2011ರಲ್ಲಿ ಕಿರುತೆರೆಯ ಕಲಾವಿದರು ಮತ್ತು ತಂತ್ರಜ್ಞರು ಎಂಜಿ ರಸ್ತೆಯಲ್ಲಿರುವ ಖಾಸಗಿ ಮನರಂಜನಾ ವಾಹಿನಿಯ ಕಛೇರಿಯೊಂದಕ್ಕೆ ನುಗ್ಗಿ, ಅಲ್ಲಿರುವ ಟೀವಿಗಳನ್ನೆಲ್ಲ ಒಡೆದು ಹಾಕಿ, ಕುರ್ಚಿ, ಟೇಬಲ್ಲುಗಳನ್ನೆಲ್ಲ ಚೆಲ್ಲಾಪಿಲ್ಲಿ ಮಾಡಿದ್ದರು. ಹಾಗೆ ಮಾಡಿದವರ ಪ್ರಕಾರ ಆ ವಾಹಿನಿ ಮಾಡಿದ ತಪ್ಪೆಂದರೆ ಹಿಂದಿಯಿಂದ ಡಬ್‌ ಆದ ಝಾನ್ಸಿ ರಾಣಿ ಲಕ್ಷ್ಮೇಬಾಯಿ ಧಾರಾವಾಹಿಯ ತುಣುಕೊಂದನ್ನು ಪ್ರಸಾರ ಮಾಡಿದ್ದು. ಅದನ್ನು ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಪ್ರಸಾರ ಮಾಡಿದ್ದೆಂದು ಚಾನಲ್‌ ಹೇಳಿದರೂ ಕಿರುತೆರೆ ಸದಸ್ಯರು ಸುಮ್ಮನಾಗಲಿಲ್ಲ. ಆ ಪ್ರಸಂಗ ಪೊಲೀಸ್‌ ಸ್ಟೇಷನ್‌ ಮೆಟ್ಟಿಲೇರಿತ್ತಾದರೂ, ಡಬ್‌ ಆದ ಧಾರಾವಾಹಿಯ ಪ್ರಸಾರವೂ ನಿಂತಿತು.

ಅಲ್ಲಿಂದಾಚೆ ಕಿರುತೆರೆಯಲ್ಲಿ ಸಾಕಷ್ಟುಧಾರಾವಾಹಿಯ ಧಾರೆ ಹರಿದಿದೆ. ಕಳೆದ ವಾರಗಳಲ್ಲಿ ಉದಯ ವಾಹಿನಿಯಲ್ಲಿ ಜನಪ್ರಿಯ ತೆಲುಗು ಮತ್ತು ತಮಿಳು ಸಿನಿಮಾಗಳು ಕನ್ನಡಕ್ಕೆ ಡಬ್‌ ಆಗಿ ಪ್ರದರ್ಶನ ಕಂಡವು. ಅವುಗಳನ್ನು ಜನ ಮುಗಿಬಿದ್ದು ನೋಡಿದರು. ಚಾನಲ್ಲು ಮೊದಲನೇ ಸ್ಥಾನಕ್ಕೆ ಏರಿತು. ಮಾಲ್ಗುಡಿ ಡೇಸ್‌ ಧಾರಾವಾಹಿಯ ಡಬ್‌ ಆದ ವರ್ಷನ್‌, ಭೀಮ ದುರ್ಯೋಧನರು ಕನ್ನಡದಲ್ಲೇ ಮಾತಾಡುವ ಮಹಾಭಾರತ ಕೂಡ ಟೀವಿಯಲ್ಲಿ ಪ್ರಸಾರ ಆಗುತ್ತಿದೆ. ಅದನ್ನು ವೀಕ್ಷಕರು ಕುತೂಹಲದಿಂದ ನೋಡುತ್ತಿದ್ದಾರೆ.

'ಪೊಗರು' ಡಬ್ಬಿಂಗ್‌ ಶುರು; ರಿಲೀಸ್‌ ಡೇಟ್‌ ರಿವೀಲ್‌ ಮಾಡಿದ್ರಾ ಆ್ಯಕ್ಷನ್‌ ಪ್ರಿನ್ಸ್‌? .

