ಡ್ರೋನ್ ಪ್ರತಾಪ್ಗೆ ಕೊನೆಗೂ ಅಮ್ಮನ ಕೈತುತ್ತು: ದೃಷ್ಟಿ ತೆಗೆದು ಬರಮಾಡಿಕೊಂಡ ವಿಡಿಯೋಗೆ ನೆಟ್ಟಿಗರು ಏನಂದ್ರು?
ಡ್ರೋನ್ ಪ್ರತಾಪ್ ಹುಟ್ಟೂರಿಗೆ ಭೇಟಿ ಕೊಟ್ಟಿದ್ದು, ಅಲ್ಲಿ ಅವರ ತಾಯಿ ಕೈತುತ್ತು ನೀಡಿದ್ದಾರೆ. ಈ ವಿಡಿಯೋ ನೋಡಿ ನೆಟ್ಟಿಗರು ಏನಂದ್ರು?
ಡ್ರೋನ್ ಪ್ರತಾಪ್ ಎಂದಾಕ್ಷಣ ಈಗ ಎಲ್ಲರಿಗೂ ನೆನಪಾಗುವುದು ಬಿಗ್ಬಾಸ್. ಬಿಗ್ಬಾಸ್ ಮನೆಯಲ್ಲಿ ಎಲ್ಲರ ಪ್ರೀತಿ ಗಳಿಸಲು ಸಾಕಷ್ಟು ಶ್ರಮವಹಿಸಿದ್ದಾರೆ ಡ್ರೋನ್. ಇದೇ ಕಾರಣಕ್ಕೆ ಫಿನಾಲೆವರೆಗೂ ಎಂಟ್ರಿ ಕೊಟ್ಟು, ಮೊದಲ ರನ್ನರ್ ಅಪ್ ಕೂಡ ಆದರು. ಆದ್ರೆ ಕೆಲ ವರ್ಷಗಳ ಹಿಂದೆ ಈ ಯುವಕನ ಹೆಸರು ಹೇಳಿಕೊಂಡು ತಮ್ಮ ಮನೆಯ ಮಕ್ಕಳನ್ನು ಬೈದವರು ಅದೆಷ್ಟೋ ಮಂದಿ. ಇವನನ್ನು ನೋಡಿ ಸ್ವಲ್ಪನಾದರೂ ಬುದ್ಧಿ ಕಲಿ ಎಂದು ಹೇಳಿಸಿಕೊಂಡ ಮಕ್ಕಳು ಇನ್ನೆಷ್ಟೋ. ಹೋದಲ್ಲಿ, ಬಂದಲ್ಲಿ ಈ ಯುವಕನ ಮಾತೇ ಮಾತು. ಪ್ರತಾಪ್ ಅವರ ಮಾತಿನ ಪ್ರತಾಪಕ್ಕೆ ಮೋಡಿಯಾಗದವೇ ಇಲ್ಲ. ವಿಭಿನ್ನ ಕ್ಷೇತ್ರಗಳ ನುರಿತರು, ಮೇಧಾವಿಗಳು ಎನಿಸಿಕೊಂಡವರೂ ಪ್ರತಾಪ್ ಮಾತಿಗೆ ತಲೆದೂಗಿದರು. ಎಷ್ಟೋ ವೇದಿಕೆಗಳಲ್ಲಿ ಇವರು ಮಾಡುತ್ತಿದ್ದ ಪ್ರೇರಣಾತ್ಮಕ ಭಾಷಣಕ್ಕೆ ತಲೆದೂಗಿದರು. ಕೇಳುವ ಪ್ರಶ್ನೆಗಳಿಗೆ ಅಷ್ಟೇ ಚೆನ್ನಾಗಿ ಉತ್ತರಿಸುವ ಮೇಧಾವಿ ಎನಿಸಿಕೊಂಡವರು ಡ್ರೋಣ್. ಡ್ರೋನ್ ತಯಾರಿಸಲು ತಾನು ಪಟ್ಟಿರುವ ಕಷ್ಟಗಳನ್ನು, ಬೀದಿ ಬದಿಯಲ್ಲಿ ಮಲಗಿ ತುತ್ತು ಅನ್ನಕ್ಕಾಗಿ ಪರದಾಡಿದ ದಿನಗಳನ್ನು ಕಣ್ಣಿಗೆ ಕಟ್ಟುವಂತೆ ಹೇಳುತ್ತಾ ಕೇಳುಗರ ಕಣ್ಣಲ್ಲಿ ನೀರು ತರಿಸಿದ್ದ ಪ್ರತಾಪ್ ನಿಜ ಬಣ್ಣ ಬದಲಾಗಲು ಹಲವಾರು ವರ್ಷಗಳೇ ಬೇಕಾದವು. ಕೊನೆಗೂ ಇಷ್ಟು ವರ್ಷ ಹೇಳಿದ್ದು, ಮಾತನಾಡಿದ್ದು, ತಮ್ಮ ಬಗ್ಗೆ ಹೇಳಿಕೊಂಡಿದ್ದು, ಡ್ರೋನ್ ತಯಾರಿಕೆ ಕುರಿತು ವಿವರಣೆ ನೀಡಿದ್ದು ಎಲ್ಲವೂ ಹಸಿಹಸಿ ಸುಳ್ಳು ಎಂದು ತಿಳಿದು ಹಲವು ಕೇಸ್ಗಳು ದಾಖಲಾದವು. ಸ್ವಲ್ಪ ಸಮಯ ತಲೆ ಮರೆಸಿಕೊಂಡಿದ್ದ ಪ್ರತಾಪ್ ಬಿಗ್‌ಬಾಸ್‌ನಲ್ಲಿ ಪ್ರತ್ಯಕ್ಷ ಆಗಿ ಭಾರಿ ಅಭಿಮಾನಿಗಳನ್ನೂ ಗಳಿಸಿದರು. ಜೊತೆಗೆ ಅಚ್ಚರಿ ಎನ್ನುವಂತೆ ರನ್ನರ್ ಅಪ್ ಕೂಡ ಆದರು.
