ಜೀ ಕನ್ನಡ ವಾಹಿನಿಯು 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೂಪರ್ ಮಾಮ್' ಎಂಬ ಹೊಸ ರಿಯಾಲಿಟಿ ಶೋ ಅನ್ನು ರಾಜ್ಯದ ಪ್ರತಿಭಾವಂತ ಅಮ್ಮಂದಿರಿಗಾಗಿ ಆಯೋಜಿಸುತ್ತಿದೆ. ಇದರ ಮೆಗಾ ಆಡಿಷನ್ ಆಗಸ್ಟ್ 2 ರಂದು ಬೆಂಗಳೂರಿನ ಅಬ್ಬಯ್ಯ ನಾಯ್ಡು ಸ್ಟುಡಿಯೋ ಆವರಣದಲ್ಲಿ ನಡೆಯಲಿದೆ.

ಬೆಂಗಳೂರು (ಆ.1): ಕಿರುತೆರೆ ವೀಕ್ಷಕರ ನೆಚ್ಚಿನ ವಾಹಿನಿ 'ಜೀ ಕನ್ನಡ' ತನ್ನ ಸೂಪರ್ ಹಿಟ್ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ರಿಯಾಲಿಟಿ ಶೋನ ಹೊಸ ಅಧ್ಯಾಯಕ್ಕೆ ಸಜ್ಜಾಗಿದೆ. ಈ ಬಾರಿ ರಾಜ್ಯದ ಪ್ರತಿಭಾವಂತ ಅಮ್ಮಂದಿರಿಗಾಗಿಯೇ ವಿಶೇಷವಾಗಿ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೂಪರ್ ಮಾಮ್' ಶೋ ಮೂಡಿಬರಲಿದ್ದು, ಇದರ ಮೆಗಾ ಆಡಿಷನ್ ಆಗಸ್ಟ್ 2ರಂದು (ಭಾನುವಾರ) ರಾಜಧಾನಿ ಬೆಂಗಳೂರಿನಲ್ಲಿ ನಡೆಯಲಿದೆ. ಮನೆ, ಕುಟುಂಬ, ಮಕ್ಕಳು ಹಾಗೂ ಉದ್ಯೋಗದ ಜವಾಬ್ದಾರಿಗಳ ನಡುವೆ ತಮ್ಮ ನೃತ್ಯದ ಕನಸನ್ನು ಬದಿಗಿಟ್ಟಿರುವ ವಿವಾಹಿತ ಮಹಿಳೆಯರಿಗೆ ತಮ್ಮ ಪ್ರತಿಭೆಯನ್ನು ಇಡೀ ರಾಜ್ಯದ ಮುಂದೆ ಪ್ರದರ್ಶಿಸಲು ಜೀ ಕನ್ನಡ ವೇದಿಕೆ ಕಲ್ಪಿಸಿಕೊಡುತ್ತಿದೆ.

ಈ ಕುರಿತಾಗಿ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿರುವ ವಾಹಿನಿ, 'ಡ್ಯಾನ್ಸ್ ಅಂದ್ರೆ ಜೀವ ಅನ್ನೋ ಅಮ್ಮಂದಿರಿಗಾಗಿ Dance ಕರ್ನಾಟಕ Dance Super Mom ಆಡಿಷನ್ ನಾಳೆ ಬೆಂಗಳೂರಿನ ಅಬ್ಬಯ್ಯ ನಾಯ್ಡು ಸ್ಟುಡಿಯೋ ಆವರಣದ ಮಧು ಆರ್ಟ್ ಸ್ಟುಡಿಯೋದಲ್ಲಿ ಬೆಳಿಗ್ಗೆ 9ರಿಂದ ನಡೆಯಲಿದೆ. ತರಬೇತಿ ಇಲ್ಲದಿದ್ದರೂ ಅಮ್ಮಂದಿರು ಆತ್ಮವಿಶ್ವಾಸದಿಂದ ಭಾಗವಹಿಸಿ. ಒಂದು ಪಾಸ್‌ಪೋರ್ಟ್ ಸೈಜ಼್ ಫೋಟೋ ಮತ್ತು ಅಡ್ರೆಸ್ ಪ್ರೂಫ್ ಜೊತೆಗೆ ಆಡಿಷನ್‌ಗೆ ತಪ್ಪದೇ ಬನ್ನಿ, ಡ್ಯಾನ್ಸ್ ಮೂಲಕ ಸೂಪರ್ Mom ಆಗಿ!' ಎಂದು ಬರೆದುಕೊಂಡಿದೆ.

