ಬಿಗ್‌ಬಾಸ್ ಸ್ಪರ್ಧಿ 'ಡಾಗ್ ಸತೀಶ್' ಮತ್ತು ಕಂಟೆಂಟ್ ಕ್ರಿಯೇಟರ್ 'ಟಾಟ್ ಸುಭಾಷ್' ವಿರುದ್ಧ ಪ್ರಾಣಿ ಕಾಮ ಮತ್ತು ಪ್ರಾಣಿ ಹಿಂಸೆಯನ್ನು ಪ್ರೋತ್ಸಾಹಿಸುವ ಅಶ್ಲೀಲ ವಿಡಿಯೋ ಹರಿಬಿಟ್ಟ ಆರೋಪದ ಮೇಲೆ ಬೆಂಗಳೂರಿನಲ್ಲಿ ದೂರು ದಾಖಲಾಗಿದೆ. 

ಬೆಂಗಳೂರು (ಮಾ.5): ಸೋಶಿಯಲ್ ಮೀಡಿಯಾದಲ್ಲಿ ನಾಯಿಗಳ ಬಗ್ಗೆ ಅತ್ಯಂತ ಅಶ್ಲೀಲವಾಗಿ ಮಾತನಾಡಿ, ಪ್ರಾಣಿ ಕಾಮ (Bestiality) ಮತ್ತು ಪ್ರಾಣಿ ಹಿಂಸೆಯನ್ನು ಪ್ರೋತ್ಸಾಹಿಸುವಂತಹ ವಿಡಿಯೋ ಹರಿಬಿಟ್ಟ ಆರೋಪದ ಮೇಲೆ ಖ್ಯಾತ ಡಾಗ್‌ ಬ್ರೀಡರ್‌ ಹಾಗೂ ಬಿಗ್‌ಬಾಸ್ ಸ್ಪರ್ಧಿ 'ಡಾಗ್ ಸತೀಶ್' ಮತ್ತು ಕಂಟೆಂಟ್ ಕ್ರಿಯೇಟರ್ 'ಟಾಟ್ ಸುಭಾಷ್' ವಿರುದ್ಧ ಬೆಂಗಳೂರಿನ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬೆಂಗಳೂರಿನ ಅನ್ನಿಪುರದ ನಿವಾಸಿ ಮತ್ತು ಪ್ರಾಣಿ ಕಲ್ಯಾಣ ಬೆಂಬಲಿಗರಾದ ಲಕ್ಷ್ಮಿ ಎಸ್. ಎಂಬುವವರು ಈ ಸಂಬಂಧ ದೂರು ನೀಡಿದ್ದಾರೆ.

ದೂರಿನಲ್ಲಿ ಏನಿದೆ?

ಫೆಬ್ರವರಿ 24 ರಂದು 'ಟಾಟ್ ಸುಭಾಷ್' (ಸುಭಾಷ್ ಪ್ರಜಾಪತ್) ಎಂಬಾತ ತನ್ನ ಫೇಸ್‌ಬುಕ್ ಖಾತೆಯಲ್ಲಿ ಅಪ್‌ಲೋಡ್ ಮಾಡಿರುವ ಸುಮಾರು 25 ಸೆಕೆಂಡುಗಳ ವಿಡಿಯೋ ಈಗ ವಿವಾದಕ್ಕೆ ಕಾರಣವಾಗಿದೆ. ಈ ವಿಡಿಯೋದಲ್ಲಿ ಸುಭಾಷ್ ಮತ್ತು ಇನ್ನೊಬ್ಬ ವ್ಯಕ್ತಿ, ಇತ್ತೀಚೆಗೆ 'ಬಿಗ್ ಬಾಸ್ ಕನ್ನಡ' ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ 'ಡಾಗ್ ಸತೀಶ್' ಅವರನ್ನು ಭೇಟಿಯಾಗುತ್ತಾರೆ. ಸುಭಾಷ್ ಅತ್ಯಂತ ಅಶ್ಲೀಲವಾಗಿ ತನ್ನ ನಾಯಿಯ ಮಿಲನದ (Mating) ಬಗ್ಗೆ "ನಮ್ಮ ಚಿನ್ನುಗೆ ಶಾಟ್ ಹಾಕಿಸಬೇಕು, ಯಾರ ಹತ್ತಿರ ಹಾಕಿಸೋಣ, ಎಲ್ಲಿ ಹಾಕಿಸೋಣ?" ಎಂದು ಕೇಳುತ್ತಾನೆ.

