'ಮಗಳು ಜಾನಕಿ'; ಮಾತುಗಳಿವೆ ಬಾಕಿ: ಟಿ.ಎನ್.ಸೀ

ಲಾಕ್ಡೌನ್  ಕಾರಣದಿಂದ ಟಿ.ವಿಯಲ್ಲಿ ಮನರಂಜನಾ ಕಾರ್ಯಕ್ರಮಗಳೆಲ್ಲ ಮರು ಪ್ರಸಾರಕ್ಕೆ ಸೀಮಿತವಾಗಿವೆ. ಇದರ ನಡುವೆ ಕಲರ್ಸ್ ಸೂಪರ್ ವಾಹಿನಿಯನ್ನೇ  ಮುಚ್ಚಲಾಗುತ್ತಿದೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಅದರಲ್ಲಿ ಪ್ರಸಾರವಾಗುತ್ತಿದ್ದ ಮಗಳು ಜಾನಕಿ ಧಾರಾವಾಹಿ ದಾಖಲೆ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡಿದೆ. ಧಾರಾವಾಹಿಯ ಮುಂದಿನ ಪರಿಸ್ಥಿತಿ ಏನು ಎನ್ನುವ ಬಗ್ಗೆ ಸ್ವತಃ ಮಗಳು ಜಾನಕಿ ಧಾರಾವಾಹಿಯ ನಿರ್ದೇಶಕ ಟಿ.ಎನ್ ಸೀತಾರಾಮ್ ಏನು ಹೇಳುತ್ತಾರೆ ಎನ್ನುವುದನ್ನು ಸುವರ್ಣ ನ್ಯೂಸ್.ಕಾಮ್ ಇಲ್ಲಿ ನಿಮಗೆ ನೀಡುತ್ತಿದೆ. 
 

Colors super magalu janaki Director TN Seetharam exclusive  interview

`ಮಗಳು ಜಾನಕಿ'; ಮಾತುಗಳಿವೆ ಬಾಕಿ: ಟಿ.ಎನ್.ಸೀ

ಲಾಕ್ಡೌನ್  ಕಾರಣದಿಂದ ಟಿ.ವಿಯಲ್ಲಿ ಮನರಂಜನಾ ಕಾರ್ಯಕ್ರಮಗಳೆಲ್ಲ ಮರು ಪ್ರಸಾರಕ್ಕೆ ಸೀಮಿತವಾಗಿವೆ. ಇದರ ನಡುವೆ ಕಲರ್ಸ್ ಸೂಪರ್ ವಾಹಿನಿಯನ್ನೇ  ಮುಚ್ಚಲಾಗುತ್ತಿದೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಅದರಲ್ಲಿ ಪ್ರಸಾರವಾಗುತ್ತಿದ್ದ ಮಗಳು ಜಾನಕಿ ಧಾರಾವಾಹಿ ದಾಖಲೆ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡಿದೆ. ಇನ್ನೇನು ಕತೆ ಕ್ಲೈಮ್ಯಾಕ್ಸ್‌ ಗೆ ಬರುತ್ತಿದೆ ಎನ್ನುವಷ್ಟರಲ್ಲಿ ಈ ಆಘಾತಕಾರಿ ಸುದ್ದಿ ಕೇಳಿದ ಪ್ರೇಕ್ಷಕರು ಗೊಂದಲಗೊಂಡಿದ್ದಾರೆ. ಅಂಥದೊಂದು ಧಾರಾವಾಹಿಯ ಕತೆ ಅರ್ಧಕ್ಕೆ ಕೊನೆಯಾದರೆ ನಾವು ಮಾನಸಿಕ ನೆಮ್ಮದಿ ಕಳೆದುಕೊಳ್ಳಲಿದ್ದೇವೆ ಎನ್ನುವುದು ಅಪಾರ ಸಂಖ್ಯೆಯ ಅಭಿಮಾನಿಗಳ ಮಾತು. ಈ ಬಗ್ಗೆ ಸ್ವತಃ ಮಗಳು ಜಾನಕಿ ಧಾರಾವಾಹಿಯ ನಿರ್ದೇಶಕ ಟಿ.ಎನ್ ಸೀತಾರಾಮ್ ಏನು ಹೇಳುತ್ತಾರೆ ಎನ್ನುವುದನ್ನು ಸುವರ್ಣ ನ್ಯೂಸ್.ಕಾಮ್ ಇಲ್ಲಿ ನಿಮಗೆ ನೀಡುತ್ತಿದೆ. 