ಕಳೆದ ವಾರ ಕನ್ನಡಕ್ಕೆ ಡಬ್‌ ಆದ ‘ಸತ್ಯದೇವ ಐಪಿಎಸ್‌’ ಚಿತ್ರ ಉದಯ ಟೀವಿಯಲ್ಲಿ ಪ್ರಸಾರವಾಯಿತು. ಇದು ಚಿತ್ರಮಂದಿರದಲ್ಲಿ ಬಿಡುಗಡೆಯಾಗಲು ಬಹಳ ಒದ್ದಾಟ ಮಾಡಿತೆಂದೇ ಹೇಳಬೇಕು. 2017ರ ಮಾಚ್‌ರ್‍ ತಿಂಗಳಲ್ಲಿ ‘ಎನ್ನೈ ಅರಿಂದಾಳ್‌’ ಚಿತ್ರದ ಕನ್ನಡ ಡಬ್‌ ವರ್ಷನ್‌ ಚಿತ್ರವಾದ ‘ಸತ್ಯದೇವ ಐಪಿಎಸ್‌’ ಬಿಡುಗಡೆ ಮಾಡುವುದಾಗಿ ಡಬ್ಬಿಂಗ್‌ ವಾಣಿಜ್ಯ ಮಂಡಳಿ ಘೋಷಿಸಿ, ಬೆಂಗಳೂರು ಹೊರತುಪಡಿಸಿ ಹೊರವಲಯದ ಸುಮಾರು 50 ಚಿತ್ರಮಂದಿರಗಳಲ್ಲಿ ಅದನ್ನು ಪ್ರಾಯೋಗಿಕವಾಗಿ ಬಿಡುಗಡೆ ಮಾಡಲಾಗಿತ್ತು. ಅದಕ್ಕೆ ಅಂಥ ಸ್ವಾಗತವೇನೂ ಪ್ರೇಕ್ಷಕರಿಂದ ಸಿಕ್ಕಿರಲಿಲ್ಲ.

ಆದರೆ ಅದೇ ಚಿತ್ರ ಲಾಕ್‌ಡೌನ್‌ ಅವಧಿಯಲ್ಲಿ ಟೀವಿಯಲ್ಲಿ ತೆರೆಕಂಡು ಗೆದ್ದಿದೆ. ಅದರ ಜೊತೆಗೇ ‘ರಂಗಸ್ಥಳಂ’, ‘ಬಿಗಿಲ್‌’, ‘ವಿಶ್ವಾಸಂ’ ಮುಂತಾದ ಚಿತ್ರಗಳೂ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಅಲ್ಲಿಗೆ ಡಬ್ಬಿಂಗ್‌ ಚಿತ್ರಗಳನ್ನು ಕನ್ನಡಿಗರು ಸ್ವೀಕಾರ ಮಾಡಿದ್ದಾರೆ ಎಂದು ಭಾವಿಸಬಹುದು. ಡಬ್‌ ಆದ ಸೀರಿಯಲ್ಲುಗಳೂ ರಾಜಾರೋಷವಾಗಿ ಚಾನಲ್ಲುಗಳಲ್ಲಿ ಪ್ರಸಾರವಾಗುತ್ತಿರುವುದು ಕೂಡ ಕೊರೋನಾ ಲಾಕ್‌ಡೌನ್‌ ಪರಿಣಾಮವೆಂದೇ ಹೇಳಬೇಕು. ಹೊಸ ಕಂಟೆಂಟುಗಳು ಬಯಸುವ ಪ್ರೇಕ್ಷಕ ಕನ್ನಡ ಸೀರಿಯಲ್ಲುಗಳ ಹಳೆಯ ಕಂತುಗಳನ್ನು ನೋಡುವ ಬದಲು, ಡಬ್‌ ಆದರೇನಂತೆ, ಹೊಸ ಕಂತುಗಳೇ ಇರಲಿ ಎಂದು ಬಯಸುತ್ತಿದ್ದಾನೆ.