ಎಲ್ಲರ ಕರುಣೆ ಗಿಟ್ಟಿಸಿಕೊಳ್ಳಲು ಬಿಗ್ಬಾಸ್ ಮನೆಯಲ್ಲಿ ಬಿಬಿಎಂಪಿ ಅಧಿಕಾರಿಗಳ ವಿರುದ್ಧವೇ ಮಾತನಾಡಿ ಸದ್ಯ ತಗ್ಲಾಕ್ಕೊಂಡಿದ್ದಾರೆ. ಇದಕ್ಕೂ ಮುನ್ನ ಅಪ್ಪ-ಅಮ್ಮನ ಬಗ್ಗೆಯೂ ಇಲ್ಲಸಲ್ಲದ್ದು ಹೇಳಿಕೊಂಡು ಅನುಕಂಪ ಗಿಟ್ಟಿಸಿದ್ದೂ ಇದೆ. ಇದೇ ಕಾರಣಕ್ಕೆ ಮೂರು ವರ್ಷಗಳಿಂದ ಹೆತ್ತವರಿಂದಲೇ ದೂರವಾಗಿದ್ರು ಡ್ರೋನ್. ಅಪ್ಪ-ಅಮ್ಮನ ಮೊಬೈಲ್ ನಂಬರ್ ಅನ್ನೂ ಬ್ಲಾಕ್ ಮಾಡಿ ಹಾಕಿದ್ರು. ಹೊರಗಡೆ ಇದ್ದಾಗ ಅಪ್ಪ-ಅಮ್ಮನ ನೆನಪೇ ಸುಳಿಯದ ಡ್ರೋನ್ ಪ್ರತಾಪ್ಗೆ ಬಿಗ್ಬಾಸ್ ಮನೆಗೆ ಹೋಗುತ್ತಿದ್ದಂತೆಯೇ ಅವರ ನೆನಪು ಉಕ್ಕಿ ಉಕ್ಕಿ ಬಂದು ಅವರನ್ನು ನೋಡಲು ಕಣ್ಣೀರು ಸುರಿಸಿದರು. ಇವೆಲ್ಲವುಗಳ ನಡುವೆಯೇ, ಬಿಗ್ಬಾಸ್ ಮುಗಿಯುತ್ತಿದ್ದಂತೆಯೇ, ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹುಟ್ಟೂರು ನೆಟ್ಕಲ್ ಗ್ರಾಮಕ್ಕೆ ಭೇಟಿ ನೀಡುವ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ ಪ್ರತಾಪ್.
ಅಯ್ಯೋ ಇದು ಧಾರಾವಾಹಿ ಪಾರ್ಟ್ ಕಣಮ್ಮಾ ಎಂದ್ರೂ ಬಿಡಲಿಲ್ಲ- ನಾಯಕನ ಹಿಡಿದು ಝಾಡಿಸಿದ ಮಹಿಳೆ!