ಶಶಿಕರ ಪಾತೂರು

ಮಗಳು ಜಾನಕಿ ಪ್ರೇಕ್ಷಕರಿಗೆ ಅಷ್ಟೊಂದು ಇಷ್ಟವಾಗಲು ಕಾರಣವೇನು?

ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಒಳ್ಳೆಯತನ ಇರುತ್ತದೆ. ಆದರೆ ಅದನ್ನು ಹೊರಹೊಮ್ಮಿಸಲು ಸೂಕ್ತ ಅವಕಾಶಗಳು ಬೇಕಾಗುತ್ತವೆ. ಧಾರಾವಾಹಿಯಲ್ಲಿ ನಡೆಯುವ ಘಟನೆಗಳಿಗೆ ನೇರವಾಗಿ ಪ್ರೇಕ್ಷಕರ ಮನಸಿನ ಭಾವನೆಗಳು ಸ್ಪಂದಿಸಲು ಶುರುವಾದರೆ ಅವರಿಗೆ ಅದು ಇಷ್ಟವಾಗುತ್ತಾ ಹೋಗುತ್ತದೆ. ಎಲ್ಲ ಭಾವಗಳೂ ಅಡಗಿರುವ ಮನುಷ್ಯನಿಂದ ಏನನ್ನು ಹೊರಗೆ ತರುವಂತೆ ಮಾಡಬೇಕು ಎನ್ನುವುದು ನಿರ್ದೇಶಕರಿಗೆ ಬಿಟ್ಟಿದ್ದು. ಯಾವುದೇ ಒಂದು ಘಟನೆ ನಡೆದ ತಕ್ಷಣ ಯಾರು ಸರಿ ತಪ್ಪು ಎಂದು ನಿರ್ಧರಿಸುವುದು ಅವಸರವಾಗುತ್ತದೆ. ಸರಿ ಎನ್ನುವುದಕ್ಕೆ ಅವರವರ ದೃಷ್ಟಿಕೋನದಿಂದ ಒಂದು ಸಮರ್ಥನೆ ಇರುತ್ತದೆ. ಪ್ರತಿಯೊಂದು ಕೋನದ ಸಮರ್ಥನೆಗಳನ್ನು ಪ್ರೇಕ್ಷಕರ ಮುಂದೆ ಇಡುತ್ತಲೇ ಸದ್ಯದ ಸಾಮಾಜಿಕ, ಕೌಟುಂಬಿಕ ಬದುಕಿಗೆ ಏನು ಅಗತ್ಯ ಎನ್ನುವುದನ್ನು ಪ್ರತಿಯೊಬ್ಬರ ಒಳ್ಳೆಯತನವೂ ಒಪ್ಪುವ ಮಾದರಿಯಲ್ಲಿ ನಿರೂಪಿಸಲು ಪ್ರಯತ್ನಿಸುತ್ತೇನೆ. ಎಲ್ಲರೊಳಗೂ ಅಂಥದೊಂದು ಒಳ್ಳೆಯ ಮನಸು ಇರುವ ಕಾರಣ ನನ್ನ ಧಾರಾವಾಹಿಗಳನ್ನು, ಪ್ರಮುಖ ಪಾತ್ರಗಳನ್ನು ಇಷ್ಟಪಡುತ್ತಾ ಹೋಗುತ್ತಾರೆ ಎನ್ನಬಹುದು.

