ಈಗಾಗಲೇ ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಮೇಧಾ, ಸಾಕಷ್ಟುಕಚೇರಿಗಳನ್ನೂ ನೀಡಿದ್ದಾರೆ. ಜೊತೆಗೆ ರಂಗಭೂಮಿ ಹಿನ್ನೆಲೆಯೂ ಇದೆ. ‘ಮತ್ತೆ ಮನ್ವಂತರ ಧಾರಾವಾಹಿಯ ನಾಯಕಿ ಪಾತ್ರಕ್ಕೆ ಮೇಧಾ ಸರಿ ಹೊಂದುತ್ತಾಳೆ ಅನಿಸಿತು. ಆ ಪಾತ್ರಕ್ಕೆ ಕೊಂಚ ಸಂಗೀತ ಜ್ಞಾನದ ಅವಶ್ಯಕತೆಯೂ ಇತ್ತು. ನಮ್ಮ ಪ್ರಸ್ತಾಪಕ್ಕೆ ಮೇಧಾ ಒಪ್ಪಿಕೊಂಡಿದ್ದಾರೆ. ಪ್ರಿಪ್ರೊಡಕ್ಷನ್‌ ಕೆಲಸಗಳೆಲ್ಲ ಒಂದು ಹಂತಕ್ಕೆ ಬಂದಿದ್ದು, ಮುಂದಿನ ವಾರದಿಂದ ಶೂಟಿಂಗ್‌ ಆರಂಭವಾಗಲಿದೆ’ ಎಂದು ನಿರ್ದೇಶಕ ಟಿಎನ್‌ ಸೀತಾರಾಮ್‌ ತಿಳಿಸಿದ್ದಾರೆ.

ಮೇ ತಿಂಗಳಲ್ಲಿ ಈ ಧಾರವಾಹಿ ಆರಂಭವಾಗುವ ನಿರೀಕ್ಷೆ ಇದೆ. ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗಲಿದೆ. ‘ಮತ್ತೆ ಮನ್ವಂತರ’ದಲ್ಲಿ ಮೇಧಾ ಕ್ರೀಡಾಳು ಹಾಗೂ ವಿದ್ಯಾರ್ಥಿನಿಯ ಪಾತ್ರ ನಿರ್ವಹಿಸಲಿದ್ದಾರೆ. ಕ್ರೀಡಾ ಬದುಕಿಗೆ ಎದುರಾಗುವ ಅಡೆತಡೆಗಳನ್ನು ಆಕೆ ಹೇಗೆ ದಾಟುತ್ತಾಳೆ ಎಂಬುದು ಕಥೆಯ ಮುಖ್ಯ ಎಳೆ.

ಮತ್ತೆ ಮನೆಮನೆಗೆ 'ಮಾಯಾಮೃಗ' ಯಾವ ಚಾನೆಲ್‌ನಲ್ಲಿ? 

‘ಮನ್ವಂತರ ಎಂದರೆ ಹೊಸ ಭರವಸೆ ಎಂಬ ಅರ್ಥ. ಈಗ ನಮಗೆ ಬೇಕಿರುವುದು ಅದೇ. ಹಳೆಯ ಮನ್ವಂತರ ಧಾರಾವಾಹಿ ಸಾಕಷ್ಟುಜನಪ್ರಿಯವಾಗಿತ್ತು. ಆದರೆ ಈ ಕಥೆ ಅದರ ಮುಂದುವರಿಕೆಯಲ್ಲ. ಭಾವನೆಗಳ ಹರಿವು, ವಾಸ್ತವದ ನೆಲೆಗಟ್ಟಿನಲ್ಲಿ ಕಥೆ ಇದೆ. ಮೇಧಾ ಜೊತೆಗೆ ಮಾಲವಿಕಾ, ರೂಪಾ ಗುರುರಾಜ್‌, ಜಯಶ್ರೀ ರಾಜ್‌ ಮುಖ್ಯಪಾತ್ರಗಳಲ್ಲಿದ್ದಾರೆ. ನಾನು ಸಿಎಸ್‌ಪಿ ಪಾತ್ರದಲ್ಲಿರುತ್ತೇನೆ’ ಎನ್ನುತ್ತಾರೆ ಟಿಎನ್‌ ಸೀತಾರಾಂ.