ಪಾಲಕರು ಕಟ್ಟಿಸಿದ್ದ ಹೊಸ ಮನೆಯನ್ನೂ ಇವರು ನೋಡಿರಲಿಲ್ಲ. ಇದೀಗ ನೆಟ್ಕಲ್ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ, ಅದ್ಧೂರಿ ಸ್ವಾಗತ ಸಿಕ್ಕಿದೆ. ಮಕ್ಕಳು ಏನೇ ಮಾಡಿದರೂ ಹೆತ್ತ ಕರುಳು ಮಕ್ಕಳಿಗಾಗಿ ಮಿಡಿಯುತ್ತಲೇ ಇರುತ್ತದೆ ಅಲ್ಲವೆ? ಅದೇ ರೀತಿ ಪ್ರತಾಪ್ ಅಮ್ಮ ರಾಗಿ ಮುದ್ದೆ ಮಾಡಿ ಮಗನಿಗೆ ತುತ್ತು ಅನ್ನ ನೀಡಿದ್ದಾರೆ. ಈ ಸಂದರ್ಭದಲ್ಲಿ ಎಲ್ಲರ ಜೊತೆ ಬೆರೆತ ಡ್ರೋನ್, ಸೈಕಲ್ ಏರಿ ಊರು ಸುತ್ತಾಡಿದ್ದಾರೆ. ಮಾದಪ್ಪನ ದೇವಸ್ಥಾನಕ್ಕೂ ಹೋಗಿ ಬಂದಿದ್ದಾರೆ. ಇದಕ್ಕೂ ಮೊದಲು ಅಮ್ಮ ಮಗನಿಗೆ ಬಾಗಿಲ ಬಳಿಯೇ ಕಾದು ನಿಂತು ಅರಿಶಿಣ ಕುಂಕುಮದ ನೀರಿನಿಂದ ದೃಷ್ಟಿ ತೆಗೆದಿದ್ದಾರೆ. ಬಾಗಿಲ ಬಳಿಯಲ್ಲಿ ಮೊಟ್ಟೆ ಒಡೆದು ಯಾರ ಕಣ್ಣೂ ಬೀಳದಿರಲಿ ಎಂದು ಮಗನನ್ನು ಮನೆಗೆ ಬರಮಾಡಿಕೊಂಡಿದ್ದಾರೆ. ನಂತರ ರಾಗಿ ಮುದ್ದೆಗೆ ಕೈತುತ್ತು ನೀಡಿದ್ದಾರೆ. ಅವರ ಅಪ್ಪ ಕೂಡ ಮಗನನ್ನು ಪ್ರೀತಿಯಿಂದ ನೋಡಿಕೊಂಡು ರಾಗಿಮುದ್ದೆ ಮಾಡಿ ಕೊಟ್ಟಿದ್ದಾರೆ. ಇವುಗಳ ವಿಡಿಯೋಗಳು ವೈರಲ್ ಆಗುತ್ತಿವೆ.
ಇದರ ವಿಡಿಯೋ ನೋಡಿ ಹಲವರು ಆನಂದ ಬಾಷ್ಪ ಹರಿಸಿದ್ದಾರೆ. ಅಮ್ಮನ ಪ್ರೀತಿಗೆ ತಲೆ ಬಾಗಿದ್ದಾರೆ. ಇನ್ನು ಕೆಲವರು ಇನ್ನಾದರೂ ಕಾಗೆ ಹಾರಿಸಿಕೊಂಡು, ಸುಳ್ಳು ಹೇಳಿಕೊಂಡು ಎಲ್ಲರನ್ನೂ ಯಾಮಾರಿಸುವುದನ್ನು ಬಿಟ್ಟು ಅಪ್ಪ-ಅಮ್ಮಂದಿರನ್ನು ಚೆನ್ನಾಗಿ ನೋಡಿಕೋ ಎಂದಿದ್ದಾರೆ. ಇದಾಗಲೇ ಮೋಸ,ವಂಚನೆ, ಸುಳ್ಳಿನ ಕೆಲವು ಕೇಸ್ಗಳು ಡ್ರೋನ್ ತಲೆಗೆ ಸುತ್ತಿಕೊಂಡಿವೆ. ಇವುಗಳ ನಡುವೆ ಕಾಂಟ್ರವರ್ಸಿಯಿಂದಲೇ ಬಿಗ್ಬಾಸ್ ಮನೆಗೆ ಎಂಟ್ರಿ ಪಡೆದು ಭರ್ಜರಿ ಫ್ಯಾನ್ಸ್ ಗಳಿಸಿದ್ದಾರೆ. ಈ ಎಲ್ಲಾ ಅಭಿಮಾನಿಗಳ ಮನಸ್ಸಿನಲ್ಲಿ ನೆಲೆಯೂರಬೇಕಾದರೆ ಒಳ್ಳೆಯ ಕೆಲಸ ಮಾಡು, ಬರೀ ಡೈಲಾಗ್ ಹೇಳುತ್ತಾ ಎಲ್ಲರನ್ನೂ ಮೋಸ ಮಾಡುವುದನ್ನು ಮಾಡಬೇಡ. ಅಪ್ಪ ಅಮ್ಮನಿಗೆ ಒಳ್ಳೆಯ ಮಗನಾಗಿ, ಸಮಾಜಕ್ಕೆ ಪ್ರೇರಕ ಶಕ್ತಿಯಾಗಿ ಇರು ಎನ್ನುತ್ತಿದ್ದಾರೆ.
ಬಿಗ್ಬಾಸ್ ಅಂದ್ರೆ ಪ್ರತಾಪ್ಗೆ ಹೀಗಂತೆ! ಗಿಚ್ಚಿ ಗಿಲಿಗಿಲಿ ವೇದಿಕೆಯಲ್ಲಿ ಡ್ರೋನ್ ಹೇಳಿದ್ದೇನು?