Colors super magalu janaki Director TN Seetharam exclusive  interview

ಕೋರ್ಟ್ ದೃಶ್ಯಗಳೇ ನಿಮ್ಮ ಧಾರಾವಾಹಿಯ ಪ್ರಮುಖ ಆಕರ್ಷಣೆಯಾಗಿರುವ ಬಗ್ಗೆ?

ಕೋರ್ಟ್ ದೃಶ್ಯಗಳು ನನಗೆ ಅನಿವಾರ್ಯವಲ್ಲ. ಆದರೆ ಆಗಲೇ ಹೇಳಿದಂತೆ ಇಂದಿನ ವೇಗದ ಕಾಲಘಟ್ಟದಲ್ಲಿ ಜನರು ಬೇಗ ಸರಿ ತಪ್ಪುಗಳನ್ನು ನಿರ್ಧರಿಸಲು ಬಯಸುತ್ತಾರೆ. ಪ್ರೇಕ್ಷಕರು ಕೋರ್ಟ್ ನೀಡುವ ತೀರ್ಮಾನಗಳ ಬಗ್ಗೆ ಹೆಚ್ಚು ಭರವಸೆಯನ್ನು ಹೊಂದಿರುತ್ತಾರೆ. ನಾನು ಮೂಲತಃ ಒಬ್ಬ ವಕೀಲನೂ ಆದ ಕಾರಣ ಕೋರ್ಟ್ ಸನ್ನಿವೇಶಗಳನ್ನು ಹೆಚ್ಚು ನೈಜವಾಗಿ ನೀಡಬಲ್ಲೆ. `ಮಾಯಾಮೃಗ' ಧಾರಾವಾಹಿಯಲ್ಲಿ ಕತೆಗೆ ಅನಿವಾರ್ಯವಾಗಿ ಬಂದಂಥ ಕೋರ್ಟ್ ದೃಶ್ಯಗಳನ್ನು ಜನ ಎಷ್ಟು ಮೆಚ್ಚಿಕೊಂಡರೆಂದರೆ ನನ್ನ ಧಾರಾವಾಹಿಗಳೆಂದರೆ ಅದರಲ್ಲಿ ಕೋರ್ಟ್ ದೃಶ್ಯ ಇರಲೇಬೇಕು ಎಂದು ನಿರೀಕ್ಷಿಸುತ್ತಿದ್ದಾರೆ. ಹಾಗೆ ನೋಡಿದರೆ ಮಗಳು ಜಾನಕಿ ಧಾರಾವಾಹಿಯಲ್ಲಿ ಇತ್ತೀಚಿನ ತನಕ ಕೋರ್ಟ್ ದೃಶ್ಯಗಳೇ ಅಪರೂಪವಾಗಿದ್ದವು. ಕೆಲವೊಂದು ಪ್ರಮುಖ ತೀರ್ಮಾನಗಳಿಗಾಗಿ ನ್ಯಾಯಾಲಯದ ಸನ್ನಿವೇಶಗಳನ್ನು ಇತ್ತೀಚೆಗಷ್ಟೇ ಶುರುವಾಗಿತ್ತು. ಅಷ್ಟರಲ್ಲಿ ಕೊರೊನಾ ವೈರಸ್ ಕಾರಣದಿಂದ ಲಾಕ್ಡೌನ್ ಆಗುವ ಜತೆಗೆ ಎಲ್ಲ ಧಾರಾವಾಹಿಗಳ ಪ್ರಸಾರವೂ ನಿಲ್ಲುವಂತಾಯಿತು.

‘ಮಗಳು ಜಾನಕಿ’ ನೀವು ನೋಡಿರದ ಫೋಟೋಗಳಿವು!

ಲಾಕ್ಡೌನ್ ದಿನಗಳನ್ನು ನೀವು ಯಾವ ರೀತಿಯಲ್ಲಿ ಕಳೆದಿರಿ?

