ ನೀಡೋ ಭಿಕ್ಷೆ. ಆಕೆ ಮಕ್ಕಳಿಎ ತಂದೆಯನ್ನು ಹೇಗೆ ತೋರಿಸ್ತಾಳೋ ಹಾಗೆ ಮಕ್ಕಳು ತಂದೆಯನ್ನು ಕಾಣ್ತಾರೆ. ನಿಮ್ಮ ಅಪ್ಪ ಒಬ್ಬ ರಾಕ್ಷಸ, ಲಫಂಗ, ಜೂಜುಗಾರ ಅಂದ್ರೆ ಮಕ್ಕಳೂ ಹಾಗೇ ನೋಡ್ತಾರೆ. ಅದೇ ಆಕೆ ನಿಮ್ಮಪ್ಪ ದೇವ್ರಿದ್ದ ಹಾಗೆ ಅಂದರೆ ಮಕ್ಕಳು ಅದನ್ನೇ ನಂಬ್ತಾರೆ. ನೀನು ನನ್ನನ್ನು ತುಂಬ ಪ್ರೀತಿಸ್ತೀಯಾ, ಗೌರವಿಸ್ತೀಯಾ, ಯಾಕೆ ಹೇಳು, ನಿಮ್ಮ ಅಮ್ಮ ನನ್ನನ್ನು ನಿನ್ನ ಮುಂದೆ ಹಾಗೆ ಇಟ್ಟಿದ್ದಾಳೆ. ನನ್ನ ಬಗ್ಗೆ ಯಾವತ್ತೂ ಕೆಟ್ಟದನ್ನು ಆಡಿಲ್ಲ. ಹಾಗಾಗಿ ನಿನ್ನ ಕಣ್ಣಲ್ಲಿ ನಾನ್ಯಾವತ್ತೂ ಕೆಟ್ಟವನಾಗಲೇ ಇಲ್ಲ. ಇವತ್ತು ನೀನು ನನಗೆ ತೋರಿಸ್ತಿರೋ ಗೌರವ ಅದು ಕುಸುಮಾ ನೀಡಿರೋ ಭಿಕ್ಷೆ. ಹಾಗಿದ್ರೆ ತಂದೆಗೆ ಜವಾಬ್ದಾರಿ ಇಲ್ವಾ? ಇದೆ. ಗಂಡನಾದವನು ಮಕ್ಕಳ ಮುಂದೆ ಹೆಂಡತಿಯನ್ನು ಅಷ್ಟೇ ಗೌರವದಿಂದ ನೋಡ್ಕೊಳ್ಳಬೇಕು. ಅವಳ ಪ್ರತೀ ಮಾತನ್ನೂ ಗೌರವಿಸಬೇಕು. ಅದು ಬಿಟ್ಟು ನಿಮ್ಮಮ್ಮ ದಡ್ಡಿ ಅವಳಿಗೆ ಏನೂ ಗೊತ್ತಿಲ್ಲ ಅವಳು ಅಪ್ರಯೋಜಕಿ ಅಂದರೆ ಮಕ್ಕಳೂ ಅದನ್ನೇ ನಂಬುತ್ತಾರೆ. ಮಕ್ಕಳ ಕಣ್ಣಲ್ಲಿ ಅಮ್ಮ ಕಸ ಆಗ್ತಾಳೆ..'

ಈ ಮಾತುಗಳು ಎಲ್ಲರ ಕಣ್ಣು ತೆರೆಸೋ ಹಾಗಿದೆ. ಆದರೆ ಇದೆಲ್ಲ ಕೋಣದ ಮುಂದೆ ಕಿನ್ನುರಿ ಬಾರಿಸಿದ ಹಾಗೆ ಏನೂ ಪ್ರಯೋಜನ ಇಲ್ಲ ಅನ್ನೋ ಮಾತನ್ನೂ ಜನ ಕಮೆಂಟ್‌ನಲ್ಲಿ ದಾಖಲಿಸಿದ್ದಾರೆ.

ಜೊತೆ ಜೊತೆಯಲಿ ಧಾರಾವಾಹಿ ಇಂದು ಮುಕ್ತಾಯ; ಅನು ಸಿರಿಮನೆ ಭಾವುಕ

Follow Us:
Download App:
  • android
  • ios