ಬೆಂಗಳೂರು(ಜೂ. 03)  ಈ ಕೊರೋನಾ ಲಾಕ್ ಡೌನ್ ಎನ್ನುವುದು ಸದಭಿರುಚಿಯ ಧಾರಾವಾಹಿಯೊಂದಕ್ಕೆ ಅಂತ್ಯ ಹಾಡಿದೆ. ಕಾಯಂ ವೀಕ್ಷಕರಿಗೆ ಇದೊಂದು ಅರಗಿಸಿಕೊಳ್ಳಲಾಗದ ಸಂಗತಿ.  ಶೂಟಿಂಗ್ ಮುಗಿಸಿದ ಎಪಿಸೋಡ್ ಗಳನ್ನು ಇನ್ನು ಎರಡು ವಾರ ಕಾಲ ನೋಡಬಹುದು ಅಷ್ಟೇ.

ನಿರ್ದೇಶಕ ಟಿಎನ್ ಸೀತಾರಾಮ್ ಮತ್ತೊಮ್ಮೆ ತಮ್ಮ ಸೋಶಿಯಲ್ ಮೀಡಿಯಾ ಪೇಜ್ ಮೂಲಕ ಅಭಿಮಾನಿಗಳ ಮುಂದೆ ಬಂದು ಮಗಳು ಜಾನಕಿಯ ಕತೆ ಹೇಳಿದ್ದಾರೆ. ಮಗಳು ಜಾನಕಿ ನಿಲ್ಲುತ್ತಿರುವುದಕ್ಕೆ ವಾಹಿನಿ ಮುಖ್ಯಸ್ಥರ ಮೇಲೆ ಬೇಸರ ಮಾಡಿಕೊಳ್ಳುವುದು ಸರಿ ಅಲ್ಲ ಎಂದು  ವಿನಂತಿ ಮಾಡಿಕೊಂಡಿದ್ದಾರೆ.

ಮಗಳು ಜಾನಕಿ ಧಾರಾವಾಹಿಗೆ ಸೀತಾರಾಮ್ ಮುಕ್ತಿ ಮುಕ್ತಿ ಮುಕ್ತಿ

ಜಂಗಮದುರ್ಗ, ಸಿಎಸ್‌ಪಿ, ಮಂಗಳತ್ತೆ, ಚಂದು ಬಾರ್ಗಿ, ನಿರಂಜನ, ಚಂಚಲಾ, ಶೀಲಾ ಭೂಷಣ್, ಆನಂದ್, ಸಂಜನಾ ಇನ್ನು ಕಾಣಸಿಗುವುದಿಲ್ಲ.  ರಸವತ್ತಾದ ನ್ಯಾಯಾಲಯದ ಸೀನ್ ಗಳನ್ನು ಮಿಸ್ ಆಗುತ್ತವೆ. ರಾಜಕೀಯದ ಒಳಹೊರಗು ತಪ್ಪಿಸಿಕೊಳ್ಳುತ್ತದೆ

ಟಿ.ಎನ್.ಸೀತಾರಾಮ್ ಮುಖ್ಯ ಭೂಮಿಕೆಯಲ್ಲಿ ತಂದೆಯಾಗಿ ಕಾಣಿಸಿಕೊಂಡಿದ್ದರು. ಮಗಳು ಜಾನಕಿಯಾಗಿ, ಪೊಲೀಸ್ ಅಧಿಕಾರಿಯಾಗಿ ಗಾನವಿ ಮನಗೆದ್ದಿದ್ದರೆ ರಾಕೇಶ್ ಮಯ್ಯ ನಿರಂಜನನಾಗಿ ಮನಸ್ಸಿನ ಒಳಕ್ಕೆ ಸೇರಿಕೊಂಡಿದ್ದರು.