ಡಬ್ಬಿಂಗ್ ವಿರೋಧಿಸುತ್ತಿದ್ದ ಸುದೀಪ್ ದಿಢೀರನೇ ಪರ ನಿಂತಿದ್ಯಾಕೆ?

ಇದು ಸರಾಗವಾಗಿ ಮುಂದುವರಿದರೆ ಕಿರುತೆರೆ ಯಾವುದಕ್ಕೆ ಭಯಪಟ್ಟಿತ್ತೋ ಅದು ಸದ್ಯದಲ್ಲೇ ಕನ್ನಡ ಕಿರುತೆರೆಯನ್ನು ಅಪ್ಪಳಿಸುವುದು ದೂರವಿಲ್ಲ. ಈಗ ಕನ್ನಡದಲ್ಲಿರುವ ಪ್ರತಿಯೊಂದು ವಾಹಿನಿಯೂ ಬೇರೆ ಭಾಷೆಗಳಲ್ಲೂ ಇವೆ. ಹಿಂದಿಯಲ್ಲಿ ಅತ್ಯಂತ ಅದ್ದೂರಿಯಾದ ಕಾರ್ಯಕ್ರಮಗಳು ಪ್ರಸಾರ ಆಗುತ್ತಿವೆ. ಅವನ್ನು ಕನ್ನಡಕ್ಕೆ ಡಬ್‌ ಮಾಡುವುದು ಅತ್ಯಂತ ಸುಲಭ ಮತ್ತು ಉಳಿತಾಯಕರ ಮಾರ್ಗ. ಪ್ರೇಕ್ಷಕರು ಈ ಲಾಕ್‌ಡೌನ್‌ ಅವಧಿಯಲ್ಲಿ ಡಬ್‌ ಆದ ಸೀರಿಯಲ್ಲುಗಳಿಗೆ ಹೊಂದಿಕೊಂಡು ಬಿಟ್ಟರೆ, ಕನ್ನಡದಲ್ಲಿ ಧಾರಾವಾಹಿಗಳ ನಿರ್ಮಾಣ ಕಡಿಮೆಯಾಗುವುದರಲ್ಲಿ ಅನುಮಾನವೇ ಇಲ್ಲ.