ಕೊರೊನ ಒಂದು ರೀತಿ ಎಲ್ಲರಿಗೂ ಆತ್ಮಾವಲೋಕನ ಮಾಡಿಕೊಳ್ಳಲು ಒಂದು ಒಳ್ಳೆಯ ಅವಕಾಶವನ್ನು ನೀಡಿದೆ. ಹೊರಗಡೆ ಕಾರ್ಖಾನೆ ಮುಚ್ಚಿದೆ. ವಾಹನಗಳ ಓಡಾಟವಿಲ್ಲದೆ ವಾತಾವರಣ ಶುದ್ಧವಾಗಿದೆ. ಮನುಷ್ಯನಿಗೆ ಮನೆಯೊಳಗಿದ್ದುಕೊಂಡು ಮನಸು ಶುದ್ಧಿಯಾಗುವ ಸಂದರ್ಭ.  ನಿಜ ಹೇಳಬೇಕೆಂದರೆ ನನಗಂತೂ ಮನೆಯಲ್ಲೇ ಇರೋದಕ್ಕೆ ಬೋರ್ ಆಗಿಲ್ಲ. ಬೇಕಾದಾಗ ವಿರಾಮ, ನಿದ್ದೆ ಎಲ್ಲ ಮಾಡಿಕೊಂಡು ಆರಾಮಾಗೇ ಇದ್ದೆ! ಒಂದಷ್ಟು ಸಿನಿಮಾಗಳನ್ನು ನೋಡಿದೆ. ಈಗಲೂ ಪುಸ್ತಕಗಳನ್ನು ಓದುತ್ತಿದ್ದೇನೆ. ಇದರ ನಡುವೆ ಮನೆಯಲ್ಲಿ ಕೂಡ ಒಂದಷ್ಟು ಕೆಲಸಗಳಿದ್ದವು. ಮನೆ ಕೆಲಸದವರು ಇತ್ತೀಚೆಗಷ್ಟೇ ಕೆಲಸಕ್ಕೆ ಬರಲು ಶುರು ಮಾಡಿದ್ದಾರೆ. ಹಾಗಾಗಿ ಹೆಂಡತಿಗೆ ಪಾತ್ರ ತೊಳೆಯಲು, ಮನೆ ಕ್ಲೀನಿಂಗ್ ಮಾಡಲು ಎಲ್ಲದಕ್ಕೂ ನಾನೇ ಸಹಾಯ ಮಾಡಿದ್ದೇನೆ. ಧಾರಾವಾಹಿಗಳಿಗೆ ಬರೆಯುವ, ಬರೆಯಲೇಬೇಕಾದ ಯಾವ ಒತ್ತಡವೂ ಇಲ್ಲದ ಕಾರಣ ಸಮಾಧಾನ ಚಿತ್ತದಲ್ಲಿದ್ದೆ. 

'ಮಗಳು ಜಾನಕಿ' ಚಿರಂತನ್‌ ಆಪ್ತಮಿತ್ರ ದೀಪಕ್, ಯಾರಿವರು?

`ಕಲರ್ಸ್ ಸೂಪರ್' ವಾಹಿನಿ ಮುಚ್ಚಿದರೆ `ಮಗಳು ಜಾನಕಿ' ಕೂಡ ಸ್ಥಗಿತಗೊಳ್ಳಲಿದೆಯೇ?