ಆಡಿಷನ್ ದಿನಾಂಕ ಮತ್ತು ಸಮಯ

  • ದಿನಾಂಕ: ಆಗಸ್ಟ್ 2, 2026 (ಭಾನುವಾರ)
  • ಸಮಯ: ಬೆಳಿಗ್ಗೆ 9 ಗಂಟೆಯಿಂದ ಪ್ರಾರಂಭ
  • ಸ್ಥಳ: ಮಧು ಆರ್ಟ್ಸ್ ಸ್ಟುಡಿಯೋ (ಅಬ್ಬಯ್ಯ ನಾಯ್ಡು ಸ್ಟುಡಿಯೋ ಆವರಣ), ನಾಯ್ಡು ಲೇಔಟ್, ಹನುಮಗಿರಿ, ಚಿಕ್ಕಲಸಂದ್ರ, ಉತ್ತರಹಳ್ಳಿ ಹೋಬಳಿ, ಬೆಂಗಳೂರು.

ತರಬೇತಿ ಇಲ್ಲದಿದ್ದರೂ ಆತ್ಮವಿಶ್ವಾಸದಿಂದ ಬನ್ನಿ!

ಅತ್ಯುತ್ತಮವಾಗಿ ನೃತ್ಯ ಮಾಡಬಲ್ಲ ಹಾಗೂ ನೃತ್ಯದ ಮೇಲೆ ಅಪಾರ ಆಸಕ್ತಿ ಹೊಂದಿರುವ ಪ್ರತಿಯೊಬ್ಬ ಅಮ್ಮಂದಿರು ಈ ಆಡಿಷನ್‌ನಲ್ಲಿ ಭಾಗವಹಿಸಬಹುದು. ಶಾಸ್ತ್ರೀಯ ಅಥವಾ ವೃತ್ತಿಪರ ನೃತ್ಯ ತರಬೇತಿ ಇಲ್ಲದಿದ್ದರೂ ಸಹ ಅಮ್ಮಂದಿರು ಸಂಪೂರ್ಣ ಆತ್ಮವಿಶ್ವಾಸದಿಂದ ಆಗಮಿಸಿ ತಮ್ಮ ಪ್ರತಿಭೆ ಪ್ರದರ್ಶಿಸಬಹುದಾಗಿದೆ.

ಆಡಿಷನ್‌ಗೆ ತರಬೇಕಾದ ದಾಖಲೆಗಳು

ಆಡಿಷನ್‌ನಲ್ಲಿ ಪಾಲ್ಗೊಳ್ಳಲು ಬಯಸುವ ಸ್ಪರ್ಧಿಗಳು ಕೆಳಗಿನ ದಾಖಲೆಗಳನ್ನು ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು. ಒಂದು ಇತ್ತೀಚಿನ ಪಾಸ್‌ಪೋರ್ಟ್ ಸೈಜ್ ಫೋಟೋ, ವಿಳಾಸದ ಪುರಾವೆ (Address Proof) ಜೆರಾಕ್ಸ್ ಪ್ರತಿ ಇರಬೇಕು. ಈ ಆಡಿಷನ್‌ನಲ್ಲಿ ಭಾಗವಹಿಸಲು ಯಾವುದೇ ರೀತಿಯ ಪ್ರವೇಶ ಶುಲ್ಕವನ್ನು ವಿಧಿಸುವುದಿಲ್ಲ ಎಂದು ಜೀ ಕನ್ನಡ ವಾಹಿನಿ ಸ್ಪಷ್ಟಪಡಿಸಿದೆ. ಈ ರಿಯಾಲಿಟಿ ಶೋ ಮೂಲಕ ನಿಮ್ಮೊಳಗಿನ ಡ್ಯಾನ್ಸರ್ ಅನ್ನು ಜಗತ್ತಿಗೆ ಪರಿಚಯಿಸಿ 'ಸೂಪರ್ ಮಾಮ್' ಆಗುವ ಅಪರೂಪದ ಅವಕಾಶ ನಿಮ್ಮದಾಗಿಸಿಕೊಳ್ಳಬಹುದು.