ಡಬ್ಬಿಂಗ್‌ ತುಂಬಾ ದಿನ ನಡೆಯಲ್ಲ

- ಪರಮೇಶ್ವರ ಗುಂಡ್ಕಲ್‌

ಡಬ್ಬಿಂಗ್‌ ಸೀರಿಯಲ್‌ಗಳು ಅಂದಾಕ್ಷಣ ಅವು ತುಂಬ ಕಡಿಮೆ ಬಂಡವಾಳದಲ್ಲಿ ಆಗುತ್ತವೆ ಅನ್ನೋ ಮಾತು ಸರಿಯಲ್ಲ. ಅವಕ್ಕೂ ಬಂಡವಾಳ ಹಾಕಬೇಕಾಗುತ್ತದೆ. ಆದರೆ ಅರ್ಧದಷ್ಟುಬಂಡವಾಳ ಸಾಕಾಗುತ್ತದೆ. ಡಬ್ಬಿಂಗ್‌ಗೆ ನಮ್ಮ ರಾಜ್ಯ ಇನ್ನೂ ಓಪನ್‌ ಆಗಿಲ್ಲ, ಕನ್ನಡಿಗರು ಅದನ್ನು ತುಂಬಾ ಚೆನ್ನಾಗಿ ಸ್ವೀಕರಿಸುತ್ತಾರೆ ಅಂತ ನನಗನಿಸಲ್ಲ. ಏಕೆಂದರೆ ಮನಿ ಹೈಟ್ಸ್‌ ಥರದ ಶೋಗಳನ್ನು ನನಗೆ ಸ್ಪಾನಿಷ್‌ ಬರದೇ ಇದ್ದರೂ ನಾನು ಇಂಗ್ಲೀಷ್‌ ಸಬ್‌ಟೈಟಲ್‌ ಹಾಕಿಕೊಂಡು ಸ್ಪಾನಿಷ್‌ನಲ್ಲೇ ನೋಡ್ತೀನಿ. ಹಾಗೇ ಜನ ಪೌರಾಣಿಕ ವಸ್ತು ಹೊಂದಿಲ್ಲದ ಧಾರಾವಾಹಿಗಳನ್ನು ಎಷ್ಟರಮಟ್ಟಿಗೆ ಕನ್ನಡದಲ್ಲಿ ಬೆಳೆಸುತ್ತಾರೆ ಅನ್ನುವುದು ಇನ್ನೂ ಪ್ರಶ್ನಾರ್ಥಕವಾಗಿಯೇ ಇದೆ. ಆದರೆ ಒಂದು ಸಲ ಒಂದು ಬೂಮ್‌ ಅಂತೂ ಸಿಗುತ್ತೆ. ಬೇರೆ ಮಾರ್ಕೆಟ್‌ಗಳಲ್ಲಿ ನೋಡಿದರೆ ತೆಲುಗಲ್ಲೂ ಆ ಥರ ಒಂದು ಹೈಪ್‌ ಸಿಕ್ಕಿತು. ಆಮೇಲೆ ಡಬ್ಬಿಂಗ್‌ ಸೀರಿಯಲ್‌ಗಳು ಕೆಳಕ್ಕಿಳಿಯುತ್ತಾ ಹೋದವು. ಇವೆಲ್ಲಾ ಆರೆಂಟು ತಿಂಗಳ ಬೆಳವಣಿಗೆ ಅಂತ ಅನಿಸುತ್ತೆ. ತಮಿಳು, ತೆಲುಗಲ್ಲಿ ಆಗಿದೆ, ಕನ್ನಡದಲ್ಲೂ ಅಂಥಾದ್ದೊಂದು ಆಗಬಹುದು ಅನಿಸುತ್ತೆ. ಕನ್ನಡದಲ್ಲಿ ಉದಯ ಚಾನೆಲ್‌ ಡಬ್ಬಿಂಗ್‌ ಸಿನಿಮಾ ಪ್ರಸಾರ ಮಾಡುತ್ತಿದ್ದಾರೆ. ಝೀಕನ್ನಡದಲ್ಲೂ ಒಂದು ಡಬ್ಬಿಂಗ್‌ ಸೀರಿಯಲ್‌ ಇದೆ. ಸ್ಟಾರ್‌ ಸುವರ್ಣದಲ್ಲಿ ಎರಡು ಡಬ್ಬಿಂಗ್‌ ಸೀರಿಯಲ್‌ಗಳಿವೆ. ನಮ್ಮಲ್ಲಿ ಅಂದರೆ ಕಲರ್ಸ್‌ ಕನ್ನಡದಲ್ಲಿ ಸದ್ಯಕ್ಕೆ ಡಬ್ಬಿಂಗ್‌ ಸೀರಿಯಲ್‌ ಪ್ರಸಾರ ಮಾಡುತ್ತಿಲ್ಲ. ಆದರೆ ಸನ್ನಿವೇಶ ಸೃಷ್ಟಿಯಾದರೆ ನಾವೂ ಡಬ್ಬಿಂಗ್‌ ಅನ್ನು ಪರಿಗಣಿಸಬೇಕಾಗುತ್ತದೆ. ಈ ಸಂದರ್ಭ ಡಬ್ಬಿಂಗ್‌ ಸಣ್ಣ ಟ್ರೆಂಡ್‌ ಆಗಬಹುದೇನೋ. ಆದರೆ ಇದು ಸದ್ಯದ ಹರಿವನ್ನು ಬದಲಾಯಿಸುತ್ತೆ ಅಂತ ಅನಿಸಲ್ಲ. ಹಾಗಂತ ಈ ಟ್ರೆಂಡ್‌ ಲಾಕ್‌ಡೌನ್‌ ಸಂದರ್ಭದಲ್ಲಿ ಸೃಷ್ಟಿಯಾದದ್ದಲ್ಲ. ಅದಕ್ಕೂ ಮೊದಲೇ ಇತ್ತು. ಲಾಕ್‌ಡೌನ್‌ ಮುಗಿದ ಮೇಲೂ ಮುಂದುವರಿಯಬಹುದು.ಬ್ಯುಸಿನೆಸ್‌ ಹೆಡ್‌, ವಯಕಾಂ ಕನ್ನಡ ಕ್ಲಸ್ಟರ್‌.