ಇದಕ್ಕೆ ಪ್ರತಿಕ್ರಿಯಿಸುವ ಡಾಗ್ ಸತೀಶ್, ನಾಯಿಯ ಜೊತೆ ಸುಭಾಷ್ ಅವರೇ ಲೈಂಗಿಕವಾಗಿ ಬೆರೆಯುವಂತೆ (Bestiality) ಪ್ರಚೋದಿಸುವಂತಹ ಅಸಹ್ಯಕರ ಮತ್ತು ಅಶ್ಲೀಲ ಉತ್ತರ ನೀಡುತ್ತಾರೆ. ಸುಭಾಷ್ "ಅದು ಸಾಧ್ಯವಿಲ್ಲ" ಎಂದಾಗ, ಸತೀಶ್ "ನೀನು ಪ್ರಯತ್ನ ಮಾಡು, ನಂತರ ಆ ನಾಯಿಯನ್ನು ಮಾರಾಟ ಮಾಡಲು ನಾನು ಸಹಾಯ ಮಾಡುತ್ತೇನೆ" ಎಂದು ಮತ್ತಷ್ಟು ಪ್ರೋತ್ಸಾಹ ನೀಡಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಸಾರ್ವಜನಿಕ ನೈತಿಕತೆಗೆ ಧಕ್ಕೆ

ಈ ವಿಡಿಯೋ ಈಗಾಗಲೇ 2,80,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದ್ದು, ಸಾಮಾಜಿಕವಾಗಿ ಕೆಟ್ಟ ಪರಿಣಾಮ ಬೀರುತ್ತಿದೆ. ಡಾಗ್ ಸತೀಶ್ ಅವರು ಸಾರ್ವಜನಿಕವಾಗಿ ಪ್ರಭಾವ ಹೊಂದಿರುವ ವ್ಯಕ್ತಿಯಾಗಿದ್ದು, ಅವರ ಇಂತಹ ಮಾತುಗಳು ಯುವಜನತೆ ಮತ್ತು ಅಪ್ರಾಪ್ತರ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ಲಕ್ಷ್ಮಿ ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಹಾಸ್ಯದ ನೆಪದಲ್ಲಿ ಇಂತಹ ಪ್ರಾಣಿ ವಿರೋಧಿ ಮತ್ತು ಅಶ್ಲೀಲ ವಿಷಯಗಳನ್ನು ಹರಡುವುದು ಕಾನೂನುಬಾಹಿರ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಯಾವ ಕಾಯ್ದೆಗಳ ಅಡಿ ದೂರು?

ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS), 2023: ಸೆಕ್ಷನ್ 294 ಮತ್ತು 296 (ಸಾರ್ವಜನಿಕವಾಗಿ ಅಶ್ಲೀಲ ಕೃತ್ಯ ಮತ್ತು ಪ್ರಸಾರ), ಮಾಹಿತಿ ತಂತ್ರಜ್ಞಾನ ಕಾಯ್ದೆ, 2000: ಸೆಕ್ಷನ್ 67 (ಎಲೆಕ್ಟ್ರಾನಿಕ್ ರೂಪದಲ್ಲಿ ಅಶ್ಲೀಲ ವಸ್ತುಗಳ ಪ್ರಸಾರ), ಪ್ರಾಣಿ ಹಿಂಸೆ ತಡೆ ಕಾಯ್ದೆ, 1960: ಸೆಕ್ಷನ್ 11 (ಪ್ರಾಣಿಗಳ ವಿರುದ್ಧದ ಕ್ರೌರ್ಯ) ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.

ದೂರುದಾರರ ಆಗ್ರಹ

ಆರೋಪಿಗಳಾದ ಟಾಟ್ ಸುಭಾಷ್ ಮತ್ತು ಡಾಗ್ ಸತೀಶ್ ವಿರುದ್ಧ ತಕ್ಷಣ ಎಫ್‌ಐಆರ್ (FIR) ದಾಖಲಿಸಬೇಕು. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಿಂದ ತೆಗೆದುಹಾಕಲು ಮೆಟಾ/ಫೇಸ್‌ಬುಕ್ ಸಂಸ್ಥೆಗೆ ನೋಟಿಸ್ ನೀಡಬೇಕು. ವಿಡಿಯೋದಲ್ಲಿರುವ ಇನ್ನೊಬ್ಬ ಅಪರಿಚಿತ ವ್ಯಕ್ತಿಯನ್ನು ಗುರುತಿಸಿ ವಿಚಾರಣೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಈಗಾಗಲೇ ಆಡೂರು ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.