ಸ್ಟಾರ್‌ ನಿರ್ದೇಶಕ, ಸೂಕ್ಷ್ಮ ಸಂವೇದನೆಯ ಬರಹಗಾರ, ಖ್ಯಾತ ನಟ ಟಿ.ಎನ್‌. ಸೀತಾರಾಮ್‌ ನಿರ್ದೇಶನದ ಹೊಸ ಧಾರಾವಾಹಿ ‘ಮತ್ತೆ ಮನ್ವಂತರ’ ಚಿತ್ರೀಕರಣ ಶುರುವಾಗುತ್ತಿದೆ. 

ಇಂದು ಬೆಂಗಳೂರಿನಲ್ಲಿ ಸರಳವಾಗಿ ಧಾರಾವಾಹಿ ಮುಹೂರ್ತ ನಡೆಯಲಿದ್ದು, ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಶೀಘ್ರದಲ್ಲಿ ಈ ಧಾರಾವಾಹಿ ಪ್ರಸಾರವಾಗಲಿದೆ.

ಪ್ರಮುಖ ಪಾತ್ರದಲ್ಲಿ ಮಾಳವಿಕಾ ಅವಿನಾಶ್‌, ನಿರಂಜನ್‌ ದೇಶಪಾಂಡೆ, ಪ್ರಸಿದ್ಧ ಗಾಯಕ ವಿದ್ಯಾಭೂಷಣರ ಪುತ್ರಿ ಮೇಧಾ, ವೀಣಾ ಸುಂದರ್‌, ಮೇಘಾ ನಾಡಿಗೇರ್‌ ಅಭಿನಯಿಸಲಿದ್ದಾರೆ. ಎಲ್ಲಿ ಸಂಕಟ ಇರುತ್ತದೋ ಅದನ್ನು ಪರಿಹರಿಸಲು ಎಂದಿನಂತೆ ಸಿಎಸ್‌ಪಿ ಪಾತ್ರದಲ್ಲಿ ಟಿಎನ್‌ ಸೀತಾರಾಮ್‌ ಇರುತ್ತಾರೆ.

ಟಿಎನ್‌ ಸೀತಾರಾಂ ಹೊಸ ಧಾರಾವಾಹಿಗೆ ವಿದ್ಯಾಭೂಷಣರ ಮಗಳು ಮೇಧಾ ನಾಯಕಿ

ಈಗಾಗಲೇ ಕವಿ ಎಚ್‌ಎಸ್‌ ವೆಂಕಟೇಶಮೂರ್ತಿ ಟೈಟಲ್‌ ಸಾಂಗ್‌ ಬರೆದಿದ್ದು, ಪ್ರವೀಣ್‌ ರಾವ್‌ ಸಂಗೀತ ಸಂಯೋಜನೆ ಮಾಡಿದ್ದಾರೆ. ವಿಜಯಪ್ರಕಾಶ್‌ ಹಾಡಲಿದ್ದು, ಶೀಘ್ರದಲ್ಲೇ ರೆಕಾರ್ಡಿಂಗ್‌ ನಡೆಯಲಿದೆ.

ಈ ಕುರಿತು ನಿರ್ದೇಶಕ ಟಿಎನ್‌ ಸೀತಾರಾಮ್‌, ‘ಈ ಸಲ ಮತ್ತೊಂದು ವಿಭಿನ್ನವಾದ ಕತೆ ಇದೆ. ಸದ್ಯ ಪೈಲೆಟ್‌ ಎಪಿಸೋಡ್‌ ಚಿತ್ರೀಕರಣ ಮಾಡುತ್ತಿದ್ದೇವೆ. ವಾಹಿನಿಯವರು ಒಪ್ಪಿಗೆ ಕೊಟ್ಟಮೇಲೆ ಒಂದೆರಡು ತಿಂಗಳ ನಂತರ ಪೂರ್ಣ ಪ್ರಮಾಣದಲ್ಲಿ ಚಿತ್ರೀಕರಣ ಶುರು ಮಾಡಲಿದ್ದೇವೆ. ಭೂಮಿಕಾ ತಂಡ ಒಂದು ವರ್ಷ ಐದು ತಿಂಗಳ ನಂತರ ಮತ್ತೆ ಧಾರಾವಾಹಿ ಜಗತ್ತಿಗೆ ಪ್ರವೇಶ ಮಾಡುತ್ತಿದೆ’ ಎನ್ನುತ್ತಾರೆ.