ಬಂದ್‌ ಆಗುತ್ತಿದೆ ಕಲರ್ಸ್‌ ಸೂಪರ್‌ ಚಾನೆಲ್; ಲಾಕ್‌ಡೌನ್‌ ಪರಿಣಾಮವೇ?

ಪ್ರೇಕ್ಷಕನಿಗೆ ಉತ್ತಮ ಕಂಟೆಂಟ್‌ ಕೊಡೋದೇ ನಮ್ಮ ಗುರಿ

- ಶ್ರುತಿ ನಾಯ್ಡು, ನಿರ್ಮಾಪಕಿ

ಕನ್ನಡಕ್ಕೆ ಬೇರೆ ಭಾಷೆಯ ಸಿನಿಮಾ, ಧಾರಾವಾಹಿಗಳು ಡಬ್‌ ಆಗುತ್ತಿರುವುದರಿಂದ ನಮ್ಮ ಸಾಮರ್ಥ್ಯ ಹೆಚ್ಚುತ್ತದೆ. ಇದು ಒಳ್ಳೆಯ ಬೆಳವಣಿಗೆ. ನಾವು ಚೆನ್ನಾಗಿ ಕೆಲಸ ಮಾಡಿದರೆ ನಾವೂ ಕೂಡ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಬಹುದು. ಸೀಮಿತ ಗೆರೆಗಳನ್ನು ದಾಟಿ ಮುಂದೆ ಸಾಗಲು ಇಂತಹ ಸ್ಪರ್ಧೆಗಳು ಉಂಟಾಗಬೇಕು. ಅಲ್ಲದೇ ಚಾನಲ್‌ಗಳು ಇದೇ ಸಂಪ್ರದಾಯ ಮುಂದುವರೆಸುವುದಿಲ್ಲ. ಪರಿಸ್ಥಿತಿ ಎಲ್ಲಾ ಸರಿಯಾದ ಮೇಲೆ ನಮ್ಮ ಧಾರಾವಾಹಿಗಳನ್ನೇ ಪ್ರಸಾರ ಮಾಡುತ್ತಾರೆ. ಈ ಬಗ್ಗೆ ಹಿಂದೆಯೇ ಮಾತುಕತೆ ನಡೆದಿದೆ. ಕಲಾವಿದರು, ತಂತ್ರಜ್ಞರು ಹೆದರುವ ಅವಶ್ಯಕತೆ ಇಲ್ಲ. ನಮ್ಮ ಸಾಮರ್ಥ್ಯವೂ ಚೆನ್ನಾಗಿದ್ದು, ನಾವೂ ಇದೆಲ್ಲವನ್ನೂ ಎದುರಿಸುತ್ತೇವೆ. ನಮ್ಮ ಪ್ರೇಕ್ಷಕನಿಗೆ ಒಳ್ಳೆಯ ಕಂಟೆಂಟ್‌ ನೀಡುತ್ತೇವೆ.

