ಕಪ್ಪಾಗಿ ಕಾಣಲು 2 ಗಂಟೆ ಮೇಕಪ್: ಇನ್ಸ್ಟಾಗ್ರಾಮ್ ಡಿಲೀಟ್! 'ದೃಷ್ಟಿಬೊಟ್ಟು'ಗೆ ನಟಿ ರೆಡಿ ಆಗ್ತಿರೋದು ಹೀಗಂತೆ ಕೇಳಿ...
ಕಲರ್ಸ್ ಕನ್ನಡದಲ್ಲಿ ಸೆಪ್ಟೆಂಬರ್ 9ರಿಂದ ಪ್ರಸಾರ ಆಗ್ತರೋ ಹೊಸ ಸೀರಿಯಲ್ ದೃಷ್ಟಿಬೊಟ್ಟು ನಾಯಕಿ ತಮ್ಮ ಸೀರಿಯಲ್ ಕುರಿತು ಹೇಳಿದ್ದೇನು?
ಬಾಹ್ಯ ಸೌಂದರ್ಯವೇ ಮುಖ್ಯ. ಅದರ ಮುಂದೆ ಉಳಿದೆಲ್ಲವೂ ನಗಣ್ಯ ಎನ್ನುವ ಹೆಚ್ಚಿನ ಜನರ ಮನೋಭಾವನೆಗೆ ತಕ್ಕಂತೆ ಬಿಂಬಿತಗೊಂಡಿದೆ ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಬ್ರಹ್ಮಗಂಟು ಸೀರಿಯಲ್. ಸ್ಫುರದ್ರೂಪಿ ಅಕ್ಕ, ಅಂತರಂಗದಲ್ಲಿ ಸೌಂದರ್ಯ ಇರುವ ತಂಗಿ. ಮದುವೆಯ ದಿನ ಅಕ್ಕ ಓಡಿ ಹೋದ ಕಾರಣ ಎಲ್ಲರ ಮರ್ಯಾದೆ ಉಳಿಸಲು ನೋಡಲು ಸುಂದರಿಯಲ್ಲದ ತಂಗಿ ದೀಪಾ ಮದುವೆಯಾಗುತ್ತಾಳೆ. ಆದರೆ ಸೌಂದರ್ಯವನ್ನೇ ಮುಂದು ಮಾಡಿಕೊಂಡು ಹೆಜ್ಜೆಹೆಜ್ಜೆಗೂ ಆಕೆಗೆ ಟಾರ್ಚರ್ ಕೊಡಲಾಗುತ್ತದೆ. ಮಾನಸಿಕವಾಗಿ ಮಾತ್ರವಲ್ಲದೇ ಬಹಿರಂಗವಾಗಿಯೂ ಇವಳಿಗೆ ಟಾರ್ಚರ್ ನೀಡಲಾಗುತ್ತದೆ. ಇದು ಬ್ರಹ್ಮಗಂಟು ಸೀರಿಯಲ್ ಕಥಾವಸ್ತು. ಆದರೆ ಇದೀಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಾಡಿ ಷೇಮಿಂಗ್ ಅನುಭವಿಸುವ ಇದೇ ರೀತಿಯ ಇನ್ನೊಂದು ಸೀರಿಯಲ್ ಇದೇ 9ರಿಂದ ಆರಂಭವಾಗಲಿದೆ. ಅದರ ಹೆಸರು ದೃಷ್ಟಿಬೊಟ್ಟು.
