ಜೀ ಕನ್ನಡದ ಜನಪ್ರಿಯ ಧಾರಾವಾಹಿ 'ಬ್ರಹ್ಮಗಂಟು' ತನ್ನ ಸುದೀರ್ಘ ಪಯಣವನ್ನು ಮುಕ್ತಾಯಗೊಳಿಸುತ್ತಿದೆ. ಧಾರಾವಾಹಿಯ ನಿರ್ಮಾಪಕಿ ಶ್ರೀವಿದ್ಯಾ ರಾಜ್, ತಮ್ಮ ದಿವಂಗತ ಪತಿ ದಿಲೀಪ್ ರಾಜ್ ಅವರ ಕನಸಿನ ಯೋಜನೆಯಾಗಿದ್ದ ಈ ಧಾರಾವಾಹಿಯ ಅಂತ್ಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.

ಬೆಂಗಳೂರು (ಆ.1): ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಾ ವೀಕ್ಷಕರ ಮನಗೆದ್ದಿದ್ದ ಜನಪ್ರಿಯ 'ಬ್ರಹ್ಮಗಂಟು' ಧಾರಾವಾಹಿ ಇದೀಗ ಮುಕ್ತಾಯದ ಹಂತಕ್ಕೆ ಬಂದು ತಲುಪಿದೆ. ಕಿರುತೆರೆ ವೀಕ್ಷಕರ ನೆಚ್ಚಿನ ಧಾರಾವಾಹಿಯಾಗಿದ್ದ 'ಬ್ರಹ್ಮಗಂಟು' ತನ್ನ ಸುದೀರ್ಘ ಪಯಣಕ್ಕೆ ಶೀಘ್ರದಲ್ಲೇ ಶುಭಂ ಹಾಡಲಿದ್ದು, ಈಗಾಗಲೇ ಕೊನೆಯ ಸಂಚಿಕೆಗಳ ಶೂಟಿಂಗ್ ಪೂರ್ಣಗೊಂಡಿದೆ. ಅಂತಿಮ ದಿನದ ಶೂಟಿಂಗ್‌ ಮುಕ್ತಾಯಗೊಳ್ಳುತ್ತಿದ್ದಂತೆಯೇ, ಧಾರಾವಾಹಿಯ ನಿರ್ಮಾಪಕಿ ಶ್ರೀವಿದ್ಯಾ ರಾಜ್ ಅವರು ಸೋಷಿಯಲ್ ಮೀಡಿಯಾದಲ್ಲಿ ಅತ್ಯಂತ ಭಾವುಕ ಪೋಸ್ಟ್ ಒಂದನ್ನು ಹಂಚಿಕೊಳ್ಳುವ ಮೂಲಕ 'ಬ್ರಹ್ಮಗಂಟು' ತಂಡಕ್ಕೆ ವಿದಾಯ ಹೇಳಿದ್ದಾರೆ.

ದಿಲೀಪ್ ರಾಜ್ ಅವರ ಕನಸಿನ ಯೋಜನೆ 'ಬ್ರಹ್ಮಗಂಟು'

ಧ್ರುತಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ದಿಲೀಪ್ ರಾಜ್ ಹಾಗೂ ಶ್ರೀವಿದ್ಯಾ ಅವರು 'ಬ್ರಹ್ಮಗಂಟು' ಧಾರಾವಾಹಿಯನ್ನು ನಿರ್ಮಿಸಿದ್ದರು. ತಿಲಕ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿದ್ದ ಈ ಧಾರಾವಾಹಿಯಲ್ಲಿ ದಿಯಾ ಪಾಲಕ್ಕಲ್, ಭುವನ್ ಸತ್ಯ, ಪ್ರೀತಿ ಶ್ರೀನಿವಾಸ್, ಕಾವ್ಯ ರಮೇಶ್ ಹಾಗೂ ಶಿವಾಜಿ ರಾವ್ ಜಾಧವ್ ಸೇರಿದಂತೆ ಪ್ರಖ್ಯಾತ ಕಲಾವಿದರ ಬಳಗವೇ ಅಭಿನಯಿಸಿತ್ತು.

ಇತ್ತೀಚೆಗಷ್ಟೇ ನಟ, ನಿರ್ಮಾಪಕ ದಿಲೀಪ್ ರಾಜ್ ಅವರ ಹಠಾತ್ ಅಗಲಿಕೆ ಇಡೀ ಕನ್ನಡ ಕಿರುತೆರೆಯನ್ನೇ ಶೋಕಸಾಗರದಲ್ಲಿ ತಳ್ಳಿತ್ತು. ಇದೀಗ ಅವರು ಅತ್ಯಂತ ಪ್ರೀತಿಯಿಂದ ಕಟ್ಟಿಕೊಟ್ಟಿದ್ದ 'ಬ್ರಹ್ಮಗಂಟು' ಧಾರಾವಾಹಿಯೂ ಮುಕ್ತಾಯವಾಗುತ್ತಿರುವುದು ತಂಡದ ಸದಸ್ಯರನ್ನು ಮತ್ತು ಅಭಿಮಾನಿಗಳನ್ನು ಮತ್ತಷ್ಟು ಭಾವುಕರನ್ನಾಗಿಸಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಶ್ರೀವಿದ್ಯಾ ಭಾವುಕ ಪೋಸ್ಟ್‌