ಹಂಚಿ ತಿನ್ನುವ ಕಾಲ ಹೋಗುತ್ತದೆ

- ಬಿ. ಸುರೇಶ್‌, ನಿರ್ದೇಶಕರು

ಇದೆಲ್ಲವನ್ನೂ ಜನ ನೋಡಿದ್ದಾರೆ. ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಚಾನೆಲ್‌ಗಳಿಗೆ ಈ ನಂಬಿಕೆ ಬಂದರೆ ಅವರು ಅದನ್ನೇ ಪ್ರಸಾರ ಮಾಡಲು ಶುರು ಮಾಡುತ್ತಾರೆ. ಇದರಿಂದ ನಮ್ಮ ಕಲಾವಿದರಿಗೆ ತೊಂದರೆ ಆಗುತ್ತದೆ. ಮುಂದೆ ನಮ್ಮ ಕಲಾವಿದರು ಕಂಠದಾನ ಕಲಾವಿದರಾಗುವ ಸಾಧ್ಯತೆ ಇದೆ. ಡಬ್‌ ಕಂಟೆಂಟ್‌ಗೆ ತುಂಬಾ ಕಡಿಮೆ ಖರ್ಚು ಸಾಕು. ನೈಜ ಕಂಟೆಂಟ್‌ಗೆ ಲಕ್ಷಾಂತರ ರು. ಬೇಕು. ಹೀಗಿರುವಾಗ ಲಾಭದ ದೃಷ್ಟಿಯಿಂದ ಚಾನೆಲ್‌ ಇದೇ ಮಾರ್ಗ ಹಿಡಿಯುತ್ತವೆ.

ನಮ್ಮಲ್ಲೂ ರಾಷ್ಟ್ರ ವ್ಯಾಪ್ತಿಯ ಕಂಟೆಂಟ್‌ ಕೊಟ್ಟರೆ ನಮ್ಮ ಭಾಷೆಯ ಕಂಟೆಂಟ್‌ ಬೇರೆ ಭಾಷೆಗಳಿಗೂ ಡಬ್‌ ಆಗಬಹುದು. ಆದರೆ ಅದು ದೂರದ ಮಾತು. ಕೊರೋನಾ ನಂತರದ ಕಾಲದಲ್ಲಿ ನಮ್ಮ ಕೆಲ ಧಾರಾವಾಹಿಗಳು ನಿಲ್ಲಬಹುದು. ಹೊಸ ಚಾಲೆಂಜ್‌ಗೆ ನಾವು ಹೊಂದಿಕೊಳ್ಳಬೇಕಾಗುತ್ತದೆ. ಬಲಿಷ್ಠನಾದವನು ಮಾತ್ರ ಉಳಿಯುತ್ತಾನೆ. ಹಂಚಿ ತಿನ್ನುವ ಕಾಲ ಹೋಗುತ್ತದೆ.