ಇದರ ಪ್ರೊಮೋ ನೋಡಿದರೆ ತಿಳಿಯುತ್ತದೆ ಇದು ಕಪ್ಪು ವರ್ಣದ ನಾಯಕಿ ಮತ್ತು ಹ್ಯಾಂಡಸಮ್ ಎಂದು ಕರೆಸಿಕೊಳ್ಳುವ ಯುವಕನ ನಡುವಿನ ಕಥೆ ಎನ್ನುವುದು. ಇದರಲ್ಲಿ ನಾಯಕಿಯ ಹೆಸರು ದೃಷ್ಟಿ. ಮೆಕಾನಿಕ್ ಆಗಿ ಕೊನೆಗೆ ರೌಡಿಯಾಗುವ ನಾಯಕ ಮತ್ತು ಕಪ್ಪು ಎನ್ನುವ ಕಾರಣಕ್ಕೆ ಇನ್ನಿಲ್ಲದ ಹಿಂಸೆ ಅನುಭವಿಸುತ್ತಿರುವ ಬಡ ಹೆಣ್ಣುಮಗಳು ದೃಷ್ಟಿಯ ನಡುವಿನ ಪ್ರೇಮ ಕಥೆ ಇದು. ಇದರಲ್ಲಿ ನಾಯಕ ದತ್ತ, ಸುಂದರವಾಗಿರುವ ಹೆಣ್ಣುಗಳನ್ನ ಕಂಡರೆ ಉರಿದು ಬೀಳುವ ಕ್ಯಾರೆಕ್ಟರ್ನವ. ಅದೇ ಇನ್ನೊಂದೆಡೆ ನಾಯಕಿ ಕಾಮುಕ ಪೋಲೀಸನೊಬ್ಬನ ಕೈಗೆ ಸಿಕ್ಕು ಒದ್ದಾಡುತ್ತಿರುತ್ತಾಳೆ. ನಾಯಕ ಆಕೆಯನ್ನು ಕಾಪಾಡುತ್ತಾನೆ. ದತ್ತನಿಗೆ ಸಹೋದರಿಯರೇ ವಿಲನ್ಗಳು. ಇವರಿಬ್ಬರ ಪ್ರೀತಿ ಶುರುವಾಗುವುದು ಹೇಗೆ? ಮುಂದೆ ಏನೆಲ್ಲಾ ಟರ್ನಿಂಗ್ ಪಾಯಿಂಟ್ ಇರಲಿದೆ ಎನ್ನುವುದು ಸೀರಿಯಲ್ ನೋಡಿದ ಮೇಲೆ ತಿಳಿಯುತ್ತದೆ.
ಹೆಜ್ಜೆಹೆಜ್ಜೆಗೂ ಬಾಡಿಶೇಮಿಂಗ್ ಅನುಭವಿಸ್ತಿರೋ ಬ್ರಹ್ಮಗಂಟು ನಾಯಕಿ ದೀಪಾ ನಿಜಜೀವನ ಗೊತ್ತಾ?
ಅಂದಹಾಗೆ ಕಪ್ಪು ಬಣ್ಣದ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ಅರ್ಪಿತಾ ಮೋಹಿತೆ. ಈಕೆ ಕಿರುತೆರೆಗೆ ಹೊಸ ಎಂಟ್ರಿ. ಇನ್ನು ದತ್ತಾ ಭಾಯಿ ಪಾತ್ರದಲ್ಲಿ ಕಾಣಿಸಿಕೊಳ್ತಿರೋದು ಅಗ್ನಿಸಾಕ್ಷಿ ಖ್ಯಾತಿಯ ನಟ ವಿಜಯ್ ಸೂರ್ಯ. ಇಲ್ಲಿ ಇವರದ್ದು ರಗಡ್ ಅವತಾರೆ. ನಿಜ ಜೀವನದಲ್ಲಿ ಹಾಲು ಬಿಳುಪಿನ ನಟಿ ಅರ್ಪಿತಾ ಈ ಸೀರಿಯಲ್ನಲ್ಲಿ ಮುಖ ಮಾತ್ರವಲ್ಲದೇ ಮೈ-ಕೈಯೆಲ್ಲಾ ಕಪ್ಪಾಗಿ ಕಾಣಿಸಲು ಎರಡು ಗಂಟೆ ಮೇಕಪ್ ಮಾಡಿಕೊಳ್ಳುತ್ತಿರುವುದಾಗಿ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. ಮುಖಕ್ಕೆ ಮ್ಯಾಚ್ ಆಗುವಂಥ ಕಪ್ಪು ಬಣ್ಣ ಕೈ-ಕಾಲುಗಳಿಗೂ ಹಚ್ಚಬೇಕು. ಇದರಿಂದ ಎರಡು ಗಂಟೆ ಬೇಕಾಗುತ್ತದೆ ಎಂದು ಹೇಳಿದ್ದಾರೆ. ಅಂದಹಾಗೆ ಕನಕಪುರದಲ್ಲಿ ಹುಟ್ಟಿ ಬೆಂಗಳೂರಿನಲ್ಲಿ ವಾಸಿಸುತ್ತಿರುವ ಅರ್ಪಿತಾ ಮೋಹಿತೆ ಬಿಕಾಂ ಮುಗಿಸಿದ್ದಾರೆ. ನನಗೆ ಸಾಕಷ್ಟು ಅವಕಾಶಗಳು ಅರಸಿ ಬರುತ್ತಿದ್ದವು. ಈಗ ದೃಷ್ಟಿಬೊಟ್ಟುಗೆ ಆಯ್ಕೆ ಆಗಿದ್ದೇನೆ ಎಂದು ಹೇಳಿದ್ದಾರೆ.
ಇದೇ ಸಮಯದಲ್ಲಿ ಇನ್ನೊಂದು ಇಂಟರೆಸ್ಟಿಂಗ್ ವಿಷಯವನ್ನೂ ಅವರು ಹೇಳಿದ್ದಾರೆ. ಅದೇನೆಂದರೆ, ತಾವು ಹೀಗೆಯೇ ಎಂದು ಅಭಿಮಾನಿಗಳ ಮನಸ್ಸಿನಲ್ಲಿ ತಳವೂರಬೇಕು. ನನ್ನ ಅಸಲಿ ಬಣ್ಣ ಏನು ಎನ್ನುವುದು ಗೊತ್ತಾಗಬಾರದು ಎನ್ನುವ ಕಾರಣಕ್ಕೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯನ್ನೂ ನಟಿ ಡಿಲೀಟ್ ಮಾಡಿದ್ದಾರಂತೆ! ಅಂದಹಾಗೆ ಈ ಸೀರಿಯಲ್ನಲ್ಲಿ ನಟಿ ಅಂಬಿಕಾ ಪಾತ್ರವೂ ಇದೆ. ಇದಾಗಲೇ ಸ್ಯಾಂಡಲ್ವುಡ್ನಲ್ಲಿ ನೂರಾರು ಚಿತ್ರಗಳಲ್ಲಿ ಮಿಂಚಿರುವ ಅಂಬಿಕಾ ಮೊದಲ ಬಾರಿಗೆ ಸೀರಿಯಲ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರ ಜೊತೆ, ದೀಪಶ್ರೀ, ರಾಘು ಶಿವಮೊಗ್ಗ, ಅಶೋಕ್ ಹೆಗಡೆ ಸೇರಿದಂತೆ ಅನೇಕ ಕಿರಿ ಹಿರಿ ನಟ-ನಟಿಯರು ದೃಷ್ಟಿಬೊಟ್ಟ ಭಾಗವಾಗಿದ್ದಾರೆ. ಸೆಪ್ಟೆಂಬರ್ 9ರಿಂದ ಸಂಜೆ 6.30ಕ್ಕೆ ಸೀರಿಯಲ್ ಪ್ರದರ್ಶನಗೊಳ್ಳಲಿದೆ.
ಪ್ರಿಯಂಗೆ ಕ್ಯಾನ್ಸರ್, ಸೀತಂಗೆ ಮಗಳು ಕೈತಪ್ಪು ಭಯ: ಆದ್ರೂ ಹೀಗೆ ಕುಣಿಯೋದಾ ಕೇಳಿದ ಫ್ಯಾನ್ಸ್!