Actor Darshan Thoogudeepa: ಕಿರುತೆರೆ ನಟಿಯೋರ್ವರು ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದ ನಿರ್ದೇಶಕ, ನಿರ್ಮಾಪಕ ಹೇಮಂತ ರಿಚ್ಚಿ ಅವರು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದರು. ದೂರಿನ ಆಧಾರದ ಮೇಲೆ ಜೈಲಿಗೆ ಹೋಗಿದ್ದ ಅವರು ದರ್ಶನ್ ಪರಿಸ್ಥಿತಿ ಹೇಗಿದೆ ಎಂದು ವಿವರಣೆ ಮಾಡಿದ್ದಾರೆ.
ಕಿರುತೆರೆ ನಟಿಯೋರ್ವರು ನಿರ್ದೇಶಕ ಹೇಮಂತ್ ರಿಚ್ಚಿ ಅವರು ನನ್ನ ಜೊತೆ ಅನುಚಿತವಾಗಿ ನಡೆದುಕೊಂಡರು ಎಂದು ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಜೈಲಿಗೆ ಹೋಗಿದ್ದ ರಿಚ್ಚಿ ಅವರೀಗ ಹೊರಗಡೆ ಬಂದಿದ್ದು, ಮಾಧ್ಯಮದ ಜೊತೆ ಒಂದಿಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.
ನಾನು ಯಾವುದೇ ತೊಂದರೆ ಕೊಟ್ಟಿಲ್ಲ
“ಆ ನಟಿ ನನ್ನ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ್ರು. ನಾನು ಅವರಿಗೆ ಯಾವುದೇ ಕಿರುಕುಳ ಕೊಟ್ಟಿಲ್ಲ. ಹಾಗೇನಾದ್ರು ಕಿರುಕುಳ ಕೊಟ್ಟಿದ್ದರೆ ದಾಖಲೆ ತೋರಿಸಲಿ, ನಾನು ಅವರಿಗೆ ಯಾವುದೇ ಮೆಸೆಜ್ ಮಾಡಿಲ್ಲ, ಕಾಲ್ ಮಾಡಿ ಟಾರ್ಚರ್ ಕೊಟ್ಟಿಲ್ಲ, ಸೋಷಿಯಲ್ ಮೀಡಿಯಾದಲ್ಲೂ ಅವರಿಗೆ ಹಿಂಸೆ ಮಾಡಿಲ್ಲ. ಆದರೆ ಅವರನ್ನು ಸಿನಿಮಾ ಪ್ರಮೋಷನ್ಗೆ ಕರೆದಿದ್ದೇನೆ” ಎಂದು ಹೇಳಿದ್ದಾರೆ.
ಜೈಲಿಗೆ ಹೋಗಿ ಬಂದ್ರು
“2023ರಿಂದ ಇಲ್ಲಿಯವರೆಗೆ ನಾನು ಅವರ ಜೊತೆ ಮಾತನಾಡಿಲ್ಲ. ನನ್ನನ್ನು ಜೈಲಿಗೆ ಕಳಿಸಿದ್ರು, ಅಲ್ಲಿ ನರಕ ಅನುಭವಿಸಿ ಬಂದಿದ್ದೇನೆ” ಎಂದು ಹೇಳಿದ್ದಾರೆ. ಅಂದಹಾಗೆ ಹೇಮಂತ್ ಅವರು ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದರು. ಆ ವೇಳೆ ಅವರು ದರ್ಶನ್ ಪರಿಸ್ಥಿತಿಯನ್ನು ನೋಡಿದ್ದಾರೆ.
ನಟ ದರ್ಶನ್ ಹೇಗಿದ್ದಾರೆ?
“ದರ್ಶನ್ ಸರ್ನ ಜೈಲಿನಲ್ಲಿ ನೊಡೋಕೆ ಆಗುತ್ತಿಲ್ಲ. ಅವರಿಗೆ ತುಂಬ ಬೆನ್ನು ನೋವಿದೆ. ಬೆಳಗ್ಗೆ ಎದ್ದು ಅವರು ಚಾಮುಂಡೇಶ್ವರಿ ತಾಯಿಗೆ ಕೈ ಮುಗಿಯುತ್ತಾರೆ. ನಾನು ಸೆಲ್3ರಲ್ಲಿ ಇದ್ದೆ, ದರ್ಶನ್ ಅವರು ಸೆಲ್ ನಂಬರ್ 1ರಲ್ಲಿದ್ದಾರೆ. ಸೊಳ್ಳೆ ಕಾಟ ಹೆಚ್ಚಿದೆ. ಬರಿ ನೆಲದ ಮೇಲೆ ಒಂದು ಜಮಖಾನ ಹಾಕಿಕೊಂಡು ಮಲಗಬೇಕು. ಪೊಲೀಸರ ಟೈಟ್ ಸೆಕ್ಯೂರಿಟಿ ಇದೆ, ಇಬ್ಬರು ಕಾನ್ಸ್ಸ್ಟೇಬಲ್, ಒಬ್ಬರು ಜೈಲರ್ ದರ್ಶನ್ ಹಿಂದೆಯೇ ಇರುತ್ತಾರೆ. ಯಾರ ಜೊತೆಗೂ ದರ್ಶನ್ರನ್ನ ಮಾತಾಡೋದಕ್ಕೆ ಬಿಡೋದಿಲ್ಲ. ದರ್ಶನ್ ಸರ್ ಕುಗ್ಗಿ ಹೋಗಿದ್ದಾರೆ. ವೀಕ್ ಆಗಿದ್ದಾರೆ. ಮನೆಯವರು ಲಾಯರ್ ಬಂದಾಗ ಮಾತ್ರ ಸೆಲ್ನಿಂದ ಹೊರಗೆ ಬರುತ್ತಾರೆ” ಎಂದು ಹೇಮಂತ್ ಹೇಳಿದ್ದಾರೆ.
ಆ ನಟಿ ಹಾಗೂ ಹೇಮಂತ್ ರಿಚ್ಚಿ ಅವರ ಮಧ್ಯೆ ಕೆಲ ಸಮಯದಿಂದಲೂ ಮನಸ್ತಾಪ ಇದೆ. ಸಾಕಷ್ಟು ಬಾರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಸಂಧಾನ ಮಾಡಿಕೊಂಡಿದ್ದೂ ಆಗಿದೆ.
ಅಂದಹಾಗೆ ನಟ ದರ್ಶನ್ ಅವರು ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿದ್ದಾರೆ. ತಲೆದಿಂಬು, ಹಾಸಿಗೆ ಎಂದು ಒಂದಿಷ್ಟು ಡಿಮ್ಯಾಂಡ್ ಮಾಡಿದ್ದರೂ ಕೂಡ, ಅವರು ಕೇಳಿದ ಎಲ್ಲ ಸೌಲಭ್ಯಗಳನ್ನು ನೀಡಲಾಗಿಲ್ಲ, ಇನ್ನು ಅವರ ಪತ್ನಿ ವಿಜಯಲಕ್ಷ್ಮೀ ಅವರು ದರ್ಶನ್ ಭೇಟಿಗೆ ಹೋಗಬೇಕು ಎಂದಾಗ ಕೆಲ ಗಂಟೆಗಳ ಕಾಲ ಕಾಯಬೇಕಾಗುವುದು. ಒಟ್ಟಿನಲ್ಲಿ ನಟ ದರ್ಶನ್ ಅವರು ಕಷ್ಟಪಡುತ್ತಿದ್ದಾರೆ ಎನ್ನಲಾಗಿದೆ.