ಆಂಧ್ರದಲ್ಲಿ ಫೇಲ್‌ ಆಗಿದೆ

- ರವಿಕಿರಣ್‌

ಪೌರಾಣಿಕ ಸೀರಿಯಲ್‌ಗಳನ್ನು ಮಾತ್ರ ಡಬ್‌ ಮಾಡುತ್ತಿದ್ದಾರೆ. ಸಾಮಾಜಿಕ ವಿಷಯವನ್ನಿಟ್ಟು ಆಂಧ್ರದಲ್ಲಿ ಡಬ್ಬಿಂಗ್‌ ಮಾಡಿದ್ದರು. ಅದು ವರ್ಕ್ಔಟ್‌ ಆಗಲಿಲ್ಲ. ನಂತರ ಒರಿಜಿನಲ್‌ಗೆ ಬಂದರು. ಗೊತ್ತಿರುವ ಕತೆಗಳು, ರಾಮಾಯಣ ಮಹಾಭಾರತವನ್ನು ಜನ ನೋಡಿದರು. ಸಾಮಾಜಿಕ ವಿಷಯಗಳನ್ನಿಟ್ಟು ಧಾರಾವಾಹಿ ಮಾಡಿದರೆ ಅದು ಯಶಸ್ವಿಯಾಗುವ ಸಾಧ್ಯತೆ ಕಡಿಮೆ. ಟೈಮ್‌ ಗ್ಯಾಪ್‌ಗಾಗಿ ಇದನ್ನು ಮಾಡಿದ್ದಾರೆ ಅಷ್ಟೆ. ಮುಂದೆ ಇದೆಲ್ಲಾ ಸರಿಯಾಗಿ ನಮ್ಮದೇ ಒರಿಜಿನಲ್‌ ಕಂಟೆಂಟ್‌ಗಳು ಬರಲಿವೆ. ಬೇಗ ಲಾಕ್‌ಡೌನ್‌ ಮುಗಿಯುತ್ತದೆ ಎಂದುಕೊಂಡು ಈ ಪ್ರಯತ್ನ ಮಾಡಿದರು. ಆದರೆ ಲಾಕ್‌ಡೌನ್‌ ಕಂಟಿನ್ಯೂ ಆದದ್ದರಿಂದ ಇದು ಮುಂದೆ ಸಾಗಿತು ಅಷ್ಟೆ. ಆದರೂ ನಾವು ಸ್ಪರ್ಧೆ ಎದುರಿಸಬೇಕು. ಡಬ್ಬಿಂಗ್‌ ಕಂಟೆಂಟ್‌ಅನ್ನು ಒಂದು ಚಾನೆಲ್‌ ಹಾಕಿದರೆ ಬೇರೆ ಚಾನೆಲ್‌ನವರು ನಮ್ಮದೇ ಆದ ಒಳ್ಳೆಯ ಕಂಟೆಂಟ್‌ ನೀಡಿದರೆ ಜನ ಅದನ್ನು ನೋಡಿಯೇ ನೋಡುತ್ತಾರೆ. ಶೂಟಿಂಗ್‌ ಮಾಡಲು ಆಗದೇ ಇರುವುದರಿಂದ ಈ ಕ್ರಮ ಅಷ್ಟೆ.

ಪ್ರೇಕ್ಷಕರ ಅಂಗಳದಲ್ಲಿ ಚೆಂಡಿದೆ

- ರಾಮ್‌ ಜೀ

ಸಾವಿರಾರು ಜನಕ್ಕೂ ಕೆಲಸ ಹೋಗುತ್ತದೆ. ಇದನ್ನು ಹಲವರು ಬಳಸಿಕೊಳ್ಳುತ್ತಾರೆ. ಹಿಂದಿಯಲ್ಲಿ ದೊಡ್ಡ ಮಟ್ಟದಲ್ಲಿ ತಯಾರು ಮಾಡಿರುತ್ತಾರೆ. ಜನಕ್ಕೂ ಬದಲಾವಣೆ ಬೇಕಾಗುತ್ತದೆ. ಜನಕ್ಕೆ ಮನರಂಜನೆ ಸಿಗಬೇಕು. ಅದನ್ನು ಅವರು ಕೊಟ್ಟರೆ ನೋಡೇ ನೋಡುತ್ತಾರೆ. ನೇಟಿವಿಟಿ ಅದು ಇದೆಲ್ಲಾ ಸುಳ್ಳು. ನೇಟಿವಿಟಿ ಅನ್ನೋದು ಬದುಕಲ್ಲಿ ಇರುತ್ತದೆ. ಎಲ್ಲರ ಹೊಟ್ಟೆಪಾಡಿನ ಮೇಲೆ ಪೆಟ್ಟು ಬೀಳುತ್ತದೆ. ಡಬ್ಬಿಂಗ್‌ ಮಾಡಬಾರದು ಎನ್ನುವುದು ಕಾನೂನಿನಲ್ಲಿ ಅವಕಾಶ ಇಲ್ಲ. ಪ್ರೇಕ್ಷಕನ ಅಂಗಳದಲ್ಲಿ ಚೆಂಡು ಇದೆ. ಡಬ್‌ ಕಂಟೆಂಟ್‌ಗಳನ್ನೇ ಒಪ್ಪಿಕೊಂಡರೆ ನಮ್ಮ ಚಾನಲ್‌ಗಳಿಗೂ ಅದರಿಂದ ಹೆಚ್ಚಿನ ಲಾಭ ಬರುತ್ತದೆ. ಸಹಜವಾಗಿಯೇ ಅವರು ಆ ದಾರಿಯಲ್ಲಿ ನಡೆಯುತ್ತಾರೆ. ಪ್ರೇಕ್ಷಕ ಒಪ್ಪಿಕೊಳ್ಳದೇ ಇದ್ದರೆ ನಮಗೆ ಅವಕಾಶಗಳು ಸಿಗುತ್ತವೆ.