ಮಗಳು ಜಾನಕಿ, ಮಾತುಗಳಿವೆ  ಬಾಕಿ; ಸೀತಾರಾಮ್ ಸಂದರ್ಶನ

 2018ರ ಮಧ್ಯದಲ್ಲಿ ಆರಂಭವಾದ ಧಾರಾವಾಹಿ ಒಂದೂವರೆ ವರ್ಷಗಳ ಕಾಲ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿತ್ತು. ಕೌಟುಂಬಿಕ ಸಂಬಂಧ, ರಾಜಕಾರಣ, ವಾಸ್ತವದ ಬದುಕು, ಕಾನೂನು ಮತ್ತು ನ್ಯಾಯಾಲಯ ಸಂಗತಿಗಳ ಮೇಲೆ ಧಾರಾವಾಹಿ ಮುನ್ನಡೆಯುತ್ತಿತ್ತು.  ಹಾಗಾದರೆ ಸೀತಾರಾಮ್ ಏನು ಹೇಳಿದ್ದಾರೆ ಎಂಬುದನ್ನು ಯಥಾವತ್ತಾಗಿ ನಿಮ್ಮ ಮುಂದೆ ಇಟ್ಟಿದ್ದೇವೆ.

ನಮಸ್ಕಾರ

ಮಗಳು ಜಾನಕಿ ನಿಲ್ಲುತ್ತಿರುವುದಕ್ಕಾಗಿ ಅನೇಕರು ಬೇಸರ ಗೊಂಡಿದ್ದೀರಿ.ಇದರ ಬಗ್ಗೆ ನನಗೆ ಅಸಂಖ್ಯಾತ ಫೋನ್ ಕರೆಗಳೂ ಮತ್ತು ಮೆಸೇಜುಗಳೂ ಬರುತ್ತಿವೆ.

ನಿಮ್ಮ ಪ್ರೀತಿ ಗೆ ಧನ್ಯವಾದಗಳು

ವಾಹಿನಿಯ ಬಗ್ಗೆ ಮತ್ತು ವಾಹಿನಿಯ ಮುಖ್ಯಸ್ಥರ ಬಗ್ಗೆ ಕೆಲವರು ಅಸಮಾಧಾನ ವ್ಯಕ್ತ ಪಡಿಸಿರುವುದು ನನಗೆ ಅಪಾರ ನೋವು ತಂದಿದೆ.

ಕೊರೋನಾದಿಂದಾಗಿ ಉಂಟಾದ ಆರ್ಥಿಕ ಕುಸಿತದಿಂದಾಗಿ ಅವರು ಚಾನಲ್ ಅನ್ನು ಕೆಲ ತಿಂಗಳ ಮಟ್ಟಿಗೆ ಸ್ಥಗಿತ ಗೊಳಿಸುತ್ತಿರುವುದರಿಂದ ಮಗಳು ಜಾನಕಿ ನಿಲ್ಲುವುದು ಅನಿವಾರ್ಯ.

ಅದಕ್ಕೆ ಯಾರೂ ಏನೂ ಮಾಡಲು ಸಾಧ್ಯವಿಲ್ಲ.

ಈ ಮಗಳು ಜಾನಕಿ ನಿಮಗೆ ಪ್ರಿಯ ವಾಗಲು ನನ್ನಷ್ಟೇ ವಾಹಿನಿಯ ಮುಖ್ಯಸ್ಥ ರಾದ ಪರಮೇಶ್ವರ್ ಗುಂಡಕಲ್ ರವರೂ ಕಾರಣ.

ಮಗಳು ಜಾನಕಿಯ ಕಥೆಯನ್ನು ಹಗಲೂ ರಾತ್ರಿ ನನ್ನ ಜತೆ ಕೂತು ಸಿದ್ಧ ಪಡಿಸಿದ್ದು ಅವರೇ.

ಮಗಳು ಜಾನಕಿ ಎಂಬ ಚಂದದ ಹೆಸರನ್ನು ಕೊಟ್ಟವರೂ ಅವರೇ.

ಅದರ ಮೊದಲ 50 ಕಂತುಗಳ ಚಿತ್ರ ಕಥೆಯನ್ನು ಎಲ್ಲರಿಗೂ ಹೃದಯಕ್ಕೆ ತಟ್ಟುವಂತೆ ಬರೆದು ಕೊಟ್ಟಿದ್ದು ಅವರು ಮತ್ತು ಅವರ ತಂಡ

ನಂತರ ಎಲ್ಲ ಬಗೆಯ ನಿರೂಪಣಾ ಸ್ವಾತಂತ್ರ್ಯ ವನ್ನೂ ಕಥೆಯ ಬಗ್ಗೆ ಕೊಟ್ಟರು.