ಶೂಟಿಂಗ್ ಕಡೆ ದಿನದ ವಿಡಿಯೋ ಜೊತೆಗೆ ಭಾವುಕ ಸಾಲುಗಳನ್ನು ಹಂಚಿಕೊಂಡಿರುವ ಶ್ರೀವಿದ್ಯಾ, ಇತ್ತೀಚಿನ ದಿನಗಳಲ್ಲಿ ನನಗೊಂದು ವಿಚಾರ ಪದೇ ಪದೇ ಅನಿಸುತ್ತಿದೆ... ಜೀವನದ ಅತ್ಯಂತ ಸುಂದರ ಸಂಗತಿಗಳು ಮತ್ತು ಅತ್ಯುತ್ತಮ ವ್ಯಕ್ತಿಗಳು ನಮ್ಮನ್ನು ಬೇಗನೇ ಅಗಲಿಬಿಡುತ್ತಾರೆ. ದಿಲೀಪ್‌ ರಾಜ್‌ ಅವರಂತಹ ಅದ್ಭುತ ವ್ಯಕ್ತಿಯನ್ನ ಕಳೆದುಕೊಂಡ ಬಳಿಕ, ಅವರು ನಂಬಿದ್ದ ಮತ್ತೊಂದು ಕನಸಿನ ಧಾರಾವಾಹಿಗೆ ವಿದಾಯ ಹೇಳುವ ಸಮಯ ಬಂದಿದೆ ಎಂದು ಬರೆದುಕೊಂಡಿದ್ದಾರೆ.

ಬ್ರಹ್ಮಗಂಟು ಕೇವಲ ಧಾರಾವಾಹಿಯಲ್ಲ, ಅದು ದಿಲೀಪ್ ಅವರ ಕನಸಾಗಿತ್ತು. ಅಪಾರ ನಂಬಿಕೆ ಮತ್ತು ಪ್ರೀತಿಯಿಂದ ಅವರು ಇದನ್ನು ಬೆಳೆಸಿದ್ದರು. ತಮ್ಮ ಪ್ರಸಾರದ ಸಮಯದಲ್ಲಿ 'ಬ್ರಹ್ಮಗಂಟು' ಹೊಸ ಮೈಲಿಗಲ್ಲನ್ನೇ ಸೃಷ್ಟಿಸಿತು. ನೀವು ಸಾಧಿಸಿದ ಈ ಯಶಸ್ಸನ್ನು ನೋಡಿ ದಿಲೀಪ್‌ಗೆ ತುಂಬಾ ಹೆಮ್ಮೆಯಾಗುತ್ತಿತ್ತು ಎಂದು ನೆನಪಿಸಿಕೊಂಡಿದ್ದಾರೆ.

ಧಾರಾವಾಹಿಯ ಕಲಾವಿದರು ಮತ್ತು ತಾಂತ್ರಿಕ ಬಳಗವನ್ನು ಶ್ಲಾಘಿಸಿರುವ ಅವರು, "ಈ ತಂಡದಲ್ಲಿದ್ದ ಆತ್ಮೀಯತೆ, ಕೆಲಸದ ಮೇಲಿನ ಬದ್ಧತೆ ಮತ್ತು ಮಾನವೀಯತೆ ಸದಾ ನೆನಪಿನಲ್ಲಿ ಉಳಿಯುತ್ತದೆ. ದಿಲೀಪ್ ಈ ತಂಡದ ಒಗ್ಗಟ್ಟು ಮತ್ತು ಸ್ನೇಹವನ್ನು ಆಗಾಗ ತಮ್ಮ ಮತ್ತೊಂದು ಸೂಪರ್ ಹಿಟ್ 'ಪಾರು' ಧಾರಾವಾಹಿಯ ತಂಡಕ್ಕೆ ಹೋಲಿಸುತ್ತಿದ್ದರು. ಜೀವನದಲ್ಲಿ ಮತ್ತೊಮ್ಮೆ ಅವಕಾಶ ಸಿಕ್ಕರೆ, ಯಾವುದೇ ಎರಡನೇ ಆಲೋಚನೆ ಇಲ್ಲದೆ ಇದೇ ತಂಡದ ಜೊತೆ ಮತ್ತೆ ಕೆಲಸ ಮಾಡುತ್ತೇನೆ. ದಿಲೀಪ್ ಮತ್ತು ನಾನು ನಿಮ್ಮನ್ನು ಸದಾ ಪ್ರೀತಿಸುತ್ತೇವೆ," ಎಂದು ಧನ್ಯವಾದ ತಿಳಿಸಿದ್ದಾರೆ.

ಟಿಆರ್‌ಪಿ ರೇಸ್‌ನಲ್ಲಿಯೂ ಉತ್ತಮ ಪ್ರದರ್ಶನ ನೀಡಿದ್ದ 'ಬ್ರಹ್ಮಗಂಟು' ಮುಕ್ತಾಯವಾಗುತ್ತಿರುವುದು ಧಾರಾವಾಹಿಯ ಪ್ರಿಯರಿಗೆ ಮತ್ತು ಅಭಿಮಾನಿಗಳಿಗೆ ಕೊಂಚ ಬೇಸರ ತಂದಿದ್ದರೂ, ದಿಲೀಪ್ ರಾಜ್ ಅವರ ನೆನಪಿನಲ್ಲಿ ಈ ಧಾರಾವಾಹಿ ಕನ್ನಡಿಗರ ಮನಸ್ಸಿನಲ್ಲಿ ಎಂದಿಗೂ ವಿಶೇಷವಾಗಿ ಉಳಿಯಲಿದೆ.

View post on Instagram