ಮತ್ತಷ್ಟುಕಷ್ಟಎದುರಾಗಬಹುದು

-ರವಿ ಆರ್‌. ಗರಣಿ

ಬೇರೆ ಭಾಷೆಯ ಅಧಿಕಾರಿಗಳು ನಮ್ಮಲ್ಲಿ ದೊಡ್ಡ ಹುದ್ದೆಗಳಲ್ಲಿ ಇದ್ದಾರೆ. ರಾಜ್‌ಕುಮಾರ್‌ ಅವರು ಇದ್ದಾಗ ಇದರ ವಿರುದ್ಧ ಫೈಟ್‌ ಮಾಡಿಕೊಂಡು ಬಂದೆವು. ಆದರೆ ಈಗ ಕಷ್ಟವಾಗಿದೆ. ಬೆಂಗಳೂರಿನಲ್ಲಿಯೇ ಕನ್ನಡಿಗರ ಪರಿಸ್ಥಿತಿ ಶೋಚನೀಯವಾಗಿದೆ. ಈಗಲೇ ಚಾನೆಲ್‌ ಡಾಮಿನೇಟ್‌ ಆಗಿ ನಮ್ಮವರಿಗೆ ಕೆಲಸ ಇಲ್ಲವಾಗಿದೆ. ಇನ್ನು ಮುಂದೆ ಕಷ್ಟವಾಗುತ್ತದೆ. ದೊಡ್ಡ ದೊಡ್ಡ ಕಂಪನಿಗಳೇ ಮುಂದೆ ನಿಂತು ಡಬ್ಬಿಂಗ್‌ ಮಾಡುತ್ತಿದ್ದಾರೆ. ಹತ್ತು ಸೀರಿಯಲ್‌ನಲ್ಲಿ ಆರು ಡಬ್ಬಿಂಗ್‌ ಬಂದರೆ ಇನ್ನು ನಾವು ಉಳಿಯುವುದೆಲ್ಲಿ? ಕೇವಲ ಐದು ಪರ್ಸೆಂಟ್‌ ಮಾತ್ರ ಡಬ್ಬಿಂಗ್‌ಗೆ ಖರ್ಚು ಆಗುತ್ತದೆ. ಹಾಗಾಗಿ ಅವರು ಲಾಭದ ದೃಷ್ಟಿಯಿಂದ ಇದೇ ಮಾಡುತ್ತಾರೆ. ನಮ್ಮಲ್ಲಿ ಒಗ್ಗಟ್ಟು ಇಲ್ಲ. ನಮ್ಮ ನೇಟಿವಿಟಿ ಇಲ್ಲ, ನಮ್ಮ ಕಲಾವಿದರು ಇಲ್ಲ ಎಂದು ಹೇಳಿಕೊಂಡರೂ ಹೆಚ್ಚಿನ ಜನ ಅದನ್ನು ಒಪ್ಪಿಕೊಳ್ಳಬೇಕು. ಬೇರೆ ಭಾಷೆಯ ನೇಟಿವಿಟಿ, ಸೊಬಗನ್ನು ನಾವು ನಮ್ಮ ಭಾಷೆಯಲ್ಲಿ ನೋಡಬೇಕಾಗುತ್ತದೆ. ಯಾವುದೋ ಭಾಷೆಯ ಹಿಟ್‌ ಆಗಿರುವ ಸಿರಿಯಲ್‌ ಇಲ್ಲಿ ತಂದರೆ ಅದು ಇಲ್ಲಿಯೂ ಸೂಪರ್‌ ಹಿಟ್‌ ಆಗುವ ಸಾಧ್ಯತೆ ಇದೆ.ನಿರ್ದೇಶಕ, ನಿರ್ಮಾಪಕ