ಮುಂಚೆ ಕೇವಲ ಒಂದು ವರ್ಷ ಪ್ರಸಾರವಾಗಲು 'ಮಗಳು ಜಾನಕಿ'ಯ
ಕರಾರು ಆಗಿದ್ದು.ಅದನ್ನು ಎರಡು ವರ್ಷಕ್ಕೆ ವಿಸ್ತರಿಸಿ ಕೊಟ್ಟವರು ಅವರೇ.

ನಿರ್ಮಾಣದ ಹಂತದಲ್ಲಿ ಅನೇಕ ಕಷ್ಟ ಗಳು ಬಂದಾಗ ಅದನ್ನು ಪರಿಹರಿಸಿ ಕೊಟ್ಟವರು ಅವರೇ.

ಪರಮೇಶ್ವರ್ ಗುಂಡ್ ಕಲ್ ರವರಿ ಗೆ ವೈಯಕ್ತಿಕವಾಗಿ ಮತ್ತು ನಮ್ಮ ತಂಡದ ಪರವಾಗಿ ನಾನು ಋಣಿಯಾಗಿದ್ದೇನೆ.

ಈಗ ಮಗಳು ಜಾನಕಿ ಅನಿವಾರ್ಯ ಕಾರಣಗಳಿಂದ ನಿಲ್ಲುತ್ತಿರುವುದಕ್ಕೆ ಅವರನ್ನು ವೈಯಕ್ತಿಕ ಹೊಣೆ ಮಾಡಿ ಕೆಲವರು ದೂಷಿಸುವುದು ಅಮಾನವೀಯ ಮತ್ತು ನನಗೆ ಅಪಾರ ನೋವು ಉಂಟು ಮಾಡುತ್ತದೆ.

20 ವರ್ಷಗಳಿಂದ ನನ್ನ ಎಲ್ಲಾ ಧಾರಾವಾಹಿಗಳನ್ನೂ ಪ್ರಸಾರ ಮಾಡಿದವರು ಇದೇ ವಾಹಿನಿಯವರು.

ಮುಂದೆಯೂ ಕೂಡ ಇಷ್ಟರಲ್ಲೇ ಮತ್ತೊಂದು ಧಾರಾವಾಹಿ ಮಾಡಿ ನಿಮ್ಮ ಪ್ರೀತಿ ಬೇಡಲು ನಿಮ್ಮ ಮುಂದೆ ಬರುತ್ತಿದ್ದೇನೆ.ಅದು ಜಾನಕಿಯಷ್ಟೇ, ಅಥವಾ ಅದಕ್ಕಿಂತ ನಿಮಗೆ ಇಷ್ಟವಾಗಬಹುದೆಂಬ ಭರವಸೆ ನನಗೆ ಇದೆ.

ಯಾರನ್ನೂ ವೈಯಕ್ತಿಕ ವಾಗಿ ದೂಷಿಸಿ ಮನಸ್ಸು ಗಳನ್ನು ಕಹಿ ಮಾಡುವುದು ದಯವಿಟ್ಟು ಬೇಡ.

ಸಾಧ್ಯವಾಗಿದ್ದರೆ ಕಲರ್ಸ್ ಕನ್ನಡದಲ್ಲಿ ಅವರು ಇದನ್ನು ಖಂಡಿತಾ ಹಾಕುತ್ತಿದ್ದರು.ಕಾರಣಾಂತರಗಳಿಂದ ಹಾಕಲು ಆಗುತ್ತಿಲ್ಲ. ಅದನ್ನೆಲ್ಲಾ ಅವರು ಬಹಿರಂಗವಾಗಿ ಚರ್ಚಿಸಲು ಸಾಧ್ಯವಿಲ್ಲ.

ಅದನ್ನು ದಯವಿಟ್ಟು ಅರ್ಥ ಮಾಡಿಕೊಳ್ಳೋಣ.

ನಿಮ್ಮ ಪ್ರೀತಿಗೆ ಮತ್ತೊಮ್ಮೆ ನಾನು ಆಭಾರಿ

ನಿಮ್ಮ ಪ್ರೀತಿ ಹೀಗೇ ಇರಲಿ.

ನಮಸ್ಕಾರ