ಮೊದಲನೆಯದಾಗಿ `ಕಲರ್ಸ್ ಸೂಪರ್' ಮುಚ್ಚಲಿದೆ ಎನ್ನುವುದು ಸಂಪೂರ್ಣವಾಗಿ ಸತ್ಯವೇನಲ್ಲ. ಅದು ತನ್ನ ಪ್ರಸಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಿದೆ. ಜಾಗತಿಕ ಮಟ್ಟದಲ್ಲಿ ಜಾಹಿರಾತುಗಳ ಕೊರತೆಯಿಂದ ಐದು ತಿಂಗಳ ಕಾಲ ಸಸ್ಪೆಂಡ್‌ ಗೊಳಿಸಲಿದೆ. ಹಾಗೆ ನೋಡಿದರೆ ಏಳು ಎಪಿಸೋಡ್‌ ಗಳಿಗೆ ಬೇಕಾದಷ್ಟು ಫುಟೇಜನ್ನು ಮೊದಲೇ ಚಿತ್ರೀಕರಿಸಿದ್ದು, ಅವು ನಮ್ಮ ಸಂಗ್ರಹದಲ್ಲೇ ಇತ್ತು. ಆದರೆ ಅಷ್ಟು ಸಮಯದ ಬಳಿಕ ಈ ಧಾರಾವಾಹಿಗಳೆಲ್ಲ ಹಳೆಯದಾಗಿ ಬಿಡುವ ಸಂಭವ ಇರುವುದರಿಂದ ಮತ್ತೆ ಇವೇ ಸೀರಿಯಲ್‌ಗಳನ್ನು ಮುಂದುವರಿಸುವ ಸಾಧ್ಯತೆ ತೀರ ಕಡಿಮೆ. ವಾಸ್ತವದಲ್ಲಿ ಆ ಬಗ್ಗೆ ಏನೂ ಮಾತುಕತೆಗಳು ನಡೆದಿಲ್ಲ. 

Colors super magalu janaki Director TN Seetharam exclusive  interview

ನೀವು `ಉದಯ ವಾಹಿನಿ'ಗೆ ಧಾರಾವಾಹಿ ಮಾಡಲಿದ್ದೀರಿ ಎನ್ನುವ ಬಗ್ಗೆ?

ಉದಯ ವಾಹಿನಿಯ ಕಡೆಯಿಂದ ಆಫರ್ ಬಂದಿದೆ. ಮಾತುಕತೆಗಳು ನಡೆದಿರುವುದು ನಿಜ. ಆದರೆ ಯಾವುದನ್ನು ಕೂಡ ಬಿಡಿಸಿ ಹೇಳುವ ಮಟ್ಟಕ್ಕೆ ನಿರ್ಧಾರವಾಗಿಲ್ಲ. ಫೈನಲ್ ಆದ ಮೇಲೆ ಖಂಡಿತವಾಗಿ ತಿಳಿಸುತ್ತೇನೆ. ಒಟ್ಟಿನಲ್ಲಿ ಅದು ನಮ್ಮ ಸಂಸ್ಥೆಯ ಪ್ರಾಜೆಕ್ಟ್ ಆಗಿರುತ್ತದೆಯೇ ಹೊರತು ನಾನು ಅದರಲ್ಲಿ ನೇರವಾಗಿ ಭಾಗಿಯಾರುವುದಿಲ್ಲ. ನಮ್ಮಲ್ಲಿ ಒಂದು ಬಿ ಟೀಮ್ ಇದೆ. `ಭೂಮಿಕಾ' ಅಲ್ಲದೆ ಇನ್ನೊಂದು ಉಪಸಂಸ್ಥೆ ಅದು. `ಚಿತ್ರಲೇಖ' ಮೊದಲಾದ ಧಾರಾವಾಹಿಗಳು ಹಾಗೇ ಬಂದಿದ್ದವು. ನನ್ನ ಆರಂಭ ಕಾಲದ ಧಾರಾವಾಹಿಗಳು ಉದಯದಲ್ಲೇ ಪ್ರಸಾರವಾಗಿದ್ದವು. 'ಜ್ವಾಲಾಮುಖಿ', `ಕಾಮನಬಿಲ್ಲು' ಮೊದಲಾದ ಸೀರಿಯಲ್‌ಗಳ ಮೂಲಕ `ಉದಯ'ದಲ್ಲಿ ಗುರುತಿಸಿಕೊಂಡಿದ್ದೆ. 

Latest Videos
Follow Us:
Download App:
  • android
  • ios